ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕಂಪೆನಿ ಉದ್ಯೋಗಿ ನೇಣಿಗೆ ಶರಣು

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಂಗಸಂದ್ರ ಸಮೀಪದ ವಿವೇಕಾನಂದನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.

ವಿವೇಕಾನಂದನಗರ ಮೂರನೇ ಅಡ್ಡರಸ್ತೆ ನಿವಾಸಿ ಉಮೇಶ್ (30) ಆತ್ಮಹತ್ಯೆ ಮಾಡಿಕೊಂಡವರು. ಅವರು ಖಾಸಗಿ ಕಂಪೆನಿಯೊಂದರ ಭದ್ರತಾ ವಿಭಾಗದಲ್ಲಿ ಮೇಲ್ವಿಚಾರಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ವಿವಾಹವಾಗಿ 12 ವರ್ಷಗಳಾಗಿದ್ದವು. ಅವರು ಪತ್ನಿ ಸವಿತಾ ಮತ್ತು ಇಬ್ಬರು ಗಂಡು ಮಕ್ಕಳ ಜತೆ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
 
ಉಮೇಶ್ ದಂಪತಿ ನಡುವೆ ರಾತ್ರಿ ಜಗಳವಾಗಿತ್ತು. ಇದರಿಂದ ಬೇಸರಗೊಂಡ ಸವಿತಾ ಅವರು ರಾತ್ರಿ 10 ಗಂಟೆ ಸುಮಾರಿಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಅಸ್ವಸ್ಥಗೊಂಡಿದ್ದ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಮನನೊಂದಿದ್ದ ಉಮೇಶ್, ಮಕ್ಕಳು ಮಲಗಿದ್ದ ಸಂದರ್ಭದಲ್ಲಿ ಮನೆಯ ಕೊಠಡಿಯೊಂದರಲ್ಲಿ ನೇಣು ಹಾಕಿಕೊಂಡಿದ್ದಾರೆ. ಮಕ್ಕಳು ಭಾನುವಾರ ಬೆಳಿಗ್ಗೆ ಎಚ್ಚರಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸವಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಅಪಘಾತ: ಇಬ್ಬರ ಸಾವು
ಬೆಂಗಳೂರು: ನಗರದ ಕುರುಬರಹಳ್ಳಿ ಮತ್ತು ಡಾ.ರಾಯನ್ ರಸ್ತೆಯಲ್ಲಿ ಭಾನುವಾರ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ ಘಟನೆ ಬಸವೇಶ್ವರನಗರ ಸಮೀಪದ ಕುರುಬರಹಳ್ಳಿಯಲ್ಲಿ ನಡೆದಿದೆ.

ಕುರುಬರಹಳ್ಳಿ ನಿವಾಸಿ ರಾಮಯ್ಯ (68) ಮೃತಪಟ್ಟವರು. ಮನೆಯ ಸಮೀಪವೇ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗಿದ್ದ ಅವರು ಮನೆಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಸ್ತೆ ದಾಟುತ್ತಿದ್ದ ಅವರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಸಂಜೆ ವೇಳೆಗೆ ಅವರು ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

ವಿಜಯನಗರ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ದ್ವಿಚಕ್ರ ವಾಹನ ಸವಾರನನ್ನು ಬಂಧಿಸಿದ್ದಾರೆ.

ಮತ್ತೊಂದು ಪ್ರಕರಣ: ಡಾ.ರಾಯನ್ ರಸ್ತೆಯ ಅಂಬೇಡ್ಕರ್ ಜಂಕ್ಷನ್ ಬಳಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಪಾಂಡುರಂಗ (50) ಎಂಬುವರು ಮೃತಪಟ್ಟಿದ್ದಾರೆ.

ಕಾಟನ್‌ಪೇಟೆ ನಿವಾಸಿಯಾದ ಪಾಂಡುರಂಗ ಕೂಲಿ ಕೆಲಸ ಮಾಡುತ್ತಿದ್ದರು. ಅವರು ಅಂಬೇಡ್ಕರ್ ಜಂಕ್ಷನ್ ಸಮೀಪ ರಾತ್ರಿ 8 ಗಂಟೆ ಸುಮಾರಿಗೆ ರಸ್ತೆ ದಾಟುತ್ತಿದ್ದಾಗ ದ್ವಿಚಕ್ರ ವಾಹನ ಡಿಕ್ಕಿ ಹೊಡೆಯಿತು. ತೀವ್ರ  ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದ್ದಾರೆ. ದ್ವಿಚಕ್ರ ವಾಹನ ಸವಾರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಗ್ನಿ ಅನಾಹುತ
ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗಿರುವ ಘಟನೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ರಸ್ತೆಯ ಯಲಹಂಕ ಜಂಕ್ಷನ್ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ.

ಬನ್ನೇರುಘಟ್ಟ ರಸ್ತೆ ಸಮೀಪದ ತಾಯಪ್ಪ ಗಾರ್ಡನ್ ನಿವಾಸಿ ಪರಶಿವಮೂರ್ತಿ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ. ಟ್ಯಾಕ್ಸಿ ಮಾಲೀಕರಾದ ಅವರು ವ್ಯಕ್ತಿಯೊಬ್ಬರನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಯಲಹಂಕ ಪೊಲೀಸರು ಹೇಳಿದ್ದಾರೆ.

ಅವರ ಕಾರು ಯಲಹಂಕ ಜಂಕ್ಷನ್ ಬಳಿ ಬರುತ್ತಿದ್ದಂತೆ ವಾಹನದ ಎಂಜಿನ್ ಭಾಗದಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿತು. ಇದರಿಂದ ಆತಂಕಗೊಂಡ ಪರಶಿವಮೂರ್ತಿ ಮತ್ತು ಕಾರಿನಲ್ಲಿದ್ದ ವ್ಯಕ್ತಿ ವಾಹನದಿಂದ ಕೆಳಗಿಳಿದರು. ಘಟನಾ ಸ್ಥಳದ ಸಮೀಪದಲ್ಲೇ ಇದ್ದ ಪೆಟ್ರೋಲ್ ಬಂಕ್ ಒಂದರ ನೌಕರರು ಕೂಡಲೇ ಕಾರಿನ ಬಳಿ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನ ಬ್ಯಾಟರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ, ಕಾರಿನ ಮುಂಭಾಗ ಸುಟ್ಟು ಹೋಗಿದೆ. ಪರಶಿವಮೂರ್ತಿ ಅವರು ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸರಗಳವು
ದುಷ್ಕರ್ಮಿಗಳು ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಹುಳಿಮಾವು ಸಮೀಪದ ಶಾಂತಿನಿಕೇತನ ಲೇಔಟ್‌ನಲ್ಲಿ ಭಾನುವಾರ ನಡೆದಿದೆ.

ವೈಶ್ಯ ಬ್ಯಾಂಕ್ ಕಾಲೊನಿ ನಿವಾಸಿ ಕೃಷ್ಣವೇಣಿ ಸರ ಕಳೆದುಕೊಂಡವರು. ಅವರು ಬೆಳಿಗ್ಗೆ 9 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೋಗಿ ಮನೆಗೆ ವಾಪಸ್ ನಡೆದು ಬರುತ್ತಿದ್ದ ಸಂದರ್ಭದಲ್ಲಿ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳು ಸುಮಾರು 2 ಲಕ್ಷ ರೂ. ಮೌಲ್ಯದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಹುಳಿಮಾವು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT