ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣದಲ್ಲಿ ಕನ್ನಡಿಗರ ಏಳುಬೀಳು...

Last Updated 30 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕಾಲ ಯಾರ ಮಾತನ್ನೂ ಕೇಳದೆ  ತನ್ನ ಪಾಡಿಗೆ ತಾನು ಹೆಜ್ಜೆಹಾಕುತ್ತಿದೆ. ಈ ವರ್ಷ ಕರ್ನಾಟಕದ ಕ್ರೀಡಾ ಜಗತ್ತಿನ ಏಳು ಬೀಳುಗಳ ನೆನಪುಗಳು ಅಲೆ ಅಲೆಯಾಗಿ ಪುಟಿದೇಳುತ್ತಿವೆ. ಕತ್ತಲು ಸರಿದು ಹೋಗಿ ಹುಣ್ಣಿಮೆಯ ಪ್ರಖರವಾದ ಬೆಳದಿಂಗಳು ರಾಜ್ಯದ ಕ್ರೀಡಾ ನಕ್ಷೆಯಲ್ಲಿ ಕಂಗೊಳಿಸುತ್ತಿದೆ. ಅದರ ಬೆನ್ನಲ್ಲೆ ಖ್ಯಾತ ಕ್ರೀಡಾಪಟುಗಳು ಬದುಕಿಗೆ ವಿದಾಯ ಹೇಳಿದ ನೋವಿನ ಸಂಗತಿಗಳಿಗೂ ಈ ವರ್ಷ ಸಾಕ್ಷಿಯಾಯಿತು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಟೆನಿಸ್ ಅಲೆ, ಪಂಕಜ್ ಪರಾಕ್ರಮ, ಹುಬ್ಬಳ್ಳಿಯ ರಾಜನಗರದ ಅಂಗಳದಲ್ಲಿ ಚೊಚ್ಚಲ ರಣಜಿ ಸಂಭ್ರಮ, ಅಂಧರ ವಿಶ್ವಕಪ್, ಮೋಟಾರು ಸ್ಪೋರ್ಟ್ಸ್ ಹೀಗೆ ಅಮೂಲ್ಯ ಸಂದರ್ಭಗಳಿಗೆ 2012 ಸಾಕ್ಷಿಯಾಯಿತು. ಅವುಗಳ ಅವಲೋಕನ ಇಲ್ಲಿದೆ.

ಟೆನಿಸ್ ಅಲೆ
ಈ ವರ್ಷ ರಾಜ್ಯದ ಟೆನಿಸ್ ರಂಗದಲ್ಲಿ ಹೊಸ ಅಲೆ ಹುಟ್ಟಿಕೊಂಡಿತು. ಜಿಲ್ಲಾ ಪ್ರದೇಶಗಳಲ್ಲಿ ಐಟಿಎಫ್ ಟೆನಿಸ್ ಟೂರ್ನಿಗಳನ್ನು ಆಯೋಜಿಸಿದ್ದು ಇದಕ್ಕೆ ಕಾರಣವಾಯಿತು. ಅಂತರರಾಷ್ಟ್ರೀಯ ಮಟ್ಟದ ಆಟಗಾರರು ಬಂದು ಆಡಿದರು. ಸ್ಥಳೀಯ ಜನರ ಪ್ರೀತಿಗೂ ಕಾರಣರಾದರು.

ಮಂಡ್ಯ, ದಾವಣಗೆರೆ, ಗುಲ್ಬರ್ಗ, ಬೆಳಗಾವಿ ಹಾಗೂ ಧಾರವಾಡಗಳಲ್ಲಿ ನಡೆದ ಐಟಿಎಫ್ ರಾಜ್ಯದಲ್ಲಿ ಹೊಸ ಟೆನಿಸ್ ಪ್ರೇಮಿಗಳನ್ನು ಹುಟ್ಟು ಹಾಕಿತು. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಟೂರ್ನಿಗಳು ನಡೆದದ್ದು ಅಲ್ಲಿನ ಜನರಲ್ಲಿ ಸಂಚಲನ ಮೂಡಿಸಿತು.

ಪಂಕಜ್ ಪರಾಕ್ರಮ
ಬಿಲಿಯರ್ಡ್ಸ್ ರಂಗದಲ್ಲಿ ಕರ್ನಾಟಕಕ್ಕೆ `ಸ್ವರ್ಣ' ಸಂಭ್ರಮ. ಇದಕ್ಕೆ ಕಾರಣವಾಗಿದ್ದು ಪಂಕಜ್ ಅಡ್ವಾಣಿ. ಇಂಗ್ಲೆಂಡ್‌ನ ಲೀಡ್ಸ್‌ನಲ್ಲಿ ನಡೆದ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ ಅವರು ಪ್ರಶಸ್ತಿ ಎತ್ತಿಹಿಡಿದರು. ಅದು ಇಂಗ್ಲೆಂಡ್‌ನ ಆ್ಯಂಡಿ ರಸೆಲ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು. ಬೆಂಗಳೂರಿನ ಈ ಆಟಗಾರ ಜಯಿಸಿದ 8ನೇ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಇದು.

ಕ್ರಿಕೆಟ್ ನೀರಸ
ರಣಜಿ ಕ್ರಿಕೆಟ್‌ನಲ್ಲಿ ಕರ್ನಾಟಕದ ಪ್ರದರ್ಶನ ನೀರಸ ಎನಿಸಿತು. ಪ್ರತಿ ಋತುವಿನಲ್ಲಿ ಸರಾಗವಾಗಿ ಲೀಗ್ ಹಂತವನ್ನು ದಾಟಿ ಹೋಗುತ್ತಿತ್ತು. ಆದರೆ, ಈ ಸಲ ಲೀಗ್ ಹಂತದಲ್ಲಿಯೇ (ಈ ಲೇಖನ ಬರೆಯುವ ಹೊತ್ತಿಗೆ ಕರ್ನಾಟಕ-ಮಹಾರಾಷ್ಟ್ರ ಪಂದ್ಯ ಆರಂಭವಾಗಿರಲಿಲ್ಲ) ಮರಳುವ ಸಾಧ್ಯತೆ ಹೆಚ್ಚಿದೆ. ಆದರೆ, ಬೇರೆ ತಂಡಗಳ ಫಲಿತಾಂಶದ ಮೇಲೆ ರಾಜ್ಯ ರಣಜಿ ತಂಡದ ಕ್ವಾರ್ಟರ್ ಫೈನಲ್ ಭವಿಷ್ಯ ನಿಂತಿದೆ.

ಈ ಬೇಸರದ ಸಂದರ್ಭದಲ್ಲೂ ಖುಷಿಯ ಸಂಗತಿಯೆಂದರೆ, ಯುವ ಆಟಗಾರ ಕುನಾಲ್ ಕಪೂರ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದರು. ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ಬ್ಯಾಟ್ಸ್‌ಮನ್ ಆದರು. ಬುಚ್ಚಿ ಬಾಬು ಹಾಗೂ ಶಫಿ ದಾರಾಶಾ ಟೂರ್ನಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗಿದ್ದೂ ಖುಷಿಯ ಸಂಗತಿ.

ನೋವು ತಂದ ಅಗಲಿಕೆ
ವರ್ಷದ ಕೊನೆಯ ತಿಂಗಳಲ್ಲಿ ಒಲಿಂಪಿಯನ್ ಟಿ. ಷಣ್ಮುಗಂ ತಮ್ಮ ಬದುಕಿನ ವಿದಾಯ ಹೇಳಿದರು. ಇವರು ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಬರಿಗಾಲಲ್ಲಿ ಫುಟ್‌ಬಾಲ್ ಆಡಿ ಕ್ರೀಡಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು. ದೇಶಿಯ ಕ್ರಿಕೆಟ್‌ನಲ್ಲಿ ದಾಖಲೆ ನಿರ್ಮಿಸಿ ಭಾರತ ತಂಡಕ್ಕೂ ಆಡಿದ್ದ ಮಹಾರಾಷ್ಟ್ರದ ಬಿ.ಬಿ. ನಿಂಬಾಳ್ಕರ್ ಕೂಡಾ ಅಗಲಿ ಹೋದರು. 1948-49ರ ರಣಜಿ ಋತುವಿನಲ್ಲಿ ಈ ಆಟಗಾರ ಔಟಾಗದೆ 443 ರನ್ ಗಳಿಸಿದ್ದರು. ಇದು ರಣಜಿಯಲ್ಲಿ ಇದುವರೆಗೆ ದಾಖಲಾಗಿರುವ ಅತ್ಯುತ್ತಮ ವೈಯಕ್ತಿಕ ಸ್ಕೋರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರು
ಡಿಸ್ಕಸ್ ಥ್ರೋ ಸ್ಪರ್ಧಿ ವಿಕಾಸ್‌ಗೌಡ, ಅಥ್ಲೀಟ್ ಸಹನಾ ಕುಮಾರಿ, ಹಾಕಿ ಆಟಗಾರರಾದ ಎಸ್.ವಿ. ಸುನಿಲ್, ರಘುನಾಥ್, ಇಗ್ನೇಶ್ ಟರ್ಕಿ ಹಾಗೂ ನಿತಿನ್ ತಿಮ್ಮಯ್ಯ, ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಲಂಡನ್ ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಿ ಕರ್ನಾಟಕದ ಗೌರವವನ್ನು ಹೆಚ್ಚಿಸಿದರು. ಮೈಸೂರಿನ ವಿಕಾಸ್ ಒಲಿಂಪಿಕ್ಸ್‌ನಲ್ಲಿ 8ನೇ ಸ್ಥಾನ ಪಡೆದರು.

ಒಲಿಂಪಿಕ್ಸ್‌ನಲ್ಲಿ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಜೊತೆ ಸೇರಿ ಬೆಂಗಳೂರಿನ ಅಶ್ವಿನಿ ಪೊನ್ನಪ್ಪ ಆಡಿದ್ದರು. ಆದರೆ, ಜ್ವಾಲಾ ಒಲಿಂಪಿಕ್ಸ್ ನಂತರ ವಿಶ್ರಾಂತಿ ಪಡೆಯಲು ಬ್ಯಾಡ್ಮಿಂಟನ್ ಕೋರ್ಟ್‌ನಿಂದ ಹಿಂದೆ ಸರಿದರು. ಆದ್ದರಿಂದ ಅಶ್ವಿನಿ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿಲ್ಲ. ಮಿಶ್ರ ಡಬಲ್ಸ್‌ನತ್ತ ಮಾತ್ರ ಗಮನ ಹರಿಸಿದರು.

ಗಿರೀಶ್ ಬೆಳ್ಳಿ ಗೆರೆ
ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಒಂದು ಬೆಳ್ಳಿ ಪದಕ ಗೆದ್ದುಕೊಂಡಿತು. ಇದಕ್ಕೆ ಕಾರಣವಾಗಿದ್ದು ಹಾಸನದ ಎಚ್.ಎನ್. ಗಿರೀಶ್. ವಿಶೇಷವೆಂದರೆ, ಗಿರೀಶ್ ಪಾಲ್ಗೊಂಡ ಮೊದಲ ಪ್ಯಾರಾಲಿಂಪಿಕ್ಸ್ ಇದಾಗಿತ್ತು. 

ವಿಶ್ವಕಪ್ ಕಿರೀಟ
ಭಾರತ ಅಂಧರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಆಯೋಜಿಸುವ ಮೂಲಕ ಅಂಧರ ಕ್ರಿಕೆಟ್ ಬೆಳವಣಿಯತ್ತ ದಿಟ್ಟ ಹೆಜ್ಜೆ ಊರಿತು. ಈ ಟೂರ್ನಿ ನಡೆದಿದ್ದು ಉದ್ಯಾನನಗರಿಯಲ್ಲಿ. ಭಾರತ ತಂಡದ ಸಾರಥ್ಯ ವಹಿಸಿಕೊಂಡಿದ್ದು ಕನ್ನಡಿಗ ಶೇಖರ್ ನಾಯ್ಕ. ಕರ್ನಾಟಕದವರಾದ ಎಸ್. ರವಿ ಹಾಗೂ ಪ್ರಕಾಶ್ ಜಯರಾಮಯ್ಯ ತಂಡದಲ್ಲಿದ್ದರು. ಭಾರತ ವಿಶ್ವಕಪ್ ಚಾಂಪಿಯನ್ ಆಗುವಲ್ಲಿ ಈ ಮೂವರು ಆಟಗಾರರು ಪ್ರಮುಖ ಪಾತ್ರ ವಹಿಸಿದ್ದರು. 

ನಿರೀಕ್ಷಿತ ಮಟ್ಟದಲ್ಲಿ ವಾಲಿಬಾಲ್ ಕ್ರೀಡೆಗಳು ನಡೆಯಲಿಲ್ಲವಾದರೂ, ಚೊಚ್ಚಲ ಕರ್ನಾಟಕ ವಾಲಿ ಲೀಗ್ ಆಯೋಜನೆ ರಾಜ್ಯದಲ್ಲಿ ವಾಲಿಬಾಲ್ ಬೆಳವಣಿಗೆಗೆ ಇಂಬು ನೀಡಿತು. ಕಳೆದ ವರ್ಷ ನಡೆದ ಇಂಡಿಯನ್ ವಾಲಿ ಲೀಗ್ (ಐವಿಎಲ್) ಈ ವರ್ಷ ನಡೆಯಲಿಲ್ಲ.

ಮೋಟಾರು ಸ್ಪೋರ್ಟ್ಸ್ ರಂಗದಲ್ಲಿ ಭಾರತಕ್ಕೆ ಮತ್ತೊಮ್ಮೆ ಹರ್ಷದ ವರ್ಷ. 2011ರಲ್ಲಿ ಮೊದಲ ಸಲ ಫಾರ್ಮುಲಾ ಒನ್ ಇಂಡಿಯನ್ ಗ್ರ್ಯಾನ್ ಪ್ರೀ ರೇಸ್ ಆಯೋಜಿಸಿ ಮೋಟಾರು ಸ್ಪೋರ್ಟ್ಸ್ ಅಂಗಳದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದ ಭಾರತ, 2012ರಲ್ಲಿಯೂ ಎರಡನೇ ಸಲ ಗ್ರೇಟರ್ ನೊಯಿಡಾದಲ್ಲಿ ಮತ್ತೊಂದು ರೇಸ್ ಯಶಸ್ವಿಯಾಗಿ ಸಂಘಟಿಸಿತು. ಇದಕ್ಕೆ ಪೂರಕ ಎನ್ನುವಂತೆ ದೇಶದ ಹಲವು ಭಾಗಗಳಲ್ಲಿ  ಮೋಟಾರ್ ಸ್ಪೋರ್ಟ್ಸ್ ನಡೆದದ್ದು ಭಾರತದಲ್ಲಿ ರೇಸ್ ಹಂಗಾಮ ಇನ್ನಷ್ಟು ವ್ಯಾಪಕವಾಗಿ ಬೆಳೆಯಲು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT