ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆಗೆ ಕ್ಯಾತೆ; ಒಮ್ಮತವಿಲ್ಲ

Last Updated 13 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಕ್ಕಟ್ಟಿನ ನಡುವೆಯೇ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ಈಗ ಖಾತೆ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ. ಬಿಜೆಪಿಯ ಎರಡೂ ಬಣಗಳು ಪ್ರಮುಖ ಖಾತೆಗಳು ತಮ್ಮವರಿಗೆ ದೊರೆಯಬೇಕು ಎಂದು ಪಟ್ಟು ಹಿಡಿದಿರುವುದು ಹಂಚಿಕೆಗೆ ತೊಡಕಾಗಿದೆ. ರಾಜ್ಯ ಬಿಜೆಪಿ ನಾಯಕರು ಶುಕ್ರವಾರ ತೀವ್ರ ಕಸರತ್ತು ನಡೆಸಿದರೂ ಖಾತೆಗಳ ಹಂಚಿಕೆಗೆ ಅಂತಿಮ ರೂಪ ನೀಡಲು ಸಾಧ್ಯವಾಗಿಲ್ಲ.

ಎಲ್ಲ ಖಾತೆಗಳನ್ನೂ ಹೊಸದಾಗಿ ಹಂಚಿಕೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಬಣ ಪಟ್ಟು ಹಿಡಿದಿದೆ. ಆದರೆ, ಹಿಂದಿನ ಸಂಪುಟದಲ್ಲಿದ್ದವರಿಗೆ ಅದೇ ಖಾತೆಗಳನ್ನು ಮುಂದುವರಿಸಿ, ಹೊಸಬರಿಗೆ ಮುಖ್ಯಮಂತ್ರಿ ಬಳಿ ಉಳಿದಿದ್ದ ಖಾತೆಗಳನ್ನು ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ ಒತ್ತಡ ಹೇರುತ್ತಿದೆ. ಅಶೋಕ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಸಭೆಯನ್ನು ಶನಿವಾರಕ್ಕೆ ಮುಂದೂಡಲಾಗಿದೆ.

ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸದಾನಂದ ಗೌಡ, ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್, ಜಂಟಿ ಕಾರ್ಯದರ್ಶಿ ಸತೀಶ್ ಸೇರಿದಂತೆ ಇತರ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಉಭಯ ಬಣಗಳ ನಡುವೆ ಸಹಮತ ಮೂಡಿಲ್ಲ. ಇದರಿಂದಾಗಿ ಅನಿಶ್ಚಿತತೆ ಮುಂದುವರೆದಿದೆ.
`ಸದಾನಂದ ಗೌಡರ ಸಂಪುಟದಲ್ಲಿದ್ದ ಎಲ್ಲ ಸಚಿವರಿಗೂ ಈಗಲೂ  ಹಿಂದಿನ ಖಾತೆಗಳನ್ನೇ ಉಳಿಸೋಣ. ಹೊಸಬರಿಗೆ ಹಿಂದಿನ ಮುಖ್ಯಮಂತ್ರಿ ಬಳಿ ಇದ್ದ ಹೆಚ್ಚುವರಿ ಖಾತೆಗಳನ್ನು ಹಂಚಿಕೆ ಮಾಡೋಣ.

ವಿಧಾನಮಂಡಲದ ಅಧಿವೇಶನದ ಬಳಿಕ ಎಲ್ಲ ಖಾತೆಗಳನ್ನೂ ಮರುಹಂಚಿಕೆ ಮಾಡೋಣ~ ಎಂದು ಶೆಟ್ಟರ್ ಸಭೆಯ ಆರಂಭದಲ್ಲೇ ಸಲಹೆ ನೀಡಿದರು. ಆದರೆ, ಈ ಪ್ರಸ್ತಾವಕ್ಕೆ ಸದಾನಂದಗೌಡರು ಸುತರಾಂ ಒಪ್ಪಿಲ್ಲ. `ಇದು ಪೂರ್ಣ ಪ್ರಮಾಣದ ಸಂಪುಟ. ಖಾತೆಗಳ ಮರುಹಂಚಿಕೆ ಈಗಲೇ ಆಗಬೇಕು. ಒಂದು ದಿನ ತಡವಾದರೂ ಪರವಾಗಿಲ್ಲ. ಎಲ್ಲ ಖಾತೆಗಳನ್ನೂ ಹೊಸದಾಗಿ ಹಂಚಿಕೆ ಮಾಡಬೇಕು~ ಎಂದು ಒತ್ತಾಯಿಸಿದರು ಎನ್ನಲಾಗಿದೆ.

ತಾವು ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಬಳಿ ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಉನ್ನತ ಶಿಕ್ಷಣ, ಪ್ರವಾಸೋದ್ಯಮ ಮುಂತಾದ ಪ್ರಮುಖ ಖಾತೆಗಳಿದ್ದವು. ಅವುಗಳನ್ನು ತಮ್ಮ ಕಡೆಯ ಪ್ರಮುಖರಿಗೆ ನೀಡಬೇಕು ಎಂದೂ ಗೌಡರು ಒತ್ತಾಯಿಸಿದ್ದಾರೆ. ಯಡಿಯೂರಪ್ಪ ಕಡೆಯ ಸಚಿವರ ಖಾತೆಗಳನ್ನು ಹಾಗೆ ಉಳಿಸಬೇಕು ಎನ್ನುವುದಕ್ಕೂ ಆಕ್ಷೇಪ ಬಂದಿದೆ. ಹಿರಿಯ ಸಚಿವರಾದ ಗೋವಿಂದ ಕಾರಜೋಳ ಅವರಿಗೆ ಜಲಸಂಪನ್ಮೂಲ ಖಾತೆ ನೀಡಬೇಕು ಎಂದೂ ಬೇಡಿಕೆ ಸಲ್ಲಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರಿಗೆ ಗ್ರಾಮೀಣಾಭಿವೃದ್ಧಿ, ಬಿ.ಎನ್.ಬಚ್ಚೇಗೌಡ ಅವರಿಗೆ ಕಂದಾಯ ಖಾತೆ ನೀಡುವಂತೆಯೂ ಕೋರಿದ್ದಾರೆ.

`ಪಕ್ಷದಲ್ಲಿ ಅತೃಪ್ತಿ ತಲೆದೋರಿದೆ. ಇಂತಹ ಸನ್ನಿವೇಶದಲ್ಲಿ ಖಾತೆ ಹಂಚಿಕೆಯಲ್ಲೂ ಗೊಂದಲ ಸೃಷ್ಟಿಸುವುದು ಬೇಡ. ಸುಗಮವಾಗಿ ಆಗಬೇಕು ಎನ್ನುವುದಾದರೆ ಮೊದಲು ನಮ್ಮ ಕಡೆಯ ಸಚಿವರಿಗೆ ಪ್ರಮುಖ ಖಾತೆ ನೀಡಬೇಕು. ಇಲ್ಲದಿದ್ದರೆ ಅಧಿವೇಶನ ನಡೆಯುವುದೇ ಕಷ್ಟವಾಗಬಹುದು~ ಎಂದೂ ಗೌಡರು ಎಚ್ಚರಿಸಿದ್ದಾರೆ.

ಖಾತೆ ಹಂಚಿಕೆ ವಿಚಾರದಲ್ಲೇ ಗೊಂದಲ ಇದ್ದ ಕಾರಣ ಯಾರಿಗೆ ಯಾವ ಖಾತೆ ನೀಡಬೇಕು ಎಂಬುದರ ಬಗ್ಗೆ ನಿಖರವಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಅಶೋಕ ಅವರಿಗೆ ಈಗಿರುವ ಗೃಹ ಮತ್ತು ಸಾರಿಗೆ ಖಾತೆಗಳನ್ನೇ ಉಳಿಸುವುದು. ಈಶ್ವರಪ್ಪ ಅವರಿಗೆ ಕಂದಾಯ ಖಾತೆ ನೀಡುವ ಬಗ್ಗೆಯೂ ಚರ್ಚಿಸಲಾಗಿದೆ. ಅರವಿಂದ ಲಿಂಬಾವಳಿ ಅವರಿಗೆ ಪ್ರಾಥಮಿಕ ಶಿಕ್ಷಣ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡುವ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.

ಜಿಲ್ಲಾ ಉಸ್ತುವಾರಿಗಳು: ಖಾತೆ ಹಂಚಿಕೆ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬಗ್ಗೆಯೂ  ಚರ್ಚಿಸಲಾಗಿದೆ. ಸಿ.ಟಿ.ರವಿ ಅವರಿಗೆ ಹಾಸನ ಜಿಲ್ಲೆ, ಡಿ.ಎನ್.ಜೀವರಾಜ್ ಅವರಿಗೆ ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ ನೀಡಲು ನಿರ್ಧರಿಸಲಾಗಿದೆ. ಮಂಡ್ಯ ಜಿಲ್ಲೆ ಉಸ್ತುವಾರಿಯಾಗಿ ಅರವಿಂದ ಲಿಂಬಾವಳಿ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಭೆ ಬಳಿಕ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ ಅವರು `ಖಾತೆ ಹಂಚಿಕೆ ಸಂಬಂಧ ಸವಿಸ್ತಾರವಾಗಿ ಚರ್ಚಿಸಲಾಗಿದೆ. ವರಿಷ್ಠರ ಜತೆ ಚರ್ಚಿಸಿದ ನಂತರ ಶನಿವಾರ ಮಧ್ಯಾಹ್ನ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು~ ಎಂದೂ ಹೇಳಿದರು.

ಅಧಿಕಾರಿಗಳ ಮುಂದುವರಿಕೆ
ಬೆಂಗಳೂರು: ಮುಖ್ಯಮಂತ್ರಿ ಸಚಿವಾಲಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿವಿಧ ಹಂತದ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಮುಂದಿನ ಆದೇಶದವರೆಗೆ ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಅವರನ್ನೂ ಅದೇ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಧಾರವಾಡ ಜಿಲ್ಲಾಧಿಕಾರಿ ದರ್ಪಣ್ ಜೈನ್ ಅವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT