ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆಗೆ ನೇರ ಹಣ; ಸಕಲ ಸಿದ್ಧತೆ-ವಿಶ್ವನಾಥ್

Last Updated 27 ಡಿಸೆಂಬರ್ 2012, 7:44 IST
ಅಕ್ಷರ ಗಾತ್ರ

ಮೈಸೂರು: `ಪಿಂಚಣಿ, ಎಲ್‌ಪಿಜಿ ಮತ್ತು ರಸ ಗೊಬ್ಬರ ಸಬ್ಸಿಡಿ, ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆಧಾರ್ ಸಂಖ್ಯೆ ಮೂಲಕ ನೇರವಾಗಿ ಖಾತೆಗೆ ಹಣ ಜಮಾ ಮಾಡುವ ಯೋಜನೆ ಜಾರಿಗೆ ಸಕಲ ಸಿದ್ಧತೆ ಮಾಡಿ ಕೊಳ್ಳಲಾಗಿದೆ' ಎಂದು ಸಂಸದ ಎಚ್.ವಿಶ್ವನಾಥ್ ಹೇಳಿದರು.

`ಸ್ವಾತಂತ್ರ್ಯ ನಂತರದ ಅತ್ಯಂತ ಮಹತ್ವದ ಯೋಜನೆಯಾದ ನೇರ ಹಣ ವರ್ಗಾವಣೆಗೆ ಜಿಲ್ಲೆಯ ಎಲ್ಲ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶದ 632 ಜಿಲ್ಲೆಗಳ ಪೈಕಿ ಮೊದಲ ಹಂತದಲ್ಲಿ 49 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಇದರಲ್ಲಿ ರಾಜ್ಯದ ಮೈಸೂರು, ತುಮಕೂರು ಹಾಗೂ ಧಾರವಾಡ ಸೇರಿವೆ. ಈ ಮೂರು ಜಿಲ್ಲೆಗಳಲ್ಲಿ ಜನವರಿ 1 ರಿಂದ ನೇರ ನಗದು ವರ್ಗಾವಣೆ ಜಾರಿಗೆ ಬರಲಿದೆ' ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಈ ಯೋಜನೆಯಿಂದ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಪಾವತಿ ಯಾಗುತ್ತದೆ. ಮಧ್ಯವರ್ತಿ ಗಳ ಹಾವಳಿ ಜತೆಗೆ ಭ್ರಷ್ಟಾ ಚಾರ ತಡೆಗಟ್ಟಲು ಇದು ಸಹಾಯಕವಾಗಿದೆ. ರಾಷ್ಟ್ರೀ ಕೃತ ಬ್ಯಾಂಕುಗಳಲ್ಲಿ ಫಲಾನು ಭವಿಗಳು ಖಾತೆ ತೆರೆಯು ತ್ತಿದ್ದು, ಇದುವರೆಗೆ 35 ಕೋಟಿ ಮಂದಿ ಖಾತೆ ಹೊಂದಿದ್ದಾರೆ. ಮುಂದಿನ 10 ವರ್ಷಗಳಲ್ಲಿ ಈ ಯೋಜನೆಯಡಿ 95 ಕೋಟಿ ಮಂದಿ ಬ್ಯಾಂಕ್ ಖಾತೆ ಪಡೆಯಲಿದ್ದಾರೆ. ವಿದ್ಯಾರ್ಥಿ ವೇತನ, ವೃದ್ಧಾಪ್ಯ ವೇತನ, ವಿಧವಾ ವೇತನ ಮುಂತಾದ 14 ಇಲಾಖೆಗಳ 34 ಸೌಲಭ್ಯಗಳು ಈ ಯೋಜನೆಯಲ್ಲಿ ಬರುತ್ತವೆ' ಎಂದು ವಿವರಿಸಿದರು.

`ಮೈಸೂರು ಜಿಲ್ಲೆಗೆ ಕೇಂದ್ರ ಸರ್ಕಾರ ಇದುವರೆಗೆ ವಿವಿಧ ಯೋಜನೆಗಳಡಿ 9 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದೆ. ಆದರೆ, ರಾಜ್ಯ ಸರ್ಕಾರ ಈ ಹಣವನ್ನು ಬಳಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಅಲ್ಲದೆ, ಕೇಂದ್ರದ ಹಣದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ತಮ್ಮ ಸರ್ಕಾರದ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಈ ಸರ್ಕಾರಕ್ಕೆ ವಿಧವಾ, ವೃದ್ಧಾಪ್ಯ ವೇತನ ವಿತರಿಸಲು ಸಾಧ್ಯವಾಗಿಲ್ಲ' ಎಂದು ಕುಟುಕಿದರು.

`ಮೈಸೂರು ಜಿಲ್ಲೆ ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿ ಇಲ್ಲದೇ ಕಾರ್ಯ ನಿರ್ವಹಿಸುತ್ತಿದೆ. ಹಿಂದಿನ ಜಿಲ್ಲಾಧಿಕಾರಿ ವರ್ಗಾವಣೆಯಾಗಿ ಒಂದು ತಿಂಗಳು ಕಳೆದರೂ ಹೊಸಬರ ನೇಮಕವಾಗಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ಇದೆಯೇ?' ಎಂದು ಪ್ರಶ್ನಿಸಿದ ಅವರು, `ಕೇಂದ್ರದ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ' ಎಂದು ದೂರಿದರು.

`ಲೋಕಾಯುಕ್ತ ದಾಳಿ ನಿರೀಕ್ಷಿತ. ಅದನ್ನು ಸ್ವಾಗತಿಸುತ್ತೇನೆ ಎಂದು ಹೇಳುವ ಉಪ ಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಜವಾಬ್ದಾರಿ ಇದ್ದರೆ ಕೂಡಲೇ ರಾಜೀನಾಮೆ ಸಲ್ಲಿಸಬೇಕು. ಕಳೆದ 5-6 ವರ್ಷಗಳಲ್ಲಿ ರಾಜ್ಯ ರಾಜಕೀಯ ಅಧಃಪತನಕ್ಕೆ ಇಳಿದಿದೆ. ಹೀಗಾಗಿ ಬೇರೆ ಪಕ್ಷಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ' ಎಂದು ಟೀಕಿಸಿದರು.
ಮುಖಂಡರಾದ ಎಚ್.ಎ.ವೆಂಕಟೇಶ್, ಎಂ.ಲಕ್ಷ್ಮಣ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT