ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮಾದಾನ ವಿಳಂಬ: ಸುಪ್ರೀಂಕೋರ್ಟ್ ಅತೃಪ್ತಿ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗಲ್ಲುಶಿಕ್ಷೆಗೆ ಒಳಗಾದವರ ಕ್ಷಮಾದಾನ ಅರ್ಜಿಯನ್ನು ಇತ್ಯರ್ಥಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸಿರುವ ವಿಳಂಬ ನೀತಿಗೆ ಆತಂಕ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಬಾಕಿ ಇರುವ ಕ್ಷಮಾದಾನ ಅರ್ಜಿಗಳ ಸಂಪೂರ್ಣ ವಿವರಗಳನ್ನು ನೀಡುವಂತೆ ಸೂಚಿಸಿದೆ.

ಎಲ್ಲ ರಾಜ್ಯಗಳ ಗೃಹ ಕಾರ್ಯದರ್ಶಿಗಳು 3 ದಿನಗಳ ಒಳಗಾಗಿ ಕ್ಷಮಾದಾನ ಅರ್ಜಿಗಳಿಗೆ ಸಂಬಂಧಿಸಿದ ಕಡತಗಳನ್ನು ಕೇಂದ್ರ ಗೃಹ ಕಾರ್ಯದರ್ಶಿಗೆ ಕಳುಹಿಸಬೇಕು, ನಂತರ ಅವರು ಅದನ್ನು  ಮತ್ತು ಕೇಂದ್ರದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಕಡತಗಳನ್ನು ಸಲ್ಲಿಸಬೇಕೆಂದು ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ  ಮತ್ತು ಎಸ್. ಜೆ. ಮುಖ್ಯೋಪಾಧ್ಯಾಯ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.

 ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರಗಳು ಕ್ಷಮಾದಾನ ಅರ್ಜಿಗಳ ದಾಖಲೆಗಳನ್ನು ನೇರ ನ್ಯಾಯಾಲಯಕ್ಕೆ ಕಳುಹಿಸಬಾರದು ಎಂದೂ ಸ್ಪಷ್ಟಪಡಿಸಿದೆ.

ಕ್ಷಮಾದಾನ ಅರ್ಜಿಯನ್ನು ವಿಲೇವಾರಿ ಮಾಡಲು ಎಂಟರಿಂದ 11 ವರ್ಷಗಳು ತೆಗೆದುಕೊಂಡ ಉದಾಹರಣೆಗಳಿವೆ. ಅರ್ಜಿ ವಿಲೇವಾರಿಗೆ ಇಷ್ಟೊಂದು ದೀರ್ಘ ಅವಧಿ ಅಗತ್ಯವಿದೆಯೇ ಎಂದು ನ್ಯಾಯಪೀಠವು ಖಾರವಾಗಿ ಪ್ರಶ್ನಿಸಿದೆ.

ಮರಣದಂಡನೆಗೆ ಒಳಗಾದವರು ಪದೇ ಪದೇ ಅರ್ಜಿ ಸಲ್ಲಿಸುವುದರಿಂದ ವಿಳಂಬವಾಗುತ್ತಿದೆ ಎಂಬ ಕೇಂದ್ರ ಸರ್ಕಾರದ ಸಮರ್ಥನೆಯನ್ನು ಒಪ್ಪಿಕೊಳ್ಳದ ನ್ಯಾಯಪೀಠವು, ಪದೇ ಪದೇ ಅರ್ಜಿ ಸಲ್ಲಿಸುವುದರ ಬಗ್ಗೆ ಯಾವುದೇ ನಿಷೇಧವಿಲ್ಲ ಎಂದು ಸ್ಪಷ್ಟಪಡಿಸಿದೆ.

1993ರಲ್ಲಿ ಬಾಂಬ್ ಸ್ಫೋಟಿಸಿ 9 ಜನರ ಹತ್ಯೆಗೆ ಕಾರಣನಾದ ಭಯೋತ್ಪಾದಕ ದೇವೇಂದ್ರ ಪಾಲ್ ಸಿಂಗ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಪೀಠ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಡತ ಸಲ್ಲಿಸಲು ಆದೇಶಿಸಿದೆ.

ಕ್ಷಮಾದಾನ ಅರ್ಜಿಯನ್ನು ಇತ್ಯರ್ಥ ಮಾಡಲು ಭಾರಿ ವಿಳಂಬ ಮಾಡುತ್ತಿರುವುದರಿಂದ ಮತ್ತು ಮಾನಸಿಕ ಆರೋಗ್ಯ ಸರಿ ಇರದ ಕಾರಣ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಿಸಬೇಕು ಎಂದು ಸಿಂಗ್ ಮನವಿ ಮಾಡಿದ್ದಾನೆ.

ತಮ್ಮ ಕಕ್ಷಿದಾರರ ಕ್ಷಮಾದಾನ ಅರ್ಜಿಯು 2002ರಿಂದ ಬಾಕಿ ಇರುವುದರಿಂದ ಅವರನ್ನು ಅಮಾನವೀಯವಾಗಿ ಮತ್ತು ಕ್ರೂರವಾಗಿ ನಡೆಸಿಕೊಂಡಂತಾಗಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಬೇಕು ಎಂದು ಕೋರಿ ಸಿಂಗ್ ಎರಡು ಬಾರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದ ನಂತರ 2003ರಲ್ಲಿ ರಾಷ್ಟ್ರಪತಿ ಅವರಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದ. ಎಂಟು ವರ್ಷಗಳ ನಂತರ ರಾಷ್ಟ್ರಪತಿ ಅವರು ಈ ಅರ್ಜಿಯನ್ನು ತಿರಸ್ಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT