ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್ ಫೈನಲ್‌ಗೆ ಸೆರೆನಾ

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಮಿಶ್ರ ಡಬಲ್ಸ್‌ನಲ್ಲಿ ಪೇಸ್-ಜಲೆನಾ ಜೋಡಿಗೆ ಗೆಲುವು
Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಪ್ಯಾರಿಸ್ (ಎಎಫ್‌ಪಿ): ಗೆಲುವಿನ ನಾಗಾಲೋಟ ಮುಂದುವರಿಸಿರುವ ಅಮೆರಿಕದ ಸೆರೆನಾ ವಿಲಿಯಮ್ಸ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ರೋಲಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ಭಾನುವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸೆರೆನಾ 70 ನಿಮಿಷ ಹೋರಾಟ ನಡೆಸಿ 6-1, 6-3ರ ನೇರ ಸೆಟ್‌ಗಳಿಂದ ಇಟಲಿಯ ರಾಬೆರ್ಟಾ ವಾಂಚಿ ಎದುರು ಗೆಲುವು ಸಾಧಿಸಿ ಪ್ರಶಸ್ತಿಯತ್ತ ಮತ್ತೊಂದು ಹೆಜ್ಜೆ ಹಾಕಿದರು. ಅಗ್ರ ರ‌್ಯಾಂಕಿಂಗ್ ಹೊಂದಿರುವ ಅಮೆರಿಕದ ಆಟಗಾರ್ತಿ ಎಂಟರ ಘಟ್ಟದ ಹೋರಾಟದಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ರಷ್ಯಾದ ಸ್ವಟ್ಲೇನಾ ಕುಜ್ನೊತೊವಾ ಎದುರು ಪೈಪೋಟಿ ನಡೆಸಲಿದ್ದಾರೆ.

ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಕುಜ್ನೊತೊವಾ 6-4, 4-6, 6-3ರಲ್ಲಿ ಎಂಟನೇ ಶ್ರೇಯಾಂಕದ ಜರ್ಮನಿಯ ಆಟಗಾರ್ತಿ ಅ್ಯಂಜಲಿಕ್ ಕೆರ್ಬರ್ ಎದುರು ಅಚ್ಚರಿಯ ಗೆಲುವು ಸಾಧಿಸಿದರು.

ಸೆರೆನಾ ಹಾಗೂ ಕುಜ್ನೊತೊವಾ  ನಡುವಿನ ಎಂಟರ ಘಟ್ಟದ ಹಣಾಹಣಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ 2009ರಲ್ಲಿ ಇದೇ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಕುಜ್ನೊತೊವಾ ಅವರು ಸೆರೆನಾ ಎದುರು ಅಚ್ಚರಿಯ ಗೆಲುವು ಪಡೆದಿದ್ದರು. ಅಷ್ಟೇ ಅಲ್ಲ, ಈ ವರ್ಷದಲ್ಲಿ ಚಾಂಪಿಯನ್ ಕೂಡಾ ಆಗಿದ್ದರು.

`ಸೆರೆನಾ ಎಲ್ಲರಲ್ಲೂ ಅಚ್ಚರಿ ಮೂಡಿಸುವಂತಹ ಆಟವಾಡುತ್ತಾರೆ. ಅವರ ವಿರುದ್ಧ ಮತ್ತೊಂದು ಸಲ ಮಹತ್ವದ ಘಟ್ಟದಲ್ಲಿ ಪಂದ್ಯವಾಡುವ ಅವಕಾಶ ಲಭಿಸಿದೆ. ನನ್ನೆಲ್ಲಾ ಸಾಮರ್ಥ್ಯವನ್ನು ಪಣಕ್ಕಿಟ್ಟು ಹೋರಾಡುತ್ತೇನೆ' ಎಂದು ಕುಜ್ನೊತೊವಾ ನುಡಿದರು.  ನಾಲ್ಕು ವರ್ಷಗಳ ಹಿಂದೆ ಅಮೆರಿಕದ ಆಟಗಾರ್ತಿ ಅನುಭವಿಸಿದ್ದ ಸೋಲಿಗೆ ತಿರುಗೇಟು ನೀಡಲು 15 ಸಲ ಗ್ರ್ಯಾನ್ ಸ್ಲಾಮ್ ಟ್ರೋಫಿ ಎತ್ತಿ ಹಿಡಿದಿರುವ ಸೆರೆನಾಗೆ ಈಗ ಉತ್ತಮ ಅವಕಾಶ ಲಭಿಸಿದೆ.

ಫೆರರ್‌ಗೆ ಗೆಲುವು:
ಪುರುಷರ ವಿಭಾಗದ ಸಿಂಗಲ್ಸ್‌ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಡೇವಿಡ್ ಫೆರರ್ ಗೆಲುವು ಸಾಧಿಸಿದರು. 14ನೇ ಶ್ರೇಯಾಂಕದ ಈ ಆಟಗಾರ 6-3, 6-1, 6-1ರಲ್ಲಿ ರಷ್ಯಾದ ಕೆವಿನ್ ಆ್ಯಂಡರ್ಸನ್ ಎದುರು ಗೆಲುವಿನ ನಗೆ ಬೀರಿದರು.
ಇದೇ ವಿಭಾಗದ ಇತರ ಪಂದ್ಯಗಳಿಂದ ಫ್ರಾನ್ಸ್‌ನ ವಿಲ್‌ಫ್ರಡ್ ಸೊಂಗಾ 6-3, 6-3, 6-3ರಲ್ಲಿ ಸರ್ಬಿಯಾದ ವಿಕ್ಟರ್ ಟ್ರೊಯೊಕಿ ಮೇಲೂ, ಸ್ಪೇನ್‌ನ ಟಾಮಿ ರೆಬ್ರೆಡೊ 6-7, 3-6, 6-4, 6-4, 6-4ರಲ್ಲಿ ತಮ್ಮದೇ ದೇಶದ 11ನೇ ಶ್ರೇಯಾಂಕದ ಆಟಗಾರ ನಿಕೊಲಸ್ ಅಲ್ಮಾರ್ಗೊ ಎದುರು ಅಚ್ಚರಿಯ ಗೆಲುವು ಸಾಧಿಸಿದರು.

ಎರಡನೇ ಸುತ್ತಿಗೆ ಸಾನಿಯಾ-ಬೆಥನಿ
ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥನಿ ಮಟೆಕ್ ಸ್ಯಾಂಡ್ಸ್ ಜೋಡಿ ಮಹಿಳಾ ವಿಭಾಗದ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆಯಿತು. ಏಳನೇ ಶ್ರೇಯಾಂಕದ ಈ ಜೋಡಿ 6-3, 6-4ರಲ್ಲಿ ಸ್ಥಳೀಯ ಆಟಗಾರ್ತಿಯರಾದ ಅಲಿಜೆ ಕಾರ್ನಟ್ ಹಾಗೂ ವರ್ಜಿನಿಯೆ ರಜಾನೊ ಎದುರು ಜಯ ಸಾಧಿಸಿತು.

ಈ ಗೆಲುವಿಗಾಗಿ ಒಂದು ಗಂಟೆ 28 ನಿಮಿಷ ಹೋರಾಡಿದ ಸಾನಿಯಾ-ಬೆಥನಿ ಎರಡನೇ ಸುತ್ತಿನಲ್ಲಿ ಅಮೆರಿಕದ ಲ್ಯೂರಿಯನ್ ಡೇವಿಸ್-ಮಾಗೆನ್ ಮೌಲ್ಟನ್ ಲೆವಿ ಎದುರು ಪೈಪೋಟಿ ನಡೆಸಲಿದ್ದಾರೆ.

ಪೇಸ್-ಜಾಂಕೊವಿಕ್ ಜೋಡಿಗೆ ಜಯ: ಮಿಶ್ರ ಡಬಲ್ಸ್‌ನಲ್ಲಿ ಭಾರತದ ಲಿಯಾಂಡರ್ ಪೇಸ್ ಹಾಗೂ ಸರ್ಬಿಯಾದ ಜಲೆನಾ ಜಾಂಕೊವಿಕ್ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ 7-5, 6-3ರಲ್ಲಿ ಕಜಕಸ್ತಾನದ ಗಲಿನಾ ವಾಸ್ಕೊಬೊಎವಾ ಇಟಲಿಯ ಡೇನಿಯಲ್ ಬ್ರೆಸಿಯಲಿ ಎದುರು ಗೆಲುವು ಪಡೆದು ಶುಭಾರಂಭ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT