ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿಗೆ ಆಗ್ರಹ

Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಬೆಂಗಳೂರು: `ದೇಶದ ಎಲ್ಲ ಖಾಸಗಿ ರಂಗದಲ್ಲೂ ದಲಿತ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಸಿಗಬೇಕು. ಈ ಬೇಡಿಕೆ ಈಡೇರುವ ತನಕ ದೇಶವ್ಯಾಪಿ ಹೋರಾಟ ಕೈಬಿಡುವುದಿಲ್ಲ' ಎಂದು ಭಾರತೀಯ ರಿಪಬ್ಲಿಕನ್ ಪಕ್ಷದ (ಆರ್‌ಪಿಐ) ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಮದಾಸ್ ಅಠವಳೆ ಘೋಷಿಸಿದರು.
 
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಏರ್ಪಡಿಸಿದ್ದ ಆರ್‌ಪಿಐ 55ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. `ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಬಡ್ತಿ ನೀಡುವಾಗಲೂ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು' ಎಂದು ಕೇಂದ್ರವನ್ನು ಒತ್ತಾಯಿಸಿದರು.
 
`ಆರ್‌ಪಿಐ ದಲಿತರ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದ್ದು, ನಮಗೆ ಅಧಿಕಾರ ಸಿಕ್ಕರೆ ನಮ್ಮೆಲ್ಲ ಸಮಸ್ಯೆಗಳು ಒಂದೇ ಕ್ಷಣದಲ್ಲಿ ಇತ್ಯರ್ಥವಾಗಲಿವೆ' ಎಂದು ಹೇಳಿದರು. `ಮುಂಬರುವ ಚುನಾವಣೆಯಲ್ಲಿ ಆರ್‌ಪಿಐ ನೆಲೆ ಕಂಡುಕೊಳ್ಳುವ ವಿಶ್ವಾಸ ಇದೆ' ಎಂದು ತಿಳಿಸಿದರು.
 
ಪ್ರಜಾ ಪ್ರಗತಿರಂಗದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, `ಎಲ್ಲ ಸರ್ಕಾರಗಳು ದಲಿತ ಮತ್ತು ರೈತರ ಹಿತ ಬಲಿ ಕೊಟ್ಟಿದ್ದು, ರಾಜ್ಯದ ಸಂಪತ್ತನ್ನು ಲೂಟಿ ಹೊಡೆಯುತ್ತಿವೆ. ಕೃಷಿ ಭೂಮಿಯನ್ನು ಮನಬಂದಂತೆ ಸ್ವಾಧೀನಕ್ಕೆ ಪಡೆಯಲಾಗುತ್ತಿದೆ  ರೈತರು ಹಾಗೂ ದಲಿತರ ಹಿತ ಕಾಯುವಂತಹ ಹೊಸ ರಾಜಕೀಯ ಶಕ್ತಿ ಉದಯಿಸಬೇಕಿದೆ' ಎಂದರು. ರಾಜ್ಯ ಘಟಕದ ಉಪಾಧ್ಯಕ್ಷ ಪಿತಾಂಬ್ರಪ್ಪ ಬಿಳಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ, ಲೋಲಾಕ್ಷ, ಮಾರಸಂದ್ರ ಮುನಿಯಪ್ಪ, ಅಬ್ದುಲ್ ಮಜೀದ್, ಆರ್.ಮೋಹನ್‌ರಾಜ್, ಎಜಾಜ್ ಅಹಮದ್ ಫಾರೂಖಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT