ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಾರಿಯೋನೆಟ್ ಸ್ವರಧಾರೆ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನಾದರಂಜನಿ ಸಂಗೀತ ಸಭಾ ತನ್ನ 12ನೇ ಕಾರ್ತಿಕ ಸಂಗೀತೋತ್ಸವ ಅಂಗವಾಗಿ ಬಸವೇಶ್ವರ ನಗರದ ಧರಣಿ ಮಹಿಳಾ ಸಂಘದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಸಂಗೀತಾಸಕ್ತರ ಮನತಣಿಸಿತು. ಅದು ಕ್ಲಾರಿಯೋನೆಟ್ ಮಾಂತ್ರಿಕ ಪಂಡಿತ್ ನರಸಿಂಹಲು ವಡವಾಟಿ ಅವರು ಸಂಗೀತ ಸ್ವರಧಾರೆ ಹರಿಸಿದ ಸಂದರ್ಭ.

ಮೊದಲಿಗೆ ನರಸಿಂಹಲು ವಡವಾಟಿ ಕಾರ್ಯಕ್ರಮವನ್ನು ರಾಗ ಪೂರಿಯಾಧನಶ್ರೀಯಿಂದಲೇ ಪ್ರಾರಂಭಿಸಿದರು. ಕರ್ನಾಟಕ ಸಂಗೀತದಲ್ಲಿ ಹತ್ತಿರವಾಗಿರುವಂಥದ್ದು ಕಾಮವರ್ಧಿನಿ ರಾಗ. ವಡವಾಟಿ ಅವರ ಪೂರಿಯಾಧನಶ್ರೀಯಲ್ಲಿ ತೀವ್ರ ಮಧ್ಯಮ ಮತ್ತು ಕೋಮಲ ರಿಷಭಗಳ ಪ್ರಯೋಗ ಮಾಡಿದಾಗ ಅತ್ಯಂತ ಮಹತ್ವ ಪೂರ್ಣವಾಗಿ ಮೂಡಿಬಂದು ಕೇಳುಗರಲ್ಲಿ ಆನಂದವನ್ನುಂಟುಮಾಡಿತು. ಇದನ್ನು ಝಪ್ತಾಲ್ ಮತ್ತು ತೀನ್‌ತಾಲ್‌ನಲ್ಲಿ ನುಡಿಸಿದರು. ಉತ್ತರಾದಿ ದಕ್ಷಿಣಾದಿಗಳು ಲೆಕ್ಕಕ್ಕೆ ಬರದೆ ಎಲ್ಲರನ್ನೂ ಸಪ್ತಸ್ವರಗಳ ಗುಂಗಿನಲ್ಲಿ ತೇಲುವಂತೆ ಮಾಡಿದ್ದು ವಡವಾಟಿಯವರ ಸಂಗೀತ ಸುಧೆಗೆ ಸಾಕ್ಷಿಯಾಯಿತು.

ಎರಡನೆಯದಾಗಿ ರಾಗ ಕಲಾವತಿಯಲ್ಲಿ ಧೃತ್, ಏಕ್‌ತಾಲ್ ಮತ್ತು ತೀನ್‌ತಾಲ್‌ನಲ್ಲಿ ನುಡಿಸಿದರು. ಆರಂಭದಲ್ಲಿ ರಾಗವನ್ನು ವಿಸ್ತಾರವಾಗಿ ಆಲಾಪ್ ಜೋಡ್ ಜಾಲದಲ್ಲಿ ನುಡಿಸಿದರು. ಇದು ಕರ್ನಾಟಕ ಸಂಗೀತದಲ್ಲಿ ವಲಚಿ. ಇದು ಶೋತೃಗಳ ಮನಪಟಲದಲ್ಲಿ ಉಳಿಯುವಂತೆ ಮಾಡಿತು. ಮೂರನೆಯದಾಗಿ ನುಡಿಸಿದ್ದು ಪೀಲು ಠುಮ್ರಿ. ಈ ರಾಗ ಮಾಲಿಕೆಯಲ್ಲಿ ನುಡಿಸುವಾಗ ಹೊಮ್ಮುತ್ತಿದ್ದ ಶಬ್ದಗಳು ಕ್ಲಾರಿಯೋನೆಟ್ ಅಷ್ಟೇ ಅಲ್ಲದೆ ಶಹನಾಯಿ, ಸ್ಯಾಕ್ಸೋಪೋನ್ ಮೊದಲಾದ ವಾದ್ಯಗಳ ನಾದದಂತೆ ಕೇಳುಗರಿಗೆ ಅನುಭವ ನೀಡಿತು.

`ಭಾಗ್ಯದ ಲಕ್ಷ್ಮೀ ಬಾರಮ್ಮ' ಸೊಗಸಾಗಿತ್ತು. ದೇವರ ನಾಮಗಳು, `ಭಜನ್ ಪಾಯೋಜಿ ಮೈನೆ ರಾಮರತನ್', ಭೈರವಿಯಲ್ಲಿ ಪುರಂದರದಾಸರ ಕೃತಿ `ತಂಬೂರಿ ಮೀಟಿದವ ಭವಾಬ್ದಿ ದಾಟಿದವ' ವಿಸ್ತಾರವಾಗಿ ರಾಗವನ್ನು ಬೆಳೆಸಿ, ತರಾನ ನುಡಿಸಿದರು. ನಾದ ಲಹರಿಯಲ್ಲಿ ತೇಲಿಸಿದ ನರಸಿಂಹಲು ವಡವಾಟಿ ಅವರ ಸತತ ಎರಡೂ ಮುಕ್ಕಾಲು ತಾಸಿನ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು.

ಕ್ಲಾರಿಯೋನೆಟ್ ಸಹ ವಾದನದಲ್ಲಿ ತಂದೆಯ ಪ್ರತಿಭೆಯನ್ನು ಸಾಬೀತುಪಡಿಸಿದವರು ವಡವಾಟಿ ಅವರ ಮಗ ವೆಂಕಟೇಶರಾಯ ವಡವಾಟಿ. ತಬಲಾದಲ್ಲಿ ಅಷ್ಟೇ ಪರಿಣಾಮಕಾರಿಯಾಗಿ ಸಹಕಾರ ನೀಡಿದವರು ಡಿ.ಸಿ. ವೆಂಕಟೇಶ್. ಭರತೇಶ್ ಕುಮಾರ್ ತಾನ್‌ಪುರ ಸಾಥ್ ನೀಡಿದರು. ಸಂಗೀತ ಕಛೇರಿಯು ಕರ್ನಾಟಕಿ ಹಾಗೂ ಹಿಂದೂಸ್ತಾನಿ ಎರಡು ಶೈಲಿಯ ಸಂಗೀತಾಸಕ್ತರನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT