ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೌರ ಮಾಡದ ಮುಖವು ಮಾನಿನಿಯರ ಸೆಳೆಯದು ಕಣಾ ...

Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಕುರುಚಲು ಗಡ್ಡ ನಿಮ್ಮ ಸೋಮಾರಿತನದ ಪ್ರತೀಕ’, ‘ಅಯ್ಯೋ ನೀವು ಶೇವಿಂಗ್ ಮಾಡಿಕೊಂಡಿಲ್ಲವೇ’ ಎಂಬ ಘೋಷಣೆಗಳನ್ನು ಓದಿಕೊಂಡ ಗಂಡು ಹೈಕಳು ತಮ್ಮ ಕೆನ್ನೆ ನೀವಿಕೊಂಡರು. ಕೆಲವರು ತಮ್ಮ ಬಗ್ಗೆ ಅಯ್ಯೋ ಅಂದುಕೊಂಡರೆ ಇನ್ನು ಕೆಲವರು ಆಹಾ ತಾವು ‘ಅಪ್‌ಡೇಟೆಡ್’ ಎಂದು ಬೆನ್ನು ಚಪ್ಪರಿಸಿಕೊಂಡರು.

ರೇಸ್ ಕೋರ್ಸ್ ರಸ್ತೆಯ ಹೋಟೆಲ್‌ ತಾಜ್ ವೆಸ್ಟೆಂಡ್ ಸಭಾಂಗಣದತ್ತ ಮುಖಮಾಡಿದ್ದ ಕೆಂಪುಹಾಸುಗಳನ್ನೂ ಕಸಕಡ್ಡಿಯಿಲ್ಲದಂತೆ ಜೋಪಾನ ಮಾಡಲಾಗಿತ್ತು. ಅವುಗಳೂ ಸ್ನಾನ ಮಾಡಿದ್ದವೇನೊ! ಹೇಳಿಕೇಳಿ ಅದು ‘ಜಿಲೆಟ್ ಫ್ಯೂಷನ್ ಪವರ್ ಫ್ಯಾಂಟಮ್’ ಕಂಪೆನಿ. ದೇಶದ ಮಹಾನಗರಗಳಲ್ಲಿ ನಡೆಸುತ್ತಿರುವ ‘ಶೇವಿಂಗ್ ಡೇ’ ಕಾರ್ಯಕ್ರಮ ಅದಾಗಿತ್ತು. ಹೀಗೆ ಎಲ್ಲೆಲ್ಲೂ ಲಕಲಕಿಸುತ್ತಿದ್ದ ಆ ವಾತಾವರಣಕ್ಕೆ ಒಮ್ಮಿಂದೊಮ್ಮೆಲೇ ಸಾವಿರ ವೋಲ್ಟ್ ಬೆಳಕಿನ ಝಲಕ್ ಬಂತು.

ಟೆನಿಸ್ ತಾರೆ ರೋಹನ್ ಬೋಪಣ್ಣ ಬಾಯ್ತುಂಬಾ ನಗುತ್ತಾ ಅಂಗಣ ಪ್ರವೇಶಿಸಿದರು. ಜೊತೆಯಲ್ಲಿದ್ದವರು ಬಾಲಿವುಡ್ ಬೆಡಗಿ ಚಿತ್ರಾಂಗದಾ ಸಿಂಗ್.
ಬೋರ್ನ್‌ವಿಟಾ ಬಣ್ಣದ ಪ್ಯಾಂಟ್‌, ಕೆನೆಬಣ್ಣ ಮತ್ತು ನೀಲಿ ಕಾಂಬಿನೇಷನ್‌್ ಟಿ–ಶರ್ಟ್ ಧರಿಸಿದ್ದ ರೋಹನ್‌ ಅವರ ಬೆನ್ನಿಗಂಟಿಕೊಂಡಂತೆ ಬಂದ ಚಿತ್ರಾಂಗದಾ, ಕಡುಕಪ್ಪು ಬಣ್ಣದ ಸ್ಲ್ಯಾಕ್ಸ್ ಮೇಲೆ ಅಂತಹುದೇ ಫುಲ್‌ ಸ್ಲೀವ್ಸ್ ಟಿ–ಶರ್ಟ್‌ ಧರಿಸಿದ್ದರು. ‘ಹಾಯ್‌ ಎವೆರಿಬಡಿ’ ಎಂದವರೇ ಮತ್ತೆ ನಾಲ್ಕು ಹೆಜ್ಜೆ ಮುಂದೆ ಬಂದು ಜಿಲೆಟ್ ರೇಸರ್‌ನ ಮಾದರಿಯ ಸ್ಪೀಚ್ ಸ್ಟ್ಯಾಂಡ್‌ ಮುಂದೆ ನಿಂತರು.

‘ಜಿಲೆಟ್‌ನಿಂದ ಪ್ರತಿನಿತ್ಯ ಗಡ್ಡ ಶೇವ್‌ ಮಾಡಿಕೊಳ್ಳಿ; ಶೇವ್‌ ಮಾಡಿಕೊಳ್ಳದಿರುವವರು ಸ್ನಾನ ಮಾಡಿಲ್ಲವೆಂದೇ ಅರ್ಥ’ ಎಂಬುದು ದೇಶದೆಲ್ಲೆಡೆ ಜಿಲೆಟ್ ಕೈಗೊಂಡಿರುವ ’ಶೇವಿಂಗ್ ಡೇ’ಯ ಘೋಷವಾಕ್ಯ. ಅದನ್ನೇ ಮತ್ತೊಮ್ಮೆ ಹೇಳಿದ ಚಿತ್ರಾಂಗದಾ ಜೋರಾಗಿ ನಕ್ಕರು. ‘ಜಂಟಲ್‌ಮೆನ್, ಹೆಣ್ಣುಮಕ್ಕಳ ಗಮನ ಸೆಳೆಯಬೇಕಾದರೆ ಪ್ರತಿದಿನ ಗಡ್ಡ ಶೇವ್ ಮಾಡಿಕೊಳ್ಳೀಪ್ಪಾ’ ಎಂದವರೇ ರೋಹನ್‌ ಬೋಪಣ್ಣ ತಮ್ಮ ಕ್ಲೀನ್ ಶೇವ್‌ ಆಗಿದ್ದ ಕೆನ್ನೆ ಸವರಿಕೊಂಡರು. ರೋಹನ್ ಮುಖದ ನಗೆ ಸಾವಿರ ವೋಲ್ಟ್ ದಾಟಿತು!

ರೋಹನ್ ದನಿಗೂಡಿಸಿದರು. ‘ಹೌದು, ಶೇವಿಂಗ್‌ ಮಾಡಿಕೊಂಡು ಕ್ಲೀನ್ ಆಗಿ ಕಾಣಿಸುವ ಪುರುಷರನ್ನು ಹೆಣ್ಣುಮಕ್ಕಳು ಇಷ್ಟಡುತ್ತಾರೆ ಎಂಬುದು ನಿಜ. ನಾನಂತೂ ಪ್ರತಿದಿನ ಶೇವ್ ಮಾಡಿಕೊಳ್ಳದೆ ಮನೆಯಿಂದಾಚೆ ತಲೆ ಹಾಕೋಲ್ಲ’ ಎಂದರು. ಚಿತ್ರಾಂಗದಾ ಮಾತು ಮುಂದುವರಿಸಿದರು. ‘ಪುರುಷರು ಶೇವ್ ಮಾಡಿಕೊಂಡು ಈಚೆ ಬಂದರೆಂದರೆ ಸುವಾಸನಾಭರಿತರಾಗಿರುತ್ತಾರೆ.

ಅದು ಹೆಣ್ಣುಮಕ್ಕಳನ್ನು ಸೆಳೆಯುವ ಮೊದಲ ಅಂಶ. ಪುರುಷರ ಬಗ್ಗೆ ಹೆಣ್ಣುಮಕ್ಕಳ ನಿರೀಕ್ಷೆಯೂ ಇದೇ ಆಗಿರುತ್ತದೆ. ಮತ್ತೊಂದು ವಿಷಯ ಗೊತ್ತಾ? ‘ಪರ್ಸನಲ್ ಗ್ರೂಮಿಂಗ್’ ಎಂದರೆ ಬರಿಯ ಕ್ರೀಮ್, ಪೌಡರ್ ಬಳಿದುಕೊಂಡು ಒಳ್ಳೆಯ ಬಟ್ಟೆ ಧರಿಸಿಕೊಂಡು ಕೂಲಿಂಗ್ ಗ್ಲಾಸ್ ಏರಿಸಿಕೊಂಡು ಹೊರಡುವುದೆಂದರ್ಥವಲ್ಲ. ಶೇವಿಂಗ್, ಮುಖಕ್ಕೊಪ್ಪುವ ಕೇಶ ವಿನ್ಯಾಸ, ಧರಿಸುವ ಪಾದರಕ್ಷೆ, ಪ್ಯಾಂಟ್– ಶರ್ಟ್‌ಗೆ ಒಪ್ಪುವ ಬೆಲ್ಟ್, ಟೈ ಹೀಗೆ ಪ್ರತಿಯೊಂದು ಸೂಕ್ಷ್ಮ ಅಂಶವನ್ನೂ ಒಳಗೊಳ್ಳುತ್ತವೆ’ ಎಂದು ಪಟ್ಟಿಯನ್ನೇ ಒಪ್ಪಿಸಿದರು.

ಕಾರ್ಯಕ್ರಮದಲ್ಲಿ ಕೆಲವು ಆಸಕ್ತಿಕರ ಅಂಶಗಳನ್ನು ತಿಳಿಯಪಡಿಸಲಾಯಿತು. ಶೇ 83ರಷ್ಟು ಮಹಿಳೆಯರು ಮುಖಕ್ಷೌರ ಮಾಡದ ಪುರುಷರು ಸ್ನಾನ ಮಾಡಿಲ್ಲ ಎಂದು ತೀರ್ಮಾನಿಸುತ್ತಾರೆ; ಲಕ್ಷಣವಾಗಿ ಸಂಪೂರ್ಣ ಮುಖಕ್ಷೌರ ಮಾಡಿಕೊಂಡಿರುವ ಪುರುಷರು ಉತ್ತಮ ಸುವಾಸನೆ ಹೊಂದಿರುತ್ತಾರೆ ಎಂದು ಶೇ ೮೬ ಮಹಿಳೆಯರು ಭಾವಿಸುತ್ತಾರೆ; ಸಂಪೂರ್ಣ ಮುಖಕ್ಷೌರ ಮಾಡಿಕೊಂಡಿರುವ ಪುರುಷರು ಶೇ 84 ಮಹಿಳೆಯರನ್ನು ಮೊದಲ ನೋಟದಲ್ಲೇ ಉತ್ತಮ ಭಾವನೆ ಮೂಡಿಸುತ್ತಾರೆ (ಫಸ್ಟ್ ಇಂಪ್ರೆಷನ್ ಈಸ್ ದ ಬೆಸ್ಟ್ ಇಂಪ್ರೆಷನ್)... ಹೀಗೆ. ಅಂದಹಾಗೆ, ‘ಜಿಲೆಟ್ ಫ್ಯೂಷನ್ ಪವರ್ ಫ್ಯಾಂಟಮ್’ ಈಗ ಒಂದಿಷ್ಟು ರಿಯಾಯಿತಿ ದರದಲ್ಲೂ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT