ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯಿಸದ ಕ್ಷಯ ಬಾಧೆ

Last Updated 25 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ವಿಶ್ವವನ್ನು ಕಾಡುತ್ತಿರುವ ಕ್ಷಯ ರೋಗದ ನಿಯಂತ್ರಣದಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸನ್ನು ಪಡೆಯಲಾಗಿದ್ದರೂ ಅದರ ಪೂರ್ಣ ನಿರ್ಮೂಲನೆಯ ವಿಷಯದಲ್ಲಿ ಸಫಲತೆಯನ್ನು ಸಾಧಿಸಲಾಗಿಲ್ಲ.  ವಿಶ್ವ ಕ್ಷಯರೋಗ ದಿನ (ಮಾ.24) ಸಂದರ್ಭದಲ್ಲಿ ಹೊರ ಬಿದ್ದಿರುವ ಈ ಅಂಶವನ್ನು   ಗಂಭೀರವಾಗಿ ಪರಿಗಣಿಸುವುದು ಅಗತ್ಯ.

ಬಡ ಮತ್ತು ಅಭಿ­ವೃದ್ಧಿ­ಶೀಲ ದೇಶಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳ ಮತ್ತು ವಯಸ್ಕರ ಸಾವಿಗೆ ಕಾರಣವಾಗುತ್ತಿದೆ.  ಕ್ಷಯ ಬಡ ರಾಷ್ಟ್ರಗಳನ್ನು ಮಾತ್ರ­ವಲ್ಲ, ಶ್ರೀಮಂತ ರಾಷ್ಟ್ರಗಳನ್ನೂ ಕಾಡುವ ಕಾಯಿಲೆ. ಈ ಸಾಂಕ್ರಾಮಿಕ ಕಾಯಿಲೆ­ಯನ್ನು ಗುಣಪಡಿಸುವ ಮತ್ತು ಶಾಶ್ವತವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳು ನಿರಂತರವಾಗಿ ನಡೆಯು­ತ್ತಿವೆ.

ಆದರೆ ನಿರೀಕ್ಷಿತ  ಯಶಸ್ಸು ಇನ್ನೂ ದೊರೆತಿಲ್ಲ.  ‘ಈ ಕಾಯಿಲೆ ವಿಶ್ವಕ್ಕೆ ಒಂದು ಬೆದರಿಕೆ. ಈ ನಿಟ್ಟಿನಲ್ಲಿ  ತುರ್ತಾಗಿ ಗಮನ ಹರಿಸುವುದು ಅತ್ಯಗತ್ಯ’ ಎಂದಿದೆ ವಿಶ್ವ ಆರೋಗ್ಯ ಸಂಸ್ಥೆ. ಸದ್ಯದ ಭವಿಷ್ಯದಲ್ಲಿ ಪ್ರತಿ ವರ್ಷ  ವಿಶ್ವದಲ್ಲಿ ಸುಮಾರು ತೊಂಬತ್ತು ಲಕ್ಷ ಜನರು ಈ ಕಾಯಿಲೆಗೆ ತುತ್ತಾಗಿ 15 ಲಕ್ಷ ಜನರು ಸಾಯುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ.

ನಮ್ಮ ದೇಶದಲ್ಲಿ ಪ್ರತಿ ವರ್ಷ ಇಪ್ಪತ್ತು ಲಕ್ಷ ಜನರಿಗೆ ಇದರ ಸೋಂಕು ತಗಲುತ್ತಿದ್ದು ಪ್ರತಿ ದಿನ ಸಾಯುವವರ ಸಂಖ್ಯೆ ಸುಮಾರು ಒಂದು ಸಾವಿರ. ಆರಂಭಿಕ ಹಂತದಲ್ಲೇ ಕಾಯಿಲೆ ಗುರುತಿಸಿ ಸಕಾಲದಲ್ಲಿ ಚಿಕಿತ್ಸೆ ಮತ್ತು ವೈದ್ಯರ ಸಲಹೆಯಂತೆ ಔಷಧೋಪಚಾರ  ಪಡೆದರೆ  ಇದು ಗುಣವಾಗುತ್ತದೆ. ತಪ್ಪು ಅಥವಾ ಅಪೂರ್ಣ ಚಿಕಿತ್ಸೆಯಿಂದ ಕಾಯಿಲೆ ಉಲ್ಬಣಗೊಳ್ಳುವ ಅಪಾಯ ಇದೆ.   ಬಹುವಿಧದ ಔಷಧಿಗಳಿಗೂ ಪ್ರತಿರೋಧ ಬೆಳೆಸಿಕೊಳ್ಳು­ವಂತಹ  ಕ್ಷಯ ರೋಗ ಕಾಣಿಸಿಕೊಂಡಿರುವುದು ಆತಂಕಕಾರಿ ವಿಷಯ. ಇಂತಹ ಸಂದರ್ಭಗಳಲ್ಲಿ ರೋಗಿಗಳನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನಿಡುವುದು ಅತ್ಯಗತ್ಯ. ಇದನ್ನು ಉಪೇಕ್ಷಿಸುವುದರಿಂದ ಕಾಯಿಲೆ  ಇತರರಿಗೆ ಶೀಘ್ರಗತಿಯಲ್ಲಿ  ಹಬ್ಬುತ್ತದೆ. ಕ್ಷಯದ ಸವಾಲನ್ನು ಎದುರಿಸಲು ನಮ್ಮ ಆರೋಗ್ಯ ವ್ಯವಸ್ಥೆ ಸನ್ನದ್ಧವಾಗಬೇಕು.

ಕ್ಷಯ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ಪ್ರಮುಖ ಪಾತ್ರ ವಹಿಸಲು ಸಾಧ್ಯ. ಸರ್ಕಾರ ಈ ವಿಚಾರದಲ್ಲಿ ಕೈಗೊಂಡ ಕ್ರಮಗಳು ಇನ್ನೂ ನಿರೀಕ್ಷಿತ ಫಲಿತಾಂಶ ನೀಡಬೇಕಾಗಿದೆ. ಕ್ಷಯ ವಿರೋಧಿ ಆಂದೋಲನ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ.

ಆದರೆ ರೋಗ ಪತ್ತೆಯಾದ ತಕ್ಷಣ ಚಿಕಿತ್ಸೆಗೆ ಒಳಪಡುವುದು ಹಾಗೂ  ಔಷಧಗಳನ್ನು ಅರ್ಧಕ್ಕೆ ನಿಲ್ಲಿಸದೆ ಪೂರ್ಣಾವಧಿ ತೆಗೆದುಕೊಳ್ಳಬೇಕಾದ  ವಿಚಾರದಲ್ಲಿ ಅರಿವು ಮೂಡಿಸಬೇಕಿರುವ ಅಗತ್ಯ ಸಾಮೂಹಿಕ ಆಂದೋಲನದ ರೂಪ ಪಡೆದಿಲ್ಲ. ಇಷ್ಟು ವರ್ಷಗಳ ಬಳಿಕವೂ ಇನ್ನೂ ಪೀಡೆಯಾಗಿ ಉಳಿದ ಇದರ ನಿವಾರಣೆಗೆ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮ ಇನ್ನೂ ಪರಿಣಾಮಕಾರಿ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT