ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆ ಕೇಳಲು ಸಿಎಂಗೆ ಒತ್ತಾಯ

Last Updated 23 ಜುಲೈ 2013, 9:25 IST
ಅಕ್ಷರ ಗಾತ್ರ

ಕನಕಪುರ: ಬೆಂಗಳೂರಿನಲ್ಲಿರುವ ಆದಿ ಚುಂಚನಗಿರಿಯ ಶಾಖಾ ಮಠದ ಮೇಲೆ ಇತ್ತೀಚೆಗೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯನ್ನು ಖಂಡಿಸಿ ಸ್ವಾಭಿಮಾನಿ ಒಕ್ಕಲಿಗ ವೇದಿಕೆಯ ಕಾರ್ಯಕರ್ತರು, ಮುಖಂಡರು ಪಟ್ಟಣದಲ್ಲಿ ಸೋಮವಾರ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದ ಎಂ.ಜಿ.ರಸ್ತೆಯಲ್ಲಿ ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು ರಾಜ್ಯ, ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡರು, `ರಾಜ್ಯದ ಉದ್ದಗಲಕ್ಕೂ ಬೇರೆ ಬೇರೆ ಜಾತಿಯ, ಸಮುದಾಯದ, ಧರ್ಮಕ್ಕೆ ಸೇರಿದ ಮಠಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ. ಆದರೆ ಅದಾವುದರ ಮೇಲೂ ಸಿದ್ದರಾಮಯ್ಯ ಅವರು ಆದಾಯ ಅಧಿಕಾರಿಗಳಿಂದ ದಾಳಿ ಮಾಡಿಸದೆ ಚುಂಚನಗಿರಿ ಮಠದ ಶಿಕ್ಷಣ ಸಂಸ್ಥೆಯನ್ನೇ ಗುರಿಯನ್ನಾಗಿಸಿಕೊಂಡು ದಾಳಿ ಮಾಡಿಸಿದ್ದಾರೆ. ಈ ದಾಳಿ ಅತ್ಯಂತ ಖಂಡನೀಯ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಚುಂಚನಗಿರಿ ಮಠವು ಒಕ್ಕಲಿಗರ ಮಠವಾಗದೆ ಎಲ್ಲಾ ಸಮುದಾಯದ, ಎಲ್ಲಾ ಧರ್ಮದ ಕಡುಬಡವರಿಗೆ ಶಿಕ್ಷಣ ಹಾಗೂ ದಾಸೋಹ ನೀಡುವ ಧರ್ಮಶಾಲೆಯಾಗಿದೆ. ಲಕ್ಷಾಂತರ ಮಂದಿಗೆ ವಿದ್ಯಾಭ್ಯಾಸ ನೀಡಿ ಸರ್ಕಾರ ಮಾಡದ ಕೆಲಸವನ್ನು ಮಠವು ಮಾಡುತ್ತಾ ಬಂದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಕಾರವಿಲ್ಲದೆ ರಾಜ್ಯದ ಮೂಲೆ ಮೂಲೆಯಿಂದ ಭಿಕ್ಷಾಟನೆ ಮಾಡಿ ಬಾಲಗಂಗಾಧರ ನಾಥ ಸ್ವಾಮೀಜಿ ಮಠವನ್ನು ಕಟ್ಟಿದ್ದಾರೆ. ಶ್ರೀಮಠವು ಸಮಾಜದ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದೆ. ಆದರೆ ಇಂತಹ ಮಠದ ಮೇಲೆ ಆದಾಯ ತೆರಿಗೆ ಅಧಿಕಾರಿಗಳಿಂದ ನಡೆಸಿರುವುದು ಖಂಡನೀಯ' ಎಂದರು.

ಜಯಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, `ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದುರ್ಬಳಕೆ ಮಾಡಿಕೊಂಡು ಆದಿಚುಂಚನಗಿರಿ ಮಠದ ಮೇಲೆ ದಾಳಿ' ಮಾಡಿಸಲಾಗಿದೆ ಎಂದು ಆರೋಪಿಸಿದರು.

`ಈ ದಾಳಿಯ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಹಾಗೂ ಒಕ್ಕಲಿಗ ಜನಾಂಗದ ವಿರುದ್ಧದ ದ್ವೇಷದ ಛಾಯೆ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಒಕ್ಕಲಿಗ ಸಮುದಾಯದ ಶಾಸಕರು, ಸಚಿವರು  ಈ ದಾಳಿಯನ್ನು ಖಂಡಿಸಿ ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೋರಾಟಕ್ಕೆ ಧುಮುಕಿ, ಒಕ್ಕಲಿಗರ ವಿರುದ್ಧವಾಗಿ ನಡೆದುಕೊಳ್ಳುವ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಬೇಕು' ಎಂದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಹಿರಿಯ ಮುಖಂಡ ಕೆ.ಬಿ.ನಾಗರಾಜು, ಒಕ್ಕಲಿಗರ ವೇದಿಕೆಯ ಅಂದಾನಿ ಗೌಡ, ಕುಮಾರ್ ಗೌಡ, ಕನಕಪುರ ಮಹೇಶ್, ಮಂಡಿ ರವಿ ಮೊದಲಾದವರು ಮಾತನಾಡಿ, `ಮುಖ್ಯಮಂತ್ರಿಗಳ ಅನುಮತಿಯಿಲ್ಲದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಲು ಆಗುವುದಿಲ್ಲ. ಹಾಗಾಗಿ ದಾಳಿಯು ಪೂರ್ವ ಯೋಜಿತವಾಗಿದೆ. ಇದು ಸಿದ್ದರಾಮಯ್ಯ ಅವರ ಕುಮ್ಮಕ್ಕಿನಿಂದಲೇ ನಡೆದಿದೆ' ಎಂದು ದೂರಿದರು.

ಇದು ಮಠಕ್ಕೆ ಕಳಂಕ ತರುವ ಕೆಲಸ. ಕೂಡಲೇ ಆಗಿರುವ ಪ್ರಮಾದಕ್ಕೆ ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು. ಇಲ್ಲವೇ ಇದರ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ತಹಶೀಲ್ದಾರ್ ಡಾ.ದಾಕ್ಷಾಯಿಣಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ತಾಲ್ಲೂಕು ದಂಡಾಧಿಕಾರಿ ದಾಕ್ಷಾಯಿಣಿ ಮನವಿ ಪತ್ರವನ್ನು ಕೂಡಲೇ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ತಲುಪಿಸುವ ಭರವಸೆ ನೀಡಿದರು.

ವರ್ತಕರ ಸಂಘದ ಅಧ್ಯಕ್ಷ ಗೋವಿಂದಪ್ಪ, ರೈತ ಸಂಘದ ಚೀಲೂರು ಮುನಿರಾಜು, ಕರವೇ ಪುಟ್ಟಸ್ವಾಮಿ, ವೇದಿಕೆಯ ನಾಗೇಶ್, ಉಮೇಶ್ ಸೇರಿದಂತೆ ನೂರಾರು ಮುಖಂಡರು, ಬಿ.ಜಿ.ಎಸ್. ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT