ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆಯ ಗಾಳಿ

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಮು ಮತ್ತು ಶ್ಯಾಮು ಬಹಳ ಒಳ್ಳೆಯ ಸ್ನೇಹಿತರು. ಬಾಲ್ಯದಿಂದಲೂ ಒಟ್ಟಿಗೇ ಬೆಳೆದವರು. ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದಲ್ಲದೆ ಪರಸ್ಪರರ ಕಷ್ಟ ಸುಖಗಳಿಗೆ ನೆರವಾಗುತ್ತಿದ್ದರು. ಒಮ್ಮೆ ಅವರಿಬ್ಬರೂ ಕಾಡು ದಾರಿಯಾಗಿ ಪ್ರಯಾಣ ಮಾಡುತ್ತಿದ್ದರು.

ಯಾವುದೋ ವಿಷಯವಾಗಿ ಅವರಿಬ್ಬರಿಗೆ ವಾಗ್ವಾದ ಪ್ರಾರಂಭವಾಗಿ, ರಾಮು ಶ್ಯಾಮುವಿನ ಕೆನ್ನೆಗೆ ಒಂದು ಏಟು ಕೊಟ್ಟ. ಶ್ಯಾಮುವಿಗೆ ಬಹಳ ಬೇಸರವಾಯಿತು. ಅವನು ಸುಧಾರಿಸಿಕೊಂಡು, `ಇಂದು ನನ್ನ ಉತ್ತಮ ಸ್ನೇಹಿತ ನನ್ನ ಕೆನ್ನೆಗೆ ಹೊಡೆದ~ ಎಂದು ಮರಳಿನ ಮೇಲೆ ಬರೆದ.

ಅವರಿಬ್ಬರೂ ಮತ್ತೆ ಪ್ರಯಾಣ ಮುಂದುವರೆಸಿದರು. ಸ್ವಲ್ಪ ದೂರ ಸಾಗಿದ ನಂತರ ಹುಲಿಯೊಂದು ಅವರನ್ನು ಅಟ್ಟಿಸಿಕೊಂಡು ಬಂತು. ರಾಮು ಹತ್ತಿರದ ಮರವೊಂದನ್ನು ಏರಿದ. ಶ್ಯಾಮುವಿಗೆ ಮರವೇರಲು ಬರುತ್ತಿರಲಿಲ್ಲ. ಅವನಿಗೆ ದಿಕ್ಕೇ ತೋಚದಂತಾಯಿತು. ನನ್ನ ಪ್ರಾಣ ಹೋಯಿತು ಎಂದುಕೊಂಡ. ಅಷ್ಟರಲ್ಲಿ ಮರದ ಮೇಲಿದ್ದ ರಾಮು ಕೆಳಗಿಳಿದು ಶ್ಯಾಮುವನ್ನು ಮರ ಹತ್ತಿಸಿ, ನಂತರ ತಾನೂ ಮರವೇರಿದ. ಇಬ್ಬರೂ ಬಚಾವಾದರು.

ಹುಲಿ ದೂರ ಹೋದ ನಂತರ ಅವರಿಬ್ಬರೂ ಮರದಿಂದ ಇಳಿದರು. ಆಗ ಶ್ಯಾಮು ಹತ್ತಿರವಿದ್ದ ಒಂದು ಬಂಡೆಯ ಮೇಲೆ `ಈ ದಿನ ನನ್ನ ಅತ್ಯುತ್ತಮ ಸ್ನೇಹಿತ ನನ್ನ ಪ್ರಾಣವನ್ನು ಕಾಪಾಡಿದ~ ಎಂದು ಕೆತ್ತಿದ.

ರಾಮುವಿಗೆ ಆಶ್ಚರ್ಯವಾಯಿತು. ಶ್ಯಾಮುವನ್ನು ಕೇಳಿದ `ನಾನು ನಿನ್ನ ಕೆನ್ನೆಗೆ ಹೊಡೆದಾಗ ನೀನು ಆ ವಿಷಯವನ್ನು ಮರಳಿನ ಮೇಲೆ ಬರೆದೆ. ಈಗ ಪ್ರಾಣ ಕಾಪಾಡಿದ ವಿಷಯದಲ್ಲಿ ಕಲ್ಲಿನಲ್ಲಿ ಕೆತ್ತಿರುವೆಯಲ್ಲಾ?~

ಶ್ಯಾಮು ಹೇಳಿದ- `ನಮಗೆ ಯಾರಾದರೂ ನೋವುಂಟು ಮಾಡಿದರೆ, ಅದನ್ನು ಮರಳಿನ ಮೇಲೆ ಬರೆಯಬೇಕು. ಕಾಲ ಕಳೆದಂತೆ ಕ್ಷಮೆಯ ಗಾಳಿ ಬೀಸಿ ಆ ವಿಷಯ ಮರೆಯಾಗಬೇಕು. ಆದರೆ ಯಾರಾದರೂ ನಮಗೆ ಮಾಡಿದ ಉಪಕಾರವನ್ನು ನಾವು ಎಂದೆಂದಿಗೂ ಮರೆಯಬಾರದು. ಹಾಗಾಗಿ ಅದನ್ನು ಕಲ್ಲಿನಲ್ಲಿ ಕೆತ್ತಿದೆ~. 
 
 (ಆಧಾರ: ಒಂದು ಇ ಮೇಲ್ ಸಂದೇಶ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT