ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಹುದ್ದೆ ತುಂಬಿ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಾಜ್ಯಕ್ಕೆ ಉತ್ತಮ ಹಾಗೂ ದಕ್ಷ ಆಡಳಿತ ನೀಡುವ ಬದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ   ಹಲವು ಸಚಿವರು ಪುನರುಚ್ಚರಿಸುತ್ತಲೇ ಇದ್ದಾರೆ. ದುರದೃಷ್ಟದ ಸಂಗತಿ ಎಂದರೆ ಸರ್ಕಾರಿ ಆಡಳಿತದಲ್ಲಿ ದಕ್ಷತೆ ಹೆಚ್ಚುವ ಸೂಚನೆಗಳೇ ಕಾಣುತ್ತಿಲ್ಲ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಅಧಿಕಾರಿ ಹುದ್ದೆಗಳು ಸೇರಿದಂತೆ 1.25 ಲಕ್ಷ ನೌಕರ ಹುದ್ದೆಗಳು ಖಾಲಿ ಇವೆ! ಅನೇಕ ಇಲಾಖೆಗಳಲ್ಲಿ ಕನಿಷ್ಠ ಸಿಬ್ಬಂದಿಯೂ ಇಲ್ಲ. ಗುತ್ತಿಗೆ ಆಧಾರದಲ್ಲಿ ಹಂಗಾಮಿ ಸಿಬ್ಬಂದಿಯನ್ನು ನೇಮಿಸಿಕೊಂಡು ದೈನಂದಿನ ಕಾರ್ಯಗಳನ್ನು ನಿಭಾಯಿಸುವ ಅನಿವಾರ್ಯ ಅನೇಕ ಇಲಾಖೆಗಳಲ್ಲಿದೆ. ಶಿಕ್ಷಣ, ಆರೋಗ್ಯ, ಪೊಲೀಸ್ ಇತ್ಯಾದಿ ಪ್ರಮುಖ ಇಲಾಖೆಗಳ ಕಾರ್ಯಕ್ಷಮತೆ ಕುಸಿತಕ್ಕೆ ಸಿಬ್ಬಂದಿಯ ಕೊರತೆಯೇ ಕಾರಣ.

ಈ ವಾಸ್ತವ ಸ್ಥಿತಿಯನ್ನು ಸರ್ಕಾರ ಮೊದಲು ಒಪ್ಪಿಕೊಳ್ಳಬೇಕು. 2009ರಲ್ಲಿ ಅಂದಿನ ಸರ್ಕಾರ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾಮಗಾರಿಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ ಹಿನ್ನೆಲೆಯಲ್ಲಿ ಆರ್ಥಿಕ ಮಿತವ್ಯಯ ಕ್ರಮಗಳನ್ನು ಜಾರಿಗೆ ತಂದಿತು. ಈ ಕ್ರಮ ಈಗಲೂ ಮುಂದುವರಿದಿದೆ. ಪ್ರತೀ ವರ್ಷ ಸಾವಿರಾರು ನೌಕರರು, ಅಧಿಕಾರಿಗಳು ನಿವೃತ್ತರಾಗುತ್ತಿದ್ದಾರೆ. ಆ ಹುದ್ದೆಗಳಿಗೆ ನೇಮಕಾತಿಯೇ ಆಗುತ್ತಿಲ್ಲ.

1.25 ಲಕ್ಷಕ್ಕೂ ಹೆಚ್ಚಿನ ಹುದ್ದೆಗಳನ್ನು ಖಾಲಿ ಇಟ್ಟುಕೊಂಡು ಆಡಳಿತದಲ್ಲಿ ದಕ್ಷತೆ ತರಲು ಹೇಗೆ ಸಾಧ್ಯ? ಸರ್ಕಾರಿ ಆಡಳಿತ ವ್ಯವಸ್ಥೆಯ ದೌರ್ಬಲ್ಯದ ಅರಿವಿದ್ದೂ ಮುಖ್ಯಮಂತ್ರಿ ಹಾಗೂ ಇತರ ಸಚಿವರು ಉತ್ತಮ ಆಡಳಿತದ ಭರವಸೆ ನೀಡುತ್ತ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ. ಅವರು ಇನ್ನಾದರೂ ಇಂತಹ ಮಾತುಗಳನ್ನಾಡುವುದನ್ನು ನಿಲ್ಲಿಸಿ ಆಡಳಿತ ಸುಧಾರಣೆಗೆ ಏನು ಮಾಡಬೇಕು ಎಂಬುದರತ್ತ ಗಮನಹರಿಸಬೇಕು.

ಕರ್ನಾಟಕ ಮಾತ್ರವಲ್ಲ; ಇಡೀ ದೇಶವೇ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಹಣದುಬ್ಬರದಿಂದ ಅಗತ್ಯ ವಸ್ತುಗಳ ಬೆಲೆ ಏರುತ್ತಿದೆ. ಸರ್ಕಾರಿ ಆಡಳಿತ ನಿರ್ವಹಣೆಯ ವೆಚ್ಚವೂ ಹೆಚ್ಚಾಗಿದೆ. ಈ ಪರಿಸ್ಥಿತಿಯಲ್ಲಿ ಮಿತ­ವ್ಯಯ ಕ್ರಮಗಳು ಅನಿವಾರ್ಯ. ಆದರೆ ಮಿತವ್ಯಯದ ಹೆಸರಿನಲ್ಲಿ ಸಿಬ್ಬಂದಿ ನೇಮಕಾತಿಗೆ ಕತ್ತರಿ ಹಾಕಬಾರದು.

ಅದರಿಂದ ಅದಕ್ಷತೆ, ಭ್ರಷ್ಟಾಚಾರ ಹೆಚ್ಚುತ್ತದೆ. ಮಿತವ್ಯಯ ಮಾಡಲು ನೂರಾರು ದಾರಿಗಳಿವೆ. ಮಂತ್ರಿಗಳು, ಹಿರಿಯ ಅಧಿಕಾರಿಗಳ ಪ್ರವಾಸ, ಮೋಜು ಹಾಗೂ ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆ, ಸಮಾರೋಪ ಇತ್ಯಾದಿಗಳ ಹೆಸರಿನಲ್ಲಿ ಆಡಂಬರದ ಆಚರಣೆಗಳಿಗೆ ಕಡಿವಾಣ ಹಾಕಿದರೆ ಬಹಳಷ್ಟು ಹಣ ಉಳಿಯುತ್ತದೆ. ಕೆಲ ಇಲಾಖೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಇದ್ದಲ್ಲಿ, ಅವರನ್ನು ಖಾಲಿ ಇರುವ ಹುದ್ದೆಗಳಿಗೆ ಮರು ನಿಯೋಜನೆ ಮಾಡಿಕೊಳ್ಳಲು ಸಾಧ್ಯವಿದೆ. ಯಾವುದೇ  ಇಲಾಖೆ ಅಗತ್ಯ ಇಲ್ಲ ಎಂದಾದರೆ ಅದನ್ನು ಮುಚ್ಚು­ವುದೇ ಸರಿ.

ಅಲ್ಲಿನ ಸಿಬ್ಬಂದಿಯನ್ನು ಬೇರೆ ಇಲಾಖೆಗಳಿಗೆ ಬಳಸಿ­ಕೊಳ್ಳ­ಬ­ಹುದು. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ನಿಲುವು ತಾಳಬೇಕು. ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು. ಅಂತೆಯೇ ಖಾಲಿ ಇರುವ ಹುದ್ದೆಗಳಿಗೆ ನೇಮ­ಕಾತಿ ವಿಷಯದಲ್ಲಿ ತುರ್ತು ನಿರ್ಧಾರ ತೆಗೆದುಗೊಳ್ಳಬೇಕು. ಹೊಸ ನೇಮಕಾತಿ­ಯಲ್ಲಿ ಪಾರದರ್ಶಕತೆ ಇರಬೇಕು. ಇಲ್ಲವಾದರೆ ಕಾನೂನಿನ ಸಮಸ್ಯೆ­ಗಳು ಉದ್ಭವಿಸುತ್ತವೆ. ಕೊನೆಗೆ ಸರ್ಕಾರದ ಉದ್ದೇಶವೇ ವಿಫಲ­ವಾಗುತ್ತದೆ.

ಈ ಎಲ್ಲ ಸಂಗತಿಗಳನ್ನೂ ಗಮನಕ್ಕೆ ತೆಗೆದುಕೊಂಡು ನಿರ್ದಿಷ್ಟ ಅವಧಿಯಲ್ಲಿ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವ ಮೂಲಕವೇ ದಕ್ಷ ಹಾಗೂ ಪರಿಣಾಮಕಾರಿ ಆಡಳಿತ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT