ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರಕ್ಕೆ ಮರಳಿದ ದೇವೇಗೌಡರಿಗೆ ಗೆಲುವಿನ ಸ್ವಾಗತ

2004ರ ಲೋಕಸಭಾ ಚುನಾವಣೆ
Last Updated 8 ಏಪ್ರಿಲ್ 2014, 6:37 IST
ಅಕ್ಷರ ಗಾತ್ರ

ಹಾಸನ:1994ರ ಲೋಕಸಭಾ ಚುನಾವಣೆಯಲ್ಲಿ ಪುಟ್ಟಸ್ವಾಮಿಗೌಡ ವಿರುದ್ಧ ಸೋಲನುಭವಿಸಿ ಬೆಂಗಳೂರು ಸೇರಿದ್ದ ದೇವೇಗೌಡರು ಎರಡು ವರ್ಷಗಳ ಕಾಲ ಹಾಸನದತ್ತ ಸುಳಿಯಲಿಲ್ಲ.

ಜೆಡಿಎಸ್‌ನ ಸ್ಥಳೀಯ ಮುಖಂಡರಲ್ಲಿ ಆತಂಕ ಉಂಟಾಯಿತು. ನಾಯಕನಿಲ್ಲದೆ ಮುಂದುವರಿಯಲು ಸಾಧ್ಯವಿಲ್ಲದ ಸ್ಥಿತಿ ಬಂದಾಗ, ಎಚ್‌.ಕೆ. ಜವರೇಗೌಡ, ಸಿ.ಎಸ್‌. ಪುಟ್ಟೇಗೌಡ (ಈಗ ಇಬ್ಬರೂ ಕಾಂಗ್ರೆಸ್‌ನಲ್ಲಿದ್ದಾರೆ) ಮುಂತಾದ ಕೆಲವು ಮುಖಂಡರು ಬೆಂಗಳೂರಿಗೆ ಹೋಗಿ ದೇವೇಗೌಡರ ಮನವೊಲಿಸಿದರು. ಒತ್ತಾಯಕ್ಕೆ ಮಣಿದ ಗೌಡರು ಮರಳಿ ಹಾಸನಕ್ಕೆ ಬರಲು ಒಪ್ಪಿದರು.

ದೇವೇಗೌಡರ ಮರುಪ್ರವೇಶ ಭವ್ಯವಾಗಿರಬೇಕು ಎಂದು ಇಲ್ಲಿಯ ಮುಖಂಡರು ತೀರ್ಮಾನಿಸಿ, ಹಿರೀಸಾವೆಯಿಂದ ಸ್ವಲ್ಪ ಮುಂದೆ, ಹಾಸನ ಗಡಿಯಲ್ಲಿ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲು ತೀರ್ಮಾನಿಸಿದರು. ಎಲ್ಲವೂ ಅಂದುಕೊಂಡಂತೆ ನಡೆಯಿತು. ದೇವೇಗೌಡರು ಎಲ್ಲ ಶಕ್ತಿ ಕ್ರೋಢೀಕರಿಸಿಕೊಂಡು ಪುನಃ ಹಾಸನ ರಾಜಕೀಯವನ್ನು ಪ್ರವೇಶಿಸಿದರು.

ರಾಜ್ಯದಲ್ಲಿ ಎಸ್‌.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಇತ್ತು. ದೇಶದ ನಂ.1 ಮುಖ್ಯಮಂತ್ರಿ ಎನ್ನಿಸಿಕೊಂಡಿದ್ದರೂ ಕೃಷ್ಣ ಅವರಿಗೆ ಪ್ರಕೃತಿ ಸಾಥ್‌ ನೀಡಿರಲಿಲ್ಲ. ಸತತ ಮೂರು ವರ್ಷಗಳ ಕಾಲ ಕಾಡಿದ ಬರಗಾಲ ರಾಜ್ಯವನ್ನು ಹೈರಾಣಾಗಿಸಿತ್ತು. ಕಾವೇರಿ ಪ್ರಕರಣ, ವೀರಪ್ಪನ್‌ ಕಾಟ, ಡಾ.ರಾಜ್‌ ಅಪಹರಣ ... ಹೀಗೆ ಪರಿಹರಿಸಲಾರದ ಸಾಲುಸಾಲು ಸಮಸ್ಯೆಗಳೂ ಅವರಿಗೆ ಎದುರಾಗಿದ್ದವು. 1999 ರಂತೆ 2004ರಲ್ಲೂ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಜೊತೆಜೊತೆಯಲ್ಲೇ ನಡೆದವು. ನಿರೀಕ್ಷೆಯಂತೆ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಭಾರಿ ಹಿನ್ನಡೆಯಾಯಿತು. ಹಾಸನದಲ್ಲೂ ಅದು ಪ್ರತಿಫಲಿಸಿತ್ತು.

1999ರಲ್ಲಿ ದೇವೇಗೌಡರನ್ನು ಸೋಲಿಸಿ ರಾಷ್ಟ್ರದ ಹುಬ್ಬೇರಿಸಿದ್ದ ಜಿ. ಪುಟ್ಟಸ್ವಾಮಿಗೌಡರು 2004ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ದೇವೇಗೌಡರನ್ನು ಸೋಲಿಸಿದ್ದ ಪುಟ್ಟಸ್ವಾಮಿ ಗೌಡರು ಕೆಲವೇ ತಿಂಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಭ್ರಮ ನಿರಸನವಾಗುವಂತೆ ಮಾಡಿದ್ದರು. ಕಾಂಗ್ರೆಸ್‌ ಒಳಜಗಳ ಇನ್ನೂ ಹೆಚ್ಚಾಯಿತು. ಪುಟ್ಟಸ್ವಾಮಿಗೌಡರಿಗೆ ಕಾಂಗ್ರೆಸ್‌ ಒಳಗೇ ವಿರೋಧ ವ್ಯಕ್ತವಾಗಿತ್ತು. ಪರಿಣಾಮ ವಿಧಾನಸಭಾ ಚುನಾವಣೆಯಲ್ಲೂ ಅವರು ಸುಮಾರು 30 ಸಾವಿರ ಮತಗಳ ಅಂತರದಿಂದ ಸೋತರು. ಆ ವಿಧಾನಸಭಾ ಚುನಾವಣೆಯಲ್ಲಿ ಬಿ. ಶಿವರಾಮು ಬಿಟ್ಟು ಉಳಿದೆಲ್ಲ ಕಾಂಗ್ರೆಸ್‌ ಅಭ್ಯರ್ಥಿಗಳು ಸೋಲು ಅನುಭವಿಸಿದ್ದರು. ಶಿವರಾಮು ಅವರೂ ಕೇವಲ 18 ಮತಗಳ ಗೆಲುವು ಕಂಡಿದ್ದರು.

ಆ ಬಾರಿ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಪುನಃ ಶ್ರೀಕಂಠಯ್ಯ ಅವರೇ ಎದುರಿಸಿದರು. ಆದರೆ ಶ್ರೀಕಂಠಯ್ಯ ಪ್ರಭಾವ ಸ್ವಲ್ಪ ಕಳೆಗುಂದುತ್ತ ಬಂದಿತ್ತು. ಅವರ ಪುತ್ರನನ್ನೇ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸಿದ್ದರೂ ಗೆಲ್ಲಿಸಲು ಅವರಿಂದ ಸಾಧ್ಯವಾಗಿರಲಿಲ್ಲ.  ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡು ಬಾರಿ ಗೆದ್ದಿದ್ದ ಎಚ್‌.ಎನ್‌. ನಂಜೇಗೌಡರು ಬಿಜೆಪಿ–ಜೆಡಿಯು ಸಖ್ಯದ ಅಭ್ಯರ್ಥಿಯಾಗಿ ಜೆಡಿಯುದಿಂದ ಸ್ಪರ್ಧಿಸಿದ್ದರು. ಆದರೆ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ದೇವೇಗೌಡರು 1,90,305 ಮತಗಳಿಂದ ಶ್ರೀಕಂಠಯ್ಯ ಅವರನ್ನು ಸೋಲಿಸಿ ಮತ್ತೆ ತನ್ನ ಸಾಮರ್ಥ್ಯ ಪ್ರಚುರಪಡಿಸಿದರು.

ದಾಖಲೆ ಸೃಷ್ಟಿಸಿದ 2009
ಕಳೆದ ಬಾರಿ (2009)ಯ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಎರಡು ದಾಖಲೆಗಳು ಸೃಷ್ಟಿಯಾದವು. ಮೊದಲನೆಯದೆಂದರೆ, ದೇವೇಗೌಡರು ತಮ್ಮ ಪ್ರಮುಖ ಇಬ್ಬರು ಎದುರಾಳಿಗಳು (ಬಿಜೆಪಿ ಮತ್ತು ಕಾಂಗ್ರೆಸ್‌) ಪಡೆದ ಒಟ್ಟು ಮತಗಳಿಗಿಂತಲೂ 90 ಸಾವಿರ ಹೆಚ್ಚು ಮತಗಳನ್ನು ಪಡೆದಿದ್ದರು. ಎರಡನೆಯದಾಗಿ ಹಾಸನ ಕ್ಷೇತ್ರದ ಇತಿಹಾಸದಲ್ಲೇ  ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಇಳಿಯಿತು.

‘2009ರ ಚುನಾವಣೆಯಲ್ಲಿ ದೇವೇಗೌಡರಿಗೆ ಸರಿಯಾದ ಎದುರಾಳಿಯೇ ಇರಲಿಲ್ಲ. ಕಾಂಗ್ರೆಸ್‌, ಬಿಜೆಪಿ ಎದುರಾಳಿಗಳು ದುರ್ಬಲರು ಅನ್ನಿಸಿತ್ತು. ಚುನಾವಣೆಗೂ ಮೊದಲೇ ದೇವೇಗೌಡರು ಗೆದ್ದಾಗಿತ್ತು’ ಎಂದು ಮುಖಂಡರು ಆ ಚುನಾವಣೆಯನ್ನು ಸ್ಮರಿಸುತ್ತಾರೆ.

‘ಲಿಂಗಾಯತ ಅಭ್ಯರ್ಥಿ ಕಣದಲ್ಲಿ ಇದ್ದರೆ ಮಾತ್ರ ಮತಗಳು ವಿಭಜನೆಯಾಗಿ ದೇವೇಗೌಡರು ಗೆಲ್ಲುತ್ತಾರೆ’ ಎಂದು ಕೆಲವರು ವಾದಿಸುತ್ತಾರೆ, ‘ಲಿಂಗಾಯತರು ದೇವೇಗೌಡರಿಗೆ ಮತ ಕೊಡುವುದಿಲ್ಲ’ ಎನ್ನುವವರೂ ಇದ್ದಾರೆ. 2004 ಮತ್ತು 2009ರಲ್ಲಿ ಲಿಂಗಾಯತ ಅಭ್ಯರ್ಥಿ ಕಣದಲ್ಲಿ ಇರಲಿಲ್ಲ. ಆದರೂ ದೇವೇಗೌಡರು ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ ಎಂಬುದು ಗಮನಾರ್ಹ ವಿಚಾರವಾಗಿದೆ.

2014ರ ಚುನಾವಣೆ ಈಗ ಕಾವು ಏರಲು ಆರಂಭವಾಗಿದೆ. ಕಣದಲ್ಲಿ ಸಮಬಲದ ಹೋರಾಟ ಕಾಣುತ್ತಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ. ಈ ಬಾರಿ ಇನ್ನೊಂದು ಇತಿಹಾಸ ಸೃಷ್ಟಿಯಾಗುವುದೇ ಎಂದು ತಿಳಿಯಲು ಇನ್ನೂ ಒಂದೂವರೆ ತಿಂಗಳು ಕಾಯಬೇಕು. ಅದಕ್ಕೂ ಮೊದಲು ಏ.17ರಂದು ಕ್ಷೇತ್ರದ ಮತದಾರರು ಮತಗಟ್ಟೆಗೆ ಬಂದು ತಮ್ಮ ಅಧಿಕಾರ ಚಲಾಯಿಸಬೇಕು.

2004ರ ಚುನಾವಣೆಯ ವಿವರ (ಅಭ್ಯರ್ಥಿ ಮತ್ತು ಪಡೆದ ಮತ)

ಎಚ್‌.ಡಿ. ದೇವೇಗೌಡ:  4,62,625
ಎಚ್‌.ಸಿ. ಶ್ರೀಕಂಠಯ್ಯ:  2,72,320
ಎಚ್‌.ಎನ್‌. ನಂಜೇಗೌಡ: 86,940
ಎಜಾಜ್‌ ಅಹ್ಮದ್‌ ಫಾರೂಕಿ: 52,922
ಕೋವಿ ಬಾಬಣ್ಣ:  22,795
ಸಿದ್ದೇಗೌಡ:  14,593

2009ರ ಚುನಾವಣೆಯ ವಿವರ (ಅಭ್ಯರ್ಥಿ ಮತ್ತು ಪಡೆದ ಮತ)

ಎಚ್‌.ಡಿ. ದೇವೇಗೌಡ:  4,96,429
ಕೆ.ಎಚ್‌. ಹನುಮೇಗೌಡ: 2,05,316
ಬಿ. ಶಿವರಾಮು:  2,01,147
ಎ.ಪಿ. ಅಹ್ಮದ್‌:  23,002
ಕೆ.ಡಿ. ರೇವಣ್ಣ:  14,447
ಬಿ.ಸಿ. ವಿಜಯಕುಮಾರ್‌: 12,274
ಕೋಡಿಹಳ್ಳಿ ಚಂದ್ರಶೇಖರ್‌: 7831
ಎಜಾಜ್‌ ಅಹ್ಮದ್‌ ಫಾರೂಕಿ:  4816
ರಜನಿ ನಾರಾಯಣಗೌಡ: 3556
ಕೋವಿ ಬಾಬಣ್ಣ:  3137
ಎಂ. ಮಹೇಶ್‌:  2896
ದಂಡೋರ ವಿಜಯಕುಮಾರ್‌: 2766
ದೇವರಾಜ್‌ ಪಿ.ಬಿ.:  2731

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT