ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿಗೆ ಕ್ಯಾಮೆರಾ ಕಣ್ಣು: ಬಯೋಮೆಟ್ರಿಕ್ ವ್ಯವಸ್ಥೆ

ಬೆಂಗೇರಿಯಲ್ಲಿನ ಗ್ರಾಮೋದ್ಯೋಗ ಸಂಘಕ್ಕೆ ಹೈಟೆಕ್ ಸ್ಪರ್ಶ
Last Updated 19 ಜುಲೈ 2013, 5:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗೇರಿಯಲ್ಲಿರುವ ದೇಶದ ಏಕೈಕ ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ಸೇರಿದಂತೆ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಇಡೀ ಆವರಣವನ್ನು ಇನ್ನು ಮುಂದೆ ಕ್ಯಾಮೆರಾ ಕಣ್ಣುಗಳು ಕಾಯಲಿವೆ. ಈ ಮೂಲಕ ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಯ ಜೊತೆಗೆ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶ ಸಂಘದ ಆಡಳಿತ ಮಂಡಳಿಯದ್ದು.

ರೂ 1.3 ಲಕ್ಷ ವೆಚ್ಚದಲ್ಲಿ ಸಂಘದ ಆವರಣದಲ್ಲಿ ಈಗಗಾಲೇ ಏಳು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೆಮೆಂಟೊ ಐ ಟೆಕ್ನಾಲಜಿ ಎಂಬ ಸಂಸ್ಥೆಗೆ ಇದರ ಗುತ್ತಿಗೆ ನೀಡಲಾಗಿದೆ. ಒಟ್ಟು 18 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಸಂಘದ ಆವರಣ ಪ್ರವೇಶಿಸುವಲ್ಲೇ ಒಂದು ಕ್ಯಾಮೆರಾ ಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರಧ್ವಜ ತಯಾರಿಕಾ ಘಟಕದಲ್ಲಿ ಮತ್ತೊಂದು ಕ್ಯಾಮೆರಾ ಇದೆ. ಕಚೇರಿಯಲ್ಲೂ ಒಂದು ಕ್ಯಾಮೆರಾ ಸಂಪರ್ಕವಿದೆ.

ಉಳಿದ ಕ್ಯಾಮೆರಾಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಸಂಘದ ಮುಖ್ಯ ಕಚೇರಿಯಲ್ಲಿರುವ ಅಧ್ಯಕ್ಷರು, ಕಾರ್ಯದರ್ಶಿಗಳ ಕೊಠಡಿಯಲ್ಲಿರುವ ಟಿ.ವಿ. ಪರದೆಯಲ್ಲಿ ಈ ಕ್ಯಾಮೆರಾಗಳ ಸಹಾಯದಿಂದ ಎಲ್ಲ ಚಲನವಲನಗಳನ್ನು ಗಮನಿಸಬಹುದಾಗಿದೆ.

`ಗ್ರಾಮೋದ್ಯೋಗ ಸಂಘವು ಈ ಹಿಂದೆ ಅಕ್ರಮ ಮೊದಲಾದ ಕಾರಣಗಳಿಂದಾಗಿಯೇ ಹೆಚ್ಚು ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ ಪಾಟೀಲ ಪುಟ್ಟಪ್ಪ ಅವರ ಮಾರ್ಗದರ್ಶನದಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಇದರ ಒಂದು ಹಂತವಾಗಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸಂಜೆ 6ರ ನಂತರವೂ ಇಲ್ಲಿನ ಚಟುವಟಿಕೆಗಳನ್ನು ಈ ಯಂತ್ರಗಳು ಸೆರೆ ಹಿಡಿಯಲಿವೆ. ಸಂಘಕ್ಕೆ ಸಂಬಂಧಿಸದ ವ್ಯಕ್ತಿಗಳು ಅನಧಿಕೃತವಾಗಿ ಸಂಸ್ಥೆ ಆವರಣ ಪ್ರವೇಶಿಸುವುದನ್ನು ತಪ್ಪಿಸಲು ಇದು ಸಹಕಾರಿಯಾಗಲಿದೆ' ಎನ್ನುತ್ತಾರೆ ಸಂಘದ ಅಧ್ಯಕ್ಷ ಕೆ.ವಿ. ಪತ್ತಾರ ಹಾಗೂ ಕಾರ್ಯದರ್ಶಿ ಎಚ್.ಎನ್. ಅಂಟಿನ.

ಬಯೋಮೆಟ್ರಿಕ್ ವ್ಯವಸ್ಥೆ
ಕಚೇರಿ ಸಿಬ್ಬಂದಿಯ ಹಾಜರಾತಿ ದಾಖಲೆಗಾಗಿ ಬಯೋಮೆಟ್ರಿಕ್ ವ್ಯವಸ್ಥೆಯನ್ನೂ ಸಂಘ ಅಳವಡಿಸಿಕೊಂಡಿದೆ. ಸಿಬ್ಬಂದಿ ಬರುವ ಹಾಗೂ ಹೋಗುವ ಅವಧಿಯನ್ನು ಬೆರಳಚ್ಚು ಸಂಗ್ರಹದ ಮೂಲಕ ಈ ಯಂತ್ರ ದಾಖಲಿಸುತ್ತದೆ. ಸದ್ಯ ಒಂದು ತಿಂಗಳ ಮಟ್ಟಿಗೆ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ತಡವಾಗಿ ಬರುವ ಸಿಬ್ಬಂದಿಗೆ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ. ನಿಯಮ ಉಲ್ಲಂಘಿಸುವವರಿಗೆ ಮುಂದೆ ವೇತನ ಕಡಿತ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ ಎನ್ನುತ್ತಾರೆ ಅಂಟಿನ.

ಗಣಕೀಕೃತ ವ್ಯವಸ್ಥೆ
`ಆಡಳಿತದಲ್ಲಿ ಸಂಪೂರ್ಣ ಗಣಕೀಕೃತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಖಾದಿ ಗ್ರಾಮೋದ್ಯೋಗ ಸಂಘವು ಮುಂದಾಗಿದೆ. ಈ ಮೂಲಕ ಈ ಯೋಜನೆ ಜಾರಿಗೆ ತರುತ್ತಿರುವ ದೇಶದ ಮೊದಲ ಖಾದಿ ಸಂಘ ಹೆಗ್ಗಳಿಕೆ ನಮ್ಮದಾಗಲಿದೆ' ಎನ್ನುತ್ತಾರೆ ಖಾದಿ ಸಂಘಗಳ ಸಲಹಾ ಸಮಿತಿ ಸಂಚಾಲಕ ಉಮೇಶ ಬಳಿಗಾರ.

ಒಟ್ಟು ಮೂರು ಹಂತದಲ್ಲಿ ಈ ಗಣಕೀಕೃತ ವ್ಯವಸ್ಥೆಯು ಜಾರಿಗೆ ಬರಲಿದೆ. ಇದಕ್ಕಾಗಿ ಒಟ್ಟು ರೂ 4.5 ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದೆ. ಆಂಧ್ರಪ್ರದೇಶ ಮೂಲದ ಕಂಪೆನಿಗೆ ಇದರ ಗುತ್ತಿಗೆ ನೀಡಲಾಗಿದೆ. ಮೊದಲ ಹಂತದಲ್ಲಿ ಬೆಂಗೇರಿಯಲ್ಲಿರುವ ಸಂಘದ ಕಚೇರಿಯು ಕಂಪ್ಯೂಟರ್‌ಗಳನ್ನು ಹೊಂದಲಿದೆ.

ಇದಕ್ಕಾಗಿ ರೂ 1.5 ಲಕ್ಷ ರೂಪಾಯಿ ಖರ್ಚಾಗುತ್ತಿದ್ದು, ನಾಲ್ವರು ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ ಬಾಗಲಕೋಟೆ ಜಿಲ್ಲೆಯ ಗದ್ದನಗೇರಿಯಲ್ಲಿರುವ ಸಂಘದ ಘಟಕವೂ ಕಂಪ್ಯೂಟರ್‌ಗಳನ್ನು ಹೊಂದಲಿದೆ. ನಂತರದಲ್ಲಿ ಎಲ್ಲ ಖಾದಿ ಭಂಡಾರಗಳು ಹಾಗೂ ಖಾದಿ ತಯಾರಿಕಾ ಕೇಂದ್ರಗಳಲ್ಲಿ ಕಂಪ್ಯೂಟರ್‌ಅಳವಡಿಸಲು ನಿರ್ಧರಿಸಲಾಗಿದೆ ಎಂದು ವಿವರಿಸುತ್ತಾರೆ ಬಳಿಗಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT