ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೌರ್ಯದ ಹಲವು ಮುಖಗಳು

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ನಮ್ಮ ದೇಶದ ಹವ್ಯಾಸಿ ರಂಗಭೂಮಿಯ ಇತಿಹಾಸದಲ್ಲಿ ಮರಾಠಿ ರಂಗಭೂಮಿ ಅತ್ಯುನ್ನತ ಮಟ್ಟದಲ್ಲಿದೆ. ಆ ಮಟ್ಟವನ್ನು ಕಾಯ್ದುಕೊಂಡು ಬರಲು ಶ್ರಮಿಸಿರುವವರಲ್ಲಿ ವಿಜಯ್ ತೆಂಡೂಲ್ಕರ್ ಅವರ ಪಾತ್ರ ಮಹತ್ತರವಾದದ್ದು. 1968ರಲ್ಲಿ ಅವರು ರಚಿಸಿದ `ಸದ್ದು! ವಿಚಾರಣೆ ನಡೆಯುತ್ತಿದೆ~ ಅನೇಕ ಕಾರಣಗಳಿಂದ ವಿಶೇಷತೆ ಪಡೆದಿದೆ.

ಮುಖ್ಯವಾಗಿ ಅಲ್ಲಿಯ ತನಕ ಮಧ್ಯವರ್ಗದವರ ಸಾಂಸಾರಿಕ ಬವಣೆ ಮತ್ತು ಸಮಸ್ಯೆಗಳನ್ನು ಕುರಿತಂತೆ ಸಹಾನುಭೂತಿಯ ಹಾಗೂ ಭಾವನಾತ್ಮಕ ನೆಲೆಯಲ್ಲಿ ವಿವಿಧ ರೀತಿಯ ಪರಿಹಾರ ಸೂಚಿಸುತ್ತಿದ್ದ ಅವರ ನಾಟಕ ರಚನೆಯ ವಿಧಾನವನ್ನೇ ಬದಲಿಸಿದ ನಾಟಕ ಅದು.

ಅವರ ಸ್ವಂತ ಅನುಭವದಿಂದ ಪ್ರೇರಿತವಾದ ಈ ನಾಟಕದಲ್ಲಿ ಪರಿಸ್ಥಿಯ ದುರುಪಯೋಗದಿಂದ ಗರ್ಭಿಣಿಯಾದ ಅವಿವಾಹಿತ ಅಧ್ಯಾಪಕಿಯೊಬ್ಬಳ ಹತಾಶ, ಅಸಹಾಯಕ ಸಂದರ್ಭವನ್ನು ಬಿಚ್ಚಿಡುತ್ತಾರೆ.
 
ಎಲ್ಲ ಬಗೆಯ ಪರಿತಾಪಗಳ ಎದುರು ನಡೆಸಿದ ಹೋರಾಟ ವಿಫಲವಾಗಿ ಅವಳ ಗರ್ಭದಲ್ಲಿರುವ ಮಗುವಿಗೆ ಸಾವೇ ಗತಿಯೆಂಬ ತೀರ್ಪು ನೀಡುವುದರ ಮೂಲಕ ಪ್ರಚಲಿತ ವಿಲಕ್ಷಣ ಮೌಲ್ಯವನ್ನು ಎತ್ತಿ ಹಿಡಿಯಲಾಗುತ್ತದೆ.

ಈ ಅಮಾನವೀಯ ಪ್ರಕ್ರಿಯೆಯಲ್ಲಿ ಆಕೆಯ ಸಹಜೀವಿಗಳು ಅವಕಾಶ ಒದಗಿದೊಡನೆ ಎಲ್ಲ ಅಂತಃಕರಣ ಹಾಗೂ ಮಾನವ ಸಂಬಂಧಗಳನ್ನು ನಿರ್ಲಕ್ಷಿಸಿ ಅತ್ಯಂತ ಕ್ರೂರಿಗಳಾಗಿ ವರ್ತಿಸುವುದನ್ನು ಸಮಾಜದೆದುರು ಮುಂದಿಡುತ್ತಾರೆ. 1970ರಲ್ಲಿ ಹಿಂದಿಯಲ್ಲಿ ಸತ್ಯದೇವ್ ದುಬೆ ನಿರ್ದೇಶನದಲ್ಲಿ ಸುಲಭಾ ದೇಶಪಾಂಡೆ ಪ್ರಧಾನ ಪಾತ್ರದಲ್ಲಿ ಪ್ರದರ್ಶನಗೊಂಡು ಪ್ರಖ್ಯಾತವಾಯಿತು.

ಅದೇ ವರ್ಷ ತೆಂಡೂಲ್ಕರ್ ಅವರಿಗೆ ಕಮಲಾ ದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಮತ್ತು ಅನಂತರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ದೊರೆತದ್ದು ಈಗ ಇತಿಹಾಸ. ಈ ನಾಟಕವನ್ನು ಕನ್ನಡದಲ್ಲಿ ರಂಗಭೂಮಿಯಲ್ಲಿ ಮತ್ತು ದೂರದರ್ಶನದಲ್ಲಿ ಅನೇಕ ಬಾರಿ ಯಶಸ್ವಿಯಾಗಿ ಪ್ರಯೋಗ ಮಾಡಲಾಗಿದೆ.

ನಾಡಿನ ಖ್ಯಾತ ನಾಟಕಕಾರರಲ್ಲಿ ಸಾಲಿನಲ್ಲಿ ಸ್ಥಾನ ಪಡೆದ ವಿಜಯ್ ತೆಂಡೂಲ್ಕರ್ ಅನಂತರ `ಘಾಸೀರಾಂ ಕೋತ್ವಾಲ್~, `ಸಖಾರಾಂ ಬೈಂಡರ್~ ಮುಂತಾದ ನಾಟಕಗಳನ್ನು ರಚಿಸಿದರು.

ಕನ್ನಡ ರಂಗಭೂಮಿಯಲ್ಲಿ ಹೆರಾಲ್ಡ್ ಪಿಂಟರ್‌ನ `ಡಂಬ್ ವೇಟರ್~, `ಲೀಲಾಂತ~ ಮುಂತಾದ ಯಶಸ್ವಿ ಪ್ರದರ್ಶನಗಳನ್ನು ಪ್ರದರ್ಶಿಸಿರುವ ನಿರ್ದೇಶಕ ಹರೀಶ್ ಶೇಷಾದ್ರಿ ವರ್ಕ್‌ಶಾಪ್ ಪ್ರೊಡಕ್ಷನ್ಸ್ ಆಶ್ರಯದಲ್ಲಿ ರಂಗಶಂಕರದಲ್ಲಿ ಪ್ರಯೋಗಿಸಿದ `ಸೈಲೆನ್ಸ್!~ ಮೇಲೆ ಹೆಸರಿಸಿದ ನಾಟಕವನ್ನು ಆಧರಿಸಿದೆ.

ಮೂಲ ನಾಟಕದಲ್ಲಿದ್ದಂತೆ ಇಲ್ಲಿಯೂ ಅಣಕು ನ್ಯಾಯಾಲಯದ ನಾಟಕ ಮಾಡಬೇಕೆಂದು ಬರುವ ಅಧ್ಯಾಪಕ ವರ್ಗದವರು ಅದನ್ನು ಅಭ್ಯಾಸ ಮಾಡುವುದಕ್ಕಾಗಿ ಅಲ್ಲಿರುವವರಲ್ಲಿ ಒಬ್ಬರನ್ನು ಅರೋಪಿಯೆಂದು ನಿಯುಕ್ತಿ ಮಾಡಿ ವಿಚಾರಣೆಗೆ ಏರ್ಪಾಡು ಮಾಡಿಕೊಳ್ಳುತ್ತಾರೆ.
 
ಪ್ರಾರಂಭದಲ್ಲಿ ಮುಖ್ಯ ಪಾತ್ರದ ಬೆನಾರೆ ಕೊಂಚ ಅಧಿಕಾರಯುತ ಧೋರಣೆಯನ್ನು ಪ್ರದರ್ಶಿಸುವುದು ಆನಂತರ ಅದಕ್ಕೊದಗುವ ಭಾವನಾತ್ಮಕ ತಿರುವಿನ ಕಾರಣಕ್ಕೆಂದು ಗ್ರಹಿಸುವುದು ಸಾಧ್ಯ.

ಅಧ್ಯಾಪಕರಲ್ಲಿ ನ್ಯಾಯಾಧೀಶನಾಗಿ ಕಾಶೀಕರ್, ವಿಚಾರಣೆ ನಡೆಸುವಾತನಾಗಿ ಸುಖಾತ್ಮೆ, ಆರೋಪಿಯಾಗಿ ಬೆನಾರೆ ಮತ್ತು ಸಾಕ್ಷಿಗಳಾಗಿ ಕಾಶಿಕರ್, ಕರ್ಣಿಕ್ ಹಾಗೂ ಸಾಮಂತ್, ಬಾಲು ರೋಕ್ಡೆ, ಪೋಂಗ್ಷೆ ಭಾಗವಹಿಸುತ್ತಾರೆ.
 
ಮೂಲ ನಾಟಕದಂತೆಯೇ ಎಲ್ಲವೂ ತೀರ ಲಘು ಸ್ತರದಲ್ಲಿಯೇ ತೆರೆದುಕೊಳ್ಳುತ್ತದೆ. ಅನಂತರ ಸುಖಾತ್ಮನ ಒತ್ತಾಯದಿಂದ ಆರೋಪಿ ಬೆನಾರೆ ವಿರುದ್ಧ ಸಾಕ್ಷಿ ಹೇಳಲು ಬರುವ ಪ್ರತ್ಯೇಕ ಪಾತ್ರಗಳು ಪ್ರಾರಂಭದಲ್ಲಿ ಅಕಾರಣವೆಂದು ತೋರುವ ಅಸಂಗತ ಸಾಕ್ಷಿಗಳನ್ನು ಹೇಳುತ್ತಾರೆ.

ಆಗ ಬೆನಾರೆ ಅವರನ್ನು ತಮಾಷೆ ಮಾಡಿ ಸಾಕ್ಷಿ ಹೇಳಿದವರಿಗೆ ಮುಜುಗರ ಉಂಟುಮಾಡುತ್ತಾಳೆ. ಆದರೆ ಕಾಕತಾಳೀಯವೆಂಬಂತೆ ಮತ್ತೆ ಮತ್ತೆ ಸಾಕ್ಷಿಗಳು ಶೋಧನೆಗೆ ಒಳಗಾಗಿ ಅವರು ಹೇಳುವ ಸಾಕ್ಷಿ ಬೆನಾರೆಯ ವೈಯಕ್ತಿಕ ವಿಷಯವನ್ನು ಬಯಲು ಮಾಡುತ್ತ ಹೋಗುತ್ತದೆ.

ಹೀಗೆ ಸಾಕ್ಷಿ ಹೇಳುವವರೆಲ್ಲರೂ ಒಬೊಬ್ಬರಾಗಿ ತಮ್ಮಲ್ಲಿರುವ ಕೊರತೆಗೆ ಹೊರದಾರಿ ಹುಡುಕುವ ಪ್ರಯತ್ನದಲ್ಲಿ ಮಾನವೀಯತೆಯ ಪ್ರಾಥಮಿಕ ಗುಣಗಳನ್ನು ಅಲಕ್ಷಿಸುತ್ತಾರೆ. ಹಂತ ಹಂತವಾಗಿ ಇಡೀ ವಾತಾವರಣ ಇನ್ನಷ್ಟು ಸಾಂದ್ರವಾಗುತ್ತ ಬೆನಾರೆ ಹಾಗೂ ಅವರೊಂದಿಗೆ ಬಾರದೆ ಹೋದ ಪ್ರೊಫೆಸರ್ ದಾಮ್ಲೆಗೂ ಸಂಬಂಧವನ್ನು ಕಲ್ಪಿಸುತ್ತಾರೆ.

ಅಲ್ಲದೆ ಅವಳ ಗರ್ಭದಲ್ಲಿರುವ ಶಿಶುವನ್ನು ನಾಶಗೊಳಿಸುವಂತೆ ತೀರ್ಪು ಕೊಡುತ್ತಾರೆ. ಈ ಬೆಳವಣಿಗೆಗಳಿಂದ ಛಿದ್ರಗೊಂಡ ಬೆನಾರೆ ಆವೇಶಭರಿತಳಾಗಿ ತನಗುಂಟಾದ ಒಟ್ಟಾರೆ ಪರಿತಾಪಕ್ಕೆ ಪ್ರತಿವಾದವೆನ್ನುವ ರೀತಿಯಲ್ಲಿ ತನ್ನ ಅಂತರಂಗವನ್ನು ಬಯಲು ಮಾಡುತ್ತಾಳೆ.
 
ತಾನು ಹದಿನಾಲ್ಕು ವರ್ಷದವಳಿದ್ದಾಗ ಮತ್ತು ಪ್ರೌಢೆಯಾದಾಗ ಸಮಾಜದ ಕಣ್ಣಿಗೆ ಅನೈತಿಕವೆಂದು ತೋರುವ ಪ್ರೇಮ ಪ್ರಕರಣಗಳ ಕುರಿತು ಹೇಳುತ್ತಾಳೆ. ದುರಂತವೆಂದರೆ ಬೆನಾರೆಯ ಈ ಮುಕ್ತ ಅಭಿವ್ಯಕ್ತಿಗೆ ಯಾವ ಮನ್ನಣೆಯೂ ದೊರೆಯುವುದಿಲ್ಲ.

ತೆಂಡೂಲ್ಕರ್ ನಾಟಕವನ್ನು ಆಧರಿಸಿದ ಪ್ರಯೋಗದಲ್ಲಿ ಭಿನ್ನ ವ್ಯಾಖ್ಯಾನವನ್ನು ಕೊಡುವ ಪ್ರಯತ್ನವಿಲ್ಲ. ಮುಖ್ಯ ವ್ಯತ್ಯಾಸವೆಂದರೆ ಮೊದಲನೆಯದಾಗಿ ಈ ನಾಟಕವೊಂದು ಅಣಕು ಎಂದು ತಿಳಿಸುವ ವಿಧಾನ ಮತ್ತು ಮೂರು ರೂಪಗಳಲ್ಲಿರುವ ಬೆನಾರೆ ಪಾತ್ರಧಾರಿಗಳ ಪರಿಕಲ್ಪನೆ ವಿಶೇಷವೆನಿಸುತ್ತದೆ. 

ದೇಹದಿಂದ, ದೇಹಕ್ಕಾಗಿ ಮತ್ತು ದೇಹಕ್ಕೋಸ್ಕರ ಎಂಬ ಉದ್ಗಾರದ ಜೊತೆ ಪ್ರೇಕ್ಷಕರ ನಡುವೆ ಹೆಜ್ಜೆ ಹಾಕಿ ಜೀವಕ್ಕೆ ಜೀವಿಸುವ ಅರ್ಥವಿಲ್ಲ, ಅದನ್ನು ಗಲ್ಲಿಗೇರಿಸಬೇಕು ಎನ್ನುವ ಸ್ವಗತದ ನಿರೂಪಣೆ ಪಾತ್ರ ಪೋಷಣೆಗೆ ಬೆಂಬಲವಾಗಿದೆ.
 
ಪ್ರಯೋಗದಲ್ಲಿ ಸಾಕ್ಷಿಗಳು ಹೇಳುವ ಮಾತುಗಳನ್ನು ದಾಖಲಿಸುವುದಕ್ಕೆ ಮೊಬೈಲ್‌ನ ಬಳಕೆ ಮತ್ತು ಅವುಗಳ ನಡುವೆ ಸದ್ಯ ಪ್ರಚಲಿತದಲ್ಲಿರುವ ಅಣ್ಣಾ ಹಜಾರೆ, ರಾಮ್‌ದೇವ್ ಮತ್ತು ಕರೋಡ್‌ಪತಿಯಲ್ಲಿ ಕೇಳುವ ಪ್ರಶ್ನೆಗೆ ನಾಲ್ಕರಲ್ಲಿ ಒಂದನ್ನು ಆರಿಸಿಕೊಳ್ಳುವ ಬಗೆ ಮುಂತಾದವುಗಳನ್ನು ಅಳವಡಿಸಿಕೊಂಡಿರುವುದು ಅಗತ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತವೆನಿಸುವುದಿಲ್ಲ.

ಅನಿವಾರ್ಯತೆಯಿಲ್ಲದೆ ಕೇವಲ ಸಮಕಾಲೀನತೆಯ ಅಂಶಗಳನ್ನು ತರುವ ಉದ್ದೇಶವೆನಿಸುತ್ತದೆ. ಮುಖ್ಯವಾಗಿ ನಾಟಕ ಪ್ರಮುಖ ಹಂತದ ಸಿದ್ಧತೆಯಲ್ಲಿ ಹೆಚ್ಚಿನ ಸಮಯವನ್ನು ವ್ಯಯವಾಗುತ್ತದೆ. ಬೆನಾರೆಯಾಗಿ ಸುಷ್ಮಿತಾ ಶ್ರೀಧರ್, ಸುಖಾತ್ಮೆಯಾಗಿ ಕಿಶೋರ್ ಆಚಾರ್ಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಪೋಷಕ ಪಾತ್ರಗಳಲ್ಲಿ ಸಾಮಂತ್ (ನಿಖಿಲ್ ಭಾರಧ್ವಾಜ್), ಗಮನ ಸೆಳೆಯುತ್ತಾರೆ ಮತ್ತು ಇತರ ಪಾತ್ರಗಳು ಸಮರ್ಪಕ. ಒಟ್ಟಾರೆ ಪ್ರಯೋಗದಲ್ಲಿ ಭಾವ ಸಾಂದ್ರತೆಯ ಅಗತ್ಯಕ್ಕೆ ಬೇಕಾದಂತೆ ಮಾತುಗಳ ನಡುವಿನ ನಿಲುಗಡೆ (ಪಾಸ್),  ಮೌನಕ್ಕೆ ಮತ್ತು ಪಾತ್ರಗಳ ಚಲನೆಯ ಗತಿಯನ್ನು ಇನ್ನಷ್ಟು ಯೋಜಿಸಿದ್ದರೆ ನಿರ್ದೇಶಕರ ಪ್ರಯತ್ನ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT