ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲೀನ್ ಕ್ರಿಕೆಟ್...!

Last Updated 11 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಇದು ಶುದ್ಧೀಕರಣದ ಕಾಲ. ಎಲ್ಲಾ ರಂಗಗಳಲ್ಲೂ ಇರುವ ಕಳಂಕಿತರು-ಕಳಂಕಗಳನ್ನು ಹೊರಹಾಕಿ  ಶುದ್ಧೀಕರಿಸುವ ಕಾರ್ಯ ನಡೆಯುತ್ತಿದೆ. ಜನಜಾಗೃತಿ ನಡೆಯೂ ಜತೆಯಲ್ಲೇ ಇದೆ. ಕ್ರಿಕೆಟ್ ಕೂಡ ಇದಕ್ಕೆ ಹೊರತಾಗಿಲ್ಲ. ‘ಕೀಪ್ ಕ್ರಿಕೆಟ್ ಕ್ಲೀನ್’ ಎಂಬ ಘೋಷಣೆಯೊಂದಿಗೆ ಕ್ರಿಕೆಟ್ ಕ್ಷೇತ್ರದ ನಾಲ್ವರು ದಿಗ್ಗಜರು ಈಗಾಗಲೇ ಆಂದೋಲನ ನಡೆಸುತ್ತಿದ್ದಾರೆ.

 ಕ್ರಿಕೆಟ್ ಕದನದಲ್ಲಿ ಭಾರತ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ದೇಶಗಳಿಗೆ ಅಂದು ವಿಶ್ವಕಪ್ ಗೆದ್ದುಕೊಟ್ಟ ಚಾಂಪಿಯನ್‌ಗಳು ಇವರು. ನಿಜವಾದ ಕ್ರೀಡಾ ಮನೋಭಾವ, ರಾಷ್ಟ್ರಾಭಿಮಾನ ಬೆಳೆಸಿ, ಉಳಿಸಿ ಎಂಬ ಸಂದೇಶ ಹೊತ್ತು, ಕ್ರಿಕೆಟ್ ಶುದ್ಧೀಕರಣದ ‘ಕೀಪ್ ಕ್ರಿಕೆಟ್ ಕ್ಲೀನ್’ ಮೂಲಕ ಒಂದು ತಿಂಗಳಿನಿಂದ ಅಭಿಯಾನ ನಡೆಸಿದ್ದಾರೆ. ರಾಜ್ಯದ 18,000 ಪಟ್ಟಣಗಳು, ಗ್ರಾಮಗಳಲ್ಲಿ ಶೇಕಡ 84ರಷ್ಟು ಜನರಿಗೆ ಈ ಸಂದೇಶ ತಲುಪುವಂತೆ ಮಾಡಿದ್ದಾರೆ. ನಿಷ್ಕಳಂಕ ಕ್ರೀಡಾ ಮನೋಭಾವ ಮಾತ್ರ ಮನದಲ್ಲಿರಿಸಿ ಆಟ ಆಡಿ.

ಹಣಕ್ಕಿಂತ ಹೆಮ್ಮೆ ಮುಖ್ಯ ಎಂಬುದು ಇವರ ಧ್ಯೇಯಮಂತ್ರ. ಈ ಒಂದೇ ಉದ್ದೇಶದಿಂದ ಕ್ರಿಕೆಟ್ ಲೋಕದ ಮಹಾನ್ ಸಾಧಕರಾಗಿ, ತಮ್ಮ ತಮ್ಮ ದೇಶಗಳಿಗೆ ವಿಶ್ವಕಪ್ ಗೆದ್ದು ಕೊಟ್ಟಿದ್ದ ‘ಕಪಿಲ್ ದೇವ್ (ಭಾರತ), ಕ್ಲೈವ್ ಲಾಯ್ಡಿ (ವೆಸ್ಟ್ ಇಂಡೀಸ್), ಆ್ಯಲನ್ ಬಾರ್ಡರ್ ಮತ್ತು ರಿಕಿ ಪಾಂಟಿಂಗ್ (ಆಸ್ಟ್ರೇಲಿಯ), ಅರ್ಜುನ್ ರಣತುಂಗ (ಶ್ರೀಲಂಕಾ), ಇಮ್ರಾನ್ ಖಾನ್ (ಪಾಕಿಸ್ತಾನ) ಅವರು ಕಳೆದ ಒಂದು ತಿಂಗಳಿನಿಂದ ದೃಶ್ಯ-ಶ್ರಾವ್ಯ ಸಂಯೋಜನೆಯ ಆಂದೋಲನ ನಡೆಸಿದ್ದರು. ಕ್ರಿಕೆಟ್-ವಿಶ್ವಕಪ್‌ನ ಸಾಧನೆಯ ಅಪೂರ್ವ ಘಟನೆಗಳನ್ನು ಜೋಡಿಸಿದ ಆಡಿಯೋ-ವಿಡಿಯೋ ಸಂಯೋಜನೆಯನ್ನು ಇದಕ್ಕಾಗಿ ಬಳಸಿದ್ದರು.

ಪ್ರತಿ ಬಾರಿ ಕ್ರಿಕೆಟ್ ಪಂದ್ಯ ಪ್ರಾರಂಭವಾದೊಡನೆಯೇ ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್... ಕ್ರೀಡಾಳುಗಳ ಖರೀದಿ ಮುಂತಾದವುಗಳ ಮೂಲಕ ಹಣದ ಹೊಳೆಯೇ ಹರಿಯುತ್ತದೆ. ಕ್ರೀಡಾಭಿಮಾನದ ಬದಲು ಕಾಂಚಾಣ ಕ್ರೀಡಾ ಜಗತ್ತನ್ನು ಕುರುಡಾಗಿಸುತ್ತದೆ. ಮಲಿನಗೊಳಿಸುತ್ತದೆ. ನೈಜ ಕ್ರಿಕೆಟ್ ಪ್ರೇಮಿಗಳು ಅಸಹಾಯಕರಾಗಬೇಕಾಗುತ್ತದೆ.

ಇದರ ವಿರುದ್ಧ ನಡೆಸುತ್ತಿರುವ ಅಭಿಯಾನದ ಅಂಗವಾಗಿ ಕಪಿಲ್‌ದೇವ್, ಲಾಯ್ಡಿ, ರಣತುಂಗ ಮತ್ತು ಬಾರ್ಡರ್ ಬೆಂಗಳೂರಿನಲ್ಲಿದ್ದರು. ತಾರಾ ಹೋಟೆಲೊಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಇಲ್ಲಿ ಮಾತನಾಡಿದ ಕಪಿಲ್ ದೇವ್, ನಿಜವಾದ ಕ್ರೀಡೆ ಕ್ರೀಡಾಳುವನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ. ರಾಷ್ಟ್ರಾಭಿಮಾನ ಬೆಳೆಸುತ್ತದೆ. ಆದ್ದರಿಂದ ಇತರ ಅನಪೇಕ್ಷಿತ ಚಟುವಟಿಕೆ, ಹಣದ ಹುಚ್ಚುಹೊಳೆ ನಿಯಂತ್ರಣ, ದೇಶವನ್ನು ಒತ್ತೆ ಇಡುವ ಬೆಟ್ಟಿಂಗನ್ನು ನಿರುತ್ಸಾಹಗೊಳಿಸಲು ಜನಜಾಗೃತಿ ಅಗತ್ಯ. ಇದರಿಂದ ಏನು ಬೇಕಾದರೂ ಸಾಧಿಸಬಹುದು ಎಂಬ ವಿಷಯದಲ್ಲಿ ಭಾರತೀಯರು ಈ ನಂಬಿಕೆ ಇರಿಸಿದ್ದಾರೆ ಎಂದರು. ಆಸ್ಟ್ರೇಲಿಯಾದ ಬಾರ್ಡ್‌ರ್ ‘ಬೆಟಿಂಗ್ ಇತ್ಯಾದಿಗಳನ್ನು ಕಾನೂನಿನ ಚೌಕಟ್ಟಿನೊಳಗೆ ತಂದು ನಿಯಂತ್ರಿಸಬೇಕು’ ಎಂದರು.

ವಿಶ್ವಕಪ್, ಕ್ರಿಕೆಟ್‌ನ ಆಟದ ನೈಜ ಸ್ಫೂರ್ತಿಯನ್ನು ಯುವಜನರಲ್ಲಿ, ಭವಿಷ್ಯದ ಆಟಗಾರರಾದ ಪುಟಾಣಿಗಳಲ್ಲಿ ತುಂಬಬೇಕು. ಕ್ರೀಡಾರಂಗ, ಕ್ರೀಡಾಭಿಮಾನ, ಕ್ರೀಡಾಮನೋಭಾವ ಹಣಕ್ಕೆ ಮಾರಾಟ ಮಾಡುವ ವಿಷಯ ಅಲ್ಲ ಎಂಬ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ವಿಶ್ವಕಪ್ ವೀರರು ಅಭಿಪ್ರಾಯ ಪಟ್ಟರು.

ಈ ವಿಶ್ವಕಪ್ ಹೀರೋಗಳಿಗೆ ಮೊಬೈಲ್ ಫೋನ್ ಸೇವಾ ಕಂಪನಿ  ‘ಐಡಿಯಾ’ ಸಾಥ್ ನೀಡಿದೆ. ಇವರ ಮೂಲಕ ‘ನಿಜವಾದ ಕ್ರೀಡಾ ಸ್ಫೂರ್ತಿಯನ್ನು ಜನರಲ್ಲಿ ತುಂಬಲು ಸಾಧ್ಯವಾಗಿದೆ’ ಎಂದು ರಾಜ್ಯದಲ್ಲಿ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಗಣಪತಿ ಹೇಳಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT