ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಣಕ್ಷಣದ ಶಿಕ್ಷಣ!

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹೊಸ ಹೊಸ ವಿಚಾರಗಳ ಕಲಿಯಬೇಕೆಂಬ ಮನ/
ಪಸರಿಸಿ ಹುದಾವನೊಳೊ ದಿಟದಿ ಬೆಳೆಯುವನು//
ಕೊಸರಾಡಿ ಕೈ ಚೆಲ್ಲಿ, ಚೇತನದ ಕುಗ್ಗಿಸದೆ/
ಹೊಸಬನಾಗುವ ನಿತ್ಯ- ನವ್ಯ ಜೀವಿ//

ಕೆ.ವಿ.ರಾಜಲಕ್ಷ್ಮಿ (ಅಲಿಯಾಸ್ ರಾಜಿ) ನನ್ನ ಬಾಲ್ಯ ಸ್ನೇಹಿತೆ. ಭಾರತ ಸಂಚಾರ ನಿಗಮ ಸಂಸ್ಥೆಯ ಹಣಕಾಸು ವಿಭಾಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ, ಕಳೆದ ವರ್ಷವಷ್ಟೆ ಸ್ವಯಂ ನಿವೃತ್ತಿ ಪಡೆದಿದ್ದಾಳೆ. ಕನ್ನಡದಲ್ಲಿ ಅನೇಕ ಕತೆಗಳನ್ನು ರಚಿಸಿ ಒಳ್ಳೆಯ ಕತೆಗಾರ್ತಿ ಎಂಬ ಮನ್ನಣೆ ಪಡೆದಿದ್ದಾಳೆ.

ತಿಂಗಳುಗಳ ಕೆಳಗೆ ಅವಳೊಡನೆ ಮಾತನಾಡುವಾಗ ಅವಳ ನಿವೃತ್ತಿ ಜೀವನ ಹೇಗಿದೆ ಎಂದು ವಿಚಾರಿಸಿದ್ದೆ. ಬಹುಶಃ ಅವಳಿಗೀಗ ಕತೆ ಬರೆಯಲು ಬೇಕಾದ ಸಮಯಾವಕಾಶ ಇರಬೇಕೆಂದು ಎಣಿಸಿದ್ದೆ. ಅವಳು ಹೇಳಿದಳು-`ನನಗೆ ಮೊದಲಿನಿಂದಲೂ ಲಾಯರ್ ಆಗಬೇಕೆಂಬ ಆಸೆ ಇತ್ತು.

ಹಾಗಾಗಿ ಈಗ ಕಾನೂನು ಡಿಗ್ರಿ ಪಡೆಯಲೆಂದು ಮತ್ತೆ ಕಾಲೇಜು ಸೇರಿದ್ದೇನೆ. ದಿನವೂ ಕಾಲೇಜಿಗೆ ಹೋಗುವುದು, ನನ್ನ ಮಕ್ಕಳಿಗಿಂತ ಕಿರಿಯರಾದವರೊಡನೆ ಕ್ಲಾಸಿನಲ್ಲಿ ಕೂರುವುದು, ಹೊಸ ವಿಷಯಗಳ ಅಧ್ಯಯನ, ಹೀಗೆ ದಿನಗಳು ಸಾಗುತ್ತಿವೆ~ ಎಂದು ಸಂಭ್ರಮಿಸಿದ್ದಳು.

ಕಳೆದ ವಾರವಷ್ಟೇ ಊಟದ ವೇಳೆ ನನ್ನ ಮುಂದೆ ಬಂದು ಕುಳಿತವನು ನನ್ನ ಕಿರಿಯ ಸಹೊದ್ಯೋಗಿ ರಾಂಕ. ವಯಸ್ಸು ಮೂವತ್ತನಾಲ್ಕು. ನಮ್ಮ ಕಂಪೆನಿಯ ಎಂಜಿನಿಯರಿಂಗ್ ವಿಭಾಗದಲ್ಲಿ ಮೇಧಾವಿ ಎನ್ನಿಸಿಕೊಂಡಿರುವ ನುರಿತ ಸಂಶೋಧಕ.

ಈಗ ಸ್ಥಳೀಯ ಐ.ಐ.ಎಂ.ನಲ್ಲಿ ವಾರಾಂತ್ಯದ ಮ್ಯಾನೇಜ್‌ಮೆಂಟ್ ಶಿಕ್ಷಣ ಪಡೆಯುತ್ತಿದ್ದೇನೆ ಎಂದು ತಿಳಿಸಿದ. `ಹಾಗಾದರೆ ಸಂಶೋಧನೆ ಕೆಲಸವನ್ನು ತೊರೆದು ಮ್ಯಾನೇಜ್‌ಮೆಂಟ್ ಕೆಲಸದ ಕಡೆಗೆ ಬರುವ ಇರಾದೆಯೆ?~ ಎಂದು ವಿಚಾರಿಸಿದ್ದೆ. ಅದಕ್ಕವನು- `ಇಲ್ಲ ಸತ್ಯೇಶ್, ಎಂಜಿನಿಯರಿಂಗ್‌ನಲ್ಲೇ ಮುಂದುವರೆಯುತ್ತೇನೆ.

ಆದರೆ ನಾನೀ ಈ ಕೋರ್ಸ್ ಮಾಡುತ್ತಿರುವುದು ಮ್ಯಾನೇಜ್‌ಮೆಂಟಿನ ಒಳಪದರಗಳನ್ನು ಸ್ಥೂಲವಾಗಿ ಅರ್ಥೈಸಿಕೊಳ್ಳಲು. ಹಾಗಾದಾಗ ನನ್ನದೇ ಕೆಲಸವನ್ನು ಮ್ಯಾನೇಜ್‌ಮೆಂಟಿನ ಒಳಗಣ್ಣಿನಿಂದ ಪರಾಮರ್ಶಿಸುವ ಕಲೆ ಒದಗಿಬಂದು ನಾನು ನನ್ನದೇ ಎಂಜಿನಿಯರಿಂಗ್ ಕೆಲಸದಲ್ಲಿ ಇನ್ನೂ ಕ್ರಿಯಾತ್ಮಕನಾದೇನು ಎಂಬ ವಿಚಾರ ನನ್ನದು~ ಎಂದು ವಿವರಿಸಿದ್ದ.

`ಭೇಷ್~ ಎಂದಷ್ಟೇ ಹೇಳಿದ್ದೆನಾದರೂ, ಆ ನನ್ನ ಒಂದೇ ಒಂದು ಶಬ್ದದಲ್ಲಿ ಅವನ ಬಗ್ಗೆ ನನಗಿದ್ದ ಅಭಿಮಾನವನ್ನೆಲ್ಲ ವ್ಯಕ್ತಪಡಿಸಿದ್ದೆ. ಮೇಲಿನ ಎರಡೂ ಸನ್ನಿವೇಶಗಳನ್ನು ನೋಡಿ. ನನ್ನ ಸ್ನೇಹಿತೆ ರಾಜಿಗೆ ಸಂಪೂರ್ಣ ಹೊಸತೊಂದನ್ನು ಕಲಿಯುವ ಆಸೆ.

ತಾನು ಇದುವರೆಗೂ ಮಾಡುತ್ತ ಬಂದಿರುವ ತಿಂಡಿತಿನಿಸುಗಳನ್ನೆಲ್ಲ ಕ್ಷಣಕಾಲ ಮರೆತು ತನ್ನ ಅಡುಗೆ ಮನೆಯಲ್ಲಿ ಸಂಪೂರ್ಣ ಹೊಸತಾದ ರುಚಿಯೊಂದರ ಅನ್ವೇಷಣೆಯಲ್ಲಿ ತೊಡಗುವುದು ಅವಳ ಬಯಕೆ. ಆ ಅವಶ್ಯಕತೆಯ ಈಡೇರಿಕೆಯಲ್ಲಿಯೇ ಅವಳ ಪರಿಶ್ರಮ.

ಇನ್ನು ರಾಂಕನ ವಿಷಯ. ತಾನು ಮಾಡುತ್ತಿರುವ ಕೆಲಸದಲ್ಲಿಯೇ ಮುಂದುವರೆಯುವ ಬಯಕೆ ಇದ್ದರೂ ಆ ಕೆಲಸಕ್ಕೆ ಪೂರಕವಾಗಬಲ್ಲ ಮತ್ತೊಂದು ಹೊಸ ವಿಷಯವನ್ನು ಕಲಿತಿದ್ದೇ ಆದರೆ, ತಾನು ತನ್ನ ಎಂದಿನ ಕೆಲಸದಲ್ಲಿ ಇನ್ನೂ ಹೆಚ್ಚಿನ ದಕ್ಷತೆಯಿಂದ ಮುಂದುವರೆಯಬಹುದೆಂಬ ವಿಚಾರ. ಆ ಅವಶ್ಯಕತೆಯ ಈಡೇರಿಕೆಯಲ್ಲಿಯೇ ಅವನ ಪರಿಶ್ರಮ.

ಯಾವುದೇ ಕಂಪೆನಿಯೊಂದನ್ನು ತೆಗೆದುಕೊಳ್ಳಿ. ಅಲ್ಲಿನ ನೌಕರರನ್ನೆಲ್ಲಾ ಒಟ್ಟಾರೆ ಮೂರು ಗುಂಪುಗಳಲ್ಲಿ ವಿಂಗಡಿಸಬಹುದು. ಮೊದಲೆರಡು ಗುಂಪುಗಳು ಮೇಲೆ ಹೇಳಿರುವ ಎರಡು ತೆರನಾದ ವ್ಯಕ್ತಿತ್ವವನ್ನು ಪ್ರತಿಬಿಂಬಿಸಿದರೆ ಮೂರನೆಯದಾದ ಅತಿ ದೊಡ್ಡ ಗುಂಪು ಮಾತ್ರ `ವೃತ್ತಿ ಜೀವನದ ಮೊದಲ ದಿನ ಮಾಡಿದ್ದನ್ನೇ ನಿವೃತ್ತಿಯ ದಿನದಂದೂ ಮಾಡಿ ಮುಗಿಸಿಬಿಡುವ~ ಸ್ಥಿತಪ್ರಜ್ಞರು.

`ಬೋರ್ಡ್‌ರೂಮಿನ ಸುತ್ತಮುತ್ತ~ಲಿನ ಅಧಿಕಾರಿಗಳಿಗೆ ಈ ಮೂರನೆಯ ಗುಂಪು ಎಂದಿಗೂ ತೊಡಕಾಗದು. ಆ ಗುಂಪಿನಿಂದ ಆಗಾಗ ಕೇಳಿಬರುವ ಮನಸ್ತಾಪದ ಕೂಗುಗಳನ್ನು ಹೊರತುಪಡಿಸಿದರೆ ಸರ್ವೇಸಾಮಾನ್ಯ ಈ ಗುಂಪಿನ ಮಂದಿಯೆಲ್ಲ ಪೂರ್ಣತೃಪ್ತರು. ಒಂದು ರೀತಿಯಲ್ಲಿ ಅವರೆಲ್ಲ `ಔಟೂ ಆಗದ ರನ್ನೂ ಮಾಡದ~ ವಿಶಿಷ್ಠ ಕ್ರಿಕೆಟಿಗರು!

ಆದರೆ `ಬೋರ್ಡ್‌ರೂಮಿನ ಸುತ್ತಮುತ್ತ~ ಮೊದಲೆರಡು ಗುಂಪುಗಳಿಗೇ ಪ್ರಾಮುಖ್ಯತೆ. ಇವರನ್ನು ಸರಿಯಾಗಿ ಸಾಕಿದರೆ ಕಂಪೆನಿಗೆ ಅದೆಷ್ಟು ಲಾಭವಿದೆಯೋ ಹಾಗೆಯೇ ಇವರನ್ನು ಸರಿಯಾಗಿ ನೂಕಿದರೆ ಕಂಪೆನಿಗೆ ಅಷ್ಟೇ ನಷ್ಟ ಕೂಡ ಸಂಭವ. ಅಂತೆಯೇ ಕಂಪೆನಿ ಇವರನ್ನು ಸಂಭಾಳಿಸಲು ರೂಪಿಸಿಕೊಳ್ಳುವ ರಚನಾತ್ಮಕವಾದ ಕಾರ್ಯಕ್ರಮಗಳ ಮೇರೆಗೆ ಈ ಎರಡೂ ಗುಂಪುಗಳ ಪಾತ್ರ.

ಮಾಡುವ ಕೆಲಸವನ್ನೇ ಇನ್ನೂ ಚೆನ್ನಾಗಿ ಮಾಡಬೇಕು ಅಥವಾ ಇದನ್ನು ಹೊರತಾಗಿ ಇನ್ನೇನಾದರೂ ಮಾಡಬೇಕು ಎಂಬ ಎರಡೂ ಪ್ರಜ್ಞೆಗಳು ಒಬ್ಬನಲ್ಲಿರುವ ಕ್ರಿಯಾತ್ಮಕತೆಯ ಸಂಕೇತ. ಅವನ ಈ ತುಡಿತ ಈಡೇರದಿದ್ದಾಗ ಆತನಿಗೆ ಗೊತ್ತು - `ಇನ್ನು ನನ್ನ ಬೆಳವಣಿಗೆ ಇಲ್ಲ~ ಎಂದು. ಆದ್ದರಿಂದ ಆತ ತನ್ನ ಈ ಬಯಕೆಯನ್ನು ಈಡೇರಿಸಿಕೊಳ್ಳಲು ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಪ್ರಯತ್ನಗಳ ಬಾಣ ಪ್ರಯೋಗ ಮಾಡುತ್ತಾನೆ.

ತನ್ನ ಕಂಪೆನಿ ಇದಕ್ಕೆ ಸ್ಪಂದಿಸದಿದ್ದಾಗ ಆ ಕಂಪೆನಿಯನ್ನೇ ತೊರೆಯುತ್ತಾನೆ. ತನ್ನ ಕೆಲಸದ ರೂಪು ರೇಖೆಯೇ ಇದಕ್ಕೆ ಸ್ಪಂದಿಸದಿದ್ದಾಗ ಅಂತಹ ಕೆಲಸವನ್ನೇ ತೊರೆದು ಅಥವಾ ಅಂತಹ ಕೆಲಸದಿಂದ ಕೆಲಕಾಲದ ವಿರಾಮ ಪಡೆದು ತನ್ನ ಗುರಿಯ ಬೆನ್ನು ಹತ್ತುತ್ತಾನೆ.

ಬೋರ್ಡ್‌ರೂಮಿನ ಸುತ್ತಮುತ್ತಲಿನ ಮಂದಿ ಇಂತಹವರನ್ನು ಮೊದಲಲ್ಲೇ ಗುರುತಿಸಬೇಕು. ಅವರ ಜ್ಞಾನದಾಹವನ್ನು ಆದಷ್ಟು ಮಟ್ಟಿಗೆ ಕಂಪೆನಿಯ ಯಾವುದೇ ವ್ಯವಹಾರಕ್ಕೂ ಧಕ್ಕೆ ಬಾರದ ಹಾಗೆ ಈಡೇರಿಸುವತ್ತ ಪುಟ್ಟದಾದರೂ ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕು.

ಏಕೆಂದರೆ, ಈ ಪ್ರಕ್ರಿಯೆಯಿಂದ ಹೊರಬರುವ ಆತ ಹೊಸಬನಾಗಿರುತ್ತಾನೆ. ಅವನಲ್ಲಿ ಹೊಸ ಹೊಸ ವಿಚಾರಗಳಿರುತ್ತವೆ. ಅದರ ಜತೆಯಲ್ಲೇ ಅವನ ಅನುಭವವೂ ಕೂಡಿಕೊಂಡು ಆತ ತನ್ನ ಕೆಲಸದಲ್ಲಿ ದಕ್ಷವಾಗಿ ಮೂಡಿಬರುತ್ತಾನೆ. ಇದರಿಂದ ಕಂಪೆನಿಗೇ ಲಾಭ ಎಂಬ ಸತ್ಯ ತಕ್ಷಣಕ್ಕೆ ಗೋಚರಿಸದಿದ್ದರೂ ಒಂದು ಹಂತದಲ್ಲಿ ಘನೀಭವಿಸುವುದಂತೂ ಸ್ಪಷ್ಟ.

ಎಲ್ಲ ವೇಳೆಗಳಲ್ಲೂ ಅತ್ಯಂತ ಪರಿಣಾಮಕಾರಿಯಾದ ತರಬೇತಿ ನೀಡುವುದು ಅಥವಾ ತರಬೇತಿಗೆ ಅನುವು ಮಾಡಿಕೊಡುವುದು ಕಂಪೆನಿ ಅಂತಹವರನ್ನು ಉಳಿಸಿಕೊಳ್ಳಲು ಹಾಗೂ ಬೆಳೆಸಿಕೊಳ್ಳಲು ಮಾಡಬೇಕಾದ ಸರಳ ಹಾಗೂ ಆದ್ಯ ಕರ್ತವ್ಯ.

ತರಬೇತಿಗಳಲ್ಲಿ ಎರಡು ವಿಧ. ಮೊದಲನೆಯದು ಕೆಲಸದ ವಿಷಯವಾಗಿಯೇ ಹೆಚ್ಚು ಹೆಚ್ಚು ಶಿಕ್ಷಣ ನೀಡುವುದು. ಎರಡನೆಯದು ಕೆಲಸಕ್ಕೆ ನೇರ ಸಂಬಂಧವಿಲ್ಲದಿದ್ದರೂ ಅದಕ್ಕೆ ಇನ್ನಾವುದೋ ರೀತಿಯಲ್ಲಿ ಪೂರಕವಾಗಬಲ್ಲ ಶಿಕ್ಷಣವನ್ನು ಹೊಂದಿಸುವುದು. ಕೆಲವು ಕಂಪೆನಿಗಳಾದರೂ ಮೊದಲನೆಯ ಶಿಕ್ಷಣದತ್ತ ಒಲವು ತೋರಿವೆ.

ಆದರೆ ಎರಡನೆಯ ಶಿಕ್ಷಣವನ್ನು ನೀಡುವತ್ತ ಯಾವ ಕಂಪೆನಿಯೂ ಮುತುವರ್ಜಿ ವಹಿಸಿಲ್ಲ ಎಂಬುವುದೇ ವಾಸ್ತವ! ಯಾವ ಕಂಪೆನಿಯಲ್ಲಿ ಪ್ರತ್ಯೇಕವಾದ ಹಾಗೂ ಉತ್ತಮ ಗುಣಮಟ್ಟದ ತರಬೇತಿ ಶಿಕ್ಷಣ ವಿಭಾಗ ಇಲ್ಲವೋ ಅಥವಾ ಯಾವ ಕಂಪೆನಿಗೆ ಮೇಲೆ ತಿಳಿಸಿದ ಎರಡೂ ರೀತಿಯ ಶಿಕ್ಷಣವನ್ನು ಹೊಂದಿಸಬೇಕೆಂಬ ಆದ್ಯತೆ ಇಲ್ಲವೋ, ಅಲ್ಲೆಲ್ಲ ಈ ಲೇಖನದ ಮೂಲಕ ನಾನು ಹೇಳುತ್ತಿರುವ ವಿಚಾರಕ್ಕೆ ಅರ್ಥವಿರುವುದಿಲ್ಲ.

ಆದರೆ ಯಾವ ಕಂಪೆನಿಗಳಲ್ಲಿ ಕಾಲಕಾಲದ ಶಿಕ್ಷಣಕ್ಕೆ ಹಾಗೂ ಪ್ರಸ್ತುತವಾದ ತರಬೇತಿಗೆ ಬೆಲೆ ಉಂಟೋ ಅಲ್ಲೆಲ್ಲ ನೌಕರರು ಸರ್ವದಾ ಕ್ರಿಯಾತ್ಮಕವಾಗಿ ದುಡಿಯುತ್ತಾರೆಂಬುದಂತೂ ಸತ್ಯ. ಅವರೆಲ್ಲ `ಔಟ್ ಆಗದೆ ರನ್ ಗಳಿಸುವ~ ವಿಶಿಷ್ಠ ಕ್ರಿಕೆಟಿಗರಾಗಿರುತ್ತಾರೆ ಎಂಬುದರಲ್ಲಿ ಸಂಶಯ ಬೇಡ.

ನನ್ನ ವೃತ್ತಿ ಜೀವನದಲ್ಲಿ ನಾನು ಐ.ಬಿ.ಎಂ. ಕಂಪೆನಿಯಲ್ಲಿ ಕೆಲ ಕಾಲ ದುಡಿದಿದ್ದೇನೆ. ಪ್ರಾಯಶಃ ನಾನು ಐ.ಬಿ.ಎಂ.ನಲ್ಲಿದ್ದಾಗ ಕಲಿತಷ್ಟು ಹೊಸ ವಿಚಾರಗಳನ್ನು ನಾನಿನ್ನೆಲ್ಲೂ ಕಲಿಯಲಿಲ್ಲ. ಕಾರಣ ಇಷ್ಟೆ. ಅಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆಯಾದರೂ ಯಾವುದಾದರೂ ವಿಷಯವಾಗಿ ಕಂಪೆನಿಯ ಸ್ವಯಂ ತರಬೇತಿ ಶಿಬಿರವಾಗಲೀ ಅಥವಾ ಹೊರಗಿನ ವೃತ್ತಿ ತಜ್ಞರಿಂದ ಕಾರ್ಯಗಾರಗಳಾಗಲೀ ಜರುಗುತ್ತಿದ್ದವು.

ಅವುಗಳಲ್ಲಿ ಭಾಗವಹಿಸುವಂತೆ ನೌಕರರನ್ನು ಕಂಪೆನಿ ಪ್ರೇರೇಪಿಸುತ್ತಿತ್ತು. ಇದರಿಂದ ಸಮಯ ಹಾಳು ಎಂದು ಅಲ್ಲಿ ಯಾರೂ ನಂಬಿದಂತಿರಲಿಲ್ಲ. ಬದಲಾಗಿ ಇಂತಹ ಪ್ರತಿ ಅನುಭವದಿಂದ ನೌಕರರ ಸಂಪೂರ್ಣ ವ್ಯಕ್ತಿತ್ವ ವಿಕಸನ ಹೊಂದಿ ಅಂತಹ ನೌಕರರಿಂದ ಮುಂದೆ ಕಂಪೆನಿಗೇ ಲಾಭ ಎಂದು ಬೋರ್ಡ್‌ರೂಮಿನ ಸುತ್ತಮುತ್ತಲಿನವರು ನಂಬಿದ್ದರು.

ಇಂದಿಗೂ ಐ.ಬಿ.ಎಂ. ವಿಶ್ವದ ಅಗ್ರಗಣ್ಯ ಕಂಪೆನಿಗಳಲ್ಲಿ ಒಂದಾಗಿ ತಲೆ ಎತ್ತಿ ನಿಂತಿದ್ದರೆ, ಸ್ವಲ್ಪಮಟ್ಟಿಗಾದರೂ ಶಿಕ್ಷಣ ಹಾಗೂ ತರಬೇತಿ ಬಗೆಗಿನ ಅದರ ಪ್ರಾಮಾಣಿಕ ನಿಲುವು ಕಾರಣ ಎಂಬುದೇ ನನ್ನ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT