ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆ ಕೋರಲ್ಲ, ಮೊಕದ್ದಮೆ ವಾಪಸ್ಸಿಲ್ಲ: ಅಮೆರಿಕ

Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಹಿರಿಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ವಿರುದ್ಧದ ವೀಸಾ ವಂಚನೆ ಪ್ರಕರಣವನ್ನು ಕೈ ಬಿಡಬೇಕು ಮತ್ತು ಬಂಧನದ ಅವಧಿಯಲ್ಲಿ ತೋರಿರುವ ದುರ್ವರ್ತನೆಗೆ ಕ್ಷಮೆ ಕೋರಬೇಕು ಎಂಬ ಭಾರತದ ಬೇಡಿಕೆ­ಗಳನ್ನು ಅಮೆರಿಕ ತಳ್ಳಿಹಾಕಿದೆ.

ದೇವಯಾನಿ ವಿರುದ್ಧ ಹೊರಿಸ­ಲಾಗಿರುವ ಆರೋಪಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿ­ರುವುದರಿಂದ ಅವರು ಶಿಕ್ಷೆ­ಯಿಂದ ತಪ್ಪಿಸಿ­ಕೊಳ್ಳಲು ಸಾಧ್ಯವಿಲ್ಲ ಎಂದೂ ಅಮೆರಿಕ ಹೇಳಿದೆ.

ದೇವಯಾನಿ ಅವರು ಈಗ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಯೋಜನಾ ಕಚೇರಿಗೆ ವರ್ಗಾವಣೆ­ಗೊಂಡಿದ್ದರೂ, ಅವರು ಹೊಂದಿರುವ ವಿನಾಯ್ತಿ ಸೌಲಭ್ಯಗಳು ಹಿಂದಿನ ಪ್ರಕರ­ಣ­­­­­­­­­ಗಳಿಗೆ ಅನ್ವಯ­ವಾಗು­ವು­ದಿಲ್ಲ ಎಂದು ಅಮೆರಿಕ ವಿದೇ­ಶಾಂಗ ಇಲಾಖೆ ವಕ್ತಾರೆ ಮೇರಿ ಹಾರ್ಫ್‌ ಸ್ಪಷ್ಟ ಪಡಿಸಿದ್ದಾರೆ.

‘ನಾವು ಈ ಆರೋಪಗಳನ್ನು ಗಂಭೀರ­ವಾಗಿ ಪರಿಗಣಿಸು­ತ್ತೇವೆ. ಈಗ ದಾಖಲಿಸಿ­ರುವ ಪ್ರಕರಣ­ವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಯಾಕೆಂದರೆ ಇದೊಂದು ಕಾನೂನಾತ್ಮಕ ವಿಚಾರ­’ ಎಂದು ಹಾರ್ಫ್‌ ಹೇಳಿದ್ದಾರೆ.

ಒಬಾಮಗೆ ವಿವರಣೆ: ದೇವಯಾನಿ ಬಂಧನ ಮತ್ತು ಅದರ ನಂತರ ಭಾರತ ಮತ್ತು ಅಮೆರಿಕದ ನಡುವೆ ಉಂಟಾಗಿ­ರುವ ರಾಜತಾಂತ್ರಿಕ  ಬಿಕ್ಕಟ್ಟಿನ ಬಗ್ಗೆ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ  ವಿವರಿಸ­ಲಾಗಿದೆ. ನಂತರ ಪ್ರತಿಕ್ರಿಯಿಸಿರುವ ಶ್ವೇತಭವನ, ಇದೊಂದು ‘ಅಪ­ರೂಪದ ಪ್ರಕರಣ’ ಎಂದು ಬಣ್ಣಿಸಿದ್ದು ಎರಡೂ ರಾಷ್ಟ್ರಗಳ ನಡುವಣ ಬಾಂಧವ್ಯಕ್ಕೆ ಈ ಘಟನೆ ಧಕ್ಕೆ ತರದು ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ವಸತಿ, ಊಟ ಸಂಬಳದ ಭಾಗವಲ್ಲ
ಅಮೆರಿಕದ ಕಾನೂನಿನ ಪ್ರಕಾರ, ಮನೆಕೆಲಸದ­ವರಿಗೆ ನೀಡುವ ಊಟ, ವಸತಿ ಸೌಲಭ್ಯಗಳು ಸಂಬಳದ ಭಾಗವಲ್ಲ.

ಅಮೆರಿಕದಲ್ಲಿರುವ ಇತರ ರಾಷ್ಟ್ರಗಳ  ರಾಯ­ಭಾರ ಕಚೇರಿಗಳಿಗೆ 2012ರ ಏಪ್ರಿಲ್‌ 20ರಂದು ಕಳುಹಿಸಿರುವ ಅಧಿ­ಸೂಚನೆ ಇದನ್ನು ಸ್ಪಷ್ಟವಾಗಿ ಹೇಳುತ್ತದೆ. ನೀಡಿರುವ ಊಟ, ವಸತಿ ಸೌಲಭ್ಯ­ಗಳಿಗಾಗಿ ಮನೆ ಕೆಲಸದ­ವರ ವೇತನವನ್ನು ಕಡಿತಗೊಳಿಸು­ವು­ದಕ್ಕೆ ಅವಕಾಶ ಇಲ್ಲ ಎಂದು ಅಧಿಸೂಚನೆ­ಯಲ್ಲಿ ಹೇಳಲಾಗಿದೆ.

ಕಳೆದ ಸೆಪ್ಟೆಂಬರ್‌ 24ರಂದು ಕಳುಹಿಸಿದ್ದ ಮತ್ತೊಂದು ಅಧಿಸೂಚನೆ­­ಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಇದನ್ನು ಪುನರುಚ್ಚರಿಸಿದೆ.

ತನಿಖೆಗೆ ಮನವಿ ಮಾಡಿದ್ದ ಅಮೆರಿಕ
ದೇವಯಾನಿ ಖೋಬ್ರಾಗಡೆ ಅವರ ವಿರುದ್ಧ ಮನೆ ಕೆಲಸದಾಳು ಸಂಗೀತಾ ರಿಚರ್ಡ್‌ ಮಾಡಿದ್ದ ಆರೋಪಗಳ ಬಗ್ಗೆ ತನಿಖೆ ನಡೆಸು­ವಂತೆ ಮತ್ತು ಅದರ ವಿವರಗಳನ್ನು ನೀಡುವಂತೆ ಅಮೆರಿಕ ಭಾರತಕ್ಕೆ ಮನವಿ ಮಾಡಿತ್ತು.
ಆದರೆ, ಭಾರತ ಇದಕ್ಕೆ ಸಮ್ಮತಿಸಿ­ರಲಿಲ್ಲ ಎಂದು ಅಮೆರಿಕ ಹೇಳಿದೆ.

ಈ ವಿಚಾರವನ್ನು ಎರಡೂ ರಾಷ್ಟ್ರ­ಗಳು ಜುಲೈನಿಂದ  ಅಂದರೆ, ಸಂಗೀತಾ ಅವರು ದೇವ­ಯಾನಿ ಅವರ ಮನೆಯಿಂದ  ಹೇಳದೆ ಕೇಳದೆ ಹೊರಟ ಬಳಿಕ ಅವರ ಪರ ವಕೀಲರು ಅಮೆರಿಕ ವಿದೇಶಾಂಗ ಇಲಾಖೆಗೆ ದೂರು ನೀಡಿದ ನಂತರ ಪರಸ್ಪರ ಚರ್ಚಿಸುತ್ತಿವೆ ಎಂದು  ವಿದೇಶಾಂಗ ಇಲಾಖೆ ವಕ್ತಾರೆ ಮೇರಿ ಹಾರ್ಫ್‌ ಹೇಳಿದ್ದಾರೆ.

ಈ ಪ್ರಕರಣದ ಸಂಬಂಧ ಅಮೆರಿಕವು ಭಾರತ ಸರ್ಕಾರ­ದೊಂದಿಗೆ ಸಂಪರ್ಕ ಹೊಂದಿರಲಿಲ್ಲ ಎಂಬ ಆರೋಪವನ್ನು ಅವರು ಇದೇ ಸಂದರ್ಭ­ದಲ್ಲಿ ತಳ್ಳಿಹಾಕಿದ್ದಾರೆ.

ಭಾರತದ ರಾಯಭಾರ ಕಚೇರಿ ಪ್ರಕಾರ, ಸಂಗೀತಾ ಅವರು ಮಾಡಿದ್ದ ಆರೋಪ­ಗಳ ಕುರಿತಾಗಿ ತನಿಖೆ ನಡೆಸುವಂತೆ ಕೋರಿ ಅಮೆರಿಕವು ಒಂದೇ ಬಾರಿ (ಸೆಪ್ಟೆಂಬರ್‌ 4ರಂದು) ಪತ್ರ ಬರೆದಿತ್ತು.

ಆದರೆ, ಸಂಗೀತಾ ಅವರಿಗೆ ಸಂಬಂಧಿ­ಸಿ­­ದಂತೆ ಕಳುಹಿಸ­ಲಾಗಿದ್ದ ಸಂದೇಶಗಳಿಗೆ ಅಮೆರಿಕದ ಭದ್ರತಾ ಸಂಸ್ಥೆಗಳು ಸೂಕ್ತವಾಗಿ ಸ್ಪಂದಿಸಿರಲಿಲ್ಲ ಎಂದು ಭಾರತದ ರಾಯಭಾರ ಕಚೇರಿ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT