ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತರಿ ಕೊಡದ ಉದ್ಯೋಗ ಖಾತ್ರಿ

Last Updated 12 ಮಾರ್ಚ್ 2011, 9:00 IST
ಅಕ್ಷರ ಗಾತ್ರ

ಮಧುಗಿರಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಯೋಜನೆಯಡಿ ಕಾಮಗಾರಿಗಳನ್ನು ಯಂತ್ರಗಳನ್ನು ಬಳಸಿ ಮಾಡುತ್ತಿರುವ ಪ್ರಕರಣಗಳು ಕೆಲವೆಡೆ ಕಂಡುಬಂದಿದ್ದು, ಇರದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನಲಾಗಿದೆ.

 ಯೋಜನೆ ಪ್ರಕಾರ ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ಮೂಲಕ ಕೆಲಸ ನೀಡಬೇಕು. ರಸ್ತೆ ಅಭಿವೃದ್ಧಿ, ಕೆರೆಕಟ್ಟೆ, ಚರಂಡಿ ನಿರ್ಮಾಣದಂತಹ ಗ್ರಾಮೀಣ ಜನರಿಗೆ ಉಪಯೋಗವಾಗುವ ಕಾಮಗಾರಿಗಳನ್ನು  ಕೈಗೊಂಡು ಕೂಲಿ ನೀಡಬೇಕು ಎಂಬುದು ಯೋಜನೆಯ ನಿಯಮ. ಆದರೆ ಈ ನಿಯಮವನ್ನು ಗಾಳಿಗೆ ತೂರಿ ಜೆಸಿಬಿ ಯಂತ್ರದ ಸಹಾಯದಿಂದ ಕಾಮಗಾರಿ ಪೂರೈಸಿ ಹಣ ಲಪಟಾಯಿಸುವ ದಂಧೆ ಕೆಲವು ಪಂಚಾಯಿತಿ ಪ್ರತಿನಿಧಿಗಳಿಂದ ಹಾಗೂ ಉಳ್ಳವರಿಂದ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ಮುಂದುವರೆದಿದೆ.

ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ಕಲಿದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಚೆಗೆ ಇಂಥದೇ ಪ್ರಕರಣ ನಡೆದಿದೆ. ವಡ್ಡರಹಟ್ಟಿ ಗ್ರಾಮದಿಂದ ದೊಡ್ಡಮಾಲೂರು ರಸ್ತೆ ಅಭಿವೃದ್ಧಿ, ಮೋರಿ ನಿರ್ಮಾಣ ಕಾಮಗಾರಿಯನ್ನು ಜೆಸಿಬಿ ಯಂತ್ರದ ಮೂಲಕ ಪಂಚಾಯಿತಿ ಪ್ರತಿನಿಧಿಗಳೇ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಅಧಿಕಾರಿಗಳಿಗೆ ದೂರನ್ನು ಸಹ ನೀಡಲಾಗಿದೆ. ಭೈರಾಪುರ ತಾಂಡದ ಕಾಮನಕುಂಟೆ ಹಾಗೂ ತಿಂಗಳೂರು ಗ್ರಾಮದ ರಸ್ತೆಯನ್ನು ಜೆಸಿಬಿ ಮೂಲಕ ಕಾಮಗಾರಿ ಮಾಡುತ್ತಿದ್ದ ಸಮಯದಲ್ಲಿ ಕಾರ್ಮಿಕರು ಪ್ರತಿಭಟಿಸಿದ ಪ್ರಸಂಗ ಸೋಮವಾರ ನಡೆದಿದೆ.

ಅಮಾಯಕ ಕಾರ್ಮಿಕರಿಗೆ ಹಣದ ಆಮಿಷ ತೋರಿಸಿ  200 ರಿಂದ 500 ರೂಪಾಯಿ ಕೊಟ್ಟು ಸಹಿ ಪಡೆದು ಜೆಸಿಬಿಯಿಂದ ಮಾಡಿದ ಕಾಮಗಾರಿಗೆ ಪಂಚಾಯಿತಿಯಿಂದ ಬಿಲ್ ಮಾಡಿಸಿಕೊಂಡು ಹಣ ಲಪಟಾಯಿಸಲಾಗುತ್ತಿದೆ ಎನ್ನಲಾಗಿದೆ.

ಜಾಬ್ ಕಾರ್ಡ್ ನೀಡುವಲ್ಲಿಯೂ ಕೂಡ ಪಂಚಾಯಿತಿ ಸಿಬ್ಬಂದಿ ಪಂಚಾಯಿತಿ ಸದಸ್ಯರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ ಎಂಬ ಆರೋಪ ಸಹ ಗ್ರಾಮಸ್ಥರು ಮಾಡಿದ್ದಾರೆ. ಕೆಲಸ ಕೇಳುವ ಕಾರ್ಮಿಕರಿಗೆ ಜಾಬ್ ಕೊಡಲು ಸತಾಯಿಸುತ್ತಾರೆ. ತಾವು ಕೊಟ್ಟಷ್ಟು ಹಣ ಪಡೆದು ಕೇಳಿದ ಕಡೆ ಸಹಿ ಹಾಕುವ ನಕಲಿ ಕಾರ್ಮಿಕರಿಗೆ ಮನೆಯ ಬಳಿಗೆ ಹೋಗಿ ದಾಖಲೆ ಪಡೆದು ಜಾಬ್ ಕಾರ್ಡ್ ನೀಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT