ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆಗೆ ಗೆಲುವಿನ ಧ್ಯಾನ, ಬಿಜೆಪಿಗೆ ಮೋದಿ ಜಪ

Last Updated 10 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ‘ಹಳೆ ಜೋಡಿ, ಹೊಸ ಕುಸ್ತಿ’. ಇಂತಹ­ದೊಂದು ಮಾತು ಗುಲ್ಬರ್ಗ ಮೀಸಲು (ಪರಿಶಿಷ್ಟ ಜಾತಿ) ಲೋಕಸಭಾ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

2009ರ ಚುನಾವಣೆಯಲ್ಲೂ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ರೇವೂ ನಾಯಕ್‌ ಬೆಳಮಗಿ ಮುಖಾಮುಖಿಯಾಗಿದ್ದರು. ಖರ್ಗೆಯವರು 13,404 ಸಾವಿರಗಳಿಂದ ಗೆಲುವು ಸಾಧಿಸಿದ್ದರು.

ಈ ಬಾರಿಯೂ ಇವರಿಬ್ಬರೂ ಎದುರಾಳಿಗಳು. ಕಣದಲ್ಲಿ 8 ಅಭ್ಯರ್ಥಿಗಳು ಇದ್ದರೂ ನೇರ ಹೋರಾಟ ಇರುವುದು  ಖರ್ಗೆ ಹಾಗೂ  ಬೆಳಮಗಿ ನಡುವೆಯೇ.

ಕ್ಷೇತ್ರದ ವ್ಯಾಪ್ತಿಯಲ್ಲಿ ಗುಲ್ಬರ್ಗ ಜಿಲ್ಲೆಯ ಜೇವರ್ಗಿ, ಅಫಜಲಪುರ, ಚಿತ್ತಾಪುರ, ಸೇಡಂ, ಗುಲ್ಬರ್ಗ ಉತ್ತರ, ಗುಲ್ಬರ್ಗ ದಕ್ಷಿಣ, ಗುಲ್ಬರ್ಗ ಗ್ರಾಮೀಣ ಕ್ಷೇತ್ರಗಳು ಬರು­ತ್ತವೆ. ಅವುಗಳಲ್ಲಿ ಗುಲ್ಬರ್ಗ ದಕ್ಷಿಣ ಕ್ಷೇತ್ರ (ಬಿಜೆಪಿ) ಹೊರತು ಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು ಇದ್ದಾರೆ. ಈ ಕ್ಷೇತ್ರಕ್ಕೆ ಯಾದಗಿರಿ ಜಿಲ್ಲೆಯ ಗುರುಮಠಕಲ್‌ ವಿಧಾನಸಭಾ ಕ್ಷೇತ್ರವೂ ಸೇರಿದ್ದು, ಅಲ್ಲಿಯೂ ಕಾಂಗ್ರೆಸ್‌ ಗೆದ್ದಿದೆ.

ಸಚಿವ ಸ್ಥಾನ ತಂದ ಬಲ: ಖರ್ಗೆ ಅವರು ಕೇಂದ್ರದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು. 9 ತಿಂಗಳ ಹಿಂದೆಯಷ್ಟೇ ರೈಲ್ವೆ ಸಚಿವರಾಗಿದ್ದಾರೆ. ಆ ಅವಕಾಶ­ವನ್ನು ಬಳಸಿಕೊಂಡು ತಾವು ಪ್ರತಿನಿಧಿಸು­ತ್ತಿರುವ ಕ್ಷೇತ್ರದಲ್ಲಿ ‘ಕಣ್ಣಿಗೆ’ ಎದ್ದು ಕಾಣಿಸುವಂತಹ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.

ಇಎಸ್‌ಐ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳ ಸಂಕೀರ್ಣ, ಕೇಂದ್ರೀಯ ವಿವಿ ಸ್ಥಾಪನೆ, ಯಾದಗಿರಿ ಬಳಿ ರೈಲು ಬೋಗಿ ನಿರ್ಮಾಣ ಘಟಕ ಸ್ಥಾಪನೆಗೆ ಚಾಲನೆ, ಜವಳಿ ಪಾರ್ಕ್, ಹೊಸ ರೈಲುಗಳ ಸಂಚಾರ, ನನೆಗುದಿಗೆ ಬಿದ್ದಿದ್ದ ರೈಲು ಯೋಜನೆಗಳಿಗೆ ಮರುಜೀವ ಹಾಗೂ 371 (ಜೆ) ತಿದ್ದುಪಡಿಗೆ ಪೂರಕವಾಗಿ ಕೆಲಸ ಮಾಡಿದ್ದು– ಹೀಗೆ ಪಟ್ಟಿ ಬೆಳೆಯುತ್ತದೆ. ಖರ್ಗೆ­ಯವರು ಇವುಗಳನ್ನೇ ಪ್ರಧಾನವಾಗಿಟ್ಟುಕೊಂಡು ಕ್ಷೇತ್ರದಲ್ಲಿ ಮತ ಕೇಳುತ್ತಿದ್ದಾರೆ.

‘ನಾನು ಎಂಥ ಕೆಲಸಗಾರ ಎನ್ನುವುದು ಗುರುಮಠ­ಕಲ್‌ ಕ್ಷೇತ್ರದ ಜನತೆಗೆ ಗೊತ್ತಿತ್ತು. ಆದರೆ, ಜಿಲ್ಲೆಯ ಜನ­ರಿಗೆ ತಿಳಿದಿರಲಿಲ್ಲ. ಆದ್ದರಿಂದ ಕಳೆದ ಬಾರಿ ಅಲ್ಪ ಮತ­ಗಳಿಂದ ಗೆಲುವು ಸಾಧಿಸಿದೆ. ಈ ಬಾರಿ ನನ್ನ ಕೆಲಸ­ಗಳೇ ಮತ ಕೇಳುತ್ತಿವೆ. ಕ್ಷೇತ್ರದ ಜನತೆ ನನ್ನನ್ನು ಇಂಥ ಕೆಲಸ ಮಾಡು ಎಂದು ಕೇಳಿರಲಿಲ್ಲ, ನಾನು ಮಾಡು­ತ್ತೇನೆ ಎಂದು ಭರವಸೆಯನ್ನೂ ನೀಡಿರಲಿಲ್ಲ.  ಆದರೆ, ಸಾವಿ­ರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕೆಲಸ­ಗಳನ್ನು ಮಾಡಿದ್ದೇನೆ.

ಇದು ನಾನು ಕೆಲಸ ಮಾಡುವ ವೈಖರಿ’ ಎಂದು ಖರ್ಗೆ ಹೆಮ್ಮೆಯಿಂದ ಹೇಳುತ್ತಾರೆ. ಈ ಮಾತನ್ನು ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಖರ್ಗೆ­ಯವರು ಕೇಂದ್ರದಲ್ಲಿ ಸಚಿವರಾದ ಮೇಲೆ ಕ್ಷೇತ್ರಕ್ಕೆ ಮಾಡಿದಷ್ಟು ಕೆಲಸಗಳನ್ನು ರಾಜ್ಯದಲ್ಲಿ ಸಚಿವ­ರಾಗಿದ್ದಾಗ ಮಾಡಿದ್ದರೆ ಗುಲ್ಬರ್ಗ ಜಿಲ್ಲೆ ರಾಜ್ಯದ ಭೂಪಟದಲ್ಲಿ ‘ಮುಂದುವರಿದ ಜಿಲ್ಲೆ’ಯಾಗಿ ಗುರುತಿಸಿ­ಕೊಳ್ಳುತ್ತಿತ್ತು ಎನ್ನುವ ಮಾತನ್ನೂ ಆಡುತ್ತಿದ್ದಾರೆ.

ಖರ್ಗೆಯವರು ಗುರುಮಠಕಲ್‌ ಕ್ಷೇತ್ರದಲ್ಲಿ ಸತತ­ವಾಗಿ 8 ಬಾರಿ ಆಯ್ಕೆಯಾಗಿದ್ದರು. ಕೆಲವು ತಿಂಗಳು ಚಿತ್ತಾಪುರ ಕ್ಷೇತ್ರ­ವನ್ನೂ ಪ್ರತಿನಿಧಿಸಿದ್ದರು. ಈಗ ಈ ಕ್ಷೇತ್ರದಲ್ಲಿ ಪುತ್ರ ಪ್ರಿಯಾಂಕ್ ಖರ್ಗೆ ಶಾಸಕರು. ಹೀಗಾಗಿ ಇವೆರಡೂ ಕ್ಷೇತ್ರಗಳಿಂದ ಹೆಚ್ಚು ಮತಗಳನ್ನು ಖರ್ಗೆಯವರು ಸಹಜವಾಗಿಯೇ ನಿರೀಕ್ಷಿಸಿದ್ದಾರೆ.

ನೇರ ನುಡಿಯೇ ಅವಗುಣ!: ಖರ್ಗೆಯವರು ಸಚಿವ­ರಾದ ಮೇಲೆ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಜನರಿಗೆ ಸಿಗುವುದೂ ಕಡಿಮೆ ಆಯಿತು. ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಿಂತ ಹೆಚ್ಚಾಗಿ ಬೃಹತ್‌ ಯೋಜನೆಗಳನ್ನು ತರುವುದರಲ್ಲಿ ನಿರತ­ರಾಗಿದ್ದರು ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಇಷ್ಟೇ ಅಲ್ಲದೆ, ಖರ್ಗೆಯವರ ನೇರ ನಡೆ, ನುಡಿಯೂ ಪಕ್ಷದ ಕೆಲವರಿಗೆ ಇಷ್ಟವಾಗುತ್ತಿಲ್ಲ. ಏನಾದರೂ ಸಹಾಯ ಕೇಳಿ ಬಂದವರಿಗೆಲ್ಲ ‘ಹಗಲಲ್ಲೂ ನಕ್ಷತ್ರ’ ತೋರಿಸುವುದಿಲ್ಲ, ಅಲ್ಲದೆ ಸ್ವಾಭಿಮಾನಿ ಎನ್ನುವುದು ಅನೇಕರಿಗೆ ಸರಿಬರುತ್ತಿಲ್ಲ.

ಪೈಲ್ವಾನ್‌ ಬೆಳಮಗಿ: ಕಾಂಗ್ರೆಸ್‌ನವರಿಂದ ‘ವಿಕಾಸ ಪುರುಷ’ ಎಂದೇ ಕರೆಸಿಕೊಳ್ಳುವ ಖರ್ಗೆಯವರ ವಿರುದ್ಧ ಕುಸ್ತಿಪಟು, ಮಾಜಿ ಸಚಿವ ರೇವೂ ನಾಯಕ್‌ ಬೆಳಮಗಿ ಮತ್ತೊಮ್ಮೆ ತೊಡೆ ತಟ್ಟಿದ್ದಾರೆ. ಕಳೆದ ಬಾರಿ ಸಚಿವ­ರಾಗಿದ್ದುಕೊಂಡೇ ಸ್ಪರ್ಧೆಗಿಳಿದಿದ್ದ ಬೆಳಮಗಿ ಅವರು ಖರ್ಗೆಯವರಿಗೆ ತಮ್ಮ ‘ಚುನಾವಣಾ ಪಟ್ಟು’ಗಳನ್ನು ಸ್ವಲ್ಪ ಜೋರಾಗಿಯೇ ತೋರಿಸಿ ನಡುಕ ಹುಟ್ಟಿಸಿದ್ದರು.

7 ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಬಂಜಾರ (ಲಂಬಾಣಿ) ಸಮಾಜದ ಬೆಳಮಗಿ ‘ಸಾಮಾನ್ಯ’ರಂತೆ ಕಾಣಿಸುತ್ತಾರೆ. ಇವರು ಏಳು ವರ್ಷ ಸತತವಾಗಿ ಸಚಿವರಾಗಿದ್ದರು. ಆದರೂ ತಮ್ಮ ಜಿಲ್ಲೆ ಹಾಗೂ ತಾವು ಪ್ರತಿನಿಧಿಸಿದ ಕ್ಷೇತ್ರಕ್ಕೆ ಹೇಳಿಕೊಳ್ಳು­ವಂತಹ ಕೆಲಸ ಮಾಡಿಲ್ಲ. ಹೀಗಾಗಿಯೇ ಬಿಜೆಪಿ ಮತ್ತು ಬೆಳಮಗಿ ಅವರು ‘ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವ ಸಲುವಾಗಿ ಮತ ಹಾಕಿ’ ಎನ್ನುವ ಏಕೈಕ ಮನವಿ ಮಾಡುತ್ತಿದ್ದಾರೆ.

ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಹೋಳಾಗಿ ಕೆಜೆಪಿ ಹುಟ್ಟಿಕೊಂಡಿತ್ತು. ಈಗ ಕೆಜೆಪಿಯು ಬಿಜೆಪಿ­ಯಲ್ಲಿ ವಿಲೀನಗೊಂಡಿದೆ. ಇದು ಬಿಜೆಪಿಗೆ ಕೊಂಚ ಹುಮ್ಮಸ್ಸು ತಂದಿದೆ. ಲಿಂಗಾಯತರು, ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿಯವರ ಹಾಗೂ ಮೋದಿ ಬಗ್ಗೆ ಒಲವು ತೋರಿಸುವ ಯುವ ಮತದಾರರ ಮೇಲೆ ಬಿಜೆಪಿ ಅಪಾರ ನಂಬಿಕೆ ಇಟ್ಟುಕೊಂಡಿದೆ. ಇದರ ಜತೆಗೆ ‘ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ’ ಬೆಳಮಗಿಯವರು ಮೇಲ್ಜಾತಿಯವರ ‘ಮುದ್ದಿನ ಗಿಳಿ’ಯಂತಿದ್ದಾರೆ. ಇವು ಇವರಿಗೆ ಪೂರಕ­ವಾದ ಅಂಶಗಳು.

ಶಕ್ತಿ ಕಳೆದುಕೊಂಡ ಜೆಡಿಎಸ್‌: ಜೆಡಿಎಸ್‌ನಿಂದ ದಲಿತ ಮುಖಂಡ ಡಿ.ಜಿ.ಸಾಗರ್‌ ಸ್ಪರ್ಧೆಗಿಳಿದಿದ್ದಾರೆ. ಈ ಕ್ಷೇತ್ರ­ದಲ್ಲಿ ಜೆಡಿಎಸ್‌ಗೆ ಹೆಚ್ಚಿನ ಶಕ್ತಿ ಇಲ್ಲ. ಪಕ್ಷದ ಕಾರ್ಯ­ಕರ್ತರು ಅನ್ಯ ಪಕ್ಷಗಳತ್ತ ಮುಖ ಮಾಡು­ವುದನ್ನು ತಪ್ಪಿಸಲು ಸ್ಪರ್ಧೆಗೆ ಇಳಿದಂತಿದೆ. ಎಸ್‌ಡಿಪಿಐ ಜೆಡಿಎಸ್‌ ಅನ್ನು ಬೆಂಬಲಿಸಿದೆ.

ನವದೆಹಲಿಯಲ್ಲಿ ‘ರಾಜಕೀಯ ಕ್ರಾಂತಿ’ ಮಾಡಿರುವ ‘ಆಮ್‌ ಆದ್ಮಿ ಪಕ್ಷ’  ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಅವರನ್ನು ಕಣಕ್ಕಿಳಿಸಿದೆ. ‘ಆಮ್‌ ಆದ್ಮಿ’ಯತ್ತ ಮತದಾರರು ಒಲವು ತೋರಿಸುತ್ತಿಲ್ಲ. ಬಿಎಸ್‌ಪಿಯಿಂದ ಧನ್ನಿ ಮಹಾದೇವ್, ಎಸ್‌ಯುಸಿಐನಿಂದ ಎಸ್‌.ಎಂ.­ಶರ್ಮಾ, ಬಿಪಿಪಿಯಿಂದ ಶಂಕರ್‌ ಜಾಧವ್‌, ಪಕ್ಷೇತರ­ರಾಗಿ ರಾಮು ಕಣದಲ್ಲಿದ್ದಾರೆ.

ವರ್ಗಗಳ ಹೋರಾಟ: ಈ ಕ್ಷೇತ್ರದಲ್ಲಿ ಅಧಿಕ ಸಂಖ್ಯೆ­ಯಲ್ಲಿರುವ ಲಿಂಗಾಯತರಲ್ಲಿ ಹೆಚ್ಚಿನವರು ‘ಮಲ್ಲಿಕಾರ್ಜುನ’ನ ಬದಲು ‘ಮೋದಿ ಜಪ’ ಮಾಡುತ್ತಿದ್ದಾರೆ. ನಂತರದ ಸ್ಥಾನದಲ್ಲಿರುವ ಮುಸ್ಲಿಮರು, ದಲಿತರು, ಕಬ್ಬಲಿಗರು, ಕುರುಬರು ‘ಖರ್ಗೆ’ ಎನ್ನುತ್ತಿದ್ದಾರೆ. ಲಂಬಾಣಿ ತಾಂಡಾಗಳ ಹಿರಿ­ಯರು ಕಾಂಗ್ರೆಸ್‌ ಪರವಾಗಿದ್ದರೆ, ಯುವಕರು ‘ಬಿಜೆಪಿ ಜೈ’ ಎನ್ನುತ್ತಿದ್ದಾರೆ.

ದಾಖಲೆ ಬರೆಯುವ ತವಕ: ಗುರುಮಠಕಲ್‌ ಕ್ಷೇತ್ರ­ದಿಂದ ಸತತವಾಗಿ 8 ಬಾರಿ ವಿಧಾನಸಭೆ ಆಯ್ಕೆ­ಯಾಗಿದ್ದ ಖರ್ಗೆ­ಯವರು, ಕ್ಷೇತ್ರ ಪುನರ್‌ ವಿಂಗಡಣೆ ನಂತರ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಿ 9 ನೇ ಬಾರಿಗೆ ಶಾಸಕರಾದರು. ರಾಜ್ಯದಲ್ಲಿನ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ 2009 ರ ಲೋಕಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ 10 ನೇ ಬಾರಿಗೆ ಸ್ಪರ್ಧಿಸಿ ಸತತ 10ನೇ ಗೆಲುವನ್ನು ದಾಖಲಿಸಿ ಸಂಸತ್‌ ಪ್ರವೇಶಿಸಿ, ಸಚಿವ­ರಾಗಿದ್ದಾರೆ. ಈ ಸಲದ್ದು ಖರ್ಗೆ­ಯವರಿಗೆ 11 ನೇ ಚುನಾವಣೆ. ಆದರೂ ಚುನಾವಣೆ­ಯನ್ನು ಸುಲಭ ಎನ್ನುವಂತೆ ಪರಿಗಣಿಸಿಲ್ಲ!

ಬಿಜೆಪಿಯವರು ಜಪಿಸುತ್ತಿರುವ ‘ಮೋದಿ ನಾಮ’ ಮತ್ತು ಖರ್ಗೆಯವರು ತಮ್ಮ ಕ್ಷೇತ್ರಕ್ಕೆ ಮಾಡಿರುವ ‘ಅಭಿವೃದ್ಧಿ ಕೆಲಸ’ಗಳೆರಡನ್ನೂ ತಕ್ಕಡಿ­ಯಲ್ಲಿ ಇಟ್ಟರೆ, ಖರ್ಗೆ­ಯವರ ‘ಕೆಲಸ’ಗಳೇ ಹೆಚ್ಚು ತೂಗುತ್ತಿವೆ. ಆದರೆ, ಮತದಾರರ ಅಭಿಪ್ರಾಯ ಏನು ಎನ್ನುವುದು ಇನ್ನೂ ನಿಚ್ಚಳವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT