ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕೊಳವೆಬಾವಿ ಮಾಹಿತಿ ಸಂಗ್ರಹಿಸಿ

Last Updated 17 ಫೆಬ್ರುವರಿ 2012, 4:30 IST
ಅಕ್ಷರ ಗಾತ್ರ

ಕೋಲಾರ: ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕುರಿತು ಎರಡು ದಿನದೊಳಗೆ ವರದಿ ಸಲ್ಲಿಸಬೇಕು. ಸರ್ಕಾರಿ ಕೊಳವೆಬಾವಿಗಳ ಸುತ್ತಮುತ್ತಲಿನ ಖಾಸಗಿ ಕೊಳವೆಬಾವಿಗಳ ಮಾಹಿತಿ ಸಂಗ್ರಹಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಬರ ಪರಿಸ್ಥಿತಿ ನಿರ್ವಹಣೆ ಸಂಬಂಧ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ಸಭೆಯಲ್ಲಿ ಅವರು, ಜಿಲ್ಲಾಡಳಿತಕ್ಕೆ ಸೇರಿದ ಕೊಳವೆಬಾವಿಗಳ ಸುತ್ತಮುತ್ತ 800 ಅಡಿ ವ್ಯಾಪ್ತಿಯಲ್ಲಿರುವ ಖಾಸಗಿ ಕೊಳವೆಬಾವಿಗಳ ಅಂಕಿ-ಅಂಶಗಳನ್ನು ಸಂಗ್ರಹಿಸಿ ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಲಭ್ಯತೆ, ಕುಡಿಯುವ ನೀರಿನ ಕಾಮಗಾರಿಗಳ ಪ್ರಗತಿ ವಿವರ, ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯವಾಗಿರುವ ಕ್ರಮಗಳ ಕುರಿತು ಅಧಿಕಾರಿಗಳು ವರದಿ ತಯಾರಿಸಿ ನೀಡಬೇಕು ಎಂದರು.

ರಾಜಕೀಯ ಒತ್ತಡಗಳಿಗೆ ಮಣಿಯದೆ ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗಬೇಕು. ಸಮಸ್ಯೆ ಕಂಡು ಬಂದಿರುವ ಹಳ್ಳಿಗಳಿಗೆ ತಪ್ಪದೆ ನಿಯಮಿತವಾಗಿ ಭೇಟಿ ನೀಡಬೇಕು. ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ರಜೆ ಇಲ್ಲ: ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವುದರಿಂದ ಬೇಸಿಗೆ ಮುಗಿಯುವವರೆಗೂ  ಅಧಿಕಾರಿಗಳು ರಜೆ ಪಡೆಯಬಾರದು. ತಮ್ಮ ಗಮನಕ್ಕೆ ತಾರದೆ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳನ್ನು ಬದಲಿಸಬಾರದು ಎಂದು ಅವರು ಸೂಚಿಸಿದರು.

ಪಂಪ್-ಮೋಟರ್: ಈಗಾಗಲೇ ಜಿಲ್ಲಾದ್ಯಂತ ಕೊರೆದಿರುವ ಕೊಳವೆ ಬಾವಿಗಳಿಗೆ ಹಲವು ದಿನಗಳಿಂದ ಪಂಪ್-ಮೋಟರ್ ಅಳವಡಿಸದಿರುವುದು ಕೂಡ ಸಮಸ್ಯೆಯನ್ನು ತೀವ್ರವಾಗಿಸಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಉಪಾಧ್ಯಕ್ಷ ಡಿ.ವಿ.ಹರೀಶ್ ಮತ್ತು ಸದಸ್ಯ ಎಸ್. ಬಿ.ಮುನಿವೆಂಕಟಪ್ಪ ಕೋರಿದರು.

ರಾಜ್ಯ ಸರ್ಕಾರ ಕುಡಿಯುವ ನೀರಿಗಾಗಿ ಈಗಾಗಲೇ ರೂ. 7.5 ಕೋಟಿ ಅನುದಾನ ನೀಡಿದೆ. ತ್ವರಿತ ರಾಷ್ಟ್ರೀಯ ನೀರು ಸರಬರಾಜು ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಈ ನಿಟ್ಟಿನಲ್ಲಿ ಪಂಚಾಯಿತಿ ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳ ಸಂಪರ್ಕ ಸಾಧಿಸಿ ಕ್ರಿಯಾ ಯೋಜನೆ ತಯಾರಿಸಬೇಕು ಎಂದು ಹರೀಶ್ ಸೂಚಿಸಿದರು.

ರಾಜಕೀಯವಾಗಿ ಬಲವಾದವರು ತಮ್ಮ ಮನೆಯ ಬೃಹತ್ ತೊಟ್ಟಿಗಳಿಗೆ ಹೆಚ್ಚು ನೀರನ್ನು ತುಂಬಿಸುವ ಘಟನೆಗಳು ನಡೆಯುತ್ತಿವೆ. ಅದನ್ನು ತಡೆಯಬೇಕು. ಪೊಲೀಸರ ನೆರವು ಪಡೆದಾದರೂ ನೀರಿನ ವಿತರಣೆಯಲ್ಲಿ ನ್ಯಾಯ ಕಾಪಾಡಬೇಕು ಎಂದು ಅಧ್ಯಕ್ಷೆ ಮಂಜುಳಾ ಸೂಚಿಸಿದರು.

ನೀಲಗಿರಿ ತೆರವು ಮಾಡಿ: ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗಿರುವ ನೀಲಗಿರಿ ಸಸಿಗಳನ್ನು ಜಿಲ್ಲಾದ್ಯಂತ ರೈತರು ಬೆಳೆಸುತ್ತಿದ್ದಾರೆ. ಹೀಗಾಗಿ ಮರಗಳನ್ನು ತೆರವುಗೊಳಿಸಲು ಪಂಚಾಯಿತಿ ಮಟ್ಟದಲ್ಲಿ ಸುತ್ತೋಲೆ ಹೊರಡಿಸಬೇಕು ಎಂದು ಜಿ.ಪಂ. ಸದಸ್ಯೆ ಚೌಡೇಶ್ವರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT