ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪುರ ಹುಡುಕುವ ಮುನ್ನ...

Last Updated 14 ಡಿಸೆಂಬರ್ 2012, 12:38 IST
ಅಕ್ಷರ ಗಾತ್ರ

ತುಮಕೂರಿನ ಈಗಿನ ಸಿದ್ಧಿವಿನಾಯಕ ಮಾರುಕಟ್ಟೆ ಸರಿಸುಮಾರು ಒಂಬತ್ತು ಶತಮಾನಗಳ ಹಿಂದೆ  ಸೋಮನಕಟ್ಟೆ ದಿಣ್ಣೆಯಾಗಿತ್ತು. ಈ ದಿಣ್ಣೆಯಲ್ಲಿ ಟುಮಕಿ ಇಟ್ಟು ಶತ್ರುಗಳು ಬಂದರೆ ಎಚ್ಚರಿಕೆ ಕೊಡಲು ಟುಮಕಿ ಬಾರಿಸುತ್ತಿದ್ದವನಿಗೆ ತುಮಕೂರು ಇನಾಮು ನೀಡಿದ ಕಥೆಯ ಬೆನ್ನೆತ್ತು ಹೋದಾಗ  ನೃಪರಾಯ ಅರಸನ ನೆನಪಾಯಿತು. ಆಗಿನ್ನು ತುಮಕೂರು ಸಣ್ಣ ಹಳ್ಳಿ. ಈ ಹಳ್ಳಿಯನ್ನು ಇನಾಮು ನೀಡಿದ್ದು ಆಗಿನ ಕೈದಾಳದ ಅರಸ !

ಈಗ ಏನೇನು ಅಲ್ಲದೆ ಹಳ್ಳಿಯಾಗಿರುವ ಕೈದಾಳ ಈ ಹಿಂದೆ ಕ್ರೀಡಾಪುರ ಎಂಬ ರಾಜ್ಯವಾಗಿತ್ತು ಎಂಬುದೇ ಇಲ್ಲಿನ ಹೆಮ್ಮೆ. ಸಂಪದ್ಭರಿತ ರಾಜ್ಯವಾಗಿದ್ದ ಕ್ರೀಡಾಪುರದ ವ್ಯಾಪ್ತಿಗೆ ತುಮಕೂರು, ಗೂಳೂರು ಹಾಗೂ ಹೆತ್ತೇನಹಳ್ಳಿ ಸೇರಿದಂತೆ ಮತ್ತಿತರರ ಹಳ್ಳಿಗಳು ಸೇರಿದ್ದವು.

ಜಿಲ್ಲೆಯಲ್ಲಿ ಸತಿ ಸಹಗಮನ ಪದ್ಧತಿ ಎಲ್ಲಿಯೂ ಕಂಡು ಬರುವುದಿಲ್ಲ. ಆದರೆ ಕೈದಾಳದಲ್ಲಿ ಸತಿ ಕಲ್ಲು ಇತ್ತು ಎಂಬ ವಾದ ಇದೆ. ಆದರೆ ಇದು ಜೈನರ ನಿಷಧಿ ಕಲ್ಲು (ಈಗ ಕಾಣುತ್ತಿಲ್ಲ) ಎನ್ನುವವರೂ ಇದ್ದಾರೆ. ಗುಬ್ಬಿ ತಾಲ್ಲೂಕು ನಿಟ್ಟೂರಿನ ಆದೀಶ್ವರ ಬಸದಿಯಲ್ಲಿ ನಿಷಧಿ ಕಲ್ಲಿದೆ. ಅದರ ಮೇಲೆ ಅತ್ತೆಯಾದ ಮಾಳವ್ವೆ ತನ್ನ ಸೊಸೆ ಚೌಡಿಯಕ್ಕ ಇಹಲೋಕ ತೃಜಿಸಿದಾಗ ಆ ನೋವು ತಾಳಲಾರದೆ ಅವಳ ಸಮಾಧಿ ಪ್ರವೇಶಿಸಿ ಪ್ರಾಣತ್ಯಾಗ ಮಾಡಿಕೊಂಡಳಂತೆ. ಅತ್ತೆ-ಸೊಸೆಯರ ಬಾಂಧ್ಯವಕ್ಕೆ ಇದಕ್ಕಿಂತಲೂ ಉದಾಹರಣೆ ಬೇಕೆ?

ಚನ್ನಕೇಶ್ವರ ದೇವಾಲಯದ ಮೂಲಕ ಜಗತ್ತಿನ ಗಮನ ಸೆಳೆದಿರುವ ಕೈದಾಳದ ಹಿಂದೆ ಅನೇಕ ರೋಚಕ ಕಥೆಗಳಿವೆ. ಹೆತ್ತೇನಹಳ್ಳಿಯಲ್ಲಿರುವ ಲಕ್ಷ್ಮೀ ದೇವಸ್ಥಾನ ಆಗಿನ ಕ್ರೀಡಾಪುರ ರಾಜನ ಬೊಕ್ಕಸವಾಗಿತ್ತು. ತಳವಾರರ ಕುಟುಂಬವೊಂದರ ಕುಲದೇವತೆಯಾಗಿ ಅದನ್ನು ಪೂಜೆ ಮಾಡಲಾಗುತ್ತಿತ್ತು.

ಹೆತ್ತೇನಹಳ್ಳಿಯ ಲಕ್ಷ್ಮೀ ದೇವತೆಯ ಕಥೆಯಂತೂ ಸ್ಪರ್ಶ, ಅಸ್ಪೃಶ್ಯರ ನಡುವಿನ ಕಂದಕ ಮುಚ್ಚಲು ಇರುವ ಬಹುದೊಡ್ಡ ಐತಿಹಾಸಿಕ ಪರಂಪರೆಯಾಗಿದೆ. ಈ ದೇವಸ್ಥಾನದ ತೇರು ಕಟ್ಟುವುದು ದಲಿತ ಕುಟುಂಬ. ದಲಿತರ ಆರತಿಯೇ ಮೊದಲು ಆಗಬೇಕು. ಆನಂತರ ಬೇರೆಯವರದು. ಇಂಥ ಸಂಪ್ರದಾಯದ ಹೆತ್ತೇನಹಳ್ಳಿ ದೇಶದ ಮಾದರಿ ಊರು ಎಂದರೂ ತಪ್ಪಲ್ಲ.

ಕೈದಾಳ ಪುರಾತನಾ ಕಾಲದಲ್ಲಿ ಪ್ರಸಿದ್ಧ ನಗರವಾಗಿತ್ತು ಎಂಬುದು ವಿಸ್ಮಯದಂತೆ ಕಾಣುತ್ತದೆ.ಬೆರುಗುಗೊಳಿಸುವ ಶಿಲ್ಪಚಾತುರ್ಯದ ದೇವಸ್ಥಾನಗಳು ಇಲ್ಲಿವೆ. ವೀರಯೋಧರ ನೆನಪಿನ ಅನೇಕ ವೀರಗಲ್ಲುಗಳಿವೆ. ಸಾಮಂತ ರಾಜ ಬಾಚಿದೇವ ಬರೆಯಿಸಿದ ಶಾಸನಗಳಿವೆ.

ಕೈದಾಳದಲ್ಲಿ ದುರ್ಗಮವಾದ ಕೋಟೆ ಇತ್ತು. ಅರಮನೆ ಇತ್ತು. ರಾಜರು, ಮಂತ್ರಿಗಳು, ಉದ್ಯಾನ, ಕಲ್ಯಾಣಿಗಳಿದ್ದವು. ಆದರೆ ಈಗ ಕೋಟೆ ಇಲ್ಲ.  800 ವರ್ಷಗಳ ಹಿಂದಿನ ಶಾಸನವೊಂದರಲ್ಲಿ  `ವಿಳಾಸಕಂ ಸಕಳ ಲಕ್ಷ್ಮೀ ನಿವಾಸಮುಮೆನಿಸಿ ಸೊಗಯಿಸುವ ಕೈದಾಳಂ' ಎಂದಿದೆ. ಇಷ್ಟು ಹೇಳಿದರೆ ಸಾಕು ಅಂದಿನ ಕೈದಾಳ ಕಣ್ಮುಂದೆ ತೇಲಿದಂತಾಗುತ್ತದೆ.

ವಿಶ್ವಪ್ರಸಿದ್ಧಿಯಾಗಿರುವ ಚನ್ನಕೇಶವ ದೇವಾಲಯ ಮುಖ್ಯದ್ವಾರದಲ್ಲೇ ಕ್ರೀಡಾಪುರದ ಮತ್ತೊಬ್ಬ ಸಾಮಂತ ರಾಜ ಬಾಚಿಯ ಶಿಲಾಪ್ರತಿಮೆ ಇದೆ. ಗಂಗಾಧರೇಶ್ವರ ಗುಡಿಯ ಮುಂಭಾಗದಲ್ಲಿ ವೀರಗಲ್ಲು, ನವರಂಗದಲ್ಲಿ ಸಾಮಂತ ಬಾಚಿಯ ಧರ್ಮ ಶಾಸನಗಳಿವೆ. ರಾಮೇಶ್ವರ, ಗೌರೀಶ್ವರನ ಗುಡಿ, ಅಮ್ಮನ ತೋಟದ ಬೃಂದಾವನದ ಭೀಮ ಜಿನಾಲಯದ ಅವಶೇಷ. ನಾಗಕನ್ಯೆಯ ವಿಗ್ರಹ, ಜೈನಾ ಯಾತ್ರಸ್ಥಳಗಳ ಕೆತ್ತನೆ ಇಲ್ಲಿವೆ.

ತಪ್ಪು ಮಾಡಿದವರನ್ನು ಹಿಂದೆ ಇಲ್ಲಿ ಶೂಲಕ್ಕೆ ಹಾಕಲಾಗುತ್ತಿತ್ತು. ಅಲ್ಲೆಗ ಶೂಲ ಆಂಜನೇಯನ ಗುಡಿ ಇದೆ. ಕೈದಾಳ ಆಳಿದ ಗೂಳಿ ಬಾಚಿದೇವ ಜೈನ ಮತ ಇಷ್ಟಪಡುತ್ತಿದ್ದ. ಅವನ ಪ್ರಿಯತಮೆ ಭೀಮಳೆದೇವಿ ಜೈನ ಭಕ್ತೆ. ಆಕೆಯ ಇಷ್ಟಾನುಸಾರ ಭೀಮ ಜಿನಾಲಯ ಬಸದಿ ಕಟ್ಟಿಸಿದ ಎಂಬ ಶಾಸನವಿದೆ. ಆದರೆ ಬಸದಿಯ ಅವಶೇಷವೂ ಈಗ ಇಲ್ಲ.

ಕ್ರೀಡಾಪುರ ಈ ಹಿಂದೆ ನೃಪರಾಯ ಎಂಬ ಅರಸನ ರಾಜಧಾನಿಯಾಗಿತ್ತು. ತುಮಕೂರು ಆಗ ಹಳ್ಳಿ. ಇದು ಕೂಡ ಕೈದಾಳ ರಾಜ್ಯಕ್ಕೆ ಸೇರಿತ್ತು. ಗಂಗರ ರಾಜ ಒಂದನೇ ರಾಜಮಲ್ಲ ಸತ್ಯವಾಕನ ಕಾಲದಲ್ಲಿ ರಾಷ್ಟ್ರಕೂಟರ ಅರಸ ನೃಪತುಂಗ ಅಥವಾ ಅಮೋಘವರ್ಷನ ದಳಪತಿ ಬಂಕೇಶ ಕೈದಾಳಕ್ಕೆ ಮುತ್ತಿಗೆ ಹಾಕಿದನು ಎಂಬುದಕ್ಕೆ ಶಾಸನಗಳಿವೆ. ಅನಂತ ಬಾಚಿದೇವ ಸಾಮಂತ ರಾಜನಾಗಿದ್ದ.

ಕೈದಾಳದಲ್ಲಿರುವಂತೆಯೂ ಗೂಳೂರಿನಲ್ಲೂ ಚನ್ನಕೇಶವ ದೇವಾಲಯವಿದೆ. `ಶೂನ್ಯ ಸಂಪಾದನೆ'ಗೆ ವ್ಯಾಖ್ಯಾನ ಬರೆದ ರಾಜ್ಯದ ನಾಲ್ವರಲ್ಲಿ ಒಬ್ಬರಾದ ಸಿದ್ದವೀರಣ್ಣನ್ನೊಡೆಯ ಗೂಳೂರಿನವರು! ಹೊಯ್ಸಳ ವೀರರಾಮನಾಥದೇವನು (1245-1295)  ಯುದ್ಧದಲ್ಲಿ ಮಡಿದ ಜೀತದಾಳಿನ ಜ್ಞಾಪಕಾರ್ಥ ವೀರಗಲ್ಲು ನಿರ್ಮಿಸಿರುವುದು ಗಮನ ಸೆಳೆಯುತ್ತದೆ. ಕೈದಾಳ ದೇಗುಲದಲ್ಲಿರುವ ಈ ಜೀತಗಾರನ ವೀರಗಲ್ಲು ಸಾಮಾನ್ಯನ್ನೊಬ್ಬನ ಅಸಾಮಾನ್ಯ ಇತಿಹಾಸದ ಬಣ್ಣನೆಯಾಗಿದೆ.

ಜಕಣಾಚಾರಿಯ ಕಥೆ
ಕೈದಾಳದ ಹೆಸರು ಹೇಳಿದರೆ ಸಾಕು ಶಿಲ್ಪಿ ಜಕಣಾಚಾರಿ ಹೆಸರು ನೆನಪಿಗೆ ಬರುತ್ತದೆ. ಕ್ರೀಡಾಪುರಕ್ಕೆ ಕೈದಾಳ ಎಂಬ ಹೆಸರು ಬರಲು ಜಕಣಾಚಾರಿ ಕಾರಣ ಎಂಬ ಐತಿಹ್ಯವಿದೆ. ವಿಖ್ಯಾತ ಶಿಲ್ಪಿಯಾಗಿದ್ದ ಜಕಣಾಚಾರಿ ಊರು ಕೈದಾಳ. ಮದುವೆ ನಂತರ ಹೆಂಡತಿ ಗರ್ಭಿಣಿಯಾಗಿದ್ದಾಗ ಊರು ಬಿಟ್ಟ ಎಂಬ ಕಥೆ ಇದೆ.  ಆತ ಊರು ಬಿಟ್ಟು ಬೇಲೂರಿನಲ್ಲಿ ಚನ್ನಕೇಶವ ದೇವಾಲಯ ನಿರ್ಮಾಣದಲ್ಲಿ ತೊಡಗಿದ್ದನು. ಅಷ್ಟರಲ್ಲಿ ಜಕಣಾಚಾರಿಯ ಮಗ ಬೆಳೆದು ದೊಡ್ಡವನಾಗಿದ್ದನು. ಆತನ ಮಗನೇ ಡಕಣಾಚಾರಿ. ಈತ ಬೇಲೂರಿನಲ್ಲಿ ಕೆತ್ತನೆಯೊಂದರ ಒಳಗೆ ಕಪ್ಪೆ ಇದ್ದುದ್ದನ್ನು ತೋರಿಸಿದ ಕಾರಣ ಜಕಣಾಚಾರಿ ತನ್ನ ಬಲಗೈ ಕತ್ತರಿಸಿಕೊಂಡ. ನಂತರ ಮಗನೊಂದಿಗೆ ವಾಪಸ್ ಕ್ರೀಡಾಪುರಕ್ಕೆ ಬಂದು ಚನ್ನಕೇಶವ ದೇವಾಲಯ ಕೆತ್ತಿದ. ದೇವಸ್ಥಾನ ಕೆತ್ತನೆ ಮುಗಿಯುವ ಹಂತದಲ್ಲಿ ಜಕಣಾಚಾರಿಗೆ ಕತ್ತರಿಸಿಕೊಂಡ ಕೈಬಂತು. ಹೀಗಾಗಿ ಕೈದಾಳ ಎಂಬ ಹೆಸರು ಬಂತು ಎಂಬ ಐತಿಹ್ಯವಿದೆ. ಇತಿಹಾಸದಲ್ಲಿ ಜಕಣಾಚಾರಿಯ ಕುರಿತು ಎಲ್ಲೂ ದಾಖಲೆ ಸಿಕ್ಕಿಲ್ಲ.

ದ್ವಾರಸಮುದ್ರದ ಶಾಸನ
ಗಂಗಾಧರೇಶ್ವರ ದೇವಾಲಯದಲ್ಲಿ ದ್ವಾರಸಮುದ್ರದ ಹೊಯ್ಸಳ ಬಳ್ಳಾಲ ನರಸಿಂಹನ ಕಾಲದ 1151ನೇ ಇಸವಿ ಶಾಸನಗಳಿವೆ.  ಸಾಮಂತ ಬಾಚಿ ದೇವನ ಶಾಸನಗಳಿವೆ. ಕೈದಾಳದ ಮೊದಲ ದೇವಸ್ಥಾನ ಇದು. ದ್ರಾವಿಡ ಶಿಲ್ಪ ಪ್ರಕಾರದಲ್ಲಿದೆ. ಹೊಯ್ಸಳರ ಕಾಲದ ದೇವಸ್ಥಾನದಲ್ಲಿರುವಂತೆ ಮೇಲ್ಛಾವಣೆಯಲ್ಲಿ ಕಮಲಪುಷ್ಪ, ಕಂಬಗಳಲ್ಲಿ ಶಿವ, ಬ್ರಹ್ಮ, ವಿಷ್ಣು, ಭೈರವ, ಕೃಷ್ಣ, ಗಣಪತಿ, ವೀರಭದ್ರ ವಿಗ್ರಹ. ನವರಂಗದಲ್ಲಿ ಒಂದು ಶಾಸನ ಮೇಲ್ಭಾಗ ವಿಷ್ಣು ಮತ್ತು ಜಿನ ವಿಗ್ರಹ ಇವೆ.

ಸಿಂಹಾರೂಢ ಚಿತ್ರಗಳು, ಆನೆ ಸಾಲುಗಳು, ಕುದುರೆ ಸಾಲು ಗಮನ ಸೆಳೆಯುತ್ತವೆ. ಚನ್ನಕೇಶವ ಮೂರ್ತಿ ಶಿಲ್ಪದ ಎತ್ತರ ಐದು ಅಡಿ. ಎರಡು ಕಡೆಯೂ ಶ್ರೀದೇವಿ, ಭೂದೇವಿ ಮೂರ್ತಿ ಇದೆ. ಇಲ್ಲಿರುವ ಈಟಿ ಹಿಡಿದಿರುವ ವಿಗ್ರಹ ಸಾಮಂತ ಬಾಚಿಯ ಪ್ರತಿಮೆ ಎನ್ನಲಾಗಿದೆ. ಉತ್ತರದ ಪ್ರಾಕಾರದ ಗೋಡೆಯಲ್ಲಿ ಸವೆದು ಹೋಗಿರುವ ಎರಡು ವಿಗ್ರಹಗಳಿದ್ದು ಒಂದು ಜಕಣಾಚಾರಿ, ಇನ್ನೊಂದು ಡಕಣಾಚಾರಿಎಂದು ಜನ ಹೇಳುತ್ತಾರೆ.

ಜೈನರ ನೆಲೆ
ಕೈದಾಳ ಈ ಹಿಂದೆ ಜೈನರು, ಬೌದ್ಧರ ನೆಲೆಯಾಗಿತ್ತು. ಹನ್ನೆರಡನೆ ಶತಮಾನದವರೆಗೂ ಜೈನರ ಪ್ರಾಬಲ್ಯವಿತ್ತು. 1898ರ ವರೆಗೂ ಕೆಲವು ಜೈನ ಕುಟುಂಬಗಳು ಕೈದಾಳದಲ್ಲಿ ನೆಲೆಸಿದ್ದವು. ಪ್ಲೇಗ್ ಪಿಡುಗಿನಿಂದಾಗಿ ಜೈನರ ಅಳಿದುಳಿದ ಕುಟುಂಬಗಳು ಇಲ್ಲಿಂದ ವಲಸೆ ಹೋಗಿರಬಹುದು ಎಂಬ ಮಾತುಗಳು ಇವೆ.

ಮತ್ತೆ ಗಮನ ಸೆಳೆಯುತ್ತಿದೆ....
ಸಾಕಷ್ಟು ಕಾಲದಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕೈದಾಳ ಈಗ ಅಭಿವೃದ್ಧಿಪಡಿಸಲಾಗುತ್ತದೆ. ದೇವಾಲಯಕ್ಕೆ ಹೊಸ ಮೆರುಗು ನೀಡಲಾಗಿದೆ. ಮತ್ತಷ್ಟು ಅಭಿವೃದ್ಧಿ ಕೆಲಸ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT