ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀರಭಾಗ್ಯ ಯೋಜನೆ ಸಮರ್ಪಕ ಜಾರಿಗೆ ತಾಕೀತು

ಸರ್ಕಾರಿ ಶಾಲೆಗೆ ಉಪವಿಭಾಗಾಧಿಕಾರಿ ದಿಢೀರ್ ಭೇಟಿ
Last Updated 10 ಡಿಸೆಂಬರ್ 2013, 6:59 IST
ಅಕ್ಷರ ಗಾತ್ರ

ಹೊಸನಗರ: ಸಾಗರ ಉಪ ವಿಭಾಗಧಿಕಾರಿ ಡಾ.ಬಿ ಉದಯಕುಮಾರ್ ಶೆಟ್ಟಿ ಅವರು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸೋಮವಾರ ದಿಢೀರ್ ಭೇಟಿ ನೀಡಿ ಕ್ಷೀರ ಭಾಗ್ಯ ಯೋಜನೆ ಸಮರ್ಪಕ ಅನುಷ್ಠಾನ  ಕುರಿತು ತಪಾಸಣೆ ನಡೆಸಿದರು.

ಅಕ್ಷರ ದಾಸೋಹ ಯೋಜನೆಯಡಿಯಲ್ಲಿನ ಬಿಸಿ ಊಟದ ಕೊಠಡಿಗೆ ಭೇಟಿ ನೀಡಿ ಅಕ್ಕಿ, ಎಣ್ಣೆ, ದಿನಸಿ, ಸಾಮಾನುಗಳನ್ನು ಪರೀಶಿಲಿಸುವುದರ ಜತೆಗೆ ಅಡಿಗೆ ಕೆಲಸದವರು ಯಾವ ರೀತಿ ಇರಬೇಕು, ಅದರ ನಿಯಮ, ಕೊಠಡಿಗಳು ಯಾವ ರೀತಿ ಇರಬೇಕು ಎಂದು ಸೂಕ್ತ ಸಲಹೆ ನೀಡಿದರು.

ಸರ್ಕಾರ ಮಕ್ಕಳ ಆರೋಗ್ಯ ಕಾಪಾಡಲು ಹಾಲು, ಪೌಷ್ಟಿಕ ಆಹಾರ ನೀಡುತ್ತಿದೆ. ಈ ನಿಟ್ಟಿನಲ್ಲಿ ಸಣ್ಣ ತಪ್ಪು ನಡೆದರೂ ಸಹಿಸುವುದಿಲ್ಲ. ಬಿಸಿಯೂಟದಲ್ಲಿ ಏನೇ ತಪ್ಪು ನಡೆದರೂ ಅಡಿಗೆಯವರ ಹಾಗೂ ಮುಖ್ಯ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್  ಚಿದಂಬರ ಕುಲಕರ್ಣಿ, ಕ್ಷೇತ್ರಶಿಕ್ಷಣಾಧಿಕಾರಿ ವೀರಭದ್ರಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ. ಚಂದ್ರಪ್ಪ ಹಾಜರಿದ್ದರು.

ಮರಳು ಸಂಗ್ರಹ ಪಾಯಿಂಟ್‌: ಮೇಲಿನಬೆಸಿಗೆ ಗ್ರಾಮ ಪಂಚಾಯ್ತಿ ಗ್ರಾಮಸ್ಥರ ಮನವಿಯ ಮೇರೆಗೆ ಹೊಸನಗರ ತಾಲ್ಲೂಕಿನ ಶರಾವತಿ ನದಿ ದಡದ ಸುತ್ತಾ ಗ್ರಾಮದಲ್ಲಿ ಮರಳು ಸಂಗ್ರಹದ ಪಾಯಿಂಟ್‌ನ್ನು ಉಪ ವಿಭಾಗಾಧಿಕಾರಿ ಉದಯಕುಮಾರ್ ಶೆಟ್ಟಿ ಮಂಜೂರು ಮಾಡಿದರು.  

  ಅನೇಕ ವರ್ಷಗಳಿಂದ ಸುತ್ತಾ ಗ್ರಾಮದ ಶರಾವತಿ ಹಿನ್ನೀರಿನಲ್ಲಿ ಮರಳು ಸಂಗ್ರಹ ಮಾಡುವ ಪಾಯಿಂಟ್ ಗುರುತು ಮಾಡಲಾಗಿತ್ತು. ಆದರೆ, ಈ ವರ್ಷ ಮರಳು ಸಂಗ್ರಹ ಕೇಂದ್ರ ಮಂಜೂರು ಮಾಡದಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.

ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳು ಸುತ್ತಾ ಗ್ರಾಮಕ್ಕೆ ಸೋಮವಾರ  ಭೇಟಿ ನೀಡಿ ಸುತ್ತಾ ಸೇತುವೆ ಸುತ್ತಲಿನ ಪ್ರದೇಶ ಹೊರತುಪಡಿಸಿ ಮರಳು ಸಂಗ್ರಹದ ಆದೇಶ ಹೊರಡಿಸುವುದಾಗಿ ಹೇಳಿದರು.

ಕಾಮಗಾರಿಗೆ ಒತ್ತಾಯ
ಭದ್ರಾವತಿ:  ಇಲ್ಲಿನ ತರೀಕೆರೆ ರಸ್ತೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕಳೆದ ಐದು ವರ್ಷದಿಂದ ಕುಂಟುತ್ತಾ ಸಾಗಿದ್ದು, ಜನವರಿ ಮೊದಲ ವಾರದೊಳಗೆ ನಾಗರಿಕರ ಅನುಕೂಲಕ್ಕೆ ಬಿಟ್ಟುಕೊಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ. ಕಳೆದ ಸೆ. 30 ರಂದು ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶೀಘ್ರ ಕಾಮಗಾರಿ ಮುಗಿಸಿ ನಾಗರಿಕರಿಗೆ ಅನುಕೂಲ ಮಾಡುವ ಭರವಸೆ ನೀಡಲಾಗಿತ್ತು. ಆದರೆ, ಕಾಮಗಾರಿ ಪ್ರಗತಿ ನೋಡಿದರೆ ಇದು ಮತ್ತಷ್ಟು ವಿಳಂಬವಾಗುವ ರೀತಿ ಇದೆ ಎಂದು ಪಕ್ಷದ ಅಧ್ಯಕ್ಷ ಎಂ. ಮಂಜುನಾಥ್, ಬಾ.ನಂ. ರಮೇಶ್, ಅರಳಿಹಳ್ಳಿ ಪ್ರಕಾಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮುಖಂಡರು ಪಕ್ಷದ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಮಾತುಕೊಟ್ಟ ರೀತಿಯಲ್ಲಿ ಅಧಿಕಾರಿಗಳು ಕಾಮಗಾರಿ ಮುಗಿಸದಿದ್ದಲ್ಲಿ ಜಿಲ್ಲಾ ಮುಖಂಡರ ಜತೆ ಚರ್ಚಿಸಿ ಹೋರಾಟ ತೀವ್ರಗೊಳಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT