ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದ್ಯ ಮಾರಾಟ ಜೋರು

ರಮ್ಜಾನ್ ಉಪವಾಸ ಆರಂಭ: ಮಾರುಕಟ್ಟೆಯಲ್ಲಿ ಸಂಭ್ರಮ
Last Updated 12 ಜುಲೈ 2013, 12:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮುಸ್ಲಿಮರ ಉಪವಾಸದ ಮಾಸವಾದ ಪವಿತ್ರ ರಮ್ಜಾನ್ ಆಚರಣೆ ಗುರುವಾರ ಆರಂಭಗೊಂಡಿದೆ. ಇದರೊಟ್ಟಿಗೆ ಹಬ್ಬದ ಖರೀದಿಯೂ ಆರಂಭವಾಗಿದ್ದು, ದುರ್ಗದ ಬೈಲ್ ಶಾಹ್ ಬಜಾರ್ ರಸ್ತೆಗೆ ಜೀವಕಳೆ ಬಂದಿದೆ.

ಖರ್ಜೂರ ಸೇವಿಸುವ ಮೂಲಕ ದಿನದ ಉಪವಾಸ ಬಿಡುವುದು ಸಂಪ್ರದಾಯ. ಹೀಗಾಗಿ ಮಾರುಕಟ್ಟೆಯಲ್ಲಿ ಖರ್ಜೂರದ ಖರೀದಿಗೆ ಮೊದಲ ಆದ್ಯತೆ. ವಿವಿಧ ದೇಶಗಳ ಖರ್ಜೂರಗಳು ಹುಬ್ಬಳ್ಳಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಪ್ರತಿ ಕೆ.ಜಿ.ಗೆ ರೂ 200ರಿಂದ 1500 ವರೆಗಿನ ಖರ್ಜೂರ ಮಾರುಕಟ್ಟೆಯಲ್ಲಿ ಲಭ್ಯ. ಸೌದಿ ಅರೇಬಿಯಾ, ಇರಾನ್, ಇರಾಕ್ ಮೊದಲಾದ ದೇಶಗಳಿಂದಲೂ ಖರ್ಜೂರ ತರಿಸಿಕೊಂಡಿದ್ದೇವೆ ಎನ್ನುತ್ತಾರೆ ವ್ಯಾಪಾರಿಗಳು.

ಶಾಹ್ ಬಜಾರ್‌ನ `ಜಿಡಿಎನ್ ಗೋವಾ' ಮಳಿಗೆಯಲ್ಲಿ 30ಕ್ಕೂ ಹೆಚ್ಚು ಬಗೆಯ ಖರ್ಜೂರ ವ್ಯಾಪಾರಕ್ಕೆ ಲಭ್ಯವಿದೆ. ಗುಣಮಟ್ಟಕ್ಕೆ ತಕ್ಕಂತೆ ಬೆಲೆ ಇದೆ. ಇರಾನ್‌ನಿಂದ ತರಿಸಲಾದ `ಹಜ್ವಾ' ಎನ್ನುವ  ಖರ್ಜೂರದ ಬೆಲೆ ಪ್ರತಿ ಕೆ.ಜಿ.ಗೆ ರೂ 3800!

`ಹಬ್ಬಕ್ಕೆಂದೇ ವಿಶೇಷ ಬಗೆಯ ಖರ್ಜೂರವನ್ನು ತರಿಸಿದ್ದೇವೆ. ಇದೀಗ ರಮ್ಜಾನ್ ಆರಂಭಗೊಂಡಿದ್ದು, ಇಡೀ ತಿಂಗಳು ಭರ್ಜರಿ ವ್ಯಾಪಾರವಿರುತ್ತದೆ. ಹಜ್ ಯಾತ್ರೆಗೆ ಹೋದವರು ಅಲ್ಲಿಂದ ಖರ್ಜೂರ ತಂದು ಪ್ರಸಾದವಾಗಿ ಹಂಚುವ ಪದ್ಧತಿ ನಮ್ಮಲ್ಲಿದೆ. ಈ ವರ್ಷ ನಾವೇ ಹಬ್ಬಕ್ಕೆಂದು ಅಲ್ಲಿಂದ ಖರ್ಜೂರ ತರಿಸಿಕೊಂಡಿದ್ದೇವೆ' ಎನ್ನುತ್ತಾರೆ ವ್ಯಾಪಾರಿ ಗುಲಾಮ್ ಹುಸೇನ್ ನಾಲಬಂದ್.
ಬಗೆಬಗೆಯ ಖಾದ್ಯಗಳು, ಪಾನೀಯಗಳು ಸಹ ಸಂಜೆಯ ಹೊತ್ತು ಹಬ್ಬದ ವಿಶೇಷ ಮಾರಾಟಕ್ಕೆ ತೆರೆದುಕೊಂಡಿವೆ. ರಮ್ಜಾನ್ ಟೀ, ಲಸ್ಸಿ ಜೊತೆಗೆ ವಿವಿಧ ಸಹಿ ತಿನಿಸುಗಳು, ಬಾಂಬೆ ಬ್ರೆಡ್, ದಮ್ ಕಟೀರ್, ಸಮೋಸಾ ಮೊದಲಾದ ತಿನಿಸುಗಳು ಮಾರುಕಟ್ಟೆಯಲ್ಲಿವೆ. ಮಾಂಸಾಹಾರ ವ್ಯಾಪಾರ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಕಲ್ಮಿ ಕಬಾಬ್, ಚಿಕನ್ ಲಾಲಿಪಾಪ್ ಸಹಿತ ವಿವಿಧ ಖಾದ್ಯಗಳನ್ನು ಪ್ರತಿ ಹೋಟೆಲ್ ಮುಂದೆ ಇಡಲಾಗಿದೆ. ಈ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆದಿದೆ.

` ಹಬ್ಬದ ಮೊದಲ ದಿನ ವ್ಯಾಪಾರ ಉತ್ತಮವಾಗಿದೆ. ರಾತ್ರಿಯ ವೇಳೆ ವ್ಯಾಪಾರ ನಡೆಯುವುದರಿಂದ ಇಲ್ಲೊಂದು ವಿಭಿನ್ನವಾದ ಲೋಕವೇ ಸೃಷ್ಟಿಯಾಗಲಿದೆ. ಹಬ್ಬದ ಮತ್ತೊಂದು ಆಕರ್ಷಣೆ ಜವಳಿ ಖರೀದಿ. ಬಟ್ಟೆಯಿಂದ ಹಿಡಿದು ಆಭರಣ, ಪಾದರಕ್ಷೆವರೆಗೆ ಬಗೆಬಗೆಯ ವಸ್ತುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತದೆ. ಹಬ್ಬದ ಸಂಭ್ರಮ ಹೆಚ್ಚಿದಂತೆ ಖರೀದಿಯೂ ಹೆಚ್ಚಾಗಲಿದೆ' ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT