ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್ ಫೈನಲ್‌ಗೆ ಸೆರೆನಾ

ಅಮೆರಿಕ ಓಪನ್ ಟೆನಿಸ್: ಮರ್ರೆ, ಜೊಕೊವಿಚ್ ಗೆಲುವಿನ ಓಟ
Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಎಎಫ್‌ಪಿ): ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಸೆರೆನಾ 6-4, 6-1 ರಲ್ಲಿ ತಮ್ಮದೇ ದೇಶದ ಸ್ಲೊವಾನೆ ಸ್ಟೀಫನ್ಸ್ ವಿರುದ್ಧ ಜಯ ಪಡೆದರು.

ಈ ಮೂಲಕ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ತಮಗೆ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡರು. ಆಸ್ಟ್ರೇಲಿಯಾ ಓಪನ್‌ನಲ್ಲಿ ಸ್ಟೀಫನ್ಸ್ ಅವರು ಸೆರೆನಾಗೆ ಆಘಾತ ನೀಡಿದ್ದರು. ಆರಂಭದಲ್ಲಿ ಅಲ್ಪ ಪರದಾಟ ನಡೆಸಿದ ಸೆರೆನಾ ಬಳಿಕ ಪೂರ್ಣ ಪ್ರಭುತ್ವ ಸಾಧಿಸಿದರು. ಕೊನೆಯ ಒಂಬತ್ತು ಗೇಮ್‌ಗಳಲ್ಲಿ ಎಂಟನ್ನೂ ತಮ್ಮದಾಗಿಸಿಕೊಂಡು ಗೆಲುವಿನ ನಗು ಬೀರಿದರು.

`ಸ್ಲೊವಾನೆ ಕಠಿಣ ಎದುರಾಳಿಯಾಗಿರುವ ಕಾರಣ ಇದು ನನಗೆ ಮಹತ್ವದ ಪಂದ್ಯವಾಗಿತ್ತು. ಪಂದ್ಯದುದ್ದಕ್ಕೂ ತಾಳ್ಮೆಯಿಂದ ಇದ್ದು ಗೆಲುವು ಒಲಿಸಿಕೊಂಡೆ' ಎಂದು ಸೆರೆನಾ ಪ್ರತಿಕ್ರಿಯಿಸಿದ್ದಾರೆ. ಅಗ್ರಶ್ರೇಯಾಂಕದ ಆಟಗಾರ್ತಿ ಎಂಟರಘಟ್ಟದ ಪಂದ್ಯದಲ್ಲಿ ಸ್ಪೇನ್‌ನ ಕಾರ್ಲಾ ಸೊರೇಜ್ ನವಾರೊ ಅವರ ಸವಾಲನ್ನು ಎದುರಿಸುವರು.

ಚೀನಾದ ಲೀ ನಾ ಮತ್ತು ರಷ್ಯಾದ ಏಕ್ತರೀನಾ ಮಕರೋವಾ ಅವರೂ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಐದನೇ ಶ್ರೇಯಾಂಕದ ಲೀ ನಾ 6-3, 6-0 ರಲ್ಲಿ ಸರ್ಬಿಯದ ಯೆಲೆನಾ ಜಾಂಕೋವಿಚ್ ಅವರನ್ನು ಮಣಿಸಿದರು. 24ನೇ ಶ್ರೇಯಾಂಕದ ಆಟಗಾರ್ತಿ ಮಕರೋವಾ 6-4, 6-4 ರಲ್ಲಿ ಪೋಲೆಂಡ್‌ನ ಅಗ್ನೀಸ್ಕಾ ರಡ್ವಾನ್‌ಸ್ಕಾ ವಿರುದ್ಧ ಅಚ್ಚರಿಯ ಗೆಲುವು ಪಡೆದರು.

ಪ್ರೀ ಕ್ವಾರ್ಟರ್‌ಗೆ ಮರ್ರೆ, ಜೊಕೊವಿಚ್: ವಿಶ್ವದ ಅಗ್ರ ರ‍್ಯಾಂಕ್‌ನ ಆಟಗಾರ ಸರ್ಬಿಯದ ನೊವಾಕ್ ಜೊಕೊವಿಚ್ ಮತ್ತು ಬ್ರಿಟನ್‌ನ ಆ್ಯಂಡಿ ಮರ್ರೆ ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಲೇಟನ್ ಹೆವಿಟ್ ಅವರ ಗೆಲುವಿನ ಓಟವೂ ಮುಂದುವರಿದಿದೆ.

ಇಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಜೊಕೊವಿಚ್ ಮೂರನೇ ಸುತ್ತಿನ ಪಂದ್ಯದಲ್ಲಿ 6-0, 6-2, 6-2 ರಲ್ಲಿ ಪೋರ್ಚುಗಲ್‌ನ ಜಾವೊ ಸೋಸಾ ವಿರುದ್ಧ ಸುಲಭ ಗೆಲುವು ಪಡೆದರು. ಮೊದಲ ಸೆಟ್‌ನಲ್ಲಿ ಎದುರಾಳಿಗೆ ಯಾವುದೇ ಗೇಮ್ ಬಿಟ್ಟುಕೊಡದ ಜೊಕೊವಿಚ್ ಪಂದ್ಯದಲ್ಲಿ ಒಟ್ಟು ಮೂರು ಏಸ್‌ಗಳನ್ನು ಸಿಡಿಸಿದರು.

ವಿಂಬಲ್ಡನ್ ಚಾಂಪಿಯನ್ ಮರ್ರೆ 7-6, 6-2, 6-2 ರಲ್ಲಿ ಜರ್ಮನಿಯ ಫ್ಲೋರಿಯಾನ್ ಮೇಯರ್ ವಿರುದ್ಧ ನೇರ ಸೆಟ್‌ಗಳ ಜಯ ಸಾಧಿಸಿದರು. ಮೊದಲ ಸೆಟ್‌ನಲ್ಲಿ ಮಾತ್ರ ಅಲ್ಪ ಪೈಪೋಟಿ ಎದುರಿಸಿದ ಮರ್ರೆ ಒಟ್ಟು 42 ವಿನ್ನರ್ ಹಾಗೂ ಏಳು ಏಸ್‌ಗಳನ್ನು ಸಿಡಿಸಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

`ಪಂದ್ಯದ ಆರಂಭದಲ್ಲೇ ಮೇಲುಗೈ ಸಾಧಿಸುವತ್ತ ಗಮನ ನೀಡಬೇಕಾಗಿದೆ. ಆದರೆ ಒಮ್ಮೆ ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ನನಗೆ ಉತ್ತಮ ಲಯದಲ್ಲಿ ಆಡಲು ಸಾಧ್ಯವಾಗುತ್ತಿದೆ' ಎಂದು ಮರ್ರೆ ಪ್ರತಿಕ್ರಿಯಿಸಿದ್ದಾರೆ.

ಹಾಲಿ ಚಾಂಪಿಯನ್ ಮರ್ರೆ 16ರ ಘಟ್ಟದ ಪಂದ್ಯದಲ್ಲಿ ಉಜ್ಬೆಕಿಸ್ತಾನದ ಡೆನಿಸ್ ಇಸ್ತೋಮಿನ್ ಅವರ ಸವಾಲನ್ನು ಎದುರಿಸುವರು. ದಿನದ ಮತ್ತೊಂದು ಪಂದ್ಯದಲ್ಲಿ ಇಸ್ತೋಮಿನ್ 6-3, 6-4, 2-6, 3-6, 6-1 ರಲ್ಲಿ 20ನೇ ಶ್ರೇಯಾಂಕದ ಆಟಗಾರ ಇಟಲಿಯ ಅಡ್ರಿಯಾನ್ ಸೆಪ್ಪಿ ವಿರುದ್ಧ ಪ್ರಯಾಸದ ಜಯ ಸಾಧಿಸಿದರು. ಉಜ್ಬೆಕಿಸ್ತಾನದ ಆಟಗಾರ ಇಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಇದೇ ಮೊದಲು.

ಮತ್ತೊಂದು ಪಂದ್ಯದಲ್ಲಿ ಆಸ್ಟ್ರೇಲಿಯದ ಲೇಟನ್ ಹೆವಿಟ್ 6-3, 7-6, 6-1 ರಲ್ಲಿ ರಷ್ಯಾದ ಎವ್ಗೆನಿ ಡಾನ್‌ಸ್ಕಾಯ್ ಅವರನ್ನು ಮಣಿಸಿದರು. ಹೆವಿಟ್ 2006 ರಲ್ಲಿ ಇಲ್ಲಿ ಕೊನೆಯದಾಗಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. 2001 ರಲ್ಲಿ ಇಲ್ಲಿ ಕಿರೀಟ ಮುಡಿಗೇರಿಸಿದ್ದ ಹೆವಿಟ್ ಎರಡನೇ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊಗೆ ಆಘಾತ ನೀಡಿದ್ದರು.

ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ 6-3, 6-2, 6-7, 7-6 ರಲ್ಲಿ ಸೈಪ್ರಸ್‌ನ ಮಾರ್ಕೊಸ್ ಬಗ್ದಾಟಿಸ್ ಅವರನ್ನು ಸೋಲಿಸಿದರೆ, ರಷ್ಯಾದ ಮಿಖಾಯಿಲ್ ಯೂಜ್ನಿ 6-3, 6-2, 2-6, 6-3 ರಲ್ಲಿ ಜರ್ಮನಿಯ ಟಾಮಿ ಹಾಸ್ ವಿರುದ್ಧ ಜಯ ಸಾಧಿಸಿದರು.

ಐದನೇ ಶ್ರೇಯಾಂಕದ ಆಟಗಾರ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್ 6-0, 6-3, 6-2 ರಲ್ಲಿ ಫ್ರಾನ್ಸ್‌ನ ಜೂಲಿಯನ್ ಬೆನೆಟು ಅವರನ್ನು ಸುಲಭವಾಗಿ ಸೋಲಿಸಿದರು. ಸ್ಪೇನ್‌ನ ಮಾರ್ಸೆಲ್ ಗ್ರಾನೊಲ್ಲರ್ಸ್‌ 6-4, 4-6, 0-6, 6-3, 7-5 ರಲ್ಲಿ ಅಮೆರಿಕದ ಟಿಮ್ ಸ್ಮೈಜೆಕ್ ವಿರುದ್ಧ ಗೆಲುವು ಪಡೆದರು. 1-2 ರಲ್ಲಿ ಹಿನ್ನಡೆ ಅನುಭವಿಸಿದ್ದ ಗ್ರಾನೊಲ್ಲರ್ಸ್‌ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT