ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿಗೆ ರಾಷ್ಟ್ರವಸ್ತ್ರ ಮಾನ್ಯತೆ ನೀಡಲು ಸಮಿತಿ ಒತ್ತಾಯ

Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಖಾದಿಗೆ ಪುನಃಶ್ಚೇತನ ನೀಡುವ ನಿಟ್ಟಿನಲ್ಲಿ `ರಾಷ್ಟ್ರ ಬಟ್ಟೆ ಸ್ಥಾನಮಾನ' ನೀಡಬೇಕು ಮತ್ತು ರಾಜ್ಯ ಸರ್ಕಾರ 2013-14ನೇ ಸಾಲಿನ ಬಜೆಟ್‌ನಲ್ಲಿ ರೂ 129.45 ಕೋಟಿ   ಅನುದಾನ ಮೀಸಲಿಡಬೇಕು ಎಂದು ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಸಂಘಗಳ ಸಲಹಾ ಸಮಿತಿ ಆಗ್ರಹಿಸಿದೆ.

ಖಾದಿಗೆ ರಾಷ್ಟ್ರೀಯ ಬಟ್ಟೆ ಸ್ಥಾನಮಾನ ನೀಡುವ ಮೂಲಕ ಪೇಟೆಂಟ್ ರೀತಿಯಲ್ಲಿ ಗುರುತಿಸುವಂತಾಗಬೇಕು. ನೈಜ ಖಾದಿ ರಕ್ಷಿಸಲು ಮತ್ತು ನಕಲಿ ಖಾದಿಯ ಹಾವಳಿ ತಡೆಗಟ್ಟಲು ಪೇಟೆಂಟ್ ಪ್ರಮಾಣಪತ್ರ ನೀಡುವುದು ಅಗತ್ಯವಿದೆ ಎಂದು ಸಮಿತಿ ಸದಸ್ಯ ಹಾಗೂ ಮಾಜಿ ಸಂಸದ ಎಚ್. ಹನುಮಂತಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ಖಾದಿ ಸಂಸ್ಥೆಗಳ ಸುಮಾರು ರೂ 300 ಕೋಟಿ  ಸಾಲವನ್ನು ಏಕಕಾಲಕ್ಕೆ ಮನ್ನಾ ಮಾಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರೀಯ ಖಾದಿ ಆಯೋಗಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಹುಬ್ಬಳ್ಳಿಯಲ್ಲಿರುವ ರಾಷ್ಟ್ರಧ್ವಜ ತಯಾರಿಸುವ ಏಕೈಕ ಘಟಕದ ಆಧುನೀಕರಣಕ್ಕೆ ರೂ 2 ಕೋಟಿ   ನೀಡಬೇಕು. ಇದೇ ರೀತಿಯ ಐದು ಘಟಕಗಳನ್ನು ರಾಜ್ಯದ ಇತರ ಸ್ಥಳಗಳಲ್ಲೂ ಆರಂಭಿಸಲು ರೂ25 ಕೋಟಿ  ನೀಡಬೇಕು. ಜತೆಗೆ ಪ್ಲ್ಯಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ನಿಷೇಧಿಸಬೇಕು ಹಾಗೂ ಎಲ್ಲ ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಸಹಕಾರ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಕಟ್ಟಡಗಳ ಮೇಲೆ ಖಾದಿಯಿಂದ ತಯಾರಿಸಿರುವ ರಾಷ್ಟ್ರಧ್ವಜ ಹಾರಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

50 ವರ್ಷಗಳಿಂದ ರಾಜ್ಯ ಸರ್ಕಾರ ರಿಬೇಟ್ ಹೊರತುಪಡಿಸಿ ಖಾದಿ ಚಟುವಟಿಕೆಗಳಿಗೆ ಯಾವುದೇ ರೀತಿಯ ನೆರವು ನೀಡಿಲ್ಲ. ಕೇಂದ್ರ ಸರ್ಕಾರದ ನೆರವು ಮಾತ್ರ ದೊರೆಯುತ್ತಿದೆ. ನೇಕಾರರು ಹಾಗೂ ಖಾದಿ ಕಸುಬುದಾರರಿಗೆ ಕನಿಷ್ಠ ಕೂಲಿ ನೀಡಲು ಸರ್ಕಾರ ಪ್ರೋತ್ಸಾಹ ಧನ ನೀಡಬೇಕು.  ನಂಜುಂಡಪ್ಪ ವರದಿಯಂತೆ 114 ಹಿಂದುಳಿದ ತಾಲ್ಲೂಕುಗಳಲ್ಲಿನ 114 ಗ್ರಾಮ ಕೈಗಾರಿಕಾ ಘಟಕಗಳಿಗೆ ತಲಾ ರೂ 4 ಲಕ್ಷರಂತೆ ರೂ 22.80 ಕೋಟಿ  ದುಡಿಯುವ ಬಂಡವಾಳ ನೀಡಬೇಕು ಎಂದು  ಒತ್ತಾಯಿಸಿದರು.

ನಮ್ಮ ನಾಡಿನಲ್ಲೇ ಖಾದಿ ಸಂಕಷ್ಟಕ್ಕೆ ಸಿಲುಕಿದೆ. ಶಾಲಾ ಸಮವಸ್ತ್ರಗಳಿಗೆ ಖಾದಿ ಬಳಸಬೇಕು. ಜತೆಗೆ ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿವಿಧ ವಿನ್ಯಾಸಗಳ ಖಾದಿ ಬಟ್ಟೆಗಳನ್ನು ತಯಾರಿಸುವುದು ಅಗತ್ಯವಿದೆ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಎಂದು ವಿವರಿಸಿದರು.

ಸಮಿತಿ ಸಂಚಾಲಕ ಉಮೇಶ್ ಬಳಿಗಾರ್, ಸದಸ್ಯರಾದ ಡಾ. ಹೋ. ಶ್ರೀನಿವಾಸಯ್ಯ, ಡಿ.ಆರ್. ಪಾಟೀಲ್, ಎಚ್.ಎನ್. ಅಂಟಿನ, ಕೆ.ವಿ. ಪತ್ತಾರ ಇತರರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT