ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆ : ಚುಟುಕು- ಗುಟುಕು

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಲಿಬಾಲ್: ಭಾರತಕ್ಕೆ ಗೆಲುವು
ಬೆಂಗಳೂರು:
  ಭಾರತ ತಂಡದವರು ಚೀನಾದಲ್ಲಿ ನಡೆಯುತ್ತಿರುವ 9ನೇ ಏಷ್ಯಾ ಯೂತ್ ಬಾಲಕಿಯರ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಂದು ಗೆಲುವು ಪಡೆದರು.

ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ 25-22, 25-17, 22-25, 25-22ರಲ್ಲಿ ಆತಿಥೇಯ ಇರಾನ್ ತಂಡವನ್ನು ಮಣಿಸಿತು. ಮೊದಲ ಪಂದ್ಯದಲ್ಲಿ ಜಪಾನ್ ಎದುರು ನಿರಾಸೆ ಕಂಡಿದ್ದ ಭಾರತ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಿತ್ತು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

ಟೆನಿಸ್ ರ‌್ಯಾಂಕಿಂಗ್: ಅಗ್ರ ಹತ್ತರಲ್ಲಿ ರೋಹನ್ ಬೋಪಣ್ಣ
ನವದೆಹಲಿ (ಪಿಟಿಐ):
ಶಾಂಘೈ ಮಾಸ್ಟರ್ಸ್ ಎಟಿಪಿ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ರನ್ನರ್ ಅಪ್ ಆದ ಭಾರತದ ರೋಹನ್ ಬೋಪಣ್ಣ ಡಬಲ್ಸ್ ರ‌್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ.
ಈ ಟೂರ್ನಿಯಲ್ಲಿ ಚಾಂಪಿಯನ್ ಆದ ಲಿಯಾಂಡರ್ ಪೇಸ್ (ಐದನೇ ರ‌್ಯಾಂಕ್) ಸ್ಥಾನದಲ್ಲಿ ಬದಲಾವಣೆಯಾಗಿಲ್ಲ. 14ನೇ ಸ್ಥಾನದಲ್ಲಿದ್ದ ಬೋಪಣ್ಣ ಒಟ್ಟು 600 ರ‌್ಯಾಂಕಿಂಗ್ ಪಾಯಿಂಟ್ಸ್‌ನಿಂದ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಡಬ್ಲ್ಯುಟಿಎ ರ‌್ಯಾಂಕಿಂಗ್‌ನಲ್ಲಿ ಸಾನಿಯಾ ಮಿರ್ಜಾ 14 ಸ್ಥಾನ ಕುಸಿತ ಕಂಡಿದ್ದಾರೆ.

ವಾಟ್ಸನ್ ತವರಿಗೆ ಮರಳುವ ಸಾಧ್ಯತೆ
ಸಿಡ್ನಿ (ಪಿಟಿಐ):
ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಸಿಡ್ನಿ ಸಿಕ್ಸರ್ಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಶೇನ್ ವಾಟ್ಸನ್ ಟೂರ್ನಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಮರಳುವ ಸಾಧ್ಯತೆಯಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮುಂದಿರುವ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ವಾಟ್ಸನ್ ಅವರನ್ನು ವಾಪಸ್ ಕರೆಸಿಕೊಳ್ಳುವ ಚಿಂತನೆ ನಡೆಸಿದೆ. ದ. ಆಫ್ರಿಕಾ ಎದುರಿನ ಮೊದಲ ಟೆಸ್ಟ್ ನವೆಂಬರ್ 9 ರಂದು ಆರಂಭವಾಗಲಿದೆ. ಅದಕ್ಕೂ ಮುನ್ನ ವಾಟ್ಸನ್‌ಗೆ ತಕ್ಕ ವಿಶ್ರಾಂತಿ ಲಭಿಸಬೇಕೆಂದು ಸಿಎ ಬಯಸಿದೆ.

ಅಭ್ಯಾಸ ಪಂದ್ಯ ಸ್ಥಳಾಂತರಿಸಲು ಮನವಿ
ಮುಂಬೈ (ಪಿಟಿಐ):
`ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಎರಡನೇ ಅಭ್ಯಾಸ ಪಂದ್ಯವನ್ನು ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಕ್ರೀಡಾಂಗಣದಲ್ಲಿ ಆಡಲಿದೆ. ಆದರೆ, ಭದ್ರತೆಯ ಕಾರಣದಿಂದ ಈ ಪಂದ್ಯವನ್ನು ನವಿ ಮುಂಬೈಯಲ್ಲಿರುವ ಡಿ.ವೈ. ಪಾಟೀಲ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಬೇಕು~ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಬಿಸಿಸಿಐಗೆ ಮನವಿ ಮಾಡಿಕೊಂಡಿದೆ.
ಮುಂಬೈ ನಗರದ ಪೊಲೀಸ್ ಅಧಿಕಾರಿಗಳು ನೀಡಿರುವ ಸಲಹೆಯನ್ನು ಪರಿಗಣಿಸಿ ಎಂಸಿಎ ಈ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT