ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್ ಫೈನಲ್‌ಗೆ ಸೈನಾ

ಮಲೇಷ್ಯಾ ಬ್ಯಾಡ್ಮಿಂಟನ್: ಗಾಯಗೊಂಡ ಕಶ್ಯಪ್‌ಗೆ ಸೋಲು
Last Updated 17 ಜನವರಿ 2013, 19:59 IST
ಅಕ್ಷರ ಗಾತ್ರ

ಕ್ವಾಲಾಲಂಪುರ (ಪಿಟಿಐ): ಸ್ಥಿರ ಪ್ರದರ್ಶನ ಮುಂದುವರಿಸಿರುವ ಭಾರತದ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ 21-12, 21-9ರಲ್ಲಿ ಹಾಂಕಾಂಗ್‌ನ ಪುಯ್ ಇನ್ ಇಪ್ ಎದುರು ಗೆಲುವು ಸಾಧಿಸಿದರು. ವಿಶ್ವ ಬ್ಯಾಡ್ಮಿಂಟನ್ ರ‌್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಪಡೆದಿರುವ ಖುಷಿಯಲ್ಲಿರುವ ಹೈದರಾಬಾದ್‌ನ ಈ ಆಟಗಾರ್ತಿ ಎರಡೂ ಗೇಮ್‌ಗಳಲ್ಲಿ ಸುಲಭವಾಗಿ ಗೆದ್ದರು.

ಈ ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಪಡೆದಿರುವ ನೆಹ್ವಾಲ್ ಅರ್ಧ ಗಂಟೆಯಲ್ಲಿ ಹಾಂಕಾಂಗ್‌ನ ಆಟಗಾರ್ತಿಗೆ ಸೋಲುಣಿಸಿದರು. ಅವರು ಎಂಟರ ಘಟ್ಟದ ಪಂದ್ಯದಲ್ಲಿ ಜಪಾನ್‌ನ ನೊಜೊಮಿ ಒಕುಹರಾ ಎದುರು ಪೈಪೋಟಿ ನಡೆಸಲಿದ್ದಾರೆ. ಈ ಆಟಗಾರ್ತಿಯನ್ನು ಸೈನಾ ಇದುವರೆಗೆ ಎದುರಿಸಿಲ್ಲ. ಒಕುಹರಾ ತಮ್ಮ ಎರಡನೇ ಸುತ್ತಿನ ಪಂದ್ಯದಲ್ಲಿ 21-13, 21-13ರಲ್ಲಿ ಇಂಡೊನೇಷ್ಯಾದ ಲಿಂಡಾವೇನಿ ಫನೆಟ್ರಿ ಎದುರು ಜಯ ಗಳಿಸಿದರು.

ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಗಪುರದ ಶ್ರೇಯಾಂಕ ರಹಿತ ಗೂ ಜೂನ್ ಅವರನ್ನು 21-12, 21-15ರಿಂದ ಸುಲಭವಾಗಿ ಮಣಿಸಿದ್ದರು.ಆದರೆ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಕಶ್ಯಪ್ ಪರಾಭವಗೊಂಡರು. ಅವರು 17-21, 14-21ರಲ್ಲಿ ಡೆನ್ಮಾರ್ಕ್‌ನ ಜನ್ ಓ ಜೊರ್ಗಸ್ನೇನ್ ಎದುರು ಸೋತರು. ಬಲಗಾಲಿನ ನೋವಿಗೆ ಒಳಗಾಗಿರುವ ಕಶ್ಯಪ್ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲರಾದರು.

`ಬಲಗಾಲಿನ ಸ್ನಾಯು ಸೆಳೆತಕ್ಕೆ ಒಳಗಾದೆ. ಇದು ಬುಧವಾರ ಮೊದಲ ಸುತ್ತಿನ ಪಂದ್ಯ ಆಡುವಾಗಲೇ ಸಂಭವಿಸಿತ್ತು. ಆದರೂ ನಾನು ಎರಡನೇ ಸುತ್ತಿನ ಪಂದ್ಯದಲ್ಲಿ ಆಡಿದೆ. ನೋವಿನ ಕಾರಣ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ' ಎಂದು ಕಶ್ಯಪ್ ಪಂದ್ಯದ ಬಳಿಕ ನುಡಿದರು.

ಎರಡನೇ ಸ್ಥಾನಕ್ಕೇರಿದ ನೆಹ್ವಾಲ್
ನವದೆಹಲಿ (ಪಿಟಿಐ):
ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ರ‌್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಇದು ಭಾರತದ ಆಟಗಾರ್ತಿಯ ಶ್ರೇಷ್ಠ ಸಾಧನೆ ಆಗಿದೆ.

ಸೈನಾ 80091.7444 ಪಾಯಿಂಟ್ಸ್‌ನೊಂದಿಗೆ ಈ ಸಾಧನೆ ಮಾಡಿದ್ದಾರೆ. ಚೀನಾದ ಲಿ ಕ್ಸುಯೆರುಯಿ ಅಗ್ರ ರ‌್ಯಾಂಕಿಂಗ್‌ನಲ್ಲಿದ್ದಾರೆ. ಅವರು 94626.7153 ಪಾಯಿಂಟ್ಸ್‌ಗಳೊಂದಿಗೆ ಈ ಸಾಧನೆ ಮಾಡಿದ್ದಾರೆ. ಪ್ರತಿಭಾವಂತ ಆಟಗಾರ್ತಿ ಭಾರತದ ಪಿ.ವಿ.ಸಿಂಧು 16ನೇ ಸ್ಥಾನಕ್ಕೇರಿದ್ದಾರೆ.

ಪುರುಷರ ವಿಭಾಗದಲ್ಲಿ ಭಾರತದ ಪಿ.ಕಶ್ಯಪ್ 10ನೇ ರ‌್ಯಾಂಕ್ ತಲುಪಿದ್ದಾರೆ. ರ‌್ಯಾಂಕಿಂಗ್‌ನಲ್ಲಿ ಇದು ಕಶ್ಯಪ್ ಅವರ ಜೀವನ ಶ್ರೇಷ್ಠ ಸಾಧನೆ ಕೂಡ. ಈ ಮೊದಲು ಅವರು 11ನೇ ಸ್ಥಾನದಲ್ಲಿದ್ದರು. ಕಶ್ಯಪ್ ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT