ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆ: ಚುಟುಕು- ಗುಟುಕು

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಎಂಎನ್‌ಸಿ ಉದ್ಯೋಗಗಳಲ್ಲಿ ಕ್ರೀಡಾ ಮೀಸಲಾತಿ: ಅಪ್ಪಚ್ಚು
ಮೈಸೂರು
: ಖಾಸಗಿ ಮತ್ತು ಬಹುರಾಷ್ಟ್ರೀಯ ಸಂಸ್ಥೆ (ಎಂಎನ್‌ಸಿ)ಗಳಲ್ಲಿ ಕ್ರೀಡಾಪಟುಗಳಿಗೆ ಶೇ 5ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಮಂಡಿಸಲು ಸರ್ಕಾರ ಸಿದ್ಧವಾಗಿದೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ಅಪ್ಪಚ್ಚು ರಂಜನ್ ಹೇಳಿದರು.

ಭಾನುವಾರ ಸಂಜೆ ಮೈಸೂರು ದಸರಾ ಕ್ರೀಡಾಕೂಟದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, `ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ ಮತ್ತು ಪ್ರೋತ್ಸಾಹ ನೀಡಲು ಈ ಮಸೂದೆ ಪ್ರಮುಖ ಪಾತ್ರ ವಹಿಸಲಿದೆ. ಕೆಲವೇ ದಿನಗಳಲ್ಲಿ ಕ್ರೀಡಾ ಮಸೂದೆಯನ್ನೂ ಮಂಡಿಸಲಿದ್ದೇವೆ~ ಎಂದು ಹೇಳಿದರು. ಲಂಡನ್ ಪ್ಯಾರಾಲಿಂಪಿಕ್ಸ್‌ನ ಹೈಜಂಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಎಚ್.ಎನ್. ಗಿರೀಶ ಕ್ರೀಡಾಕೂಟ ಉದ್ಘಾಟಿಸಿದರು. ಒಲಿಂಪಿಯನ್ ವಿಕಾಸಗೌಡಗೆ 5 ಲಕ್ಷ ರೂ. ಚೆಕ್ ನೀಡಿ ಗೌರವಿಸಲಾಯಿತು.

ಹುಬ್ಬಳ್ಳಿಯಲ್ಲಿ ರಣಜಿ ಪಂದ್ಯ

ಹುಬ್ಬಳ್ಳಿ
:ಪ್ರಮುಖ ಪಂದ್ಯವೊಂದರ ಆನಂದವನ್ನು ಸವಿಯುವ ಹುಬ್ಬಳ್ಳಿಗರ ಕನಸು ಈ ಬಾರಿಯ ರಣಜಿ ಋತುವಿನಲ್ಲಿ ನನಸಾಗಲಿದೆ. ಸುದೀರ್ಘ 19 ವರ್ಷಗಳ ನಂತರ ನಗರ ರಣಜಿ ಪಂದ್ಯವೊಂದಕ್ಕೆ ಆತಿಥ್ಯ ವಹಿಸಲಿದ್ದು ಡಿಸೆಂಬರ್ 22ಕ್ಕೆ ಇದಕ್ಕೆ ಮುಹೂರ್ತ ಕೂಡಿಬಂದಿದೆ. ಈ ಪಂದ್ಯದಲ್ಲಿ ಕರ್ನಾಟಕ ತಂಡ ಹರಿಯಾಣ ತಂಡವನ್ನು ಎದುರಿಸಲಿದೆ.

ಪಂದ್ಯಕ್ಕಾಗಿ ಇಲ್ಲಿನ ರಾಜನಗರದಲ್ಲಿರುವ ಕೆಎಸ್‌ಸಿಎ ಮೈದಾನ ಸಜ್ಜಾಗಿದ್ದು ಭಾನುವಾರ ಮೈದಾನಕ್ಕೆ ಭೇಟಿ ನೀಡಿದ ಮಾಜಿ ಕ್ರಿಕೆಟಿಗ ಹಾಗೂ ಕೆಎಸ್‌ಸಿಎ ಕಾರ್ಯಕಾರಿ ಸಮಿತಿ ಸದಸ್ಯ ವಿಜಯ ಭಾರದ್ವಾಜ್ ಪಿಚ್ ಹಾಗೂ  ಮೈದಾನದ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಗಾಯಾಳು ಬಾಕ್ಸರ್‌ಗೆ ಐಎಬಿಎಫ್ ನೆರವು
ನವದೆಹಲಿ (ಪಿಟಿಐ
): ಅಭ್ಯಾಸ ನಡೆಸುವ ಸಂದರ್ಭ ಗಾಯಗೊಂಡ ಮಹಿಳಾ ಬಾಕ್ಸರ್ ಮನೀಷಾ ಚೌಹಾಣ್ ಅವರ ಕುಟುಂಬಕ್ಕೆ ಭಾರತ ಅಮೆಚೂರ್ ಬಾಕ್ಸಿಂಗ್ ಫೆಡರೇಷನ್ (ಐಎಬಿಎಫ್) ಒಂದು ಲಕ್ಷ ರೂ. ಹಣಕಾಸಿನ ನೆರವು ನೀಡಿದೆ.

ಯುವ ಬಾಕ್ಸರ್ ಮನೀಷಾ ಈ ತಿಂಗಳ ಆರಂಭದಲ್ಲಿ ಅಭ್ಯಾಸದ ಸಂದರ್ಭ ಗಂಭೀರವಾಗಿ ಗಾಯಗೊಂಡಿದ್ದರು. ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಬಾಕ್ಸಿಂಗ್ ಸಂಸ್ಥೆ ಕೂಡಾ 50 ಸಾವಿರ ರೂ. ಮೊತ್ತದ ನೆರವು ನೀಡಿದೆ.

ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲಿರುವ ಆರ್ಮ್‌ಸ್ಟ್ರಾಂಗ್
ಲಂಡನ್ (ಎಎಫ್‌ಪಿ):
ಉದ್ದೀಪನ ಮದ್ದು ಸೇವನೆ ಆರೋಪಕ್ಕೆ ಗುರಿಯಾಗಿರುವ ಸೈಕ್ಲಿಸ್ಟ್ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ಬಯಸಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಈ ಮೂಲಕ ತಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ.
ಅಮೆರಿಕ ಉದ್ದೀಪನ ಮದ್ದ ತಡೆ ಘಟಕವು ಆರ್ಮ್‌ಸ್ಟ್ರಾಂಗ್ ಜಯಿಸಿದ್ದ ಏಳು ಟೂರ್ ಡಿ ಫ್ರಾನ್ಸ್ ಪ್ರಶಸ್ತಿಗಳನ್ನು ಹಿಂದಕ್ಕೆ ಪಡೆದಿದ್ದು, ಅವರ ಮೇಲೆ ಆಜೀವ ನಿಷೇಧ ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT