ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ; ಉತ್ಸಾಹದ ಅಲೆ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗೇರಿಯ `ಆ~ ನಾಡಹೆಂಚಿನ ಪುರಾತನ ಕಟ್ಟಡಗಳಲ್ಲಿ ಕೇಳಿಬರುತ್ತಿದ್ದ ಕಟ್ಟಿಗೆ ಹುಳುವಿನ `ಜಿರ್~ ಎಂಬ ಏಕತಾರಿ ನಾದವನ್ನು ಇದೀಗ ಹತ್ತಿ ಹಿಂಜುವ ರಾಟಿಗಳ ಸದ್ದೇ ಆಕ್ರಮಿಸಿಬಿಟ್ಟಿದೆ. ಜೀರ್ಣಾವಸ್ಥೆಯಲ್ಲಿದ್ದ ಕಟ್ಟಡಗಳು ಪುಟಿದೆದ್ದು ನಿಂತಿದ್ದು, ಗುಡಿ ಕೈಗಾರಿಕೆಗಳನ್ನೂ ಕೈಹಿಡಿದು ಮೇಲೆತ್ತಿವೆ.

ಹೀಗಾಗಿ ಈ ಖಾದಿ ಕೇಂದ್ರದ ಆವರಣದಲ್ಲಿ ಬಡಗಿಗಳು, ಕಮ್ಮಾರರು, ಚಮ್ಮಾರರು, ಹತ್ತಿ ಹಿಂಜುವವರು, ಗಾದಿ ಹೊಲಿಯುವವರು, ಮಾಲಿಗಳು, ಸಾಬೂನು ತಯಾರಕರು ಅತ್ಯಂತ ಸಂಭ್ರಮದಿಂದ ಓಡಾಡುತ್ತಿದ್ದಾರೆ.

ಹೌದು, ಉತ್ಪಾದನೆ ಕುಂಠಿತದ ಜತೆಗೆ  ನಷ್ಟದ `ತಾಪ~ವೂ ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಒಂದೆಡೆ ಖಾದಿ ಭಂಡಾರಗಳು ಬಾಗಿಲು ಹಾಕಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಧಾರವಾಡ ಜಿಲ್ಲಾ ಖಾದಿ ಗ್ರಾಮೋದ್ಯೋಗ ಸಂಘ ಹೊಸ ಭಂಡಾರಗಳನ್ನು ತೆರೆಯುವ ಮೂಲಕ `ಖಾದಿ ಹಾದಿ~ಯಲ್ಲಿ ಉತ್ಸಾಹದ ಅಲೆ ಎಬ್ಬಿಸಿದೆ.

ಸವಣೂರಿನಲ್ಲಿ ಹೊಸ ಖಾದಿ ಭಂಡಾರ ತೆರೆದಿರುವ ಸಂಘ, ರಾಣೆಬೆನ್ನೂರಿನ ಮಳಿಗೆಯನ್ನು ಉನ್ನತ ದರ್ಜೆಗೆ ಏರಿಸಿದೆ. ಹುಬ್ಬಳ್ಳಿಯ ಕೇಂದ್ರ ಕಚೇರಿ ಆವರಣದಲ್ಲಿ ದೊಡ್ಡ ಮಳಿಗೆ ತೆರೆಯಲು ಎಲ್ಲ ಅಗತ್ಯ ತಯಾರಿಗಳನ್ನು ಮಾಡಿಕೊಂಡಿದೆ. ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡು ಲಾಭದತ್ತ ಹೆಜ್ಜೆ ಹಾಕಿರುವ ಧಾರವಾಡ ಸಂಘ, ನೌಕರರ ಸಂಬಳವನ್ನೂ ಹೆಚ್ಚಿಸುವ ಮೂಲಕ ಚರಕದ ಸದ್ದು ಜೋರಾಗಿಯೇ ಕೇಳುವಂತೆ ಮಾಡಿದೆ.


ಕಳೆದ ವರ್ಷದ ಬಟ್ಟೆ ಉತ್ಪಾದನೆಯಲ್ಲಿ ವಿಕ್ರಮ ಸಾಧಿಸಿರುವ ಈ ಸಂಸ್ಥೆ, 2010ಕ್ಕೆ ಹೋಲಿಸಿದರೆ 10,000 ಮೀಟರ್ ಬಟ್ಟೆಯನ್ನು ಅಧಿಕವಾಗಿ ಉತ್ಪಾದಿಸಿದೆ. ಗುಲ್ಬರ್ಗ, ರಾಯಚೂರು, ಗದಗ ಮೊದಲಾದ ಜಿಲ್ಲೆಗಳಲ್ಲಿ ಚರಕಗಳು ಮೂಲೆಗುಂಪಾಗುತ್ತಿದ್ದರೆ, ಧಾರವಾಡ ಸಂಘ ಹೊಸದಾಗಿ 150 ಚರಕಗಳನ್ನು ಖರೀದಿಸಿದೆ. 10 ಪೆಡಲ್ ಮಗ್ಗಗಳೂ ಅದರ ಕಾರ್ಯಾಗಾರ ಸೇರಿವೆ. ಯುವ ಪೀಳಿಗೆ ಇಷ್ಟಪಡುವಂತಹ ಬಣ್ಣದ ಬಟ್ಟೆ ಉತ್ಪಾದಿಸಿದ ಸಂಸ್ಥೆ, ದಾಖಲೆ ಪ್ರಮಾಣದಲ್ಲಿ ಮಾರಾಟ ಮಾಡಿದೆ.

ಸಂಘದ ಅಧ್ಯಕ್ಷ ಎ.ಜಿ. ದೇಶಪಾಂಡೆ ಅವರ ದೂರದೃಷ್ಟಿ ಯೋಜನೆ ಫಲವಾಗಿ ಸಂಘದ ಆವರಣದಲ್ಲಿ ಗುಡಿ ಕೈಗಾರಿಕೆಗಳು ಮರುಜೀವ ಪಡೆದಿವೆ. ಕಟ್ಟಿಗೆ ಹಾಗೂ ಕಬ್ಬಿಣದ ಪೀಠೋಪಕರಣ ತಯಾರಿಕೆ ಘಟಕಗಳು ಭಾರಿ ತುರುಸಿನಿಂದ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿಯ ನೌಕರರಿಗೆ ಕೈತುಂಬಾ ಕೆಲಸ ಸಿಕ್ಕಿದೆ.

ಪಲ್ಲಂಗ, ದಿವಾನ, ಟೀಪಾಯ್, ಕುರ್ಚಿ, ಮೇಜು, ಡೈನಿಂಗ್ ಟೇಬಲ್ ಹಾಗೂ ದೇವರ ಮಂಟಪಗಳಿಗೆ ಖಾದಿ ಸಂಘ ಸ್ಪಂದಿಸಲು ಆಗದಷ್ಟು ಪ್ರಮಾಣದಲ್ಲಿ ಬೇಡಿಕೆ ಬಂದಿದೆ. ಈ ಬೇಡಿಕೆಯಿಂದ ಸಂತುಷ್ಟರಾಗಿರುವ ಇಲ್ಲಿಯ ಬಡಗಿಗಳು ನಿತ್ಯವೂ ಹೆಚ್ಚಿನ ಅವಧಿಗೆ ಕೆಲಸ ಮಾಡುತ್ತಾರೆ. ಕಬ್ಬಿಣದ ಕಪಾಟುಗಳು, ಸ್ಟೂಲ್, ಟೇಬಲ್‌ಗಳು, ಶಾಲಾ-ಕಾಲೇಜುಗಳ ಡೆಸ್ಕ್‌ಗಳ ತಯಾರಿಕಾ ಘಟಕವನ್ನೂ ಆರಂಭಿಸಲಾಗಿದೆ.

ಖಾದಿ ಕೇಂದ್ರದಲ್ಲಿ ತಯಾರಾಗುವ ಅಂದದ ಗಾದಿ-ದಿಂಬು ಖರೀದಿಗಾಗಿ ಜನ ತಿಂಗಳುಗಟ್ಟಲೆ ತಮ್ಮ ಸರದಿಗೆ ಕಾಯುತ್ತಾರೆ. ನೈಸರ್ಗಿಕ ಬಣ್ಣಗಳಿಂದ ಮೈದುಂಬಿದ ಬೆಡ್‌ಶೀಟ್‌ಗಳು ಮತ್ತು ಗುಣಮಟ್ಟದ ಸರಕುಗಳೇ ಇಲ್ಲಿಯ ಉತ್ಪನ್ನಗಳಿಗೆ ಇಷ್ಟೊಂದು ಬೇಡಿಕೆಯನ್ನು ಸೃಷ್ಟಿಸಿವೆ. ಕಸೂತಿ ಹಾಕಿ ಸಿದ್ಧಪಡಿಸಲಾದ ಚೂಡಿದಾರಗಳು ಸಿಕ್ಕಾಪಟ್ಟೆ ಬಿಕರಿಯಾಗಿವೆ. `ಅಣ್ಣಾ ಹೋರಾಟ~ದ ಫಲವಾಗಿ 5,000 ಗಾಂಧಿ ಟೊಪ್ಪಿಗೆಗಳನ್ನು ಸಂಸ್ಥೆ ಕಳೆದ ಆರು ತಿಂಗಳಲ್ಲಿ ಮಾರಾಟ ಮಾಡಿದೆ.

ದೇಶಪಾಂಡೆ ಅವರು ಸಸ್ಯಶಾಸ್ತ್ರಜ್ಞರಾದ ಕಾರಣ ಸಂಸ್ಥೆಯ ಆವರಣದ ಖಾಲಿ ಸ್ಥಳವನ್ನು ಉಪಯೋಗಿಸಿಕೊಳ್ಳಲು ನರ್ಸರಿ ಆರಂಭಿಸಿದ್ದಾರೆ. ವಿವಿಧ ಜಾತಿಯ ಹೂವಿನ ಸಸಿಗಳು ಲಕ್ಷದ ಲೆಕ್ಕದಲ್ಲಿ ಮಾರಾಟ ಮಾಡಲಾಗಿದೆ.  ಎರೆಹುಳು ಗೊಬ್ಬರ ಹಾಗೂ ಫಲವತ್ತಾದ ಮಣ್ಣನ್ನೂ ಈ ನರ್ಸರಿಯಲ್ಲಿಯೇ ಸಿದ್ಧಪಡಿಸಿಕೊಡಲಾಗುತ್ತದೆ.


ಕೇಂದ್ರ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ)ದ `ಸ್ಫೂರ್ತಿ~ ಯೋಜನೆಯಿಂದ ಸಾಕಷ್ಟು ಸ್ಫೂರ್ತಿ ಪಡೆದಿರುವ ಈ ಸಂಸ್ಥೆ, ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದೆ. ಲೋಳೆಸರ (ಅಲೊವೆರಾ)ದಿಂದ `ಕುಟೀರ~ ಸಾಬೂನು ಉತ್ಪಾದನೆಯನ್ನು ಈ ಖಾದಿ ಸಂಘ ಆರಂಭಿಸಿದ್ದು, ಆ ಸಾಬೂನು ಭಾರಿ ಬೇಡಿಕೆ ಗಿಟ್ಟಿಸಿದೆ.
ಸುಮಾರು ್ಙ 30 ಲಕ್ಷಕ್ಕೂ ಅಧಿಕ ಸಾಲದ ಹೊರೆಯನ್ನು ಹೊತ್ತಿದ್ದ ಈ ಸಂಸ್ಥೆ, ಇದೀಗ ಅದರ ಭಾರವನ್ನು ್ಙ 10 ಲಕ್ಷಕ್ಕೆ ಇಳಿಸಿಕೊಂಡಿದೆ. ಈ ಮಧ್ಯೆ, ಎಲ್ಲ ನೌಕರರಿಗೆ ಅವರ ಅನುಭವದ ಆಧಾರದ ಮೇಲೆ ಸಂಬಳ ಏರಿಕೆ ಮಾಡಲಾಗಿದೆ. ನೂಲು ತೆಗೆಯುವ ಮಹಿಳೆಯರೂ ಕೈತುಂಬ ಹಣ ಸಂಪಾದಿಸಲು ಆರಂಭಿಸಿದ್ದು, ರಾಟೆಗಳು ಎಡಬಿಡದೆ ಕಾರ್ಯ ನಿರ್ವಹಿಸುತ್ತಿವೆ.

`ನೌಕರರು ಪ್ರೀತಿಯಿಂದ ದುಡಿದಿದ್ದರಿಂದ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗಿದೆ. ಅವರ ಉತ್ಸಾಹವೇ ಸಂಘಕ್ಕೆ ಹೊಸ ಸಾಹಸಗಳಿಗೆ ಕೈಹಾಕುವಂತೆ ಪ್ರೇರೇಪಿಸಿದೆ. ಖಾದಿ ಸಂಸ್ಥೆಯನ್ನೂ ಲಾಭದಲ್ಲಿ ನಡೆಸಬಹುದು ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ~ ಎಂದು ಖುಷಿಯಿಂದ ಹೇಳುತ್ತಾರೆ ದೇಶಪಾಂಡೆ.

ಧಾರವಾಡ ಜಿಲ್ಲಾಧಿಕಾರಿ ದರ್ಪಣ ಜೈನ್ ಸಹ ಈ ಸಂಘದ ಬೆಂಬಲಕ್ಕೆ ನಿಂತಿದ್ದಾರೆ. ಅವರ ಸಲಹೆಯಂತೆ ಅಂಗವಿಕಲ ಕುಶಲಕರ್ಮಿಯೊಬ್ಬರಿಗೆ ಕೆಲಸ ನೀಡಲಾಗಿದೆ. `ದುಡಿಯುವ ಉತ್ಸಾಹ ತೋರಿ ಬರುವ ಅಂಗವಿಕಲರಿಗೆ ನಮ್ಮ ಸಂಸ್ಥೆ ಬಾಗಿಲು ತೆರೆದಿದೆ~ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ವಿ.ಎಫ್. ಗಾಣಿಗೇರ.

ಸಂಸ್ಥೆಯ ಆವರಣದಲ್ಲೇ ಇದ್ದ ಹಳೆಯ ಕಟ್ಟಡವೊಂದನ್ನು ಕಲ್ಯಾಣಮಂಟಪವಾಗಿ ಪರಿವರ್ತಿಸಲಾಗಿದ್ದು, ಇಲ್ಲಿಯ ನೌಕರರು ಹಾಗೂ ನೇಕಾರರ ಮದುವೆ ಹಾಗೂ ಇತರ ಸಮಾರಂಭಗಳಿಗೆ ಉಚಿತವಾಗಿ ಕೊಡಲಾಗುತ್ತಿದೆ. ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣದ ವೆಚ್ಚವನ್ನೂ ನೀಡಲಾಗುತ್ತದೆ. ಸುಮಾರು 450 ಕುಟುಂಬಗಳು ಸಂಸ್ಥೆಯಿಂದ ಬದುಕು ಕಟ್ಟಿಕೊಂಡಿವೆ. ಇಲ್ಲಿಯ ಖಾದಿ ನೂಲು ಉಳಿದ ಗುಡಿ ಕೈಗಾರಿಕೆಗಳಿಗೂ ಆಶ್ರಯ ನೀಡುತ್ತಾ, ನೂರಾರು ಜನರ ಕನಸುಗಳ ನೇಯ್ಗೆಗೆ ನೀರೆರೆಯುತ್ತಿರುವುದು ಸಂಘದ ಪದಾಧಿಕಾರಿಗಳಿಗೆ ಭರ್ತಿ ಖುಷಿ ಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT