ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮಿಸಿ, ನೀವೇನಾ ಪ್ರಧಾನಿ?

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್/ಪಿಟಿಐ): ಕ್ಷಮಿಸಿ, ನೀವೇನಾ ಪ್ರಧಾನಿ?ಮೆಟ್ರೊ ರೈಲಿನಲ್ಲಿ ತಮ್ಮಂದಿಗೆ ಪ್ರಯಾಣ ಮಾಡುತ್ತಿದ್ದ ಇಂಗ್ಲೆಂಡಿನ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರೊಂದಿಗೆ 27 ವರ್ಷದ ಭಾರತೀಯ ಮಹಿಳೆ ಸಂಯೋಗಿತಾ ಮೈಯರ್ ಈ ಮಾತನ್ನು ದೃಢಪಡಿಸಿಕೊಳ್ಳುವಾಗ ನಿಜವಾಗಿಯೂ ಆಕೆ ಅವರನ್ನು ಪ್ರಧಾನಿ ಎಂದು ಭಾವಿಸಿರಲೇ ಇಲ್ಲ.

ಡೇವಿಡ್ ಕ್ಯಾಮರಾನ್ ತಮ್ಮ ಅಂಗರಕ್ಷಕನೊಂದಿಗೆ ವೆಸ್ಟ್ ಮಿನಿಸ್ಟರ್ ನಿಲ್ದಾಣದಲ್ಲಿ ಮೆಟ್ರೊ ರೈಲನ್ನು ಏರಿದರು. ಬೋಗಿಯಲ್ಲಿ ತಮ್ಮ ಬಳಿ ನಿಂತಿದ್ದ ಸಂಯೋಗಿತಾ ಮೈಯರ್ ಅವರ 3 ತಿಂಗಳ ಪುಟ್ಟ ಕೂಸನ್ನು ನೋಡಿದ ಕ್ಯಾಮರಾನ್ `ಇದು ನಿಮ್ಮ ಮಗುವೇ~ ಎಂದು ಪ್ರಶ್ನಿಸಿದರು.

ಹೌದು, ಈಕೆ ಸಂಯಮ ಎಂದರು ಸಂಯೋಗಿತಾ. `ನಿಜವಾಗಿಯೂ ತುಂಬಾ ಚೆನ್ನಾಗಿದ್ದಾಳೆ~ ಎಂದು ಪ್ರಧಾನಿ ಮೆಚ್ಚುಗೆ ಸೂಚಿಸಿದರು. ಸಂಯೋಗಿತಾ ಕೊಂಚ ತಬ್ಬಿಬ್ಬಾಗಿ, `ಯಾರೀತ ನನ್ನ ಮಗಳ ಬಗ್ಗೆ ಹೀಗೆ ಮೆಚ್ಚುಗೆ ಸೂಚಿಸುತ್ತಿದ್ದಾರಲ್ಲಾ~ ಎಂದು ತನ್ನ ಗಂಡನತ್ತ ನೋಟ ಹರಿಸಿದರು.

ಆಕೆಯ ಪತಿ ಮುಗುಳ್ನಗುತ್ತಾ `ಇವರು ಪ್ರಧಾನಿ ಡೇವಿಡ್ ಕ್ಯಾಮರಾನ್~ ಎಂದಾಗ ಸಂಯೋಗಿತಾ ಇದನ್ನು ನಂಬಲೇ ಇಲ್ಲ. `ನೀವು ಜೋಕ್ ಮಾಡುತ್ತಿದ್ದೀರಾ~ ಎಂದು ಮೂಗು ಮುರಿದಳು. ನಂತರ ಅವರು ನಿಜವಾಗಿಯೂ ಪ್ರಧಾನಿ ಎಂಬುದು ಖಚಿತವಾದ ಕೂಡಲೇ ಕ್ಯಾಮರಾನ್ ಅವರತ್ತ ಮುಖ ಮಾಡಿದ ಸಂಯೋಗಿತಾ `ಕ್ಷಮಿಸಿ. ನೀವೇನಾ ಪ್ರಧಾನಿ~ ಎಂದು ಅಚ್ಚರಿ, ಕುತೂಹಲ, ಸಂಭ್ರಮದಿಂದ ಕೇಳಿದರು.

ಅದಕ್ಕೆ ಕ್ಯಾಮರಾನ್ `ಹೌದಮ್ಮಾ, ನಾನು ಪ್ರಧಾನಿ~ ಎಂದರು. ಆಗ ಸಂಯೋಗಿತಾ `ಭಾರತದಲ್ಲಿ ರಾಜಕಾರಣಿಗಳು ಹೀಗೆ ಸಾರ್ವಜನಿಕರ ಜೊತೆ ಪ್ರಯಾಣಿಸುವುದಿಲ್ಲ. ನನಗೆ ಇದು ನಿಜಕ್ಕೂ ಅಚ್ಚರಿ. ನನ್ನ ಕಲ್ಪನೆಗೂ ನಿಲುಕದ್ದು. ಹೀಗಾಗಿ ತಕ್ಷಣಕ್ಕೇ ನಿಮ್ಮನ್ನು ಗುರುತಿಸಲಾಗಲಿಲ್ಲ~ ಎಂದು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದರು.

ತುರ್ತು ಕೆಲಸಕ್ಕೆ ತೆರಳಬೇಕಾಗಿದ್ದರಿಂದ ಮೆಟ್ರೊ ರೈಲು ಏರಿದ್ದಾಗಿ ಸಂಯೋಗಿತಾ ಅವರಿಗೆ ವಿವರಿಸಿದ ಕ್ಯಾಮರಾನ್, ತಮ್ಮ ಇತ್ತೀಚಿನ ಭಾರತದ ಪ್ರವಾಸವನ್ನೂ ಅವರೊಂದಿಗೆ ಹಂಚಿಕೊಂಡರು ಎಂದು `ಡೈಲಿ ಮೇಲ್~ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT