ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಿಯಲ್ಲಿ ಕಲ್ಲು ಒಡೆಯುತ್ತಿದ್ದವನಿಗೆ ಚಿನ್ನದ ಪದಕ

Last Updated 25 ಜನವರಿ 2011, 11:05 IST
ಅಕ್ಷರ ಗಾತ್ರ

ಮೂಡಿಗೆರೆ (ಆಲ್ದೂರು): ವಿದ್ಯಾಭ್ಯಾಸದ ಆರ್ಥಿಕ ಹೊರೆ ನಿಭಾಯಿಸಲಾಗದೇ ಹಿರೇಬೈಲಿನ ತನ್ನ ಅಣ್ಣನ ಮನೆಯಲ್ಲಿದ್ದುಕೊಂಡು ರಜೆಯ ದಿನಗಳಲ್ಲಿ ಕಲ್ಲುಕ್ವಾರಿಯಲ್ಲಿ ಕಲ್ಲು ಒಡೆಯುತ್ತಲೇ ಕಳಸದಲ್ಲಿ ಪಿಯು ವಿದ್ಯಾಭ್ಯಾಸ ಮಾಡಿದೆ. ಭವಿಷ್ಯದಲ್ಲೊಂದು ದಿನ ಇಡೀ ಜಿಲ್ಲೆ, ರಾಜ್ಯ ಹೆಮ್ಮೆ ಪಡುವ ಮ್ಯಾರಥಾನ್ ಪಟುವಾಗಿ ಹೊರಹೊಮ್ಮತ್ತೇನೆಂಬುದನ್ನು ಕನಸಿನಲ್ಲೂ ಎಣಿಸಿರಲಿಲ್ಲ.

ಇದು  ತಮಿಳುನಾಡಿನ ಈರೋಡ್‌ನ ಜಿಲ್ಲಾ ಕ್ರೀಡಾಂಗಣದಲ್ಲಿ ತಮಿಳುನಾಡು ಕ್ರೀಡಾ ಪ್ರಾಧಿಕಾರ ಇತ್ತೀಚೆಗೆ ಏರ್ಪಡಿಸಿದ್ದ ದಕ್ಷಿಣ ಭಾರತ ಹಿರಿಯರ ಚಾಂಪಿಯನ್ ಶಿಪ್‌ನಲ್ಲಿ ಮ್ಯಾರಥಾನ್‌ನಲ್ಲಿ ಚಿನ್ನಗೆದ್ದ ಮೂಡಿಗೆರೆಯ ಮಣಿಕಂಠ ಅವರ ಮನದಾಳದ ಮಾತು. ತಮ್ಮ ಚಿನ್ನದ ಹಾದಿಯ ಬಗ್ಗೆ ಮಣಿಕಂಠ ಹೇಳುತ್ತಿದ್ದಾಗ ಭಾವುಕನಾದ ಅವರ ಕಣ್ಣಾಲಿಗಳ ಅಂಚಿನಿಂದ ಆನಂದಭಾಷ್ಪ ಇಳಿದು ಹೋದದ್ದೂ ಸ್ವತಃ ಅವರಿಗೆ ತಿಳಿಯಲಿಲ್ಲ...

2005-06ರ ಸಾಲಿನ ತನ್ನ ವಿದ್ಯಾಭ್ಯಾಸದ ದಿನಗಳಲ್ಲಿ  ಸ್ನೇಹಿತರ ಅಣಕಿಸಿದರು ಎಂದು ಪಣತೊಟ್ಟು ಅನಿರೀಕ್ಷಿತವಾಗಿ ತಾಲ್ಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವೊಂದರಲ್ಲಿ ಒಂದು ಕೈ ನೋಡೇ..ಬಿಡ್ತೀನಿ..., ಎಂದು ಕೊಂಡವನೇ ಓಟದ ಸ್ಪರ್ಧೆಗಿಳಿದಿದ್ದ. ಅಚ್ಚರಿ ಎಂಬಂತೆ ಮೊದಲಿಗನಾಗಿ  ಚಾಂಪಿಯನ್ ಪಟ್ಟದೊಂದಿಗೆ  ಪದಕ ಕೊರಳಿಗಿಳಿಸಿಕೊಂಡಿದ್ದ.

ಮೂಡಿಗೆರೆ ತಾಲ್ಳೂಕಿನ ಕುಗ್ರಾಮ ಬಿಳ್ಳೂರು. ಕಿತ್ತು ತಿನ್ನುವ ಬಡತನವನ್ನೇ ಮೈಹೊದ್ದುಕೊಂಡಿದ್ದ ಅಲ್ಲಿನ ಕೂಲಿ ಕಾರ್ಮಿಕ ದಂಪತಿ ಮುತ್ತುಸ್ವಾಮಿ-ಲಕ್ಷ್ಮಮ್ಮ ಅವರ ಪುತ್ರ ಮಣಿಕಂಠ  ಇಂದು ರಾಜ್ಯಮಟ್ಟದ ಮ್ಯಾರಥಾನ್ ಪಟುವಾಗಿ ‘ಚಿನ್ನದ ಪದಕಗಳ ಮಹಿಮೆ’ ತೋರುತ್ತಿರುವ ಮಲೆನಾಡಿನ ಪ್ರತಿಭೆ.

2005-06ನೇ ಸಾಲಿನಲ್ಲಿ ಮೂಡಿಗೆರೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ ಚಾಂಪಿಯನ್ ಆದ ಬಳಿಕ ಮಣಿಕಂಠ ಓಟವನ್ನಲ್ಲದೇ ಮತ್ತಿನ್ನೇನನ್ನೂ ತಿರುಗಿ ನೋಡಿದ್ದಿಲ್ಲ. ಓಟವನ್ನೇ ತನ್ನ ಉಸಿರನ್ನಾಗಿಸಿಕೊಂಡು ಮೂಡಿಗೆರೆಯ ಕ್ರೀಡಾಪೋಷಕರ, ಉಪನ್ಯಾಸಕರ,   ಗೆಳೆಯರ ದೊಡ್ಡ ಬಳಗದ ಸಹಕಾರದೊಂದಿಗೆ ಸಾಧನೆಗೈಯ್ಯಲು ಅಡಿ ಇಟ್ಟವರು. ನಂತರ 2006-07ರಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕೂಟದಲ್ಲಿ ಭಾಗವಹಿಸಿ ಅಲ್ಲೂ ಚಾಂಪಿಯನ್ ಪಟ್ಟಗಿಟ್ಟಿಸಿಕೊಂಡದ್ದೇ, 2007ರಲ್ಲಿ ನಡೆದ ರಾಜ್ಯ ಮಟ್ಟದಲ್ಲಿ ದಸರಾ ಕ್ರೀಡಾಕೂಟದಲ್ಲಿ 5000 ಮೀ.ಓಟದಲ್ಲಿ ಕಂಚಿನ ಪದಕ ಪಡೆದರು. ಮುಂದಿನ ವರ್ಷವೇ ಮೈಸೂರಿನಲ್ಲಿ ನಡೆದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿ ಮೆರೆದರು.

ಅದೇ ವರ್ಷದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ 1500 ಮೀ. ಓಟದಲ್ಲಿ ಮತ್ತೆ ಕಂಚು ಗೆದ್ದು ಪದಕಗಳ ಪಟ್ಟಿ ಬೆಳೆಸಲಾರಂಬಿಸಿದರು. 2008ಲ್ಲಿ ರೈಲ್ವೆ ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ 12 ಕಿ.ಮೀ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಹಾಗೂ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 10ಕಿ. ಮೀ. ವಿಶ್ವ ಮುಕ್ತ ಓಟದಲ್ಲಿ 4 ನೇ ಸ್ಥಾನಗಳಿಸಿದರೆ, 2009ರಲ್ಲಿ ದಕ್ಷಿಣ ಕನ್ನಡದ ಸುಳ್ಯದಲ್ಲಿ ರಾಷ್ಟ್ರೀಯ ಹಿರಿಯರ ಕ್ರೀಡಾ ಪ್ರಾಧಿಕಾರ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಅರ್ಧ ಮ್ಯಾರಥಾನ್‌ನ 21ಕಿಮೀ ಓಟದಲ್ಲಿ ಚಿನ್ನದ ಪಡೆದರು.

ಇದೇ 2011ರ ಜ. 8ರಂದು ತಮಿಳುನಾಡಿನ ಈರೋಡ್‌ನ ಜಿಲ್ಲಾ ಕ್ರೀಡಾಂಗಣದಲ್ಲಿ ತಮಿಳುನಾಡು ಕ್ರೀಡಾ ಪ್ರಾಧಿಕಾರ ಏರ್ಪಡಿಸಿದ್ದ ದಕ್ಷಿಣ ಭಾರತ ಹಿರಿಯರ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ 30ರಿಂದ 35ರ ವಯೋಮಿತಿ ವಿಭಾಗದಲ್ಲಿ ಕೇರಳ, ತಮಿಳು ನಾಡು, ಆಂಧ್ರಪ್ರದೇಶ, ಒರಿಸ್ಸಾ, ಪಾಂಡಿಚೆರಿ ಮತ್ತು ಅಂಡಮಾನ್ ನಿಕೋಬಾರ್ ಸ್ಪರ್ಧಿಗಳನ್ನು ಹಿಂದಿಕ್ಕಿ 800ಮೀ, 1500ಮೀ, 5000ಮೀ ಓಟದಲ್ಲಿ ಪ್ರಥಮ ಸ್ಥಾನ ದೊಂದಿಗೆ ಹ್ಯಾಟ್ರಿಕ್ ಚಿನ್ನದ ಪದಕ ಪಡೆದರು.

ಇದರಿಂದಾಗಿ ಅವರ ಆರ್ಥಿಕ ಪರಿಸ್ಥಿತಿ ಕೊಂಚ ಸುಧಾರಿಸುವಂತಾಯಿತು. ಹುದ್ದೆಯಲ್ಲಿದ್ದುಕೊಂಡೇ ಹಾಸನ ಜಿಲ್ಲಾ ಹಿರಿಯರ ಕ್ರೀಡಾ ಸಂಸ್ಥೆ ಇಲ್ಲಿ ಯೋಜಿತ ತರಬೇತಿ ಪಡೆಯುತ್ತ ತಾವು ಭಾಗವಹಿಸಿದ ಕೂಟಗಳಲ್ಲೆಲ್ಲಾ ಪದಕಗಳ ಬೇಟೆಯಾಡುತ್ತಿರುವ ಮಣಿಕಂಠನ ಕ್ರೀಡಾ ಸಾಧನೆ ಕಂಡು ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅವರ ಸಾಧನೆಯ ತುಡಿತಕ್ಕೆ ಮತ್ತಷ್ಟು ಉತ್ಸಾಹ ತುಂಬಿದೆ. ಮಣಿಕಂಠ ಅವರ ಸಂಪರ್ಕ ಸಂಖ್ಯೆ: 99646 04238
 ಕೆ.ಎಲ್.ಶಿವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT