ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲೌಡ್ ಕಂಪ್ಯೂಟಿಂಗ್: ಅವಕಾಶಗಳ ಅಂತರ್ಜಾಲ

Last Updated 27 ಡಿಸೆಂಬರ್ 2010, 11:05 IST
ಅಕ್ಷರ ಗಾತ್ರ

ಅಂತರ್ಜಾಲ ಎನ್ನುವುದು ಈಗ ಅರಿವಿನ ಸಾಗರವಾಗಿ ಮಾತ್ರ ಉಳಿದಿಲ್ಲ. ಇದು ಜಗತ್ತಿನ ಅತಿ ದೊಡ್ಡ ಮಾರುಕಟ್ಟೆ ಸ್ಥಳ. ಹಣಕಾಸು ವ್ಯವಹಾರಗಳಿಗೆ ಮಾದರಿ ವೇದಿಕೆ. ಮನರಂಜನೆ ಮತ್ತು ಮಾಹಿತಿಯ ವಿಶ್ವಕೋಶ. ಇಷ್ಟೊಂದು ದೊಡ್ಡ ಸಾಧ್ಯತೆಗಳಿರುವ ಅಂತರ್ಜಾಲವನ್ನು ವಾಣಿಜ್ಯ ವೇದಿಕೆಯಾಗಿ ಬಳಸಿಕೊಳ್ಳುವ ಗರಿಷ್ಠ ಪ್ರಯತ್ನವೇ ‘ಕ್ಲೌಡ್ ಕಂಪ್ಯೂಟಿಂಗ್’. ವೆಬ್ 2.0 ನೆರವಿನೊಂದಿಗೆ ಕ್ಲೌಡ್ ಕಂಪ್ಯೂಟಿಂಗ್ ಸೃಷ್ಟಿಸಿರುವ ಔದ್ಯಮಿಕ ಅವಕಾಶಗಳು ಹಲವು.

ನಾವು ಈಗ ಬಳಸುತ್ತಿರುವ ಜಿ-ಮೇಲ್ ಸೇವೆಯೇ ಕ್ಲೌಡ್ ಕಂಪ್ಯೂಟಿಂಗ್‌ಗೆ ಉತ್ತಮ ಉದಾಹರಣೆ. ಜಿ-ಮೇಲ್‌ನಲ್ಲಿ ಎಷ್ಟೊಂದು ಪ್ರಮಾಣದ ಸಂದೇಶಗಳನ್ನು, ಚಿತ್ರಗಳನ್ನು, ವಿಡಿಯೋ ತುಣುಕುಗಳನ್ನು ಸಂಗ್ರಹಿಸಿ ಇಡಬಹುದು. ಸುಮಾರು 7,500 ಎಂ.ಬಿ ಸ್ಥಳವನ್ನು ಜಿ-ಮೇಲ್ ತನ್ನ ಪ್ರತಿಬಳಕೆದಾರನಿಗೆ ಕಲ್ಪಿಸುತ್ತದೆ. ಕಂಪ್ಯೂಟರ್‌ಗಳ ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್ ಅಥವಾ ಸಿಡಿಗಳಲ್ಲಿ ಸಂಗ್ರಹಿಸಿಡಬಹುದಾದ ಮಾಹಿತಿಗಿಂತ ಸಾವಿರ ಪಟ್ಟು ಮಾಹಿತಿಯನ್ನು ಅಂತರ್ಜಾಲದಲ್ಲಿ ಶೇಖರಿಸಿಡಬಹುದು.

ಮಾಹಿತಿ ಸಂಗ್ರಹಕ್ಕೆ ದೊಡ್ಡ ಪ್ರಮಾಣದ ಸ್ಥಳವನ್ನು ಅಂತರ್ಜಾಲ ಒದಗಿಸುತ್ತಿದೆ ಎನ್ನುವುದೇ  ಕ್ಲೌಡ್ ಕಂಪ್ಯೂಟಿಂಗ್‌ನ ಸಾಧ್ಯತೆ. ಜತೆಗೆ ಗಣಕಯಂತ್ರ ಬಳಸಿ ಮಾಡುವ ಎಲ್ಲ ಕಾರ್ಯಗಳನ್ನು ಅಂತರ್ಜಾಲದ ನೆರವಿನಿಂದ ಇಲ್ಲಿ ಮಾಡಬಹುದು. ಮುಖ್ಯವಾಗಿ ಡಾಟಾಬೇಸ್ ಆಧರಿತ ಲೆಕ್ಕಾಚಾರಗಳನ್ನು ಕ್ಲೌಡ್‌ನಲ್ಲಿ ಮಾಡಲಾಗುತ್ತದೆ. ಗಣಕಯಂತ್ರದಲ್ಲಿ ನಿಮಗೆ ಬೇಕಾದ ಯಾವುದೇ ಸೇವೆಯನ್ನು ಅಂತರ್ಜಾಲದಲ್ಲಿ ಬ್ರೌಸರ್ ಮೂಲಕ ಪಡೆದುಕೊಳ್ಳಬಹುದು. ಇದಕ್ಕೆ ಸರ್ವರ್ ಬೇಡ. ಸಿಬ್ಬಂದಿ ಬೇಡ. ಮೂಲಸೌಕರ್ಯ ಬೇಡ. ಅಷ್ಟೇ ಅಲ್ಲ ಬೇಡಿಕೆಗೆ ತಕ್ಕಂತೆ ಸೇವೆಯನ್ನು ಪೂರೈಸುವ ಈ ತಂತ್ರಜ್ಞಾನದಲ್ಲಿ ತಮಗೆ ಬೇಕಾದ ಮೂರನೆಯ ವ್ಯಕ್ತಿಯ/ಕಂಪೆನಿಯ ಡಾಟಾವನ್ನು ಕೂಡ ಎಲ್ಲಿಂದ ಬೇಕಾದರೂ ಬಳಕೆದಾರ ಪರಿಶೀಲಿಸಬಹುದು, ತಿದ್ದಬಹುದು, ಪರಿಷ್ಕೃತಗೊಳಿಸಬಹುದು. ನಿರ್ವಹಣೆ ಮಾಡಬಹುದು. ಈ ಸೇವೆಗಾಗಿ ನಾವು ತಿಂಗಳ ವಿದ್ಯುತ್, ನೀರಿನ ಬಿಲ್ ತುಂಬುವಂತೆ ಇಂತಿಷ್ಟು ಅಂತ ಬಾಡಿಗೆ ಶುಲ್ಕ ಪಾವತಿಸಿದರಾಯಿತು.

ವಿಪುಲ ವಾಣಿಜ್ಯ ಅವಕಾಶ:
ಗ್ರಾಹಕ ಸಂಪರ್ಕ ನಿರ್ವಹಣೆ ವ್ಯವಸ್ಥೆಯನ್ನು ಈಗಾಗಲೇ ಹಲವು ಕಂಪೆನಿಗಳು ಕ್ಲೌಡ್ ಕಂಪ್ಯೂಟಿಂಗ್ ಮೂಲಕ ಒದಗಿಸುತ್ತಿವೆ. ಭವಿಷ್ಯದ ಎಲ್ಲ ವಾಣಿಜ್ಯ ವಹಿವಾಟು ಕ್ಲೌಡ್ ಕಂಪ್ಯೂಟಿಂಗ್ ಮೂಲಕವೇ ನಡೆಯಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ಡಾಟಾ ಸೆಂಟರ್‌ಗಳೇ ಬಹುಮುಖ್ಯ ಪಾತ್ರ ವಹಿಸಲಿದೆ. ಇಂತಹ ಸಿದ್ಧ ಡಾಟಾ ಕೇಂದ್ರಗಳನ್ನು ನಿರ್ಮಿಸಿ, ಅದನ್ನು ಕಡಿವೆು ಬೆಲೆಯಲ್ಲಿ ಮಾರಬಹುದು. ತೈವಾನ್ ಈಗಾಗಲೇ ಇಂತಹ ಸಿದ್ದ ಡಾಟಾ ಕೇಂದ್ರಗಳನ್ನು ನಿರ್ಮಿಸುತ್ತಿದೆ. ಕ್ಲೌಡ್ ನಿರ್ವಹಣೆಯನ್ನು ಹೊರಗುತ್ತಿಗೆ ಕೊಡಬಹುದು. ಬೆಂಗಳೂರಿನ ರಿಯಲ್‌ಎಸ್ಟೇಟ್ ಕಂಪೆನಿಯೊಂದು (Total Environment) ತನ್ನ ಡಾಟಾವನ್ನು ನಿರ್ವಹಿಸಲು ಕ್ಲೌಡ್ ಕಂಪ್ಯೂಟಿಂಗ್ ಸೇವೆಯಡಿ ಸಿಂಗಪುರದ ಕಂಪೆನಿಯೊಂದಕ್ಕೆ ಗುತ್ತಿಗೆ ಕೊಟ್ಟಿದೆ.

ಕ್ಲೌಡ್‌ನ ಜನಪ್ರಿಯತೆ ನೋಡಿದರೆ ಇದು ಬಹುಬೇಗ ಸಾರ್ವತ್ರಿಕ ಬಳಕೆಗೆ ಬರುವ ಲಕ್ಷಣಗಳು ಕಾಣುತ್ತಿದೆ. ಮೈಕ್ರೋಸಾಪ್ಟ್  ಆಫೀಸ್ 2010ನ್ನು ಕ್ಲೌಡ್ ಮೂಲಕ ಲಭ್ಯಗೊಳಿಸಿದೆ. ಈಗಿನ ಗೂಗಲ್ ಡಾಕ್ಸ್ (Google Docs) ಕೂಡ ಕ್ಲೌಡ್‌ನ ಆವೃತ್ತಿಯೇ.
ಮುಖ್ಯವಾಗಿ ಕಂಪೆನಿಗಳಿಗೆ ಕ್ಲೌಡ್ ಕಂಪ್ಯೂಟಿಂಗ್‌ನಿಂದ ಗಣಕೀಕರಣದ ವೆಚ್ಚ ಉಳಿಯಲಿದೆ.  ಐಟಿ ಕಂಪೆನಿಗಳಿಗೆ ಇದರಿಂದ ಕೋಟ್ಯಂತರ ರೂಪಾಯಿ ನಿರ್ವಹಣೆ ವೆಚ್ಚ ಉಳಿಯಲಿದೆ. ಇದನ್ನು ಒಂದು ರೀತಿಯ ‘ಬಾಡಿಗೆ ಸೇವೆ’ ಎನ್ನಬಹುದು. ಬಳಕೆದಾರ ತನಗೆ ಬೇಕಾದ ತಂತ್ರಾಂಶಗಳಿಗೆ ಮಾತ್ರ ಹಣ ನೀಡಿದರಾಯಿತು. ನಿರ್ವಹಣೆ ಅಥವಾ ಮೂಲಸೌಕರ್ಯ ವೃದ್ಧಿಗಾಗಿ ಹೆಚ್ಚವರಿ ಹಣ ತೆರಬೇಕಾಗಿಲ್ಲ. ತಂತ್ರಾಂಶಗಳನ್ನು ದುಡ್ಡು ಕೊಟ್ಟು ಖರೀದಿಸಬೇಕಾಗಿಲ್ಲ.

‘ಇಎಂಸಿ’ ಸ್ಟೋರೇಜ್ ಸಾಫ್ಟ್‌ವೇರ್ ಸಂಸ್ಥೆಯ ಪ್ರಕಾರ Saas(Software as Service) Iaas (Infrastructure as a Service) ಮತ್ತು Baap (Browser as a platform) ಜತೆಯಾದರೆ ಅದೇ ಕ್ಲೌಡ್ ಕಂಪ್ಯೂಟಿಂಗ್.  ಈಗ ಮೊಝಿಲ್ಲಾ ಫೈರ್ ಫಾಕ್ಸ್ ತಂದಿರುವ ಮೊಬೈಲ್ ಬ್ರೌಸರ್ ಅನ್ನು ಕ್ಲೌಡ್ ಬ್ರೌಸರ್ ಅಂತಲೇ ಕರೆಯಲಾಗುತ್ತದೆ. ಅಡೋಬ್ ಪ್ಲಾಶ್ ಪ್ಲೆಯರ್ ತೆರೆದುಕೊಂಡಂತೆ ಇದು ಕೂಡ ಯಾವುದೇ ಕಾರ್ಯನಿರ್ವಹಣಾ ತಂತ್ರಾಂಶದಲ್ಲೂ ತೆರೆದುಕೊಳ್ಳುತ್ತದೆ. ಇದು ಎಂಐಎಂಒ (Multiple in put and Multiple Output) ಡಿವೈಸ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ.

ಈಗ ಗೂಗಲ್ ತನ್ನ ‘ವೆಬ್ ದೃಷ್ಟಿಕೋನ’ (webvision)  ವನ್ನು ಮೊಝಿಲ್ಲಾ ಫರ್‌ಪಾಕ್ಸ್ ಜತೆಗೆ ಹಂಚಿಕೊಂಡಿದ್ದು, ಭವಿಷ್ಯದ ಕ್ಲೌಡ್ ಮಾರುಕಟ್ಟೆಗಾಗಿ ಬ್ರೌಸರ್ ಸೇವೆಗಳಲ್ಲಿ ಸುಧಾರಣೆ ತರುತ್ತಿದೆ. ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ಸಾವಿರಾರು ಅಪ್ಲಿಕೇಶನ್ಸ್‌ಗಳನ್ನು ಬ್ರೌಸರ್ ಮೂಲಕ ಪಡೆದು ಕೊಳ್ಳಬಹುದಾದ್ದರಿಂದ ಕಂಪೆನಿಗಳು ಇತ್ತ ಗಮನ ಹರಿಸುತ್ತಿವೆ.

ಸಮಸ್ಯೆ: ಕ್ಲೌಡ್ ಕಂಪ್ಯೂಟಿಂಗ್ ಹಣ ಉಳಿತಾಯದ ಮಾರ್ಗವೇನೋ ನಿಜ. ಆದರೆ ಇಲ್ಲಿ ಕಂಪೆನಿಗಳು ಆನ್‌ಲೈನ್ ಸಾಫ್ಟ್‌ವೇರ್ ಪೂರೈಕೆದಾರರ ಬಗ್ಗೆ ಎಚ್ಚರಿಕೆ ವಹಿಸಬೇಕು. ಬಾಡಿಗೆಗೆ ಪಡೆಯುವ ತಂತ್ರಾಂಶಗಳ ಗುಣಮಟ್ಟದ ಬಗ್ಗೆ ಖಾತರಿ ಇಲ್ಲ. ಕಂಪೆನಿಗಳ ದತ್ತಾಂಶ ನಿರ್ವಹಣೆ ಮತ್ತು  ಗಣಕೀಕರಣವನ್ನು ದೂರದ ಊರುಗಳಿಂದ ನಿಯಂತ್ರಿಸಲಾಗುತ್ತದೆ. ಇಲ್ಲಿ ಒಂದು ಸರ್ವರ್ ಅಮೆರಿಕದಲ್ಲಿದ್ದರೆ ಇನ್ನೊಂದು ಭಾರತದಲ್ಲಿರುತ್ತದೆ. ಜತೆಗೆ  ವೆಬ್ ಹೋಸ್ಟಿಂಗ್ ಅನ್ನು ಮೂರನೆಯ ಕಂಪೆನಿಯೇ ಮಾಡುವುದರಿಂದ ಭದ್ರತೆ ಮತ್ತು ದತ್ತಾಂಶಗಳ ಖಾಸಗಿತನದ  ಬಗ್ಗೆ ಪ್ರಶ್ನೆಗಳು ಏಳುತ್ತವೆ.

ಉದಾಹರಣೆಗೆ ಈಗ 5 ನಿಮಿಷ ಜಿಮೇಲ್ ಸ್ಥಗಿತಗೊಂಡರೆ ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಜಿಮೇಲ್  ಬಳಕೆದಾರರ ಸ್ಥಿತಿ ಊಹಿಸಿಕೊಳ್ಳಿ. ಅಂಥದರಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಅರ್ಧ ಗಂಟೆ ಕೈಕೊಟ್ಟರೆ ಕಂಪೆನಿಗಳಿಗೆ ಆಗುವ ನಷ್ಟ ಎಷ್ಟು? 
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT