ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪಟು ಕೇಂದ್ರಿತ ಸುಧಾರಣೆ ಅಗತ್ಯ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ದೇಶದಲ್ಲಿನ ಕ್ರೀಡಾ ಸುಧಾರಣೆ ಕಡೆಗೆ ಗಮನ ಹರಿಸಿದಾಗ ಕೆಲವು ಅಂಶಗಳು ಥಟ್ಟನೇ ಗಮನ ಸೆಳೆಯುತ್ತವೆ. ಅದರಲ್ಲಿಯೂ ಮುಖ್ಯವಾಗಿ ವೃತ್ತಿಪರವಲ್ಲದ ಕ್ರೀಡೆಗಳು ಹಾಗೂ ಒಲಿಂಪಿಕ್ ಕ್ರೀಡಾ ಪ್ರಕಾರಗಳ ವಿಷಯ ಬಂದಾಗ ಯೋಚನೆಯ ವಿಸ್ತಾರ ದೊಡ್ಡದಾಗುತ್ತದೆ.
 
ಇಂಥ ಸಂದರ್ಭದಲ್ಲಿ ಏನು ಕಾರಣಕ್ಕಾಗಿ ಸುಧಾರಣೆ ಎನ್ನುವ ಚಿಂತನೆ ನಡೆಯುವುದು ಮೊದಲ ಅಗತ್ಯವೆನಿಸುತ್ತದೆ. ಆನಂತರ `ಏಕೆ~ ಎಂದು ಕೂಡ ಪ್ರಶ್ನಿಸಿಕೊಳ್ಳಬೇಕು. ಮುಂದಿನ ಹಂತ `ಹೇಗೆ~ ಮತ್ತು `ಯಾವಾಗ~ ಎನ್ನುವುದು.

ಕ್ರೀಡೆಗಳಲ್ಲಿ ಹಲವು ಪ್ರಕಾರಗಳಿವೆ. ಆದರೆ ಅವೆಲ್ಲವೂ ದೇವರ ಸೃಷ್ಟಿಯಂತೆ. ಆ ಭಗವಂತನ ಕೃಪೆಯ ಜೀವ ವೈವಿಧ್ಯದಂತೆ ಅವುಗಳ ಗಾತ್ರ ಹಾಗೂ ಮಹತ್ವದಲ್ಲಿ ವ್ಯತ್ಯಾಸ ಇರುವುದು ಸಹಜ.

ಈ ಅಂಶವನ್ನು ಶತಮಾನದ ಹಿಂದೆಯೇ ಒಲಿಂಪಿಕ್ ಸ್ಫೂರ್ತಿಯ ಸೆಲೆಯನ್ನು ಉಕ್ಕಿಸಿದ ಪೀಯರ್ ಡಿ ಕೂಬರ್ಟಿನ್ ಅವರೇ ವಿಶ್ವಕ್ಕೆ ಸಾರಿದ್ದರು. ಆಟಗಳ ಭಿನ್ನತೆಗಳಲ್ಲಿಯೂ ಅದೇ ತತ್ವದಂತೆಯೇ ವೈವಿಧ್ಯ ವ್ಯಕ್ತವಾಗುತ್ತದೆ. ಆದರೆ ಕ್ರೀಡೆಗಳ ಮೂಲಕ ಕ್ರೀಡಾಪಟುವು ತನ್ನ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಾನೆ. ಬೆಳೆದು ನಿಲ್ಲುತ್ತಾನೆ.

ಒಲಿಂಪಿಕ್ ಪ್ರೇರಕ ನುಡಿಯೇ ಕ್ರೀಡಾಪಟು ಕೇಂದ್ರಿತವಾದದ್ದು. ಈ ಅಂಶವನ್ನು ಕ್ರೀಡಾ ಸುಧಾರಣೆ ಸಂದರ್ಭದಲ್ಲಿಯೂ ಗಮನಕ್ಕೆ ತೆಗೆದುಕೊಳ್ಳಬೇಕು. ಅಥ್ಲೀಟ್ ಕೇಂದ್ರ ಬಿಂದು. ಸುತ್ತಲೂ ಕ್ರೀಡಾ ಆಡಳಿತಗಾರರು, ಸರ್ಕಾರ, ಮಾಧ್ಯಮಗಳು ಹಾಗೂ ಅಭಿಮಾನಿ ಬಳಗ ಇರುವುದೇ ಸರಿ.

ಮುಖ್ಯವಾಗಿ ಕ್ರೀಡಾಪಟುವಿನ ಏಳಿಗೆಗೆ ಈ ಪ್ರೇರಕ ಹಾಗೂ ಪೂರಕ ಶಕ್ತಿಗಳು ಕೆಲಸ ಮಾಡಬೇಕು. ನಮ್ಮ ದೇಶದ ಕ್ರೀಡಾ ಸುಧಾರಣೆಯ ಚಿಂತನೆಯು ಕೂಡ ಇದೇ ಸೂತ್ರದಲ್ಲಿ ನಡೆದರೆ ಮಾತ್ರ ಒಳಿತು.

ನಾನು ಹೇಳಿದ ಈ ಮಾತು ಕೇವಲ ಖ್ಯಾತ ಕ್ರೀಡಾಪಟುಗಳ ಬಗ್ಗೆ ಅಲ್ಲ. ದೇಶದ ಮೂಲೆ ಮೂಲೆಯಲ್ಲಿ ಆರೋಗ್ಯಕಾರಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿದ ಎಲ್ಲ ಆಟಗಾರರು ಹಾಗೂ ಆಟಗಾರ್ತಿಯರಿಗೆ ಅನ್ವಯವಾಗುತ್ತದೆ.
 
ಮೈಮನಗಳಿಗೆ ಚೈತನ್ಯ ನೀಡುವಂಥ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಕ್ರೀಡಾ ಸುಧಾರಣೆಯ ಪ್ರಯೋಜನ ಸಿಗಬೇಕು. ಆಗಲೇ ಕಾರ್ಯರೂಪಕ್ಕೆ ಬಂದ ಪ್ರಗತಿಪರ ಯೋಚನೆಯು ಸಾರ್ಥಕ ಎನಿಸುತ್ತದೆ.

ಹಿಂದೆ ಕ್ರೀಡೆ ಹಾಗೂ ಪ್ರದರ್ಶಕ ಕಲೆಗಳಿಗೆ ರಾಜಾಶ್ರಯವಿತ್ತು. ದೇಶವನ್ನು ಆಳುವ ಒಡೆಯನ ಕೃಪೆಯಿಂದ ಕ್ರೀಡಾಪಟುಗಳು ಹಾಗೂ ಕಲಾವಿದರು ಬೆಳೆಯುತ್ತಿದ್ದರು. ಆದರೆ ಕಾಲ ಬದಲಾಗಿ ಎಷ್ಟೋ ದಶಕಗಳು ಕಳೆದಿವೆ. ಈಗ ಚುನಾಯಿತ ಸರ್ಕಾರದ ಮೇಲೆಯೇ ಕ್ರೀಡೆ ಮತ್ತು ಕಲಾ ಅಭಿವೃದ್ಧಿಯ ಹೊಣೆಯಿದೆ.

ಇಲ್ಲಿ ಅಪಾರವಾದ ಪ್ರೇರಣೆ, ಶ್ರದ್ಧೆ ಹಾಗೂ ಪ್ರೀತಿ ಅಗತ್ಯ. ಕೇವಲ ಚುನಾಯಿತ ಸರ್ಕಾರದಿಂದ ಮಾತ್ರವಲ್ಲ, ಕ್ರೀಡಾ ಆಡಳಿತಗಾರರಿಗೂ ಅದೇ ಬದ್ಧತೆ ಇರಬೇಕು. ಮುಖ್ಯವಾಗಿ ಕ್ರೀಡಾ ಆಡಳಿತಗಾರರು ತಮ್ಮ ಹುದ್ದೆಯ ಹೊಣೆ ಏನೆನ್ನುವುದನ್ನು ಅರಿತು, ಸಂಪೂರ್ಣವಾಗಿ ಅದಕ್ಕೆ ಅರ್ಪಿಸಿಕೊಂಡು ಕೆಲಸ ಮಾಡುವ ಗುಣ ಹೊಂದಿರಲೇ ಬೇಕು.

ಆಗಲೇ ಕ್ರೀಡಾ ಪ್ರಗತಿ ಸಾಧ್ಯವಾಗುತ್ತದೆ. ಕೂಬರ್ಟಿನ್ ಕನಸು ಕೂಡ ಅದೇ ಆಗಿತ್ತು. ಅಂಥ ಅರ್ಪಣಾ ಭಾವವನ್ನು ಅವರು ಕ್ರೀಡಾಪಟುವಿನ ಸುತ್ತಲಿರುವ ಎಲ್ಲ ಪ್ರೇರಕ ಶಕ್ತಿಗಳಿಂದ ಬಯಸಿದ್ದರು.

ರಾಜರ ಆಡಳಿತ ಇರಲಿ ಅಥವಾ ಆನಂತರ ಬಂದ ಚುನಾಯಿತ ಸರ್ಕಾರದ ಆಡಳಿತವಾಗಿರಲಿ ಎಲ್ಲ ಕಾಲದಲ್ಲಿಯೂ ಕ್ರೀಡಾ ಆಡಳಿತ ವ್ಯವಸ್ಥೆಯು ಮಾತ್ರ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎನ್ನುವುದೇ ಸರಿಯಾದ ವಾದ. ಸ್ವಯಂ ಪ್ರೇರಿತವಾಗಿ ಸೇವಾ ಮನೋಭಾವದಿಂದ ಕೆಲಸ ಮಾಡುವಂಥ ಆಡಳಿತದ ಚೌಕಟ್ಟಿನಲ್ಲಿಯೇ ಕ್ರೀಡಾ ಹಿತವಿದೆ.

ಆದರೆ ಈಗಿನ ವ್ಯವಸ್ಥೆಯಲ್ಲಿ ಒಲಿಂಪಿಕ್ ಕ್ರೀಡಾ ಫೆಡರೇಷನ್‌ಗಳು ಸರ್ಕಾರದಿಂದ ಅಗತ್ಯ ಇರುವಷ್ಟು ಆರ್ಥಿಕ ನೆರವು ಸಿಗದೇ ಬಳಲಿವೆ. ವಿಚಿತ್ರವೆಂದರೆ ದೇಶದ ಇತಿಹಾಸದಲ್ಲಿ ಚುನಾಯಿತ ಸರ್ಕಾರಗಳು ಕ್ರೀಡೆಗೆ ಆದ್ಯತೆ ನೀಡಿದ್ದು ತೀರ ಕಡಿಮೆ. ಅನುದಾನ ನೀಡುವ ವಿಷಯ ಬಂದಾಗ ಅಗತ್ಯ ಆನೆಯಷ್ಟಿದ್ದರೆ ಅಳಿಲಿನಷ್ಟು ನೆರವು ಫೆಡರೇಷನ್‌ಗಳಿಗೆ ಸಿಕ್ಕಿದೆ.

ಇದರ ಪರಿಣಾಮವಾಗಿ ಸ್ವತಂತ್ರ ಭಾರತದಲ್ಲಿ ಕ್ರೀಡೆ ಎನ್ನುವುದು ಭವಿಷ್ಯವನ್ನು ರೂಪಿಸುವಂಥ ಕ್ಷೇತ್ರವಾಗಿ ಯಾರಿಗೂ ಕಾಣಿಸಿಲ್ಲ. ಕ್ರೀಡಾಪಟುಗಳಾಗಿ ಬೆಳೆಯಬೇಕೆನ್ನುವ ಉತ್ಸಾಹವೂ ಕಡಿಮೆ. ಇಂಥ ಪರಿಸ್ಥಿತಿಯಲ್ಲಿಯೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಲ್ಲಿನ ಕೆಲವು ಶ್ರದ್ಧಾವಂತರಿಂದಾಗಿ ಕೆಲವು ಕ್ರೀಡೆಗಳು ಪ್ರಭಾವಿಯಾಗಿ ಬೆಳೆದಿವೆ.

ಗಮನಿಸಬೇಕಾದ ಅಂಶವೆಂದರೆ ಕೆಲವು ಕ್ರೀಡಾ ಆಡಳಿತಗಾರರು ತಮ್ಮ ಕಡೆಯ ಮೂಲಗಳಿಂದ ಕ್ರೀಡಾ ಚಟುವಟಿಕೆಗೆ ಧನಶಕ್ತಿಯು ಇಂಧನವಾಗುವಂತೆ ಮಾಡಿದ್ದಾರೆ. ಆದರೆ ಹೊರಗಿನಿಂದ ಸಿಗುವ ಆರ್ಥಿಕ ನೆರವು ದೊಡ್ಡದಲ್ಲ. ಆದ್ದರಿಂದ ಸರ್ಕಾರದಿಂದ ಅಧಿಕ ಅನುದಾನ ನಿರೀಕ್ಷೆ ಮಾಡುವುದು ಸಹಜ. ಇತ್ತೀಚಿನ ದಿನಗಳಲ್ಲಿ ಸ್ಥಿತಿ ಸ್ವಲ್ಪ ಸುಧಾರಿಸಿದೆ. ಆದರೆ ನೆರವಿನ ಹರಿವು ಕೆಲವು ಪ್ರಚಾರ ಪಡೆದ ಕ್ರೀಡೆಗಳತ್ತ ಮಾತ್ರ ಹರಿದಿದೆ ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.

ಅದೇನೇ ಇರಲಿ ಸರ್ಕಾರದಿಂದ ಕ್ರೀಡಾ ಫೆಡರೇಷನ್‌ಗಳಿಗೆ ಬರುವ ಹಣದ ಮೊತ್ತ ನಿಧಾನವಾಗಿ ಹೆಚ್ಚುತ್ತಿದೆ. ಸರ್ಕಾರ ನೀಡಿದ್ದು ಎಂದರೆ ಅದು ಜನರಿಂದ ಬಂದಿದ್ದು ಎಂದೇ ಅರ್ಥ. ಆದ್ದರಿಂದ ಜನರಿಗೆ ತಮ್ಮ ಹಣವು ಯಾವ ರೀತಿಯಲ್ಲಿ ಬಳಕೆಯಾಗುತ್ತಿದೆ ಎನ್ನುವುದು ತಿಳಿಯಲೇಬೇಕು. ಅಥ್ಲೀಟ್ ಕೂಡ ಜನರ ನಡುವಿನಿಂದಲೇ ಬರುತ್ತಾನೆ! ಅಲ್ಲವೇ?

ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ತರಬೇಕು ಎನ್ನುವುದೂ ಇದೇ ಉದ್ದೇಶಕ್ಕಾಗಿ. ಇದನ್ನು ಜವಾಬ್ದಾರಿಯುತ ಕ್ರೀಡಾಪಟುಗಳು ಹಾಗೂ ಕೆಲವು ಆಡಳಿತಗಾರರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬಂದಾಕ್ಷಣ ಕ್ರೀಡಾ ಕ್ಷೇತ್ರದಲ್ಲಿ ಸುಧಾರಣೆ ಆಗಿಬಿಡುತ್ತದೆ ಎನ್ನುವ ಭಾವನೆ ಖಂಡಿತ ಬೇಡ. ಇದು ಕೊನೆಯಲ್ಲ ಆರಂಭ ಮಾತ್ರ.

ಕ್ರೀಡಾ ಆಡಳಿತವನ್ನು ಪಾರದರ್ಶಕಗೊಳಿಸಿ ಉತ್ತಮವಾದ ವ್ಯವಸ್ಥೆ ರೂಪುಗೊಳ್ಳುವಂತೆ ಮಾಡಬೇಕು. ಆದರೆ ಆಡಳಿತಗಾರರು ಕ್ರೀಡಾ ಹಿತಕ್ಕಾಗಿ ಕೈಗೊಳ್ಳುವ ತೀರ್ಮಾನಗಳಿಗೆ ಇದು ತೊಡಕಾಗಿ ಪರಿಣಮಿಸಬಾರದು.
 
ಆಡಳಿತ ಕ್ಷೇತ್ರದಲ್ಲಿ ದೀರ್ಘ ಕಾಲದಿಂದ ಇರುವವರ ಅನುಭವದ ಪ್ರಯೋಜನ ಪಡೆಯುವುದಕ್ಕೂ ಅಡ್ಡಗಾಲು ಆಗಬಾರದು. ದೇಶದ ಕ್ರೀಡಾ ಪ್ರಗತಿಗೆ ಅನುಭವಿಗಳು ನೀಡಿದ ಕೊಡುಗೆ ಅಪಾರ. ಅವರು ಹಲವಾರು ವರ್ಷಗಳಿಂದ ಬೆವರು ಸುರಿಸಿ, ದಿಟ್ಟ ನಿರ್ಧಾರಗಳನ್ನು ಕೈಗೊಂಡು ಕ್ರೀಡೆ ಹಾಗೂ ಕ್ರೀಡಾಪಟುಗಳು ಬೆಳೆಯಲು ಕಾರಣರಾಗಿದ್ದಾರೆ.

ಕೆಲವು ಸೂಕ್ಷ್ಮವಾದ ಹೊಂದಾಣಿಕೆಗಳ ಜೊತೆಗೆ ಹೊಸ ಕ್ರೀಡಾ ನೀತಿ ಬರಬೇಕು. ಅಷ್ಟೇ ಅಲ್ಲ ಕ್ರೀಡಾ ಆಡಳಿತದಲ್ಲಿ ಪಾರದರ್ಶಕತೆಯೂ ಸಾಧ್ಯವಾಗಬೇಕು. ಆದರೆ ಇದು ಎಷ್ಟರ ಮಟ್ಟಿಗೆ ಪ್ರಗತಿಯ ಮಾರ್ಗದಲ್ಲಿ ಪ್ರಯೋಜನಕಾರಿ ಎನ್ನುವುದನ್ನು ಕಾಲವೇ ನಿರ್ಧರಿಸಲಿದೆ.

ನನ್ನ ಮಟ್ಟಿಗೆ ಹೇಳುವುದಾದರೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಬರುವುದು ಖಂಡಿತವಾಗಿಯೂ ಸ್ವಾಗತಾರ್ಹ. ಇದರಿಂದ ಆಡಳಿತ ವ್ಯವಸ್ಥೆಯಲ್ಲಿ ಶಿಸ್ತು ಬರುತ್ತದೆ.

ಎಲ್ಲ ಹಂತದ ಆಡಳಿತ ವರ್ಗವು ಸೂಕ್ತವಾದ ಹಾಗೂ ಜವಾಬ್ದಾರಿಯುತವಾದ ತೀರ್ಮಾನಗಳನ್ನು ಕೈಗೊಳ್ಳುವಂತೆ ಆಗುತ್ತದೆ. ಕೊನೆಯಲ್ಲಿ ಅದರಿಂದ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಒಳಿತು. ಕ್ರೀಡಾ ಪ್ರಗತಿಯು ಭವಿಷ್ಯದಲ್ಲಿ ಆರೋಗ್ಯಕರವಾದ ಸಮಾಜ ನಿರ್ಮಾಣವಾಗುವಂತೆ ಮಾಡುತ್ತದೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT