ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕ್ಲೀನ್‌ಸ್ವೀಪ್' ಕನಸಲ್ಲಿ ಕೊಹ್ಲಿ ಬಳಗ

ಕ್ರಿಕೆಟ್: ಇಂದು ಅಂತಿಮ ಏಕದಿನ; ಜಿಂಬಾಬ್ವೆ ಮಾನ ಕಾಪಾಡಿಕೊಳ್ಳುವುದೇ?
Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬುಲವಾಯೊ (ಪಿಟಿಐ): ಸತತ ನಾಲ್ಕು ಸೋಲು ಅನುಭವಿಸಿರುವ ಜಿಂಬಾಬ್ವೆ ತಂಡ ಅಂತಿಮ ಪಂದ್ಯದಲ್ಲಿ ಗೆಲುವು ಪಡೆದು `ಮಾನ' ಕಾಪಾಡಿಕೊಳ್ಳುವುದೇ? ವಿರಾಟ್ ಕೊಹ್ಲಿ ಬಳಗ ಐದು ಪಂದ್ಯಗಳ ಸರಣಿಯಲ್ಲಿ `ಕ್ಲೀನ್ ಸ್ವೀಪ್' ಸಾಧನೆ ಮಾಡುವುದೇ?

ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವಿನ ಐದನೇ ಹಾಗೂ ಅಂತಿಮ ಏಕದಿನ ಪಂದ್ಯ ಶನಿವಾರ ನಡೆಯಲಿದ್ದು, ಅಭಿಮಾನಿಗಳನ್ನು ಈ ಮೇಲಿನ ಪ್ರಶ್ನೆಗಳು ಕಾಡುತ್ತಿವೆ. ಉಭಯ ತಂಡಗಳ ಇದುವರೆಗಿನ ಪ್ರದರ್ಶನ ನೋಡುವಾಗ ವಿರಾಟ್ ಕೊಹ್ಲಿ ಬಳಗ `ಕ್ಲೀನ್ ಸ್ವೀಪ್' ಸಾಧನೆ ಮಾಡುವ ಸಾಧ್ಯತೆಯೇ ಅಧಿಕ.

`ಈ ಸರಣಿಯಲ್ಲಿ ನಾವು ಒಂದು ಪಂದ್ಯದಲ್ಲಾದರೂ ಭಾರತಕ್ಕೆ ಆಘಾತ ನೀಡುವೆವು' ಎಂದು ಜಿಂಬಾಬ್ವೆ ತಂಡದ ಕೋಚ್ ಆ್ಯಂಡಿ ವಾಲರ್ ಸರಣಿಗೆ ಮುನ್ನ ಹೇಳಿದ್ದರು. ಆದರೆ ಈಗಾಗಲೇ ನಾಲ್ಕು ಪಂದ್ಯಗಳು ಕೊನೆಗೊಂಡಿದ್ದು, ಜಿಂಬಾಬ್ವೆ ಚೇತರಿಕೆಯ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅಂತಿಮ ಪಂದ್ಯದಲ್ಲೂ ಈ ತಂಡದಿಂದ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿರುವವರ ಸಂಖ್ಯೆ ತೀರಾ ಕಡಿಮೆ.

ಸರಣಿಯಲ್ಲಿ 5-0 ಅಂತರದ ಗೆಲುವಿನ ಗುರಿ ಹೊಂದಿರುವಿರಾ ಎಂಬ ಪ್ರಶ್ನೆಗೆ ಕೊಹ್ಲಿ, `ಖಂಡಿತವಾಗಿಯೂ ಅಂತಹ ಗುರಿ ನಮ್ಮ ಮನಸ್ಸಿನಲ್ಲಿದೆ. ಉತ್ತಮ ಪ್ರದರ್ಶನ ನೀಡಿ ನಗು ಮುಖದೊಂದಿಗೆ ತವರಿಗೆ ಮರಳುವುದು ಉದ್ದೇಶ. ನಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಿದರೆ, ತಕ್ಕ ಫಲಿತಾಂಶ ದೊರೆಯುವುದು ಖಚಿತ' ಎಂದು ಉತ್ತರಿಸಿದ್ದರು.

ಇದುವರೆಗೆ ಅವಕಾಶ ಪಡೆದ ಪರ್ವೇಜ್ ರಸೂಲ್ ಮತ್ತು ಅಜಿಂಕ್ಯ ರಹಾನೆ ಈ ಪಂದ್ಯದಲ್ಲಿ ಕಣಕ್ಕಿಳಿಯುವರೇ ಎಂಬುದನ್ನು ನೋಡಬೇಕು. ಚೇತೇಶ್ವರ ಪೂಜಾರ ಮತ್ತು ಮೋಹಿತ್ ಶರ್ಮಗೆ ನಾಲ್ಕನೇ ಪಂದ್ಯದಲ್ಲಿ ಅವಕಾಶ ಲಭಿಸಿತ್ತು. ಮೋಹಿತ್ ಚೊಚ್ಚಲ ಏಕದಿನ ಪಂದ್ಯದಲ್ಲೇ `ಪಂದ್ಯಶ್ರೇಷ್ಠ' ಗೌರವ ತಮ್ಮದಾಗಿಸಿಕೊಂಡಿದ್ದರು. ಆದರೆ ಪೂಜಾರ ವಿಫಲರಾಗಿದ್ದರು. ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿದೆ.

ಪರ್ವೇಜ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೆ, ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಜಮ್ಮು ಮತ್ತು ಕಾಶ್ಮೀರದ ಮೊದಲ ಆಟಗಾರ ಎಂಬ ಗೌರವ  ಪಡೆಯಲಿದ್ದಾರೆ.

ಮತ್ತೊಂದೆಡೆ ಬ್ರೆಂಡನ್ ಟೇಲರ್ ನೇತೃತ್ವದ ಆತಿಥೇಯ ತಂಡ ಕಳೆದುಹೋದ ಘನತೆಯನ್ನು ಮರಳಿ ಪಡೆಯಲು ಪ್ರಯತ್ನಿಸಲಿದೆ. ಅದಕ್ಕಾಗಿ ಈ ಪಂದ್ಯದಲ್ಲಿ ಜಯ ಸಾಧಿಸಲು ಶಕ್ತಿಮೀರಿ ಹೋರಾಡುವುದು ಖಚಿತ.

ಈ ತಂಡದ ಬೌಲರ್‌ಗಳು ತಕ್ಕಮಟ್ಟಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಬ್ಯಾಟ್ಸ್‌ಮನ್‌ಗಳು ಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಭಾರತದ ಯುವ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲುವ ಛಲವನ್ನು ಯಾರೂ ತೋರಿಲ್ಲ.

ಸತತ ನಾಲ್ಕು ಸೋಲುಗಳ ನಿರಾಸೆ ಮರೆತು ಅಸಾಮಾನ್ಯ ಪ್ರದರ್ಶನ ನೀಡಿದರಷ್ಟೆ ಗೆಲುವು ಸಾಧ್ಯ ಎಂಬುದು ಜಿಂಬಾಬ್ವೆಗೆ ತಿಳಿದಿದೆ. ಆದರೆ ಆತ್ಮವಿಶ್ವಾಸದ ಖನಿಯಂತಿರುವ ಭಾರತದ ಮುಂದೆ ಅಂತಹ ಪ್ರದರ್ಶನ ನೀಡುವುದು ಸುಲಭವಲ್ಲ ಎಂಬುದು ಕೂಡಾ ಆತಿಥೇಯರಿಗೆ ಮನವರಿಕೆಯಾಗಿದೆ.

ತಂಡಗಳು ಇಂತಿವೆ
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಚೇತೇಶ್ವರ ಪೂಜಾರ, ಸುರೇಶ್ ರೈನಾ, ಅಂಬಟಿ ರಾಯುಡು, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಪರ್ವೇಜ್ ರಸೂಲ್, ಶಮಿ ಅಹ್ಮದ್, ಆರ್.ವಿನಯ್ ಕುಮಾರ್, ಜಯದೇವ್ ಉನದ್ಕತ್ ಹಾಗೂ ಮೋಹಿತ್ ಶರ್ಮ.

ಜಿಂಬಾಬ್ವೆ: ಬ್ರೆಂಡನ್ ಟೇಲರ್ (ನಾಯಕ ಹಾಗೂ ವಿಕೆಟ್ ಕೀಪರ್), ಸಿಕಂದರ್ ರಾಜಾ, ಟೆಂಡೈ ಚತಾರ, ಮೈಕೆಲ್ ಚಿನೋಯಾ, ಎಲ್ಟಾನ್ ಚಿಗುಂಬರ, ಗ್ರೇಮ್ ಕ್ರೆಮರ್, ಕೈಲ್ ಜಾರ್ವಿಸ್, ಟಿಮಿಸೆನ್ ಮರುಮಾ, ಹ್ಯಾಮಿಲ್ಟನ್ ಮಸಕಜಾ, ನಟ್ಸಾಯಿ ಮಶಾಂಗ್ವೆ, ಟಿನೊಟೆಂಡಾ ಮುಟೊಂಬೊಜಿ, ವಸಿಮುಜಿ ಸಿಬಂದಾ, ಪ್ರಾಸ್ಪರ್ ಉತ್ಸೆಯಾ, ಬ್ರಯಾನ್ ವಿಟೋರಿ, ಮಾಲ್ಕಂ ವಾಲರ್ ಹಾಗೂ ಸೀನ್ ವಿಲಿಯಮ್ಸ.
ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನ).
ನೇರ ಪ್ರಸಾರ: ಟೆನ್ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT