ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಾರ್ಕ್, ರಿಕಿ ಆಟಕ್ಕೆ ಭಾರತ ಸುಸ್ತು

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಸಿಡ್ನಿ (ರಾಯಿಟರ್ಸ್/ಪಿಟಿಐ): ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಗೆ ಮುನ್ನ ಆಸ್ಟ್ರೇಲಿಯಾ ತಂಡದಿಂದ ರಿಕಿ ಪಾಂಟಿಂಗ್ ಅವರನ್ನು ಕೈಬಿಡಬೇಕು ಎಂದು ಬೊಬ್ಬೆ ಹಾಕಿದವರೇ ಹೆಚ್ಚು. ಅದಕ್ಕೆ ಅವರ ಸತತ ವೈಫಲ್ಯವೇ ಪ್ರಮುಖ ಕಾರಣ.

ಆದರೆ ಭಾರತ ವಿರುದ್ಧ ಈಗ ನಡೆಯುತ್ತಿರುವ ಸರಣಿ ಅವರಿಗೆ ಜೀವದಾನ ನೀಡಿದೆ. ರಿಕಿ ಶತಕ ಗಳಿಸಿ ಸುಮಾರು ಎರಡು ವರ್ಷಗಳಾಗಿದ್ದವು. ಆದರೆ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ 40ನೇ ಶತಕ ಗಳಿಸುವ ಮೂಲಕ ತಮ್ಮಲ್ಲಿ ಇನ್ನೂ ಬಹಳಷ್ಟು ಕ್ರಿಕೆಟ್ ಉಳಿದಿದೆ ಎಂಬ ಸಂದೇಶವನ್ನು ಟೀಕಾಕಾರರಿಗೆ ರವಾನಿಸಿದರು. ಇದರ ನಡುವೆಯೂ ಈ ಪಂದ್ಯದ ಕೇಂದ್ರ ಬಿಂದು ಎನಿಸಿದ್ದು ಚೊಚ್ಚಲ ದ್ವಿಶತಕ ದಾಖಲಿಸಿದ ನಾಯಕ ಮೈಕಲ್ ಕ್ಲಾರ್ಕ್.

ಈ ಪರಿಣಾಮ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಕಾಂಗರೂ ಪಡೆ 116 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 482 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ 291 ರನ್‌ಗಳ ಭರ್ಜರಿ ಮುನ್ನಡೆ ಪಡೆದುಕೊಂಡಿದೆ. ಈ ಸರಣಿ ಫಾರ್ಮ್ ಕಂಡುಕೊಳ್ಳಲು ಆಸ್ಟ್ರೇಲಿಯಾದ ಆಟಗಾರರಿಗೆ ವೇದಿಕೆಯಾದಂತಿದೆ!

ಇಡೀ ದಿನದಲ್ಲಿ ಭಾರತಕ್ಕೆ ಸಿಕ್ಕ್ದ್ದಿದು ಏಕೈಕ  ವಿಕೆಟ್. ಆತಿಥೇಯ ಬ್ಯಾಟ್ಸ್‌ಮನ್‌ಗಳು ಏಕದಿನ ಪಂದ್ಯದಲ್ಲಿ ಆಡಿದಂತೆ ಬ್ಯಾಟ್ ಬೀಸಿದರು. ಅದಕ್ಕೆ ಈ ತಂಡ 4.15 ಸರಾಸರಿಯಲ್ಲಿ ರನ್ ಗಳಿಸಿದ್ದೇ ಸಾಕ್ಷಿ. ವಿಕೆಟ್ ಪಡೆಯುವುದು ಬದಿಗಿರಲಿ, ರನ್ ನಿಯಂತ್ರಿಸುವುದೇ ನಾಯಕ ದೋನಿ ಪಡೆಗೆ ತಲೆ ನೋವಾಗಿ ಪರಿಣಮಿಸಿತು.

ಕ್ಲಾರ್ಕ್ (ಬ್ಯಾಟಿಂಗ್ 251) ಒಬ್ಬರೇ ಭಾರತದ ಮೊದಲ ಇನಿಂಗ್ಸ್‌ನ (191) ಮೊತ್ತವನ್ನು ದಾಟಿ ನಿಂತರು. ಅವರು ಮಾಜಿ ನಾಯಕ ಪಾಂಟಿಂಗ್ (134) ಜೊತೆಗೂಡಿ ಪ್ರವಾಸಿ ಬೌಲರ್‌ಗಳನ್ನು ದಂಡಿಸಿದ ಪರಿ ಅಷ್ಟಿಷ್ಟಲ್ಲ. ಅವರಾಟ ಬೌಲರ್‌ಗಳಿಗೆ ಒಂಥರಾ ಕಿರುಕುಳವಾಗಿ ಪರಿಣಮಿಸಿತು!  ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 288 ರನ್ ಸೇರಿಸಿದರು. 

2004ರಲ್ಲಿ ಭಾರತ ವಿರುದ್ಧ ಬೆಂಗಳೂರಿನಲ್ಲಿ ಪದಾರ್ಪಣೆ ಮಾಡಿದ್ದ ಕ್ಲಾರ್ಕ್ ಶತಕ ಗಳಿಸಿದ್ದರು. ತಮ್ಮ ಮೊದಲ ದ್ವಿಶತಕವೂ ಈ ತಂಡದ ಎದುರೇ ಬಂದಿದೆ. `ನಾಯಕನಾಗಿ ಸಹ ಆಟಗಾರರಿಂದ ಮತ್ತಷ್ಟು ಗೌರವ ಪಡೆದುಕೊಳ್ಳಲು ಈ ಆಟ ನೆರವಾಗಬಹುದು~ ಎಂದು ಮೈಕಲ್ ಹೇಳಿದ್ದು ಆ ಇನಿಂಗ್ಸ್‌ನ ಮಹತ್ವ ತಿಳಿಸುತ್ತದೆ. ಕ್ಲಾರ್ಕ್ ಅವರ ಮತ್ತೊಬ್ಬ ಜೊತೆಗಾರ ಹಸ್ಸಿ (ಬ್ಯಾಟಿಂಗ್ 55) ಬಿರುಸಿನಿಂದಲೇ ರನ್ ಕಲೆಹಾಕಿದರು. ಇವರಿಬ್ಬರು ಮುರಿಯದ ಐದನೇ ವಿಕೆಟ್‌ಗೆ 157 ರನ್ ಸೇರಿಸಿದ್ದಾರೆ.

ಆದರೆ ಪಾಂಟಿಂಗ್ ಅಗತ್ಯ ಸಂದರ್ಭದಲ್ಲಿ ಶತಕ ಗಳಿಸಿ ಮತ್ತಷ್ಟು ದಿನ ತಮ್ಮ ಸ್ಥಾನ ಗಟ್ಟಿ ಮಾಡಿಕೊಂಡರು. ಕಳೆದ 33 ಇನಿಂಗ್ಸ್‌ಗಳಲ್ಲಿ ಅವರು ಶತಕದ ಬರ ಅನುಭವಿಸಿದ್ದರು. ಈ ಸರಣಿಯ ಮೊದಲ ಪಂದ್ಯದಲ್ಲಿ ಎರಡು ಅರ್ಧ ಶತಕ ಗಳಿಸಿ ಫಾರ್ಮ್ ಕಂಡುಕೊಂಡಿದ್ದ ಅವರು ಇಲ್ಲೂ ತಂಡಕ್ಕೆ ಆಪತ್ಬಾಂಧವರಾದರು. ತಮ್ಮ ನೆಚ್ಚಿನ ಹೊಡೆತಗಳಾದ ಪುಲ್ಸ್ ಹಾಗೂ ಫ್ಲಿಕ್ಸ್‌ಗಳ ಮೂಲಕ ಮಿಂಚಿದರು. ಶತಕಕ್ಕೆ ಇನ್ನೊಂದು ರನ್ ಬೇಕಿದ್ದಾಗ ಬೆರಗಾಗುವ ರೀತಿಯಲ್ಲಿ ರನ್‌ಔಟ್ ಅಪಾಯದಿಂದ ಪಾರಾದರು.

ಬುಧವಾರ ಅಲ್ಪಮಟ್ಟದ ಯಶಸ್ಸು ಕಂಡಿದ್ದು ಇಶಾಂತ್ ಶರ್ಮ ಮಾತ್ರ. ಅವರು ಎರಡನೇ ಹೊಸ ಚೆಂಡಿನಲ್ಲಿ ಪಾಂಟಿಂಗ್ ವಿಕೆಟ್ ಪಡೆಯುವಲ್ಲಿ ಸಫಲರಾದರು. ರಿಕಿ ಡ್ರೈವ್ ಮಾಡಲು ಹೋಗಿ ಪಾಯಿಂಟ್‌ನಲ್ಲಿ ಸಚಿನ್‌ಗೆ ಸುಲಭ ಕ್ಯಾಚ್ ನೀಡಿದರು.
 
ಆದರೆ ಅವರು ಟೆಸ್ಟ್‌ನಲ್ಲಿ 40 ಹಾಗೂ ಅದಕ್ಕಿಂತ ಹೆಚ್ಚು ಶತಕ ಗಳಿಸಿದ ಮೂರನೇ  ಬ್ಯಾಟ್ಸ್‌ಮನ್ ಎನಿಸಿದರು. ಅವರಿಗಿಂತ ಸಚಿನ್ (51) ಹಾಗೂ ಜಾಕ್ ಕಾಲಿಸ್ (42) ಮುಂದಿದ್ದಾರೆ.  ಚೊಚ್ಚಲ ದ್ವಿಶತಕ ಗಳಿಸಿದ ಕ್ಲಾರ್ಕ್ ಅವರ ಖುಷಿಗೆ ಅಂತ್ಯವೇ ಇರಲಿಲ್ಲ. ಜಹೀರ್ ಎಸೆತದಲ್ಲಿ ಸ್ಕ್ವೇರ್ ಲೆಗ್‌ನತ್ತ ಚೆಂಡನ್ನು ಫ್ಲಿಕ್ ಮಾಡಿ ಆ ಸಾಧನೆ ಮಾಡಿದರು.

ಪೆವಿಲಿಯನ್ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ  ಅವರ ಗೆಳತಿ ಕೈಲಿ ಬೋಲ್ಡಿ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಕ್ಲಾರ್ಕ್ ರಿವರ್ಸ್ ಸ್ವೀಪ್ ಹೊರತುಪಡಿಸಿ ಬಹುತೇಕ ಉಳಿದೆಲ್ಲಾ ಹೊಡೆತಗಳನ್ನು ಪ್ರಯೋಗಿಸಿದರು. ಒಂದು ಸಿಕ್ಸರ್ ಹಾಗೂ 31 ಬೌಂಡರಿಗಳನ್ನು ಅವರ ಈ ದ್ವಿಶತಕ ಒಳಗೊಂಡಿದೆ.

ಸ್ಕೋರ್ ವಿವರ:
ಭಾರತ ಮೊದಲ ಇನಿಂಗ್ಸ್ 59.3 ಓವರ್‌ಗಳಲ್ಲಿ 191
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 116 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 482
(ಮಂಗಳವಾರದ ಅಂತ್ಯಕ್ಕೆ 26 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 116)
ರಿಕಿ ಪಾಂಟಿಂಗ್ ಸಿ ಸಚಿನ್ ತೆಂಡೂಲ್ಕರ್ ಬಿ ಇಶಾಂತ್ ಶರ್ಮ  134
ಮೈಕಲ್ ಕ್ಲಾರ್ಕ್ ಬ್ಯಾಟಿಂಗ್  251
ಮೈಕ್ ಹಸ್ಸಿ ಬ್ಯಾಟಿಂಗ್  55
ಇತರೆ: (ಲೆಗ್‌ಬೈ-12, ವೈಡ್-3, ನೋಬಾಲ್-3) 18
ವಿಕೆಟ್ ಪತನ: 1-8 (ವಾರ್ನರ್; 0.6); 2-8 (ಮಾರ್ಷ್; 2.1); 3-37 (ಕೋವನ್; 8.5); 4-325 (ಪಾಂಟಿಂಗ್; 83.4)
ಬೌಲಿಂಗ್: ಜಹೀರ್ ಖಾನ್ 26-4-106-3, ಉಮೇಶ್ ಯಾದವ್ 18-2-94-0 (ವೈಡ್-2), ಇಶಾಂತ್ ಶರ್ಮ 22-0-106-1 (ನೋಬಾಲ್-1), ಆರ್.ಅಶ್ವಿನ್ 28-4-103-0 (ವೈಡ್-1), ವೀರೇಂದ್ರ ಸೆಹ್ವಾಗ್ 14-1-38-0 (ನೋಬಾಲ್-2), ವಿರಾಟ್ ಕೊಹ್ಲಿ 8-0-23-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT