ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ನಿವೇಶನ ಸ್ವಚ್ಛಗೊಳಿಸುವವರಾರು?

Last Updated 2 ಡಿಸೆಂಬರ್ 2013, 6:35 IST
ಅಕ್ಷರ ಗಾತ್ರ

ಕೊಪ್ಪಳ: ನಗರ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳೂ ಕೂಡಾ ಸಮಸ್ಯೆ ಸೃಷ್ಟಿಸುತ್ತಿವೆ. ಒಂದೆಡೆ ಅಕ್ರಮ ನಿರ್ಮಾಣ, ಒತ್ತು­ವರಿ ನಗರಸಭೆಯ ಆಸ್ತಿಯನ್ನು ಕಬಳಿ­ಸಿದ್ದು, ತಲೆನೋವಾಗಿ ಪರಿಣಮಿಸಿದ್ದು ಇದೆ. ಅದರ ಜತೆಗೆ ಯಾರದೋ ಹೆಸರಿ­ನಲ್ಲಿರುವ ಖಾಸಗಿ ಹಾಗೂ ಹಲವೆಡೆ ನಗರಸಭೆಯ ಹೆಸರಿನ ಖಾಲಿ ಜಾಗ­ಗಳೂ ನಗರದ ಆರೋಗ್ಯಕ್ಕೆ ಮಾರಕವಾಗಿದೆ.

ಯಾವುದೋ ಕಾಲದಲ್ಲಿ ಯಾರೋ ಖರೀದಿಸಿದ್ದ ನಿವೇಶನ ಕಾಲಾನಂತರ­ದಲ್ಲಿ ನಿರ್ವಹಣೆ ಮಾಡುವವರಿಲ್ಲದೇ ಪಾಳು ಬಿದ್ದದ್ದು ಇದೆ. ನಗರದ ಕೋಟೆ ಪ್ರದೇಶ, ಕಲ್ಯಾಣ ನಗರ, ಕಾಳಿದಾಸ ಹೈಸ್ಕೂಲ್‌ ಬಳಿ, ರೈಲ್ವೆ ಹಳಿ ಆಸುಪಾಸು, (ಇದರಲ್ಲಿ ರೈಲ್ವೆ ಇಲಾಖೆಗೆ ಸೇರಿದ ಭೂಮಿಯೂ ಇದೆ), ಹಲವೆಡೆ ಕೋರ್ಟ್ ಮೆಟ್ಟಿಲು ಹತ್ತಿದ ವಿವಾದಿತ ಪ್ರದೇಶಗಳು, ಉದ್ಯಾನ, ಮೈದಾನಕ್ಕೆಂದು ಮೀಸಲಾದ ಪ್ರದೇಶ­ಗಳು ಖಾಲಿ ಬಿದ್ದು ಕಸ ಕಡ್ಡಿ ಸೇರುವ, ಗಿಡಗಂಟೆ ಬೆಳೆದು, ವಿಷಜಂತುಗಳಿಗೆ ಆಶ್ರಯವಾಗುವ ಸ್ಥಳವಾಗಿ ಮಾರ್ಪ­ಟ್ಟಿದೆ.

ಖಾಲಿ ಸ್ಥಳಗಳ ವಿಷಜಂತುಗಳು ರಾತ್ರಿವೇಳೆ ವಸತಿ ಪ್ರದೇಶಕ್ಕೆ ಹೋಗಿ ಕಡಿದ ಉದಾಹರಣೆಗಳೂ ಇವೆ. ಹಂದಿಗಳು ಓಡಾಡಿ ಕೊಚ್ಚೆ ಸೃಷ್ಟಿಯಾಗಿದೆ. ಕೆಲವೆಡೆ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುವ ತಾಣಗಳಾಗಿ ಮಾರ್ಪಟ್ಟಿವೆ. ಹೆಚ್ಚೇಕೆ ತಾಲ್ಲೂಕು ಕಚೇರಿ ಆವರಣದಲ್ಲಿನ ಖಾಲಿ ಸ್ಥಳವೂ ಸ್ವಚ್ಛತೆ ಕಾಪಾಡುವವರಿಲ್ಲದೇ ಹಾಳು ಬಿದ್ದಿದೆ. ಇಲ್ಲಿ ಅರ್ಧ ನಿರ್ಮಾಣವಾದ ಕಟ್ಟಡದ ಅಡಿಪಾಯದಲ್ಲೇ ಎತ್ತರದ ಗಿಡ ಬೆಳೆದಿರುವುದನ್ನು ಕಾಣಬಹುದು. ಒಟ್ಟಾರೆಯಾಗಿ ತಾಲ್ಲೂಕು ಕಚೇರಿ ಆವರಣದ ಸೌಂದರ್ಯಕ್ಕೆ ಧಕ್ಕೆ ಬಂದಿದೆ. ಅಲ್ಲಲ್ಲಿ ಇದೇ ಪರಿಸ್ಥಿತಿ ಇರು­ವು­ದರಿಂದ ನಗರದ ಸೌಂದರ್ಯದ ಪಾಲಿಗೂ ಖಾಲಿ ಸ್ಥಳಗಳು ಸಮಸ್ಯೆಯ ತಾಣಗಳು.

ಒಟ್ಟಿನಲ್ಲಿ ಖಾಲಿ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು ಎಂಬುದು ನಗರದ ನಾಗರಿಕರ ಬೇಡಿಕೆ.

ನಗರಸಭೆ ಸ್ಪಂದನ: ಖಾಲಿ ಸ್ಥಳಗಳಲ್ಲಿ ನಿರ್ವಹಣೆ ಕೊರತೆಯಿಂದ ಕಸ ಕಡ್ಡಿ ಹಾಕುವ ತಾಣಗಳಾಗಿರು­ವುದು, ಅನಾರೋಗ್ಯ ಸೃಷ್ಟಿಸಿರುವ ಹಿನ್ನೆಲೆ­ಯಲ್ಲಿ ನಗರಸಭೆಗೆ ವ್ಯಾಪಕ ದೂರುಗಳು ಬಂದಿವೆ. ಅದಕ್ಕಾಗಿ ನಗರಸಭೆ ಆಯುಕ್ತರು ಖಾಲಿ ಸ್ಥಳಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಒಂದು ವಾರದ ಒಳಗೆ ಖಾಲಿ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ನಗರಸಭೆ ನಿಯಮಾನು­ಸಾರ ದಂಡ ವಿಧಿಸಲಾಗುವುದು ಎಂದು ಪ್ರಕಟಣೆ ಹೊರಡಿಸಿದ್ದಾರೆ. ಆಯುಕ್ತರ ನೋಟಿಸ್‌ಗೆ ಮಾಲೀಕರು ಎಷ್ಟರ­ಮಟ್ಟಿಗೆ ಸ್ಪಂದಿಸುತ್ತಾರೋ ಕಾದು ನೋಡಬೇಕು ಎಂದು ಈ ಸ್ಥಳಗಳ ಸಮೀಪ ಸಮಸ್ಯೆ ಅನುಭವಿಸು­ತ್ತಿರುವವರು ಹೇಳುತ್ತಿದ್ದಾರೆ.

‘ನಗರಸಭೆ ನಿವೇಶನ ಸ್ವಚ್ಛವಾಗಲಿ’
ಪೌರಾಯುಕ್ತರು ಕೊಪ್ಪಳ ಪೂರ್ತಿ ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನಗರಪೂರ್ತಿ ದೂಳು, ಕೊಳಚೆಯಿಂದ ತುಂಬಿದೆ. ಮೊದಲು ಅದನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಖಾಲಿ ನಿವೇಶನದವರಿಗೆ ಹೇಳುತ್ತಾರಲ್ಲಾ? ನಗರಸಭೆಯ ಖಾಲಿ ನಿವೇಶನ ಸ್ವಚ್ಛಗೊಳಿಸಲಿ

 –ಶರಣಪ್ಪ ನಿಟ್ಟಾಲಿ, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT