ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ ಮಂಡಳಿಗೆ ಅನುದಾನ: ಸಿ.ಎಂ ಭರವಸೆ

Last Updated 2 ಅಕ್ಟೋಬರ್ 2011, 19:50 IST
ಅಕ್ಷರ ಗಾತ್ರ

ಬೆಂಗಳೂರು: `ಖಾದಿ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಈಗಾಗಲೇ ಐದು ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಂಡಳಿಗೆ 50 ಲಕ್ಷ ರೂಪಾಯಿ ಶಾಶ್ವತ ಅನುದಾನವನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಭರವಸೆ ನೀಡಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯು ನಗರದ ಗಾಂಧಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಮತ್ತು ಸುವರ್ಣ ಮಹೋತ್ಸವ ವರ್ಷಾಚರಣೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಗಾಂಧೀಜಿಯ ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೆಗೆದುಕೊಂಡ ದಿಟ್ಟ ಹೆಜ್ಜೆಗಳನ್ನು ಮುಂದುವರಿಸುವುದಾಗಿ ಹೇಳಿದ ಅವರು, `ಆದರ್ಶಗಳು ನಗಣ್ಯವಾಗಿರುವ ಪ್ರಸ್ತುತ ದಿನಗಳಲ್ಲಿ ಯುವ ಜನಾಂಗವು ಗಾಂಧಿ ಜಯಂತಿ ಪ್ರಯುಕ್ತ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಅಣ್ಣಾ ಹಜಾರೆ ಅವರ ಹೋರಾಟದ ಪ್ರಭಾವವು ನಗರದಲ್ಲಿ ನಡೆಯುತ್ತಿರುವ ಗಾಂಧಿ ಜಯಂತಿ ಕಾರ್ಯಕ್ರಮಗಳಲ್ಲಿ ಎದ್ದು ಕಾಣುತ್ತಿದೆ~ ಎಂದು ಶ್ಲಾಘಿಸಿದರು.

`ಸಮಾಜವು ಎದುರಿಸುತ್ತಿರುವ ಭಾವನಾತ್ಮಕ ಸಂಬಂಧ ಮತ್ತು ವಿಶ್ವಾಸದ ಕೊರತೆಯ ಸಮಸ್ಯೆಯನ್ನು ಸರಿಪಡಿಸುವಲ್ಲಿ ಗಾಂಧೀಜಿಯ ತತ್ವಗಳು ಮಹತ್ವ ಪಾತ್ರ ವಹಿಸುತ್ತವೆ. ಇಡೀ ಜಗತ್ತಿಗೆ ಅಹಿಂಸಾ ತತ್ವವನ್ನು ನೀಡಿದ ಬಾಪುವಿನ ಭೂಮಿಯಲ್ಲಿ ಹಿಂಸೆ ಸಲ್ಲದು. ನನ್ನಂತಹ ರಾಜಕೀಯ ವ್ಯಕ್ತಿಯ ಭಾಷಣದಿಂದ ಗಾಂಧಿಯ ಕನಸುಗಳು ಸಾಕಾರಗೊಳ್ಳುವುದಿಲ್ಲ. ಸಮಸ್ತ ನಾಗರಿಕರ ವಿವೇಚನೆಯಿಂದ ಮಾತ್ರ ಅವರ ತತ್ವಗಳು ಅನುಷ್ಠಾನಗೊಳ್ಳುತ್ತವೆ~ ಎಂದರು.

`ಮದ್ಯ ಮಾರಾಟದಿಂದ ಸರ್ಕಾರಕ್ಕೆ 8 ಸಾವಿರ ಕೋಟಿ ರೂಪಾಯಿ ಆದಾಯವಿದೆ. ಆದರೆ ಮದ್ಯದ ಕಾರಣದಿಂದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಲವು ಸಮಸ್ಯೆಗಳು ಎದುರಾಗುತ್ತಿದ್ದು, ಇದರ ಪರಿಣಾಮ 20 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಲಾಭ-ನಷ್ಟದ ವಿಚಾರಕ್ಕಿಂತಲೂ ವಾಸ್ತವಕ್ಕೆ ಹೆಚ್ಚು ಆಪ್ತವಾಗುವ ರಾಜನೀತಿಯನ್ನು ಆಳವಡಿಸಿಕೊಳ್ಳುವ ಅಗತ್ಯವಿದೆ~ ಎಂದು ಹೇಳಿದರು.

`ಗ್ರಾಮಗಳಲ್ಲಿ ಇನ್ನೂ ಅವ್ಯಾಹತವಾಗಿರುವ ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸರ್ಕಾರವು ಶ್ರಮಿಸುತ್ತಿದ್ದು, ಗಾಂಧೀಜಿಯ ಗ್ರಾಮ ಮತ್ತು ರಾಮ ರಾಜ್ಯದ ಕನಸನ್ನು ನನಸಾಗಿಸುವ ಪ್ರಯತ್ನ ನಡೆದಿದೆ. ಸ್ವಾತಂತ್ರ್ಯ ಎಂಬ ಪರಿಕಲ್ಪನೆ ಬಂಧನದಿಂದ ಮುಕ್ತವಾಗಿಲ್ಲ. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕಿದೆ~ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, `ನನ್ನನ್ನೂ ಸೇರಿಸಿ ಗಾಂಧೀಜಿಯ ಬಗ್ಗೆ ಮಾತನಾಡುವ ನೈತಿಕ ಹಕ್ಕು ಯಾರಿಗೂ ಇಲ್ಲ. ಮೌಲ್ಯಗಳು ಅಧಃಪತನವಾಗಿರುವ ಈ ಸಂದರ್ಭದಲ್ಲಿ ಬುದ್ದ, ಬಸವ ಮತ್ತು ಗಾಂಧೀಜಿಯ ತತ್ವಗಳನ್ನು ಚರ್ಚಿಸುವ ಅಗತ್ಯವಿದೆ. ನಾಲ್ಕು ಗೋಡೆಯ ಮಧ್ಯೆ ಗಾಂಧೀಜಿ ಜಯಂತಿ ಆಚರಿಸುವ ಪದ್ದತಿಯನ್ನು ಕೈಬಿಟ್ಟು ವಿಶಾಲ ಮೈದಾನದಲ್ಲಿ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಚಿಂತಕರ ನಡುವೆ ಜಯಂತಿಯು ಆಚರಣೆಯಾಗಬೇಕು~ ಎಂದು ಸಲಹೆ ನೀಡಿದರು.

`ರಾಜಕೀಯ ನೇತಾರರು ಗಾಂಧೀಜಿಯ ತತ್ವವನ್ನು ಆಳವಡಿಸಿಕೊಳ್ಳುವ ಮೂಲಕ ದೇಶವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ಪಕ್ಷ-ಭೇದ ಮರೆತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಿದೆ~ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗಾಂಧೀಜಿ ಕುರಿತು ಪ್ರಕಟಗೊಂಡಿರುವ 50 ಪುಸ್ತಕಗಳು ಹಾಗೂ ಕ್ಷಯ ರೋಗ ಮುದ್ರೆಗಳನ್ನು ಬಿಡುಗಡೆ ಮಾಡಲಾಯಿತು. ಡಾ. ಜಿ.ಎ.ಬಿರಾದಾರ್ ಅವರಿಗೆ `ಜಯಶ್ರೀ ದತ್ತಿ~ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪರಿಸರವಾದಿ ಸುಂದರ್‌ಲಾಲ್ ಬಹುಗುಣ, ಕೇಂದ್ರ ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಹೆಗ್ಗಡೆ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT