ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪಟುಗಳ ನೆಚ್ಚಿನ ಎಚ್‌ಆರ್‌ಎಂ

Last Updated 15 ಮೇ 2012, 19:30 IST
ಅಕ್ಷರ ಗಾತ್ರ

ಕ್ರೀಡಾಪಟುಗಳಿಗೆ `ಎಚ್‌ಆರ್‌ಎಂ~ (ಹಾರ್ಟ್ ರೇಟ್ ಮಾನಿಟರ್) ಅತಿ     ಹೆಚ್ಚು ಪ್ರಯೋಜನಕಾರಿ. ಅಥ್ಲೀಟ್‌ಗಳಂತೂ ಇದರ ನೆರವಿನಿಂದ ತರಬೇತಿಯ ವೇಗ ಹಾಗೂ ತೀವ್ರತೆ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ.

ಅಭ್ಯಾಸವೆಂದು ಕೇವಲ ಓಡುತ್ತಿದ್ದರೆ ಹಾಗೂ ವ್ಯಾಯಾಮ ಮಾಡುತ್ತಿದ್ದರೆ ಬೇಕಾದಷ್ಟು ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಅದು ಕೇವಲ ದೇಹ ದಂಡನೆ ಎನಿಸುತ್ತದೆ.

ಹಾಗೆ ಆಗುವುದನ್ನು ತಪ್ಪಿಸಲು ಹಾರ್ಟ್ ರೇಟ್ ಮಾನಿಟರ್ ಅಗತ್ಯ. ಇದು ಒಂದು ರೀತಿಯಲ್ಲಿ ಕೈಯಲ್ಲಿಯೇ ಇರುವ ಕೋಚ್. ಸಾಮರ್ಥ್ಯಕ್ಕೆ ತಕ್ಕಂತೆ ಅಭ್ಯಾಸ ಮಾಡಲು ಪ್ರತಿಯೊಂದು ಕ್ಷಣವೂ ಮಾರ್ಗದರ್ಶಕನ ಕೆಲಸವನ್ನೂ ಮಾಡುತ್ತದೆ.

ಅಗತ್ಯ ಸಂದರ್ಭದಲ್ಲಿ ಹೆಚ್ಚಿನ ವ್ಯಾಯಾಮ ಮಾಡಬೇಕಾದಾಗ ಮಿತಿಯನ್ನು ಕೂಡ ಅದೇ ನಿಗದಿಗೊಳಿಸುತ್ತದೆ. `ನಾಡಿವೇಗ~, `ಅವಧಿ~ ಹಾಗೂ `ತೀವ್ರತೆ~ಯನ್ನು ಸರಿದೂಗಿಸುವುದೇ ಈ ತಂತ್ರಜ್ಞಾನದ ವೈಶಿಷ್ಟ್ಯ.

ದೇಹ ತೂಕ ಕಡಿಮೆ ಮಾಡಿಕೊಳ್ಳಲು ಕ್ಯಾಲರಿ ಬರ್ನ್ ಆಗುವ ಗತಿಯನ್ನು ಗುರುತಿಸುವುದೂ ಸಾಧ್ಯ. ಇಂಥದೊಂದು ಅನುಕೂಲ ಇರುವ ಕಾರಣ ಸಾಮಾನ್ಯ ಜನರಿಗೂ ಇದು ಉಪಯೋಗಿ ಎನಿಸುವಂಥ ಸಾಧನವಾಗಿ ಕಾಣಿಸುತ್ತದೆ.

ದೊಡ್ಡ ಕ್ರೀಡಾಕೂಟಕ್ಕೆ ತಯಾರಿ ಮಾಡುವ ಕ್ರೀಡಾಪಟುಗಳಿಗಂತೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ತಕ್ಕ ವ್ಯಾಯಾಮ ಮಾಡಲು ಕ್ಷಣಕ್ಷಣಕ್ಕೂ ಸಲಹೆ ನೀಡುವ ಮಾರ್ಗದರ್ಶಕ ಇದಾಗುತ್ತದೆ.

ಸೈಕ್ಲಿಂಗ್, ಮ್ಯಾರಥಾನ್, ಟ್ರಯಥ್ಲಾನ್, ವೇಗದ ಓಟದಂಥ ಸ್ಪರ್ಧೆಗಳಿಗೆ ಸಿದ್ಧತೆ ನಡೆಸಿದಾಗ ಅಂದಾಜಿನ ಮೇಲೆ ಅಭ್ಯಾಸ ಮಾಡಲು ಆಗದು. ಸರಿಯಾದ ಮಾಪನವೂ ಬೇಕು.

ಅಂಥ ಪರಿಸ್ಥಿತಿಯಲ್ಲಿ ಹೃದಯ ಬಡಿತದ ಗತಿಯನ್ನು ಅರಿತೇ ತಾಲೀಮು ಮಾಡಬೇಕು. ಇಲ್ಲದಿದ್ದರೆ ಸಾಮರ್ಥ್ಯಕ್ಕೂ ಕಡಿಮೆ ಇಲ್ಲವೆ ಶಕ್ತಿಗೂ ಮೀರಿದ ವ್ಯಾಯಾಮದಿಂದ ಎದುರಿಸುವ ಅಪಾಯ ಹೆಚ್ಚು.

ಅಭ್ಯಾಸದ ಅವಧಿ ಹಾಗೂ ತೀವ್ರತೆಯನ್ನು ಹೊಂದಾಣಿಕೆ ಮಾಡುವುದು ಸುಲಭವಲ್ಲ. ಅದಕ್ಕೆ ಸೂಕ್ತ ಮಾರ್ಗವೆಂದರೆ ನಾಡಿವೇಗ ಹಾಗೂ ಅವಧಿಯ ನಡುವೆ ಸಮತೋಲನ ಸಾಧಿಸುವುದು.
 
ಹಾಗೆ ಮಾಡಿದರೆ ಅಥ್ಲೀಟ್‌ಗಳು ಗುರಿ ಸಾಧಿಸಲು ಅಗತ್ಯವಾದಷ್ಟು ತರಬೇತಿ ನಡೆಸುವುದು ಕಷ್ಟವಾಗುವುದಿಲ್ಲ. ಹಾರ್ಟ್ ರೇಟ್ ಮಾನಿಟರ್ ಇಲ್ಲದೆಯೇ ಅಭ್ಯಾಸ ಮಾಡುವಾಗ ಅನೇಕ ಅಂಶಗಳು ಪರೋಕ್ಷವಾಗಿ ಪ್ರಭಾವ ಮಾಡುತ್ತವೆ.
 
ತರಬೇತಿ ನೀಡುವವನ ಆಸಕ್ತಿ ಮುಖ್ಯವಾದದ್ದು. ಇನ್ನೊಬ್ಬರೊಂದಿಗೆ ಸೇರಿ ಅಭ್ಯಾಸ ಮಾಡುತ್ತಿದ್ದಾಗ ಜೊತೆಗಿದ್ದವನ ಸಾಮರ್ಥ್ಯ ಕಡಿಮೆ ಆಗಿದ್ದರೆ ಅದೂ ಕೆಟ್ಟ ಪರಿಣಾಮ ಆಗುತ್ತದೆ.
 
ಅಂಥ ಆತಂಕ ತಪ್ಪಿಸಲು ಹಾರ್ಟ್ ರೇಟ್ ಮಾನಿಟರ್‌ನಿಂದ ತೀವ್ರತೆಯನ್ನು ಅರಿಯುವುದೇ ಸೂಕ್ತ. ಇಂಥದೊಂದು ಅಗತ್ಯವನ್ನು ಅರಿತೇ ದಶಕಗಳ ಹಿಂದೆ ನಿಸ್ತಂತು `ಎಚ್‌ಆರ್‌ಎಂ~ ರೂಪುಗೊಂಡಿದ್ದು.

`ಪೋಲಾರ್~ ಎಂದೇ ಕರೆಯಲಾಗುವ `ಪೋಲಾರ್ ಎಲೆಕ್ಟ್ರೊ~ ಕಂಪೆನಿಯೇ ಮೊಟ್ಟ ಮೊದಲ ಬಾರಿಗೆ ವಯರ್‌ಲೆಸ್ `ಎಚ್‌ಆರ್‌ಎಂ~ ಪರಿಚಯಿಸಿದ್ದು. ಫಿನ್ಲೆಂಡ್‌ನ ಕೆಂಪೆಲ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಪೋಲಾರ್ 1977ರಲ್ಲಿ ಈ ತಂತ್ರಜ್ಞಾನವನ್ನು ತನ್ನದೇ ದೇಶದ ರಾಷ್ಟ್ರೀಯ ಕ್ರಾಸ್‌ಕಂಟ್ರಿ ಸ್ಕೀಯಿಂಗ್ ತಂಡಕ್ಕೆ ನೀಡಿ ಪ್ರಯೋಗಿಸಿತು.

ವಿಶೇಷವೆಂದರೆ ಈ ತಂತ್ರಜ್ಞಾನ ಎಷ್ಟು ಬೇಗ ಪ್ರಚಾರ ಪಡೆಯಿತೆಂದರೆ ಈಗ 80 ದೇಶಗಳಲ್ಲಿ 35 ಸಾವಿರಕ್ಕೂ ಹೆಚ್ಚು `ಎಚ್‌ಆರ್‌ಎಂ~ ವಿತರಕರಿದ್ದಾರೆ.
 
ಅದೇ ಸ್ವರೂಪದ ಮಾನಿಟರ್‌ಗಳನ್ನು ಇನ್ನೂ ಅನೇಕ ಕಂಪೆನಿಗಳೂ ಉತ್ಪಾದಿಸುತ್ತಿವೆ. ಮೂರು ದಶಕಗಳ ಅವಧಿಯಲ್ಲಿ ಮೂಲ ಎಚ್‌ಆರ್‌ಎಂ ಸ್ವರೂಪವನ್ನು ಸಾಕಷ್ಟು ಪರಿಷ್ಕರಣೆ ಮಾಡಲಾಗಿದೆ.
 
ಕ್ರೀಡಾಪಟುಗಳು ಮಾತ್ರವಲ್ಲ ಸಾಮಾನ್ಯ ಜನರಿಗೂ ಇದು ಆರೋಗ್ಯ ರಕ್ಷಣೆಗೆ ಸಹಕಾರಿ ಆಗಿದೆ. ಭಾರತದಲ್ಲಿ ಈ ಸಾಧನ ರೂ. 1350ರಿಂದ ಆರಂಭವಾಗಿ ಗುಣಮಟ್ಟಕ್ಕೆ ತಕ್ಕಂತೆ ಭಾರಿ ಬೆಲೆಗೂ ಲಭ್ಯ.

ಹೃದಯ ಬಡಿತ ವಿಶ್ಲೇಷಕ ಯಂತ್ರವನ್ನು ಸುಲಭವಾದ ವೈಯಕ್ತಿಕ ನಿರ್ವಹಣಾ ತಂತ್ರಜ್ಞಾನವೆಂದು ಹೇಳಲಾಗುತ್ತದೆ. ಅದು ನಿಜವೂ ಆಗಿದೆ. ಮೂಲದಲ್ಲಿ `ಎಲೆಕ್ಟ್ರೊಕಾರ್ಡಿಯೊಗ್ರಾಫಿ~ (ಇಸಿಜಿ) ಆಗಿದ್ದ ಯಂತ್ರವು ನಂತರ ಸ್ವರೂಪ ಬದಲಿಸಿಕೊಂಡು ಹೆಚ್ಚು ಬಳಕೆದಾರ ಸ್ನೇಹಿಯಾಗಿ ಮಾರ್ಪಟ್ಟಿದೆ. ನಿಸ್ತಂತು ವ್ಯವಸ್ಥೆಯ ನಂತರವಂತೂ ಇನ್ನಷ್ಟು ಸರಳವೆನಿಸಿದೆ.
 
`ಚೆಸ್ಟ್ ಸಟ್ಯೆಾಪ್~ ಜೊತೆಗೆ ಮಾನಿಟರ್ ರೂಪದಲ್ಲಿ ಕೆಲಸ ಮಾಡುವ `ವಾಚ್~ ಇಲ್ಲವೇ `ಮೊಬೈಲ್~ ಇಷ್ಟು ಸಂಪೂರ್ಣ ನಿರ್ವಹಣೆಗೆ ಅಗತ್ಯವಾದ ಯಂತ್ರ ಜೋಡಣೆ. ಇತ್ತೀಚೆಗೆ `ಸಟ್ಯೆಾಪ್‌ಲೆಸ್~ ಮಾನಿಟರ್‌ಗಳೂ ಮಾರುಕಟ್ಟೆಗೆ ಬಂದಿವೆ.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT