ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದಲ್ಲೇ ಬೀಡುಬಿಟ್ಟ ಮುಖಂಡರು

Last Updated 24 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಉಪ ಚುನಾವಣೆಯಲ್ಲಿ  ಸೋಲಿಸಲೇಬೇಕೆಂಬ ಪಣ ತೊಟ್ಟಿರುವ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ನ ಮುಖಂಡರು ಬಳ್ಳಾರಿಯಲ್ಲೇ ಬೀಡುಬಿಟ್ಟಿದ್ದು, ಗ್ರಾಮಾಂತರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪ್ರತಿ ಗ್ರಾಮಗಳಿಗೂ ತೆರಳಿ ಜನರೊಂದಿಗೆ ಸಭೆ ನಡೆಸುತ್ತಿದ್ದಾರೆ.

ಅತ್ತ ಶ್ರೀರಾಮುಲು ಅವರು ಗ್ರಾಮೀಣ ಪ್ರದೇಶದಲ್ಲಿ ಏಕಾಂಗಿಯಾಗಿ ಪ್ರಚಾರದಲ್ಲಿ ತೊಡಗಿದ್ದರೆ, ಮೂವರು ಆಪ್ತ ಶಾಸಕರು ಇಬ್ಬರು ಸಂಸದರು ಪ್ರತ್ಯೇಕವಾಗಿ ತೆರಳಿ  ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.

`ಸ್ಥಳೀಯರು ಎಂಬ ಕಾರಣದಿಂದ ಸಹಜವಾಗಿಯೇ ಶ್ರೀರಾಮುಲು ಅವರತ್ತ ಮತದಾರ ವಾಲಬಹುದು~ ಎಂಬ ಭಯದಿಂದ, ಸರ್ಕಾರವೇ ಬಳ್ಳಾರಿಯಲ್ಲಿ ಬೀಡುಬಿಟ್ಟಿದೆ. ಸಚಿವರು, ಸಂಸದರು, ಶಾಸಕರು, ನಿಗಮ, ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರು ಬೆಳಿಗ್ಗೆಯಿಂದ ರಾತ್ರಿವರೆಗೆ ಮನೆಮನೆಗೆ ಭೇಟಿ ನೀಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಸಚಿವರು ಮತ್ತು ಶಾಸಕರು ಆಯಾ ಜಾತಿ, ಜನಾಂಗದ ಜನರಿರುವ ಪ್ರದೇಶಗಳಿಗೆ ಭೇಟಿ ನೀಡುತ್ತ, ಮುಖಂಡರ ಮನೆಗೆ ತೆರಳಿ 20ರಿಂದ 30 ಜನ ಜನರನ್ನು ಸೇರಿಸಿ, ಆಡಳಿತಾರೂಢ ಪಕ್ಷಕ್ಕೇ ಮತ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಕಾನೂನು ಸಚಿವ ಸುರೇಶಕುಮಾರ್ ಅವರು ಗುರುವಾರ ಜಾಲಿಹಾಳು, ಕಾರೇಕಲ್ಲು, ಯರಗುಡಿ, ಎಂ. ಗೋನಾಳು ಮತ್ತಿತರ ಗ್ರಾಮಗಳಲ್ಲಿನ ಮೇಲ್ವರ್ಗದ ಮನೆಗಳಿಗೆ ವಕೀಲರೊಂದಿಗೆ ತೆರಳಿ ಗ್ರಾಮದ ಮುಖ್ಯಸ್ಥರ ಮನ ಒಲಿಸುವಲ್ಲಿ ತಲ್ಲೆನರಾಗಿದ್ದರು.

ಅದೇ ಗ್ರಾಮಗಳ ದಲಿತ ಕೇರಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎ.ನಾರಾಯಣಸ್ವಾಮಿ ಅವರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ ಹಾಗೂ ತಾಲ್ಲೂಕಿನ ದಲಿತ ಮುಖಂಡರೊಂದಿಗೆ ತೆರಳಿ, ಹಿಂದುಳಿದ, ಶೋಷಿತ ವರ್ಗದವರಿಗೆ ಸೌಲಭ್ಯ ಸಿಗುವಂತಾಗಬೇಕಾದರೆ, ಬಿಜೆಪಿಯನ್ನೇ ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.

ಸಚಿವ ಎ.ರಾಮದಾಸ್ ಬೆಳಗಿನ ಜಾವವೇ ನಗರದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ) ಕ್ರೀಡಾಂಗಣಕ್ಕೆ ತೆರಳಿ, ವಾಯು ವಿಹಾರಿಗಳ ಬಳಿ ಮತ ಯಾಚಿಸಿದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಸಿ.ಸಿ. ಪಾಟೀಲ ರೂಪನಗುಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಮಹಿಳಾ ಸಂಘಗಳ ಸಭೆ ನಡೆಸಿದರು.

ಸಚಿವರ ದಂಡೇ ಕ್ಷೇತ್ರದತ್ತ ಧಾವಿಸಿದ್ದು ಸಿ.ಪಿ. ಯೋಗೀಶ್ವರ್, ವಿಶ್ವೇಶ್ವರ ಹೆಗಡೆ ಕಾಗೇರಿ, ರೇವೂನಾಯಕ ಬೆಳಮಗಿ, ರೇಣುಕಾಚಾರ್ಯ, ಗೋವಿಂದ ಕಾರಜೋಳ,  ವರ್ತೂರ್ ಪ್ರಕಾಶ, ಬಾಲಚಂದ್ರ ಜಾರಕಿಹೊಳಿ, ಸಿ.ಎಂ. ಉದಾಸಿ, ಎಸ್.ಎ. ರವೀಂದ್ರನಾಥ್, ಲಕ್ಷ್ಮಣ ಸವದಿ, ಮಾಜಿ ಸಚಿವರಾದ ಮುಮ್ತಾಜ್ ಅಲಿ ಖಾನ್, `ಮುಖ್ಯಮಂತ್ರಿ~ ಚಂದ್ರು ಅವರು ಹಳ್ಳಿಗಳಿಗೆ ತೆರಳಿ ಪ್ರಭಾವ ಬೀರಲಾರಂಭಿಸಿದ್ದಾರೆ.

ಉಪ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ನ ಬಹುತೇಕ ಮುಖಂಡರೂ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್, ವಿಧಾನಸಭೆಯ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ, ವಿ.ಎಸ್. ಉಗ್ರಪ್ಪ, ಮೋಟಮ್ಮ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ, ಡಿ.ಕೆ. ಶಿವಕುಮಾರ್, ಎ.ಎಂ. ಹಿಂಡಸಗೇರಿ, ಬಸವರಾಜ ರಾಯರೆಡ್ಡಿ, ಅನಿಲ್ ಲಾಡ್, ಸಂತೋಷ್ ಲಾಡ್ ಮತ್ತಿತರರು ಕ್ಷೇತ್ರ ವ್ಯಾಪ್ತಿಯ ಕೌಲ್‌ಬಝಾರ್ ಹಾಗೂ   ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಬಿಜೆಪಿ ಮತ್ತು ಶ್ರೀರಾಮುಲು ಅವರ ನಿಲುವುಗಳನ್ನು ದೂಷಿಸುತ್ತ ಪ್ರಸಕ್ತ ಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT