ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ದರ್ಬಾರ್ ಆರಂಭ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು:  ಚಿನ್ನದ ಬಣ್ಣದ ಪೋಷಾಕು, ರೇಷ್ಮೆ-ಮುತ್ತಿನ ಸರವಿದ್ದ ಕಿರೀಟ, ಕೈ, ಕೊರಳಿಗೆ ಮುತ್ತು ರತ್ನಗಳಿಂದ ಕೂಡಿದ ಆಭರಣ ಧರಿಸಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು `ರತ್ನಖಚಿತ ಸಿಂಹಾಸನ~ದಲ್ಲಿ ಆಸೀನರಾಗುವುದರೊಂದಿಗೆ ಮಂಗಳವಾರ ಖಾಸಗಿ ದರ್ಬಾರ್ ಆರಂಭವಾಯಿತು.

ಇಲ್ಲಿನ ವೈಭವೋಪೇತ ಅಂಬಾ ವಿಲಾಸ ಅರಮನೆಯ ಸಭಾಂಗಣದಲ್ಲಿ 10.45 ರಿಂದ 11.35 ರೊಳಗೆ ನಡೆದ ಶುಭ ಲಗ್ನದ ಮುಹೂರ್ತದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸಿಂಹಾಸನಾರೋಹಣ ಮಾಡಿದರು. ನವರಾತ್ರಿ ಉತ್ಸವದ ಮೊದಲ ದಿನ ಬೆಳಿಗ್ಗೆ 6.45 ಗಂಟೆಗೆ ಶುಭ ಮುಹೂರ್ತದಲ್ಲಿ ಎಣ್ಣೆಶಾಸ್ತ್ರದ ಸ್ನಾನ ಮಾಡಿದ ಅವರು ಕಂಕಣ ಧಾರಣೆ ಮಾಡಿದರು. ಒಡೆಯರ್ ಪತ್ನಿ ಪ್ರಮೋದಾದೇವಿ ಒಡೆಯರ್ ಅವರು 7.41ಕ್ಕೆ ಕಂಕಣ ಧರಿಸಿದರು.

ಇದಕ್ಕೂ ಮುನ್ನ ಅರಮನೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಚಿನ್ನದ ಗಣಪತಿ, ರಾಜ ರಾಜೇಶ್ವರಿ ವಿಗ್ರಹಕ್ಕೆ ಒಡೆಯರ್ ಪೂಜೆ ಸಲ್ಲಿಸಿದರು. ಸಾಂಪ್ರದಾಯಿಕ ಪೋಷಾಕು ಧರಿಸಿದ್ದ ಪುರೋಹಿತರು, ಕಟ್ಟಿಗೆಯವರು, ಚೌಕದಾರರು, ದೀವಟಿಗೆ ಸಲಾಮಿನ ತಂಡ, ಶ್ವೇತ ವಸ್ತ್ರಧಾರಿಗಳಾಗಿದ್ದ ದರ್ಬಾರ್ ಭಕ್ಷಿಗಳ ಪರಿವಾರದ ಬಹುಪರಾಕ್‌ನೊಂದಿಗೆ ಶ್ರೀಕಂಠದತ್ತರು ಅಪರೂಪದ ~ಬೆಳ್ಳಿ ಬಾಗಿಲು~ ಮೂಲಕ ದರ್ಬಾರ್ ಪ್ರವೇಶಿಸಿದರು.

ಅರಮನೆಯ ಧರ್ಮಾಧಿಕಾರಿ ಪ್ರೊ.ಆರ್.ಜನಾರ್ಧನ ಅಯ್ಯಂಗಾರ್, ಮುಖ್ಯ ಪುರೋಹಿತರಾದ ಕುಮಾರಸ್ವಾಮಿಶಾಸ್ತ್ರಿ, ನರಸಿಂಹ ಶಾಸ್ತ್ರಿ, ಜ್ಯೋತಿಷಿ ಮಂಜುನಾಥ ಭಟ್ಟರ ಮಾರ್ಗದರ್ಶನದಲ್ಲಿ ಒಡೆಯರ್ ಅವರು 25 ಬೆಳ್ಳಿ ಕಳಶ ಹಾಗೂ ನವಗ್ರಹ ಪೂಜೆ ನೆರವೇರಿಸಿದರು. ನವಗ್ರಹಗಳಿಗೆ ನವ ಧಾನ್ಯ ಸಮರ್ಪಿಸಿದರು. ಪುರೋಹಿತ ವರ್ಗದವರ ವೇದಘೋಷ, ಮಂತ್ರಪಠಣಗಳೊಂದಿಗೆ 30 ನಿಮಿಷಗಳ ಕಾಲ ಪೂಜೆ ಸಲ್ಲಿಸಿದರು. ಬಳಿಕ ಸ್ವರ್ಣ ಸಿಂಹಾಸನಕ್ಕೆ ಪುಷ್ಪಾರ್ಚನೆ ಮಾಡಿದರು.

ವಾದ್ಯಮೇಳದ ಸಂಗೀತ, ಪುರೋಹಿತರ ವೇದಘೋಷ, ಮಲ್ಲಿಗೆ ಹೂವಿನ ಪರಿಮಳ, ಹೊಗಳು ಭಟರ ಘೋಷಣೆಗಳ ನಡುವೆ ಶ್ರೀಕಂಠದತ್ತ ಒಡೆಯರ್ ಅವರಿಗೆ ಪುರೋಹಿತ ವರ್ಗದವರು ಸುಗಂಧದ್ರವ್ಯ ಪ್ರೋಕ್ಷಣೆ, ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿದರು. ಸರದಾರ ಭಕ್ಷಿಗಳು, ಹೊಗಳು ಭಟರು, ದಿವಾನ ವರ್ಗದವರು, ದೀವಟಿಗೆಯ ಸಲಾಮಿನವರು, ಕಟ್ಟಿಗೆಯವರು, ರಕ್ಷಕ ಭಟರು ಸರದಿ ಸಾಲಿನಲ್ಲಿ ನಿಂತು ರಾಜರಿಗೆ ಗೌರವ ಅರ್ಪಿಸಿದರು.

ಅರಮನೆಯ ಆವರಣದಲ್ಲಿರುವ ದೇವಾಲಯಗಳು, ಚಾಮುಂಡಿಬೆಟ್ಟ, ನಂಜನಗೂಡು ದೇವಸ್ಥಾನ ಸೇರಿದಂತೆ ಸುಮಾರು 26 ದೇವಾಲಯಗಳ ಪುರೋಹಿತರು ಶ್ರೀಕಂಠದತ್ತರಿಗೆ ತೀರ್ಥ, ಪ್ರಸಾದ, ಹೂವು ನೀಡಿದರು. ತಲೆಗೆ ಅಕ್ಷತೆ ಹಾಕಿ ಆಶೀರ್ವದಿಸಿದರು. ಇದಕ್ಕೆ ಪ್ರತಿಯಾಗಿ ಅರಸರು ಪುರೋಹಿತರಿಗೆ ಗೌರವ ಸಂಭಾವನೆ ನೀಡುವ ಮೂಲಕ ರಾಜಪಂಪರೆಯ ಇತಿಹಾಸ ನೆನಪಿಸಿದರು.

ಪಾದಪೂಜೆ: ಮಧ್ಯಾಹ್ನ 12 ಗಂಟೆಗೆ ಶ್ರೀಕಂಠದತ್ತರ ಪತ್ನಿ ಪ್ರಮೋದಾದೇವಿ ಅವರು ಪತಿಯ ಪಾದಪೂಜೆ ಮಾಡಿದರು. ಖಾಸಗಿ ದರ್ಬಾರು ಮುಗಿಸಿದ ಒಡೆಯರ್ ಸಿಂಹಾಸನದಿಂದ ಕೆಳಗಿಳಿದು, ಅರಮನೆಯ ಇನ್ನೊಂದು ಆವರಣದತ್ತ ಹೆಜ್ಜೆ ಹಾಕಿದರು. ಮಹಿಳೆಯರು ಮಹಾರಾಜರನ್ನು ಹೊಗಳುವ ಗೀತೆ ಹಾಡಿದರು.
 

ರತ್ನಖಚಿತ ಸಿಂಹಾಸನ
ಮಯೂರ ಸಿಂಹಾಸನ ರತ್ನಖಚಿತವಾಗಿದ್ದು, 1458 ಕೆ.ಜಿ ಇದೆ. ಇದರಲ್ಲಿ 280 ಕೆ.ಜಿ ಚಿನ್ನ ಬಳಸಲಾಗಿದೆ. ಸಿಂಹಾಸನದ ಹಿಂಭಾಗದಲ್ಲಿರುವ ಛತ್ರಿಯ ಮೇಲೆ ಹಸಿರು ಮುತ್ತಿನ ಕಣ್ಣುಗಳನ್ನು ಹೊಂದಿರುವ ಹಂಸ ಪಕ್ಷಿ ಇದೆ. ಸಿಂಹಾಸನದಲ್ಲಿ ಒಟ್ಟು ಏಳು ಭಾಗಗಳಿದ್ದು, ಕೆಳಗಿನ ಭಾಗದಲ್ಲಿ ವಿಜಯ, ಶೌರ್ಯದ ಸಂಕೇತವಾಗಿ ಸಿಂಹದ ಚಿತ್ರ ಬಿಡಿಸಲಾಗಿದೆ. ಛತ್ರಿಯ ಸುತ್ತ ಮುತ್ತುಗಳಿದ್ದು, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಬರೆಸಿರುವ ಸಂಸ್ಕೃತ ಶ್ಲೋಕಗಳನ್ನು ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT