ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಳುಗಳಿಗೆ ಹಣ ಬಿಡುಗಡೆ

Last Updated 24 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್ ಹಾಗೂ ಇತರ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ಪ್ರಮುಖ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಯಿಂದ (ಎನ್‌ಎಸ್‌ಡಿಎಫ್) ಒಟ್ಟು 10.19 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ.

52 ಮಂದಿ ಕ್ರೀಡಾಪಟುಗಳು, ನಾಲ್ಕು ಜನ ತರಬೇತುದಾರರು ಮತ್ತು ಆರು ಮಂದಿ ಸಹಾಯಕ  ಸಿಬ್ಬಂದಿಗೆ ಇದರ ಪ್ರಯೋಜನ ಲಭಿಸಲಿದೆ. `ಆಪರೇಷನ್ ಲಂಡನ್ ಎಕ್ಸಲೆನ್ಸ್ 2012~ ಎನ್ನುವ ಯೋಜನೆಯನ್ನು ಕ್ರೀಡಾ ಸಚಿವಾಲಯ ಒಲಿಂಪಿಕ್ಸ್‌ಗೂ ಮುನ್ನ ಆರಂಭಿಸಿತ್ತು. ಕ್ರೀಡಾಪಟುಗಳು ಒಲಿಂಪಿಕ್ಸ್‌ಗೆ ಸಜ್ಜುಗೊಳ್ಳಲು ಸ್ವದೇಶಿ ಅಥವಾ ವಿದೇಶಿ ಕೋಚ್ ಬಳಿ ತರಬೇತಿ, ವೈಜ್ಞಾನಿಕ ಅಭ್ಯಾಸ, ಫಿಸಿಯೊ ವೇತನ ಸೇರಿದಂತೆ ಇತರ ವೆಚ್ಚಗಳಿಗೆ ಖರ್ಚು ಮಾಡಲು ತಿಳಿಸಿತ್ತು.

ಬಿಡುಗಡೆ ಮಾಡಲಾಗಿರುವ ಒಟ್ಟು ಹಣದಲ್ಲಿ ಹೆಚ್ಚಿನ ಪಾಲು ಶೂಟರ್‌ಗಳಿಗೆ ಸಲ್ಲಲಿದೆ. ಅದು 4.55 ಕೋಟಿ ರೂಪಾಯಿ. ಇದರಲ್ಲಿ ಅಭಿನವ್ ಬಿಂದ್ರಾ 1. 31 ಕೋಟಿ ರೂ. ಪಡೆಯಲಿದ್ದಾರೆ. ಸೆಪ್ಟಂಬರ್ 2011ರಿಂದ 2012ರ ಜುಲೈವರೆಗೆ ಅವರು 155 ದಿನ ಜರ್ಮನಿಯಲ್ಲಿ ಪಡೆದ ತರಬೇತಿಗೆ ಈ ಹಣ ನೀಡಲಾಗಿದೆ. 217 ದಿನ ತರಬೇತಿ ಪಡೆದಿರುವ ರೊಂಜನ್ ಸೋಧಿ ಮತ್ತು ಮಾನವ್‌ಜಿತ್ ಸಿಂಗ್ ಸಂಧು ಅವರಿಗೆ ಕ್ರಮವಾಗಿ 1.10 ಕೋಟಿ ರೂ. ಹಾಗೂ 1. 13 ಕೋಟಿ ರೂ. ಲಭ್ಯವಾಗಲಿದೆ.
 

ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದ ಇತರ ಶೂಟರ್‌ಗಳಾದ ಶಾಗುನ್ ಚೌಧರಿ (37.03ಲಕ್ಷ ರೂ.), ಸಂಜೀವ್ ರಜಪುತ್ (8.54 ಲಕ್ಷ ರೂ.), ಜಯ್‌ದೀಪ್ ಕರ್ಮಾಕರ್ (22.32 ಲಕ್ಷ ರೂ.), ಹೀನಾ ಸಿಧು (7.36ಲಕ್ಷ ರೂ.) ಅವರೂ ಹಣ ಪಡೆಯಲಿದ್ದಾರೆ. ಮನ್‌ಶೀರ್ ಸಿಂಗ್ ಅವರ ತರಬೇತಿಗೂ 14.64 ಲಕ್ಷ ರೂ. ಖರ್ಚು ಮಾಡಲಾಗಿತ್ತು. ಆದರೆ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿಲ್ಲ.

ಷಾಟ್‌ಪಟ್ ಸ್ಪರ್ಧಿ ಓಂ ಪ್ರಕಾಶ್ ಕರಾನ (58.73 ಲಕ್ಷ ರೂ.) ಮತ್ತು ಕೃಷ್ಣಾ ಪೂನಿಯಾ (58.01 ಲಕ್ಷ ರೂ.) ಅವರಿಗೆ ನೀಡಲಾಗಿರುವ ಹಣ ಹೊರತು ಪಡಿಸಿ ಇತರ ಒಂಬತ್ತು ಅಥ್ಲೀಟ್‌ಗಳಿಗೆ 2. 69 ಕೋಟಿ ರೂಪಾಯಿ ನೀಡಲಾಗಿದೆ. ಪ್ರಕಾಶ್ ಹಂಗೇರಿಯಲ್ಲಿ ತರಬೇತಿ ಪಡೆದಿದ್ದರೆ, ಪೂನಿಯಾ ಅಮೆರಿಕದ `ಕಾನ್‌ಕಾರ್ಡಿಯಾ ಯುನಿವರ್ಸಿಟಿ ಥ್ರೋ ಸೆಂಟರ್~ನಲ್ಲಿ  ತರಬೇತಿ ಪಡೆದಿದ್ದರು.

ಇನ್ನುಳಿದಂತೆ ಬಾಕ್ಸರ್‌ಗಳಿಗೆ (23.84 ಲಕ್ಷ ರೂ.), ಟೆನಿಸ್ ಆಟಗಾರರು (1. 69.ಕೋಟಿ ರೂ.), ಜಿಮ್ನಾಸ್ಟಿಕ್ಸ್ ಸ್ಪರ್ಧಿಗಳಿಗೆ (89.91 ಲಕ್ಷ ರೂ.) ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT