ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಿಂಟಲ್‌ಗೆ 6 ಕೆ.ಜಿ. ಕಡಿತ: ರೈತರ ಆಕ್ರೋಶ

ದಾವಣಗೆರೆಯಲ್ಲಿ ಕೆಲ ಕಾಲ ಖರೀದಿ ಪ್ರಕ್ರಿಯೆ ಸ್ಥಗಿತ
Last Updated 10 ಜನವರಿ 2014, 8:50 IST
ಅಕ್ಷರ ಗಾತ್ರ

ದಾವಣಗೆರೆ: ಗುಣಮಟ್ಟ ಸರಿ ಇಲ್ಲ ಎನ್ನುವ ಖರೀದಿ ಕೇಂದ್ರದ ಸಿಬ್ಬಂದಿ, ಕ್ವಿಂಟಲ್‌ ಮೆಕ್ಕೆಜೋಳಕ್ಕೆ ತಲಾ 6 ಕೆ.ಜಿ. ಕಡಿಮೆ ತೂಕ ನಮೂದು ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ತುರ್ಚಘಟ್ಟಕ್ಕೆ ಸಾಗಿಸಲು ಬಾಡಿಗೆ ನೀಡಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟಿಸಿದ ಘಟನೆ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಗುರುವಾರ ನಡೆಯಿತು.

ನೂರಕ್ಕೂ ಹೆಚ್ಚು ಟ್ರ್ಯಾಕ್ಟರ್‌ ಹಾಗೂ ಲಾರಿಗಳು ಎಪಿಎಂಸಿ ಪ್ರಾಂಗಣದಲ್ಲಿ ಸಾಲಾಗಿ ನಿಂತಿದ್ದವು. ಉತ್ಪನ್ನ ಖರೀದಿ ವೇಳೆ, ಗುಣಮಟ್ಟದ ನೆಪವೊಡ್ಡಿ ಕ್ವಿಂಟಲ್‌ಗೆ 6 ಕೆ.ಜಿ. ತೂಕ ಕಡಿತಗೊಳಿಸಲಾಗುತ್ತಿದೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಚೆನ್ನಾಗಿರುವ ಮೆಕ್ಕೆಜೋಳಕ್ಕೂ ಈ ಮಾನದಂಡ ಅನುಸರಿಸಲಾಗುತ್ತಿದೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಖರೀದಿ ಕೇಂದ್ರದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ, ಕೆಲ ರೈತರು ಮೆಕ್ಕೆಜೋಳದ ಚೀಲವನ್ನು ಖರೀದಿ ಕೇಂದ್ರದ ಬಾಗಿಲಿಗೆ ಹಾಕಿದ್ದಾರೆ. ಇದರಿಂದ ಬೆದರಿದ ಸಿಬ್ಬಂದಿ, ಕೇಂದ್ರಕ್ಕೆ ಬೀಗ ಹಾಕಿ ಜಾಗ ಖಾಲಿ ಮಾಡಿದ್ದಾರೆ. ಇದರಿಂದ ಕುಪಿತರಾದ ರೈತರು ಪ್ರತಿಭಟನೆ ನಡೆಸಿದರು.

4–5 ದಿನಗಳಿಂದ ಇಲ್ಲಿಗೆ ಬಂದು ಕಾಯುತ್ತಿದ್ದೇವೆ. ಖರೀದಿ ಮಾಡದೇ ಸತಾಯಿಸಲಾಗುತ್ತಿದೆ. ಹಲವು ನೆಪ ಹೇಳಲಾಗುತ್ತಿದೆ. ಇದು ಸರಿಯಲ್ಲ ಎನ್ನುವುದು ರೈತರ ವಾದ. ಇದೇ ವೇಳೆ, ತುರ್ಚಘಟ್ಟದಲ್ಲಿರುವ ಗೋದಾಮಿಗೆ ಸಾಗಿಸಲು ತಗುಲುವ ಬಾಡಿಗೆ ವೆಚ್ಚವನ್ನು ನಿಗಮವೇ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆಗಾಗಲೇ ಸ್ಥಳಕ್ಕೆ ಬಂದಿದ್ದ ಪೊಲೀಸರು ಮನವೊಲಿಕೆಗೆ ಯತ್ನಿಸಿದರು. ಸಿಪಿಐ ರೇವಣ್ಣ, ಉಗ್ರಾಣ ನಿಗಮದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಕರೆಸಿದರು.

ರೇವಣ್ಣ ಸಮ್ಮುಖದಲ್ಲಿ ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ತಿಮ್ಮಣ್ಣ ಹಾಗೂ ನೋಡೆಲ್‌ ಅಧಿಕಾರಿ ವಿ.ಡಿ.ಜೈನ್ ರೈತರ ಸಮಸ್ಯೆ ಆಲಿಸಿದರು.

‘ಮೆಕ್ಕೆಜೋಳದ ಗುಣಮಟ್ಟ ಸರಿ ಇಲ್ಲದಿದ್ದಲ್ಲಿ ತಿರಸ್ಕರಿಸಲಿ. ಸಾರಾಸಗಟಾಗಿ ಎಲ್ಲವನ್ನೂ ತಿರಸ್ಕರಿಸಬಾರದು. ಲೋಡ್‌ ಹಾಗೂ ಅನ್‌ಲೋಡ್‌ ಅನ್ನು ತ್ವರಿತಗತಿಯಲ್ಲಿ ನಡೆಸಬೇಕು’ ಎಂಬ ರೈತರ ಬೇಡಿಕೆಗೆ  ಅಧಿಕಾರಿಗಳು ಒಪ್ಪಿದರು.

ಬಾಡಿಗೆ ನೀಡಲು ನಿಗಮಕ್ಕೆ ಅವಕಾಶವಿಲ್ಲದ ಕಾರಣ ರೈತರೇ ಗೋದಾಮುಗಳಿಗೆ ಮೆಕ್ಕೆಜೋಳ ಸಾಗಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ರೈತರು ಒಪ್ಪಿದರು. ನಂತರ, ಕೇಂದ್ರದ ಬಾಗಿಲು ತೆರೆದು ಖರೀದಿ ಪ್ರಕ್ರಿಯೆ ಆರಂಭಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT