ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೌಂಚ ಪಕ್ಷಿಗಳ ಕಥನ (ಚಿತ್ರ: ಕಾಲಾಯ ತಸ್ಮೈ ನಮಃ)

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಿರ್ಮಾಪಕ: ಮಾರುತಿ ಜಡಿಯವರ್
ನಿರ್ದೇಶಕ: ಚಂದ್ರಶೇಖರ್ ಶ್ರೀವಾಸ್ತವ್
ತಾರಾಗಣ: ಯೋಗೀಶ್, ಮಧುಬಾಲಾ, ರಂಗಾಯಣ ರಘು, ಶಂಕರ್ ಅಶ್ವತ್ಥ್, ರವಿ ಕಾಳೆ, ರಾಜು ತಾಳಿಕೋಟೆ, `ಎಡಕಲ್ಲುಗುಡ್ಡದ ಮೇಲೆ~ ಚಂದ್ರಶೇಖರ್, ಜಯಸಿಂಹ ಮುಸುರಿ, ನಿಶಾಂತ್, ಜೀನಿ, ನವೀನ್ ಮತ್ತಿತರರು.

ಹಕ್ಕಿ ಶಿಕಾರಿಯ ಪಶ್ಚಾತ್ತಾಪ, ದೇಶದ ಮಹಾಕಾವ್ಯವೊಂದನ್ನು ಸೃಜಿಸಿತು. ಕೊಲೆಗಾರ ಕವಿಯಾದ. ಆದರೆ ಚಿತ್ರದಲ್ಲಿ ತುಸು ವ್ಯತ್ಯಾಸವಾಗಿದೆ. ಇಲ್ಲಿನ `ಕ್ರೌಂಚ ಪಕ್ಷಿ~ಗಳನ್ನು ಕೊಲ್ಲುವುದು ಬೇಟೆಗಾರನಲ್ಲ, ಮತ್ತೊಂದು ಕ್ರೌಂಚ.

ಪಾತಕ ಲೋಕ, ಮುಗ್ಧ ಪ್ರೀತಿ, ಅರೆಬೆಂದ ಮನಸ್ಸು, ಹುಚ್ಚು ಯೌವನ, ನಿರಾಶೆ- ಹೀಗೆ ಹಕ್ಕಿಕತೆಗೆ ಹಲವು ಪದರ. ಜತೆಗೆ ಪ್ರೀತಿಗಿಂತಲೂ ಬದುಕು ದೊಡ್ಡದು ಎಂಬ ಸಂದೇಶ. ಕತೆಗೊಂದು ಸ್ಪಷ್ಟ ದಿಕ್ಕು ನೀಡಿರುವುದು ಕೂಡ ಇದೇ ಸಂದೇಶ.

ದುರಂತದ ವಾಸನೆಯೊಂದಿಗೇ ಚಿತ್ರದ ಆರಂಭ. ಮುಂದಿನ ಕೆಲವೇ ದೃಶ್ಯಗಳಲ್ಲಿ ಬೇಟೆಗಾರ- ಬಲಿಪಶುವಿನ ಪರಿಚಯ. ನಾಯಕ ಆಯ್ದುಕೊಂಡಿರುವುದೇ ಮಸಣದ ಹಾದಿಯನ್ನು. ವೃತ್ತಿಯಲ್ಲಿ ಆತ ಸುಪಾರಿ ಕೊಲೆಗಾರ. ಆದರೆ ಕಟುಕ ಕೂಡ ಮಧುವಿನಂಥ ಪ್ರೀತಿಗೆ ಕರಗಬಲ್ಲ. ಹುಡುಗಿಯ ಹೆಸರು ಮಧು.
 
ಆಕೆಯ ಅಪ್ಪನಿಗೆ ಪ್ರೀತಿ ಇಷ್ಟವಿಲ್ಲ. ಜತೆಗೆ ಅಂತಸ್ತಿನ ಅಡ್ಡಿ ಆತಂಕ. ಸರಿ ಮೈಸೂರು ಸೀಮೆಯಿಂದ ಬೆಂಗಳೂರಿಗೆ ಪ್ರೇಮದ ಪಯಣ. ನಾಯಕ ತನ್ನ ಬದುಕು ಸಾಗಿಸಲು ಇನ್ನೊಬ್ಬರ ತಲೆ ತೆಗೆಯಬೇಕು. ಆಗಲೇ ನಡೆಯುವುದು `ಕ್ರೌಂಚ ಪಕ್ಷಿಗಳ~ ಬೇಟೆ. ಈ ಶಿಕಾರಿ ನಾಯಕನ ಪ್ರೀತಿಯನ್ನು ಹೇಗೆ ಕೊಲ್ಲುತ್ತದೆ. ಕಡೆಗೆ ಆತ ಹೇಗೆ ಇಲ್ಲವಾಗುತ್ತಾನೆ ಎಂಬುದು ಪೂರ್ಣ ಕತೆ.

ಕತೆಯ ಕೆಲವು ತಿರುವುಗಳಿಗೆ ಪ್ರೇಕ್ಷಕರನ್ನು ತಟ್ಟುವ ಶಕ್ತಿಯುಂಟು. ಸೂತಕದ ಛಾಯೆಯೊಳಗೆ ಪ್ರೀತಿಯ ಹೊಂಗಿರಣ ಮೂಡಿರುವುದುಂಟು. ಕೊನೆಯ ದೃಶ್ಯಕ್ಕಂತೂ ಹೊಸತನದ ಸ್ಪರ್ಶ. ಸಿನಿಮಾದ ಬಹುತೇಕ ಭಾಗ ನೆತ್ತರಿನಲ್ಲಿ ಅದ್ದಿ ತೆಗೆದಂತಿದ್ದರೆ ಅನ್ಯಥಾ ಭಾವಿಸುವಂತಿಲ್ಲ. ಏಕೆಂದರೆ ಇದು ಅಪ್ಪಟ ಬಡಿ-ಕಡಿ ಸಿನಿಮಾ.

`ಸಿದ್ಲಿಂಗು~ವಿನಲ್ಲಿ ಕಾರಿನ ಜತೆಗಾರನಾಗಿದ್ದ ಯೋಗೀಶ್ ಇಲ್ಲಿ ಸ್ಕೂಟರ್ ಸವಾರ. ನಟನಾಗಿ ಅವರದು ಅನುಭವದ ಸವಾರಿ. ಕಾಲೇಜು ಹುಡುಗಿಯಾಗಿ ಮಧುಬಾಲಾ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅಳುವೇ ತಾನಾಗಿ ಅಭಿನಯಿಸಿದ್ದಾರೆ. ಖಳರಾಗಿ ರಂಗಾಯಣ ರಘು, ರವಿ ಕಾಳೆ ಹಾಗೂ ನೇತ್ಯಾತ್ಮಕ ಪಾತ್ರದಲ್ಲಿ ಶಂಕರ್ ಅಶ್ವತ್ಥ್ ಕತೆಗೆ ಬಿರುಸು ತಂದವರು.

ನಾಯಕನ ಸ್ನೇಹಿತರಾಗಿ ನಿಶಾಂತ್, ಜೀನಿ ಹಾಗೂ ನವೀನ್ ಪಾತ್ರಗಳು ಕೊನೆಯವರೆಗೂ ಉಳಿದಿವೆ. ನಿಶಾಂತ್ ಪಾತ್ರಕ್ಕೆ ಅಂತ್ಯದಲ್ಲಿ ಹೊಳಪಿದೆ. `ಎಡಕಲ್ಲುಗುಡ್ಡದ ಮೇಲೆ~ ಚಂದ್ರಶೇಖರ್, ಜಯಸಿಂಹ ಮುಸುರಿ ಮತ್ತಿತರರಿಗೆ ಚೌ ಚೌ ಪಾತ್ರಗಳು. ಅವಧೂತನಾಗಿ ಸ್ನೇಕ್ ಶ್ಯಾಂ ಮೋಡಿ ಮಾಡಿದ್ದಾರೆ.

ಚಿತ್ರದಲ್ಲಿರುವುದು ಒಟ್ಟು ಏಳು ಹಾಡುಗಳು. ಒಂದೆರಡರಲ್ಲಿ ಎ.ಎಂ.ನೀಲ್ ಸಂಗೀತ ಮನಸೂರೆಗೊಳ್ಳುತ್ತದೆ. `ಕೊಲವೆರಿ ಡಿ~ ಪಡಿಯಚ್ಚಿನ `ಖಾಲಿ ರೋಡು~ ಗೀತೆಯಲ್ಲಿ ಯೋಗೀಶರ ಸೀಳುದನಿ ಇಷ್ಟವಾಗುತ್ತದೆ. ಶ್ರೀರಂಗಪಟ್ಟಣ ಸುತ್ತಮುತ್ತಲಿನ ಪ್ರದೇಶಗಳನ್ನು ಸಿನಿಟೆಕ್ ಸೂರಿ ಕ್ಯಾಮೆರಾ ಚೆನ್ನಾಗಿ ಗ್ರಹಿಸಿದೆ.
 
ವಿಶೇಷ ಎಫೆಕ್ಟ್‌ಗಳನ್ನು ಸಂಕಲನಕಾರ ಸೌಂದರ್ ರಾಜ್ ದುಡಿಸಿಕೊಂಡಿದ್ದಾರೆ. ಸಾಹಸ ದೃಶ್ಯಗಳಲ್ಲಿ ಡಿಫರೆಂಟ್ ಡ್ಯಾನಿ ಅಬ್ಬರವಿದೆ. ನೃತ್ಯಕ್ಕೆ ಕೌಶಲ್ಯದ ಕೊರತೆ. ಹಾಸ್ಯ ಇದ್ದೂ ಇಲ್ಲದಂತಿದೆ. ಕೆಲವೆಡೆ ದೃಶ್ಯಗಳು ಉದ್ದುದ್ದ. ಇನ್ನೂ ಕೆಲವೆಡೆ ಮರುಕಳಿಕೆಯ ಏಕತಾನತೆ. ಭಾವ ಸೂಸುವ ಸನ್ನಿವೇಶಗಳಿಗೆ ಸಮಯಾವಕಾಶ ಅಗತ್ಯವಿತ್ತು. ಅನೇಕ ಭಾವಗಳನ್ನು ವಿಷಾದವೇ ನುಂಗಬಾರದಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT