ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿ ಕೇಂದ್ರದಲ್ಲಿ ವಹಿವಾಟು ಸ್ಥಗಿತ

ಸಾರಿಗೆ ಗುತ್ತಿಗೆದಾರನ ವಿರುದ್ಧ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ
Last Updated 9 ಜನವರಿ 2014, 5:53 IST
ಅಕ್ಷರ ಗಾತ್ರ

ಹರಪನಹಳ್ಳಿ: ಮೆಕ್ಕೆಜೋಳದ ಖರೀದಿ ಕೇಂದ್ರದಲ್ಲಿ ಖರೀದಿಸಿದ ಚೀಲಗಳನ್ನು ರಾಜ್ಯ ಉಗ್ರಾಣ ನಿಗಮದ ಗೋದಾಮುಗಳಿಗೆ ಸಾಗಾಣಿಕೆ ಮಾಡಲು ಸಾರಿಗೆ ಗುತ್ತಿಗೆ ಪಡೆದುಕೊಂಡಿರುವ ಏಜೆನ್ಸಿ ಸಮರ್ಪಕವಾಗಿ ಲಾರಿ ಒದಗಿಸದ ಹಿನ್ನೆಲೆಯಲ್ಲಿ ಕಳೆದ 8–10ದಿನಗಳಿಂದ ವಹಿವಾಟು ಸ್ಥಗಿತಗೊಂಡಿದ್ದು, ಬುಧವಾರ ಜಿಲ್ಲಾಧಿಕಾರಿ ಟಿ.ಎಸ್‌. ಅಂಜನಕುಮಾರ್‌ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣಕ್ಕೆ ಜಿಲ್ಲಾಧಿಕಾರಿ ಪ್ರವೇಶಿಸುತ್ತಿದ್ದಂತಿಯೇ ಆವರಣದ ತುಂಬೆಲ್ಲಾ ಮೆಕ್ಕೆಜೋಳ ಚೀಲಗಳ ಸಾಲು ಸಾಲು  ಕಂಡು ದಂಗಾದರು. ಅದಕ್ಕೂ ಮೊದಲು ಖರೀದಿ ಕೇಂದ್ರದ ಅವ್ಯವಸ್ಥೆ ಕುರಿತಂತೆ ರೈತರ ಆಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ನಂತರ ಕೇಂದ್ರಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದರು. ಕೇಂದ್ರದಲ್ಲಿ ವಹಿವಾಟು ಸ್ಥಗಿತಗೊಳ್ಳಲು ಸಾರಿಗೆ ಏಜೆನ್ಸಿಯೇ ಮೂಲ ಕಾರಣ ಎಂದು ಅಧಿಕಾರಿಗಳು ಹಾಗೂ ರೈತರು ದೂರಿದರು.

ರೈತರ ಸಂಕಷ್ಟವನ್ನು ಆಲಿಸಿದ ಜಿಲ್ಲಾಧಿಕಾರಿ, ಸಾರಿಗೆ ಏಜೆನ್ಸಿ ವಿರುದ್ಧ ಕೆಂಡಾಮಂಡಲರಾಗಿ, ಮೆಕ್ಕೆಜೋಳ ಖರೀದಿಸಲು ಏಜೆನ್ಸಿ ಪಡೆದುಕೊಂಡಿರುವ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಭರತೇಶ್‌ ಅವರಿಗೆ ದೂರವಾಣಿ ಮೂಲಕ ಮಾತನಾಡಿದರು.

ರೂ. 1.50 ಕೋಟಿ ಬಾಕಿ: ‘ಸಾರಿಗೆ ಏಜೆನ್ಸಿ ಸಮರ್ಪಕ ಲಾರಿ ಒದಗಿಸುತ್ತಿಲ್ಲ. ಒಂದು ದಿನ ನಾಲ್ಕಾರು ಲಾರಿ ಒದಗಿಸಿ, 8–10ದಿನ ಮುಖ ತೋರಿಸದೆ ನಾಪತ್ತೆಯಾಗುತ್ತಾನೆ. ಕೇಳಿದರೆ, ಸರ್ಕಾರದಿಂದ ನನಗೆ ರೂ.1.50ಕೋಟಿಗೂ ಅಧಿಕ ಬಾಕಿ ಹಣ ಬರಬೇಕಿದೆ. ಹಣ ಬರದಿದ್ದರೇ ನಾನು ಹೇಗೆ ಲಾರಿ ಒದಗಿಸಲಿ ಎಂದು ಸಬೂಬು ಹೇಳುತ್ತಾನೆ. ಹೀಗಾಗಿ ಖರೀದಿ ಪ್ರಕ್ರಿಯೆ ಕಗ್ಗಂಟಾಗಿದೆ. ನೀವು ಸರಿಯಾಗಿ ಹಣ ಪಾವತಿಸುತ್ತಿಲ್ಲ. ರೈತರಿಗೂ ಕಳೆದ 18ದಿನಗಳಿಂದ ಖರೀದಿಸಿದ ದಾಸ್ತಾನಿಗೆ ಹಣ ಜಮೆ ಮಾಡಿಲ್ಲ. ಹೀಗಾದರೆ, ಜಿಲ್ಲಾಡಳಿತ ಹೇಗೆ ನಿಭಾಯಿಸಬೇಕು. ನೀವು ದಾವಣಗೆರೆಗೆ ಬನ್ನಿ. ಆಗ ನಿಮಗೆ ರೈತರ ಸಮಸ್ಯೆ ಮನವರಿಕೆಯಾಗುತ್ತದೆ’ ಎಂದು ಏರು ಧ್ವನಿಯಲ್ಲಿ ದೂರವಾಣಿ ಮೂಲಕ ಜಿಲ್ಲಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಕುಳಿತು ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ನಿಮ್ಮಿಂದ ಸಾಧ್ಯವಾಗದಿದ್ದರೆ ಜಿಲ್ಲಾಡಳಿತ ಕ್ಕಾದರೂ ಜವಾಬ್ದಾರಿ ನೀಡಿ. ಸಾರಿಗೆ, ಗೋದಾಮು ಎಲ್ಲವನ್ನು ನಾವೇ ನಿಭಾಯಿಸುತ್ತೇವೆ ಎಂದು ಸಲಹೆ ನೀಡಿದ ಜಿಲ್ಲಾಧಿಕಾರಿ ಅಂಜನಕುಮಾರ್‌, ಇಂದಿನಿಂದಲೇ ಸಮರ್ಪಕ ಲಾರಿ ಒದಗಿಸುವಂತೆ ಗುತ್ತಿಗೆದಾರನಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಇಲ್ಲವಾದಲ್ಲಿ ನಾನೇ ಪರ್ಯಾಯ ವ್ಯವಸ್ಥೆ ಮಾಡುವ ಮೂಲಕ ಲಾರಿ ಒದಗಿಸುತ್ತೇನೆ ಎಂದು ಕೊನೆಯ ಎಚ್ಚರಿಕೆ ಸಂದೇಶ ರವಾನಿಸಿದರು.

ಮಾರಾಟ ಮಾಡಲು ನೆಲದ ಮೇಲೆ  ಹಾಗೂ ರಸ್ತೆಯ ಬದಿಯಲ್ಲಿ ಹೊಟ್ಟಿರುವ ಚೀಲಗಳನ್ನು ಆದ್ಯತೆಯ ಮೇರೆಗೆ ಮೊದಲು ಖರೀದಿಸಬೇಕು. ನಂತರ ಲಾರಿಗಳಲ್ಲಿನ ಚೀಲಗಳನ್ನು ಖರೀದಿಸಿ ಎಂದು ಕೇಂದ್ರದ ವ್ಯವಸ್ಥಾಪಕರಿಗೆ ಸೂಚಿಸಿದರು.

ನಾಳೆಯಿಂದಲೇ ನಿತ್ಯವೂ ಕನಿಷ್ಠ 10ಲಾರಿ ಒದಗಿಸಲು ಉಗ್ರಾಣ ನಿಗಮ ಒಪ್ಪಿಕೊಂಡಿದೆ. ತಪ್ಪಿದಲ್ಲಿ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ, ಸಮಸ್ಯೆ ಪರಿಹರಿಸುತ್ತದೆ.  ಉಗ್ರಾಣ ನಿಗಮ ಹಾಗೂ ಲಾರಿ ಏಜೆನ್ಸಿ ನಡುವಿನ ಸಮನ್ವಯ ಕೊರತೆಯ ಪ್ರಮಾದ ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ. ರೈತರು ಜಿಲ್ಲಾಡಳಿತಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌, ತಹಶೀಲ್ದಾರ್‌ ಸಿ.ಡಿ. ಗೀತಾ, ಸಿಪಿಐ ಎಂ.ಎನ್‌. ರುದ್ರಪ್ಪ ಇತರ ಅಧಿಕಾರಿಗಳು ಇದ್ದರು.
ಇದಕ್ಕೂ ಮುನ್ನ ರೈತ ಶಿಕಾರಿ ಬಾಲಪ್ಪ ನೇತೃತ್ವದಲ್ಲಿ ಮಿನಿ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿ
ಭೇಟಿ ನೀಡಿ ಸಮಸ್ಯೆ ಇತ್ಯರ್ಥಪಡಿಸುವಂತೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT