ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್ ಫೈನಲ್‌ನತ್ತ ಆಸೀಸ್ ಚಿತ್ತ

Last Updated 12 ಮಾರ್ಚ್ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ತಂಡ ಕಳೆದ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಸೋಲಿನ ರುಚಿ ಸವಿದಿಲ್ಲ. ಮಾತ್ರವಲ್ಲ ಸತತ 31 ಗೆಲುವು ಪಡೆದಿದೆ. ಇನ್ನೊಂದು ತಂಡ ಪ್ರಸಕ್ತ ಟೂರ್ನಿಯಲ್ಲಿ ಒಂದರ ಮೇಲೊಂದರಂತೆ ನಾಲ್ಕು ಸೋಲು ಅನುಭವಿಸಿದೆ. ಆಟಗಾರರಲ್ಲಿ ಆತ್ಮವಿಶ್ವಾಸ ಎಳ್ಳಷ್ಟೂ ಉಳಿದುಕೊಂಡಿಲ್ಲ.

ಇದು ಆಸ್ಟ್ರೇಲಿಯಾ ಮತ್ತು ಕೀನ್ಯಾ ತಂಡಗಳ ಕತೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ವಿಶ್ವಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಇವೆರಡು ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ. ಪಂದ್ಯದಲ್ಲಿ ಏನಾದರೂ ‘ಥ್ರಿಲ್’ ಲಭಿಸಬಹುದೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ರಿಕಿ ಪಾಂಟಿಂಗ್ ನೇತೃತ್ವದ ಆಸೀಸ್ ಮುಂದೆ ಕೀನ್ಯಾ ಕುಬ್ಜವಾಗಿ ಕಾಣುತ್ತದೆ. ಮೂರು ಪಂದ್ಯಗಳಿಂದ ಐದು ಪಾಯಿಂಟ್ ಹೊಂದಿರುವ ಆಸ್ಟ್ರೇಲಿಯಾ ಪ್ರಸಕ್ತ ನಾಲ್ಕನೇ ಸ್ಥಾನದಲ್ಲಿದೆ. ಕೀನ್ಯಾ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆದ್ದರಿಂದ ಆಸೀಸ್ ಮತ್ತು ಕೀನ್ಯಾ ತಂಡಗಳ ನಡುವಿನ ವ್ಯತ್ಯಾಸವನ್ನು ಅರಿತವರು ಭಾನುವಾರ ರೋಚಕ ಹೋರಾಟ ನಿರೀಕ್ಷಿಸುತ್ತಿಲ್ಲ.

ಕಳೆದ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ಯಾವುದೇ ಸೋಲು ಅನುಭವಿಸಿಲ್ಲ. ಈ ಬಾರಿಯೂ ತಂಡ ಗೆಲುವಿನ ಹಾದಿಯಲ್ಲಿದೆ. ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್ ವಿರುದ್ಧ ಜಯ ಪಡೆದಿದ್ದ ಆಸೀಸ್‌ಗೆ ಟೂರ್ನಿಯಲ್ಲಿ ಭರ್ಜರಿ ಆರಂಭ ಲಭಿಸಿದೆ. ಆದರೆ ಶ್ರೀಲಂಕಾ ವಿರುದ್ಧದ ಮಹತ್ವದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಈ ಕಾರಣ ಕಾಂಗರೂ ನಾಡಿನವರಿಗೆ ಇನ್ನೂ ನಿಜವಾದ ಅಗ್ನಿಪರೀಕ್ಷೆ ಎದುರಾಗಿಲ್ಲ. ಭಾನುವಾರ ಅಂತಹ ಅಗ್ನಿಪರೀಕ್ಷೆ ಎದುರಾಗುವ ಸಾಧ್ಯತೆಯೂ ಇಲ್ಲ.

ಅನುಭವಿ ಬ್ಯಾಟ್ಸ್‌ಮನ್ ಮೈಕ್ ಹಸ್ಸಿ ಅವರ ಆಗಮನದಿಂದ ಆಸೀಸ್ ತಂಡದ ಬಲ ಹೆಚ್ಚಿದೆ. ಗಾಯಗೊಂಡ ಡಗ್ ಬೋಲಿಂಜರ್ ಬದಲು ಹಸ್ಸಿ ತಂಡ ಸೇರಿಸಿದ್ದಾರೆ. ‘ಹಸ್ಸಿ ಭಾನುವಾರ ಕಣಕ್ಕಿಳಿಯುವರೇ ಎಂಬುದು ಅವರ ಫಿಟ್‌ನೆಸ್ ಮೇಲೆ ಅವಲಂಬಿಸಿದೆ’ ಎಂದು ರಿಕಿ ಪಾಂಟಿಂಗ್ ಶನಿವಾರ ನುಡಿದಿದ್ದಾರೆ.

ಆಡುವ ಅವಕಾಶ ಲಭಿಸಿದರೆ ಅದನ್ನು ಸದುಪಯೋಗಪಡಿಸಿಕೊಳ್ಳುವ ವಿಶ್ವಾಸದಲ್ಲಿ ಹಸ್ಸಿ ಇದ್ದಾರೆ. ನಾಕೌಟ್ ಹಂತಕ್ಕೆ ಮುನ್ನ ಈ ಬ್ಯಾಟ್ಸ್‌ಮನ್‌ಗೆ ‘ಮ್ಯಾಚ್ ಪ್ರಾಕ್ಟೀಸ್’ ದೊರೆತರೆ ಆಸೀಸ್ ತಂಡಕ್ಕೆ ಒಳ್ಳೆಯದು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಲಭಿಸಿದರೆ ಆಸೀಸ್ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ನಿನ ಹೊಳೆ ಹರಿಸುವುದು ಖಂಡಿತ.

ಆಸ್ಟ್ರೇಲಿಯಾ ಟೂರ್ನಿಯಲ್ಲಿ ಇದುವರೆಗೆ ವೇಗದ ಬೌಲಿಂಗ್‌ನ್ನೇ ನೆಚ್ಚಿಕೊಂಡಿದೆ. ಬ್ರೆಟ್ ಲೀ, ಶಾನ್ ಟೇಟ್ ಮತ್ತು ಮಿಷೆಲ್ ಜಾನ್ಸನ್ ಅವರು ತಂಡದ ಗೆಲುವಿಗೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಆದರೆ ಈ ಪಂದ್ಯದಲ್ಲಿ ಸ್ಪಿನ್ನರ್‌ಗಳಾದ ಜಾಸನ್ ಕ್ರೇಜಾ ಮತ್ತು ಸ್ಟೀವ್ ಸ್ಮಿತ್ ಅವರ ಪ್ರದರ್ಶನದ ಮೇಲೂ ಆಸೀಸ್ ತಂಡ ಗಮನ ನೀಡಿದೆ.

ಮತ್ತೊಂದೆಡೆ ಜಿಮ್ಮಿ ಕಮಾಂಡೆ ನೇತೃತ್ವದ ಕೀನ್ಯಾಕ್ಕೆ ಯಾವುದೇ ಒತ್ತಡ ಇಲ್ಲ. ಏಕೆಂದರೆ ಕ್ವಾರ್ಟರ್ ಫೈನಲ್ ಕನಸು ಈಗಾಗಲೇ ಅಸ್ತಮಿಸಿದೆ. ಭಾನುವಾರ ನಡೆಯುವ ಪಂದ್ಯದಲ್ಲಿ ಕಳೆದುಕೊಳ್ಳುಹಂತಹದ್ದು ಏನೂ ಇಲ್ಲ. ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ಕೈಯಲ್ಲಿ ದೊಡ್ಡ ಅಂತರದ ಸೋಲು ಅನುಭವಿಸಿದ್ದ ತಂಡ ಕೆನಡಾ ಎದುರೂ ತಲೆಬಾಗಿ ನಿಂತಿತು. ಈ ಕಾರಣ ತಂಡದ ಆಟಗಾರರಲ್ಲಿದ್ದ ಅಲ್ಪ ಸ್ವಲ್ಪ ಆತ್ಮವಿಶ್ವಾಸವೂ ಮರೆಯಾಗಿದೆ.

ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಇದುವರೆಗೆ ಸಂಘಟಿತ ಪ್ರದರ್ಶನ ನೀಡಿಲ್ಲ. ಈ ಕಾರಣ ‘ಕಮಾಂಡರ್’ ರೀತಿಯಲ್ಲಿ ತಂಡವನ್ನು ಮುನ್ನಡೆಸಲು ಜಿಮ್ಮಿ ಕಮಾಂಡೆಗೆ ಸಾಧ್ಯವಾಗುತ್ತಿಲ್ಲ. 2003 ರಲ್ಲಿ ಸೆಮಿಫೈನಲ್ ಪ್ರವೇಶಿಸಿ ಅಚ್ಚರಿ ಉಂಟುಮಾಡಿದ್ದ ಕೀನ್ಯಾ ಇದುವರೆಗೆ ನೀಡಿದ ಪ್ರದರ್ಶನ ತೀರಾ ಕಳಪೆಯಾಗಿದೆ.

ಕೀನ್ಯಾ ತಂಡಕ್ಕೆ ಗೆಲುವು ಎಂಬುದು ದೂರದ ಮಾತೇ ಸರಿ. ಕಡಿಮೆಪಕ್ಷ ಆಸೀಸ್ ವಿರುದ್ಧ ವೀರೋಚಿತ ಸೋಲು ಅನುಭವಿಸಿ ತನ್ನ ಘನತೆಯನ್ನು ಕಾಪಾಡಿಕೊಳ್ಳುವುದೇ ಎಂಬುದನ್ನು ನೋಡಬೇಕು. ಪೂರ್ಣ 50 ಓವರ್‌ಗಳಷ್ಟು ಬ್ಯಾಟಿಂಗ್ ಮಾಡಲು ಸಾಧ್ಯವಾದರೆ ಕೀನ್ಯಾ ಪಾಲಿಗೆ ಅದೇ ಬಲುದೊಡ್ಡ ಸಾಧನೆ ಎನಿಸಲಿದೆ.

ಆದರೆ ಆಸೀಸ್ ತಂಡ ಪಂದ್ಯವನ್ನು ಹಗುರವಾಗಿ ಪರಿಗಣಿಸಿಲ್ಲ. ಪ್ರಸಕ್ತ ವಿಶ್ವಕಪ್‌ನಲ್ಲಿ ಐರ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಇಂಗ್ಲೆಂಡ್ ವಿರುದ್ಧ ಅಚ್ಚರಿಯ ಗೆಲುವು ಪಡೆದಿವೆ.
ಈ ಕಾರಣ ತಂಡವು ಭಾನುವಾರ ಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡುವುದು ಖಚಿತ. ನಾಯಕ ಪಾಂಟಿಂಗ್ ಕೂಡ ಅದನ್ನೇ ಹೇಳಿದ್ದಾರೆ. ಆಸ್ಟ್ರೇಲಿಯಾ ಮಾರ್ಚ್ 16 ರಂದು ಇದೇ ಅಂಗಳದಲ್ಲಿ ನಡೆಯುವ ಪಂದ್ಯದಲ್ಲಿ ಕೆನಡಾ ಜೊತೆ ಪೈಪೋಟಿ ನಡೆಸಲಿದೆ.

ಆಸ್ಟ್ರೇಲಿಯಾ  
ರಿಕಿ ಪಾಂಟಿಂಗ್ (ನಾಯಕ), ಮೈಕಲ್ ಕ್ಲಾರ್ಕ್, ಮೈಕ್ ಹಸ್ಸಿ, ಶೇನ್ ವ್ಯಾಟ್ಸನ್, ಬ್ರಾಡ್ ಹಡಿನ್, ಕ್ಯಾಮರೂನ್ ವೈಟ್, ಕಾಲಮ್ ಫರ್ಗ್ಯುಸನ್, ಡೇವಿಡ್ ಹಸ್ಸಿ, ಟಿಮ್ ಪೈನ್, ಸ್ಟೀವ್ ಸ್ಮಿತ್, ಜಾನ್ ಹೇಸ್ಟಿಂಗ್ಸ್, ಮಿಷೆಲ್ ಜಾನ್ಸನ್, ಜಾಸನ್ ಕ್ರೇಜಾ, ಬ್ರೆಟ್ ಲೀ, ಶಾನ್ ಟೇಟ್.

 ಕೀನ್ಯಾ
ಜಿಮ್ಮಿ ಕಮಾಂಡೆ (ನಾಯಕ), ಸೆರೆನ್ ವಾಟರ್ಸ್‌, ಅಲೆಕ್ಸ್ ಒಬಾಂಡ, ಡೇವಿಡ್ ಒಬುಯಾ, ಕಾಲಿನ್ಸ್ ಒಬುಯಾ, ಸ್ಟೀವ್ ಟಿಕೋಲೊ, ತನ್ಮಯ್ ಮಿಶ್ರಾ, ರಾಕೆಪ್ ಪಟೇಲ್, ಮೌರಿಸ್ ಔಮಾ, ಥಾಮಸ್ ಒಡೊಯೊ, ನೆಹೆಮಿಯಾ ಒದಿಯಾಂಬೊ, ಎಲಿಜಾ ಒಟೀನೊ, ಪೀಟರ್ ಒಂಗೊಂಡೊ, ಶೆಮ್ ನೋಚೆ, ಜೇಮ್ಸ್ ನೋಚೆ.

ಅಂಪೈರ್: ಅಸಾದ್ ರವೂಫ್ ಮತ್ತು ರಿಚರ್ಡ್ ಕೆಟೆಲ್‌ಬರೋ
ಮೂರನೇ ಅಂಪೈರ್: ಬಿಲಿ ಬೌಡೆನ್, ಮ್ಯಾಚ್ ರೆಫರಿ: ಆ್ಯಂಡಿ ಪೈಕ್ರಾಫ್ಟ್
ಪಂದ್ಯ: ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT