ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಳನಟ ನಿಜನಟ

Last Updated 12 ಜನವರಿ 2014, 19:30 IST
ಅಕ್ಷರ ಗಾತ್ರ

‘ಚಂದ್ರಕಾಂತ’ದ ಕ್ರೂರ್‌ಸಿಂಗ್‌, ‘ರಾಮಾಯಣ’ದ ರಾವಣ, ‘ಲಗಾನ್‌’ ಸಿನಿಮಾದ ಅರ್ಜುನ್‌, ‘ದಿ ಲೆಜೆಂಡ್‌ ಆಫ್‌ ಭಗತ್‌ ಸಿಂಗ್‌’ ಚಿತ್ರದ ಚಂದ್ರಶೇಖರ್‌ ಆಜಾದ್‌ ಹೀಗೆ ವಿವಿಧ ಪಾತ್ರದಲ್ಲಿ ಮಿಂಚಿ ಪ್ರೇಕ್ಷಕರ ಮನದಲ್ಲಿ ಭಯ, ನಗೆಯುಕ್ಕಿಸಿದ ಕಲಾವಿದ ಅಖಿಲೇಂದ್ರ ಮಿಶ್ರಾ ಎಲ್ಲರಿಗೂ ಸುಪರಿಚಿತರು.

ಧಾರಾವಾಹಿ ಸಿನಿಮಾಗಳೆರಡರಲ್ಲೂ ಅವಕಾಶ ಗಿಟ್ಟಿಸಿಕೊಳ್ಳುತ್ತಾ ಬಂದ ಇವರದ್ದು ಸರಳ ವ್ಯಕ್ತಿತ್ವ. ಇತ್ತೀಚೆಗೆ ನಗರದ ಕ್ರಿಯಾ ವ್ಯಾಲಿ ಸ್ಕೂಲ್‌ಗೆ ಇವರು ಬಂದಿದ್ದರು. ‘ನನ್ನ ಪಾತ್ರ ನೋಡಿಯೇ ನನ್ನ ಬಳಿ ಮಾತಾಡಲು ಹುಡುಗಿಯರು ಭಯ ಪಡುತ್ತಾರೆ’ ಎಂದು ನಗುವ ಇವರು ಬದುಕಿನ ಏಳು ಬೀಳುಗಳು, ನಟನಾ ರಂಗಕ್ಕೆ ಬಂದ ಸನ್ನಿವೇಶಗಳ ಬಗ್ಗೆ ಮಾತು ಹಂಚಿಕೊಂಡಿದ್ದು ಹೀಗೆ...

* ನಟನಾ ಪ್ರೀತಿ ಬೆಳೆದಿದ್ದು ಹೇಗೆ?
ಬಿಹಾರದ ಪುಟ್ಟ ಹಳ್ಳಿಯಿಂದ ಬಂದವನು ನಾನು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಪ್ಪ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ನಂತರ ಅವರು ನಾಗರಿಕ ಸೇವಾ ಕ್ಷೇತ್ರದಲ್ಲಿ ತೊಡಗಿಕೊಂಡರು. ಹೀಗಾಗಿ ಚೆನ್ನಾಗಿ ಓದಬೇಕು ಎಂಬ ಒತ್ತಡ ನನ್ನ ಮೇಲೆ ಬಿತ್ತು. ಆದರೆ, ಮುಂಬೈ ನನ್ನನ್ನು ಬಲವಾಗಿ ಸೆಳೆಯುತ್ತಿತ್ತು. ನಟನಾ ಕ್ಷೇತ್ರದ ಬಗ್ಗೆ ಮೊದಲಿನಿಂದಲೂ ಪ್ರೀತಿ ಇದ್ದುದರಿಂದ ನನ್ನ ಜೀವನ ಅಲ್ಲೇ ಎಂದೆನಿಸುತ್ತಿತ್ತು. ಹೀಗಾಗಿ ನಾನು ತೇರ್ಗಡೆ ಹೊಂದುವಷ್ಟು ಮಾತ್ರ ಓದುತ್ತಿದ್ದೆ. ತೇರ್ಗಡೆಗೆ ಅಗತ್ಯವಿದ್ದ ಅಂಕಗಳಿಗಿಂತ ಒಂದು ಅಂಕವನ್ನೂ ಹೆಚ್ಚು ಪಡೆದಿಲ್ಲ. ಕನಸಿನ ಬೆನ್ನುಹತ್ತಿ ಹೊರಟ ನಾನು ಮುಂಬೈಗೆ ತೆರಳಿ ‘ಇಂಡಿಯನ್‌ ಪೀಪಲ್‌ ಥಿಯೇಟರ್‌ ಅಸೋಸಿಯೇಶನ್‌’ ಸೇರಿಕೊಂಡೆ.

ಆದರೆ ನನಗಲ್ಲಿ ದಕ್ಕುತ್ತಿದ್ದುದು ಪರದೆಯ ಹಿಂದಿನ ಕೆಲಸಗಳೇ. ಅದನ್ನೇ ನಿಷ್ಠೆಯಿಂದ ಮಾಡಿದೆ. ಮಾಡುವಾಗಲೂ ನಟನೆಯ ಕನಸು ಕಾಣುತ್ತಿದ್ದೆ. ಕಾದದ್ದು ಸಾರ್ಥಕ ಎಂಬಂತೆ ಒಂದು ದಿನ ಸಣ್ಣ ಪಾತ್ರವೊಂದನ್ನು ನಿರ್ವಹಿಸಲು ಹೇಳಿದರು. ಸುಮಾರು ಸಮಯ ಅಂಥದ್ದೇ ಪಾತ್ರಗಳಿಗೆ ಸೀಮಿತವಾದೆ. ಕ್ರಮೇಣ ದೊಡ್ಡ ಪಾತ್ರಗಳು ನನ್ನ ಪಾಲಿಗೆ ಬಂದವು. ಒಂದರ್ಥದಲ್ಲಿ ನಾನು ಆಲ್‌ರೌಂಡರ್‌ (ನಗು).

*ನಿಮ್ಮ ಗಟ್ಟಿ ದನಿಯ ಗುಟ್ಟು?
ಕ್ರಮೇಣ ಪಾತ್ರಗಳು ನನ್ನನ್ನು ಸ್ವೀಕರಿಸಿದವು. ಆದರೆ ಎಲ್ಲರೂ ನನ್ನ ಧ್ವನಿ ಯಾವ ಪಾತ್ರಕ್ಕೂ ಹೊಂದಿಕೆಯಾಗುವುದಿಲ್ಲ ಎನ್ನಲಾರಂಭಿಸಿದರು. ಆಗ ಅವಕಾಶಗಳು ಕೈತಪ್ಪಿಹೋಗುತ್ತಿದ್ದವು. ಹೀಗಾಗಿ ನನ್ನ ಧ್ವನಿಯಲ್ಲಿ ಬದಲಾವಣೆ ತಂದುಕೊಳ್ಳಲು ಮನಸ್ಸು ಮಾಡಿದೆ. ಅದೇ ಪ್ರಯತ್ನದಿಂದ ಜನ ನನ್ನನ್ನು ಕೇವಲ ನಟನೆಯಿಂದಲ್ಲ, ಆಕರ್ಷಕ ಧ್ವನಿಯಿಂದಲೂ ಗುರುತಿಸುತ್ತಾರೆ. ಚಂದ್ರಕಾಂತ್‌ ಧಾರಾವಾಹಿಯ ಕ್ರೂರ್‌ ಸಿಂಗ್‌ ಪಾತ್ರಕ್ಕೆ ಆಯ್ಕೆಯಾದೆ. ಅಂದಿನಿಂದ ನನ್ನ ನಟನಾ ಬದುಕಿಗೆ ಹೊಸ ಆಯಾಮ ದೊರೆಯಿತು.

* ನಿಮಗೆ ಸ್ಫೂರ್ತಿ ಯಾರು?
ಭಾರತೀಯ ಚಿತ್ರರಂಗದಲ್ಲಿ ಸ್ಫೂರ್ತಿಯ ವಿಷಯಕ್ಕೆ ಬಂದರೆ ಅಮಿತಾಭ್‌ ಬಚ್ಚನ್‌ ಹೆಸರು ಹೇಳುತ್ತಾರೆ. ನಾನೂ ಅಷ್ಟೇ. ನನ್ನಂಥ ಅನೇಕ ನಟರ ಹಿಂದೆ ಅವರಿದ್ದಾರೆ. ಅವರೇ ನನ್ನನ್ನು ಸಿನಿಮಾಕ್ಕೆ ಕರೆತಂದಿದ್ದು. ಯಾರಾದರೂ ನಾನು ಸರಿಯಾಗಿ ಓದಿಲ್ಲ ಎಂದು ಆರೋಪಿಸಿದರೆ ಅದು ಅಮಿತಾಭ್‌ ಅವರಿಂದಲೇ (ಮತ್ತೆ ನಗು).
ಕಮಲ್‌ ಹಾಸನ್‌, ರಜನಿಕಾಂತ್‌  ನಾನು ಹೆಚ್ಚಾಗಿ ಇಷ್ಟಪಡುವ ನಟರು.

* ನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ನೀವು ಗುರುತಿಸಿರುವ ವ್ಯತ್ಯಾಸ ಏನು?
ರಾವಣ ಇಲ್ಲಾ ಎಂದಾಗಿದ್ದರೆ ರಾಮನಿಗೆಲ್ಲಿ ಆದ್ಯತೆ? ಅಂದರೆ ನನ್ನ ಪ್ರಕಾರ ಸಿನಿಮಾಗಳಲ್ಲಿ ಖಳನಾಯಕನ ಪಾತ್ರ ಇದ್ದಾಗ ಮಾತ್ರ ನಾಯಕನಿಗೆ ಹೀರೊಯಿಸಂ ತೋರಿಸಲು ಅವಕಾಶ. ನಾಯಕನ ಪಾತ್ರಕ್ಕೆ ಗಟ್ಟಿತನ ಬರಬೇಕು ಎಂದರೆ ಪೋಷಕ ಪಾತ್ರಗಳು ಇರಲೇಬೇಕು. ಅದೂ ಅಲ್ಲದೆ ಖಳನಾಯಕನ ಪಾತ್ರ ನಿರ್ವಹಿಸಲು ಸಾಕಷ್ಟು ಧೈರ್ಯ ಬೇಕು. ಕೆಲಕಾಲ ವಿರೋಧಿಸುವ ಸಮಾಜವನ್ನು ತಾಳಿಕೊಳ್ಳುವ ಮನಸ್ಥಿತಿಯೂ ಬೇಕು.

* ನೀವು ನಟಿಸಿದ ಯಾವ ಪಾತ್ರ ಹೆಚ್ಚು ಇಷ್ಟ?
ಒಬ್ಬ ನಟನಾಗಿ ನಟಿಸಿದ ಎಲ್ಲಾ ಪಾತ್ರಗಳು ನನಗೆ ಹೃದಯಸ್ಪರ್ಶಿ. ಯಾಕೆಂದರೆ ಅಂದು ಕ್ರೂರ್‌ ಸಿಂಗ್‌ ಪಾತ್ರವನ್ನು ಒಪ್ಪಿಕೊಳ್ಳದಿದ್ದರೆ ಇಂದು ಈ ಸ್ಥಿತಿಯಲ್ಲಿರುತ್ತಿರಲಿಲ್ಲ. ಅಭಿನಯಿಸಿದ ಚಂದ್ರಶೇಖರ್‌ ಆಜಾದ್‌ ಪಾತ್ರ ಕೂಡ ಖುಷಿ ನೀಡಿದೆ. ಲಗಾನ್‌ ಸಿನಿಮಾದ ಪಾತ್ರವನ್ನೂ ನಾನು ಅಷ್ಟೇ ಇಷ್ಟಪಡುತ್ತೇನೆ.

* ನಿಮ್ಮ ಕನಸಿನ ಪಾತ್ರ ಯಾವುದು?
ನಿಜ ಹೇಳಬೇಕೆಂದರೆ ಯಾವುದೂ ಇಲ್ಲ. ಆದರೆ ಪರದೆ ಹಿಂದಿನ ಕೆಲಸದಿಂದ ಹಿಡಿದು ಪರದೆಯಲ್ಲಿ ಮಿಂಚುವ ಪಾತ್ರಗಳಲ್ಲೂ ಕಾಣಿಸಿಕೊಂಡ ನನಗೆ ನವರಸಗಳನ್ನು ಅಭಿವ್ಯಕ್ತ ಪಡಿಸುವಂಥ ಎಲ್ಲಾ ಪಾತ್ರಗಳೂ ಸಿಗಲಿ ಎಂದು ಆಶಿಸುತ್ತೇನೆ.

* ಖಳನಾಯಕನ ಪಾತ್ರ ನಿಮ್ಮದೇ ಆಯ್ಕೆಯೇ?
ನಾನು ಖಳನಾಯಕನಂತೆ ಕಾಣುತ್ತೇನೆ ಎನಿಸುತ್ತದೆ (ನಗು). ಉತ್ತಮ ನಟನಾಗಬೇಕು ಎಂಬ ಆಸೆ ಹೊತ್ತು ಈ ಕ್ಷೇತ್ರಕ್ಕೆ ಬಂದೆನೇ ಹೊರತು ಇಂಥದ್ದೇ ಪಾತ್ರ ಎಂಬ ಬಗ್ಗೆ ನಿರ್ದಿಷ್ಟತೆ ಇಟ್ಟುಕೊಂಡಿರಲಿಲ್ಲ. ನನ್ನ ಧ್ವನಿ ಹಾಗೂ ವ್ಯಕ್ತಿತ್ವ ನೋಡಿಯೇ ನನ್ನನ್ನು ಖಳನಾಯಕನ ಪಾತ್ರಕ್ಕೆ ಆಯ್ಕೆ ಮಾಡುತ್ತಾರೆ ಎನಿಸುತ್ತದೆ. ಅನೇಕ ಬಾರಿ ಇಂಥದ್ದೇ ಪಾತ್ರ ಮಾಡಿದರೂ ಹಾಸ್ಯಭರಿತ ಪಾತ್ರಗಳನ್ನೂ ನಾನು ಅಷ್ಟೇ ಸಮರ್ಥವಾಗಿ ನಿರ್ವಹಿಸಬಲ್ಲೆ.

* ನಾಯಕ ನಟನಿಗೆ ಮಾತ್ರ ಹೆಚ್ಚಿನ ಗೌರವ ಸಲ್ಲುತ್ತದೆಯೇ?
ಎಲ್ಲ ನಟರಿಗೂ ಗೌರವ ಎಂಬುದು ಸಿಕ್ಕೇ ಸಿಗುತ್ತದೆ. ಆದರೆ ಸಿನಿಮಾವನ್ನು ಮುನ್ನಡೆಸಿಕೊಂಡು ಹೋಗುವುದು ನಾಯಕನ ಪಾತ್ರವಾಗಿರುವುದರಿಂದ ಚಿತ್ರೀಕರಣದ ಸಂದರ್ಭದಲ್ಲಿ ಆತನಿಗೇ ಹೆಚ್ಚು ಗೌರವ ನೀಡುವುದು ಸಹಜ.

* ಕುಟುಂಬದ ಬೆಂಬಲ ಹೇಗಿದೆ?
ಖಳನಟನ ಪಾತ್ರ ನಿರ್ವಹಿಸಿ ಹೆಚ್ಚಿನ ಜನ ನನ್ನನ್ನು ತುಂಬಾ ದ್ವೇಷಿಸಲು ಪ್ರಾರಂಭಿಸಿದ್ದರು. ಕೊನೆಕೊನೆಗೆ ಮದುವೆಯಾಗಲು ಯಾವ ಹುಡುಗಿಯೂ ಮುಂದೆ ಬರುತ್ತಿರಲಿಲ್ಲ. ಹೀಗಾಗಿ ಅನೇಕ ವರ್ಷ ಬ್ರಹ್ಮಚಾರಿಯಾಗಿಯೇ ಉಳಿದಿದ್ದೆ. ಕೊನೆಗೂ ನನ್ನನ್ನು ಒಪ್ಪಿಕೊಳ್ಳುವ ಹೆಂಡತಿ ಸಿಕ್ಕಿದಳು. ಈಗ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ನಾಲ್ಕು ವರ್ಷದ ಮಗಳು ಹಾಗೂ ಎಂಟು ತಿಂಗಳ ಮಗ ನನ್ನ ಖುಷಿ ಹೆಚ್ಚಿಸಿದ್ದಾರೆ. ಕುಟುಂಬದ ಬೆಂಬಲ ಮನತುಂಬುವಷ್ಟಿದೆ.

* ಸಿನಿಮಾ ಬಿಟ್ಟರೆ ಬೇರೆ ಏನಿಷ್ಟ?
ಪ್ರಯಾಣ ತುಂಬಾ ಇಷ್ಟ. ಸಿನಿಮಾದಲ್ಲಿರುವುದಕ್ಕೆ ಬೇರೆ ಬೇರೆ ಕ್ಷೇತ್ರ ನೋಡುವ ಅವಕಾಶ ದೊರೆಯುತ್ತದೆ. ಯಾತ್ರಾ ಸ್ಥಳಗಳು ನೆಚ್ಚಿನ ತಾಣಗಳು. ದೈವತ್ವ ಹಾಗೂ ಆಧ್ಯಾತ್ಮಿಕ ಚಿಂತನೆ ನನ್ನನ್ನು ಖುಷಿಯಾಗಿರಿಸುತ್ತದೆ. ಸತ್ಕರ್ಮದಲ್ಲಿ ಬಲವಾದ ನಂಬಿಕೆ ಇರುವವನಾಗಿ ಜನರಿಗೆ ಸಹಾಯ ಮಾಡುವುದು ನನ್ನ ಹವ್ಯಾಸ. ಯೋಗ ಕೂಡ ಮಾಡುತ್ತೇನೆ.

* ಧಾರಾವಾಹಿ ಹಾಗೂ ಸಿನಿಮಾ ನಟನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ರಂಗಭೂಮಿಗೆ ಉತ್ತಮ ನಟನ ಅವಶ್ಯಕತೆ ಇದೆ. ಸಿನಿಮಾಕ್ಕೆ ಒಳ್ಳೆಯ ನಿರ್ದೇಶಕ ಬೇಕು. ಆದರೆ ಧಾರಾವಾಹಿ ವಿಷಯದಲ್ಲಿ ಬರಹಗಾರ ಮುಖ್ಯ. ಒಳ್ಳೆಯ ಕಥೆ ಹಾಗೂ ಅಭಿನಯ ಜನರ ಮನಸ್ಸಲ್ಲಿ ನೆಲೆಸುವಂತೆ ಮಾಡುತ್ತದೆ.

* ಬೆಂಗಳೂರಿನ ಬಗ್ಗೆ ಏನನ್ನಿಸುತ್ತದೆ?
ಈ ನಗರ ಇಷ್ಟಪಡದವರನ್ನು ನಾನೆಂದೂ ನೋಡಿಲ್ಲ. ರಂಗಶಂಕರದಲ್ಲಿ ನಡೆಯುವ ನಾಟಕಗಳ ವೀಕ್ಷಕರಲ್ಲಿ ನಾನೂ ಒಬ್ಬ. ಚಿತ್ರ ನಿರ್ದೇಶಕ ಎಂ.ಎಸ್‌. ಸತ್ಯು ನನ್ನ ಆಪ್ತ ಸ್ನೇಹಿತರು. ಅಂದಹಾಗೆ, ಕನ್ನಡದ ‘ಸಿದ್ದು’ ಚಿತ್ರದಲ್ಲಿ ಅಭಿನಯಿಸಿದ್ದೆ. ಅನೇಕ ಬಾರಿ ಇಲ್ಲಿಗೆ ಬರುತ್ತೇನೆ. ಇಲ್ಲಿಯ ವಾತಾವರಣ, ಶ್ರೀಮಂತ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಬಿಂಬಿಸುವ ಇಲ್ಲಿಯ ಜನರು ನನಗೆ ಹೆಚ್ಚು ಇಷ್ಟವಾಗುತ್ತಾರೆ. ಇಲ್ಲಿ ಬರುವ ಅವಕಾಶಕ್ಕಾಗಿ ಕಾಯುತ್ತಲೇ ಇರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT