ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್ ಫೈನಲ್‌ಗೆ ಇಂಗ್ಲೆಂಡ್

Last Updated 20 ಜೂನ್ 2012, 19:30 IST
ಅಕ್ಷರ ಗಾತ್ರ

ವಾರ್ಸಾ (ರಾಯಿಟರ್ಸ್): ಇಂಗ್ಲೆಂಡ್ ಮತ್ತು ಫ್ರಾನ್ಸ್ ತಂಡಗಳು ಯೂರೊ -2012 ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಆತಿಥೇಯ ಉಕ್ರೇನ್ ತಂಡದ ನಾಕೌಟ್ ಪ್ರವೇಶದ ಕನಸು ಭಗ್ನಗೊಂಡಿತು.

ಡಾನ್‌ಬಾಸ್ ಅರೆನಾದಲ್ಲಿ ಮಂಗಳವಾರ ರಾತ್ರಿ ನಡೆದ `ಡಿ~ ಗುಂಪಿನ ಪಂದ್ಯದಲ್ಲಿ ವೇಯ್ನ ರೂನಿ ತಂದಿತ್ತ ಗೋಲಿನ ನೆರವಿನಿಂದ ಇಂಗ್ಲೆಂಡ್ 1-0 ರಲ್ಲಿ ಉಕ್ರೇನ್ ವಿರುದ್ಧ ಜಯ ಪಡೆಯಿತು. ಕೀವ್‌ನ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಸ್ವೀಡನ್ 2-0 ರಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿತು. ಸೋಲು ಅನುಭವಿಸಿದರೂ ಫ್ರಾನ್ಸ್ ಎಂಟರಘಟ್ಟ ಪ್ರವೇಶಿಸಿತು.

ಇಂಗ್ಲೆಂಡ್ ಏಳು ಪಾಯಿಂಟ್‌ಗಳೊಂದಿಗೆ `ಡಿ~ ಗುಂಪಿನಲ್ಲಿ ಅಗ್ರಸ್ಥಾನ ಪಡೆದರೆ, ಫ್ರಾನ್ಸ್ (4 ಪಾಯಿಂಟ್) ಎರಡನೇ ಸ್ಥಾನ ಪಡೆಯಿತು. ತಲಾ ಮೂರು ಪಾಯಿಂಟ್ ಕಲೆಹಾಕಿದ ಉಕ್ರೇನ್ ಮತ್ತು ಸ್ವೀಡನ್ ಟೂರ್ನಿಯಿಂದ ನಿರ್ಗಮಿಸಿದವು.

ಇಂಗ್ಲೆಂಡ್ ಮತ್ತು ಉಕ್ರೇನ್ ನಡುವಿನ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ರೆಫರಿಯ ವಿವಾದಾತ್ಮಕ ನಿರ್ಧಾರದ ಕಾರಣ ಉಕ್ರೇನ್ ಸಮಬಲ ಸಾಧಿಸುವ ಅವಕಾಶ ಕಳೆದುಕೊಂಡಿತು. ನಿಷೇಧ ಶಿಕ್ಷೆಯ ಕಾರಣ ಮೊದಲ ಎರಡು ಪಂದ್ಯಗಳಲ್ಲಿ ಆಡದಿದ್ದ ರೂನಿ ಇಂಗ್ಲೆಂಡ್‌ನ ಗೆಲುವಿನ ರೂವಾರಿ ಎನಿಸಿದರು. ಪಂದ್ಯದ ಮೊದಲ ಅವಧಿ ಗೋಲುರಹಿತವಾಗಿತ್ತು. ಆದರೆ ಎರಡನೇ ಅವಧಿಯ ಆರಂಭದಲ್ಲೇ ಇಂಗ್ಲೆಂಡ್‌ಗೆ ಗೆಲುವಿನ ಗೋಲು ಬಂತು.

48ನೇ ನಿಮಿಷದಲ್ಲಿ ನಾಯಕ ಸ್ಟೀವನ್ ಜೆರಾಲ್ಡ್ ನೀಡಿದ ಪಾಸ್‌ನಲ್ಲಿ ರೂನಿ ಹೆಡ್ ಮಾಡಿದ ಚೆಂಡು ನೆಟ್‌ನೊಳಕ್ಕೆ ಧಾವಿಸಿತು. ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಆಡುವ ರೂನಿ ಎಂಟು ವರ್ಷಗಳ ಬಿಡುವಿನ ಬಳಿಕ  ಪ್ರಮುಖ ಟೂರ್ನಿಯೊಂದರಲ್ಲಿ ಇಂಗ್ಲೆಂಡ್ ಪರ ಗೋಲು ಗಳಿಸಿದರು.


ಈ ಪಂದ್ಯದಲ್ಲಿ ಅದೃಷ್ಟವು ಇಂಗ್ಲೆಂಡ್ ಜೊತೆಗಿತ್ತು. ಏಕೆಂದರೆ 62ನೇ ನಿಮಿಷದಲ್ಲಿ ಉಕ್ರೇನ್ ಸಮಬಲದ ಗೋಲು ಗಳಿಸಿತಾದರೂ, ರೆಫರಿ ಕೈಗೊಂಡ ತಪ್ಪು ನಿರ್ಧಾರ ಮುಳುವಾಗಿ ಪರಿಣಮಿಸಿತು. ಮಾರ್ಕೊ ಡೆವಿಕ್ ಒದ್ದ ತಂಡ ಗೋಲ್‌ಕೀಪರ್ ಜೋ ಹರ್ಟ್ ಅವರನ್ನು ದಾಟಿ ನೆಟ್‌ನತ್ತ ಧಾವಿಸಿತು. ಆದರೆ ಇಂಗ್ಲೆಂಡ್‌ನ ಜಾನ್ ಟೆರಿ ಕೊನೆಯ ಕ್ಷಣದಲ್ಲಿ ನೆಟ್‌ನ ಒಳಭಾಗಕ್ಕೆ ನೆಗೆದು ಚೆಂಡನ್ನು ಹೊರಕ್ಕಟ್ಟಿದರು. ಉಕ್ರೇನ್‌ನ ಆಟಗಾರರು ಗೋಲೆಂದು ಹೇಳಿದರೂ ರೆಫರಿ ಅವರ ಬೇಡಿಕೆಯನ್ನು ತಳ್ಳಿಹಾಕಿದರು. 

ಆದರೆ ಚೆಂಡು ಗೋಲ್ ಲೈನ್ ದಾಟಿರುವುದು ಟಿವಿ ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು. `ನಾನೇನು ಹೇಳಲಿ. ಅಂಗಳದಲ್ಲಿ ಐವರು ರೆಫರಿಗಳಿದ್ದರಲ್ಲದೆ, ಚೆಂಡು ಗೋಲ್ ಲೈನ್‌ನಿಂದ 75 ಸೆಂ.ಮೀ. ನಷ್ಟು ಒಳಭಾಗದಲ್ಲಿತ್ತು~ ಎಂದು ಉಕ್ರೇನ್ ಕೋಚ್ ಒಲೆಗ್ ಬ್ಲಾಕಿನ್ ಪ್ರತಿಕ್ರಿಯಿಸಿದ್ದಾರೆ.

ಸ್ಟಾರ್ ಸ್ಟೈಕರ್ ಆ್ಯಂಡ್ರೆ ಶೆವ್ಚೆಂಕೊ ಗಾಯದ ಕಾರಣ ಆಡದೇ ಇದ್ದದ್ದು ಕೂಡಾ ಉಕ್ರೇನ್ ತಂಡಕ್ಕೆ ಮುಳುವಾಗಿ ಪರಿಣಮಿಸಿತು. ಈ ಪಂದ್ಯದಲ್ಲಿ ಗೆಲುವು ಪಡೆದಿದ್ದಲ್ಲಿ, ಉಕ್ರೇನ್ ಎಂಟರಘಟ್ಟ ಪ್ರವೇಶಿಸುತ್ತಿತ್ತು.
ಸ್ವೀಡನ್‌ಗೆ ಜಯ: ನಾಯಕ ಜ್ಲಾಟನ್ ಇಬ್ರಾಹಿಮೋವಿಕ್ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಸ್ವೀಡನ್ ತಂಡ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಪಡೆದು ತನ್ನ ಘನತೆಯನ್ನು ಕಾಪಾಡಿಕೊಂಡಿತು.

ಗೆದ್ದರೂ ಕ್ವಾರ್ಟರ್ ಫೈನಲ್ ಪ್ರವೇಶಿಸುವುದು ಅಸಾಧ್ಯವೆಂದು ತಿಳಿದಿದ್ದರೂ, ಸ್ವೀಡನ್ ಚುರುಕಿನ ಆಟವಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇಬ್ರಾಹಿಮೋವಿಕ್ ಪಂದ್ಯದ 54ನೇ ನಿಮಿಷದಲ್ಲಿ ಸ್ವೀಡನ್‌ಗೆ ಮೊದಲ ಗೋಲು ತಂದಿತ್ತರು. `ಬೈಸಿಕಲ್ ಕಿಕ್~ ಮೂಲಕ ಅವರು ಚೆಂಡನ್ನು ಗುರಿಸೇರಿಸಿದ್ದು ಚೇತೋಹಾರಿಯಾಗಿತ್ತು.

ಸೆಬಾಸ್ಟಿಯನ್ ಲಾರ್ಸನ್ ಹೆಚ್ಚುವರಿ ಅವಧಿಯಲ್ಲಿ (90+1) ಇನ್ನೊಂದು ಗೋಲು ಗಳಿಸಿ ಸ್ವೀಡನ್ ಗೆಲುವಿನ ಅಂತರ ಹೆಚ್ಚಿಸಿದರು. 1969ರ ಬಳಿಕ ಸ್ವೀಡನ್‌ಗೆ ಫ್ರಾನ್ಸ್ ಎದುರು ಲಭಿಸಿದ ಮೊದಲ ಗೆಲುವು ಇದಾಗಿದೆ. ಅದೇ ರೀತಿ ಕಳೆದ 24 ಪಂದ್ಯಗಳಲ್ಲಿ ಫ್ರಾನ್ಸ್ ಇದೇ ಮೊದಲ ಬಾರಿ ಸ್ವೀಡನ್‌ಗೆ ಶರಣಾಗಿದೆ.

ಫ್ರಾನ್ಸ್‌ನ ತಂಡದ ಫ್ರಾಂಕ್ ರಿಬೆರಿ, ಬೆನ್ ಅರ್ಫಾ, ಕರೀಮ್ ಬೆಂಜೆಮಾ ಮತ್ತು ಸಮೀರ್ ನಸ್ರಿ ಆಗಿಂದಾಗ್ಗೆ ಗೋಲು ಗಳಿಸುವ ಪ್ರಯತ್ನ ನಡೆಸಿದರಾದರೂ ಯಶ ಕಾಣಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT