ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಪಾಲುದಾರಿಕೆಯಡಿ ಉಗ್ರಾಣ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೃಷಿ ಉತ್ಪಾದನೆಗೆ ಪೂರಕವಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಇಡಲು ನಗರ, ಪಟ್ಟಣಗಳಲ್ಲಿ ಉಗ್ರಾಣಗಳ ನಿರ್ಮಾಣಕ್ಕೆ ತುರ್ತಾಗಿ ಆದ್ಯತೆ ನೀಡಬೇಕಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್, ಮಂಗಳವಾರ ಇಲ್ಲಿ ಪ್ರತಿಪಾದಿಸಿದರು.

ಇಲ್ಲಿ ನಡೆಯುತ್ತಿರುವ `ಆರ್ಥಿಕ ಸಂಪಾದಕರ~ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು. ನಗರ, ಪಟ್ಟಣ ಪ್ರದೇಶಗಳಲ್ಲಿ  ಖಾಸಗಿ ಸಹಭಾಗಿತ್ವದಲ್ಲಿ ಉಗ್ರಾಣಗಳನ್ನು ನಿರ್ಮಿಸುವ ಕೇಂದ್ರದ ಆಲೋಚನೆಗೆ ಗುಜರಾತ್ ಮತ್ತು ಮಹಾರಾಷ್ಟ್ರ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿದೆ.

ಈ ಎರಡೂ ರಾಜ್ಯಗಳಲ್ಲಿ ಭೂಮಿ ಬೆಲೆ ದುಬಾರಿ ಆಗಿರುವುದರಿಂದ `ಭಂಡಾರ ನಿರ್ಮಾಣ~ ಯೋಜನೆಗೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಆಹಾರ ಧಾನ್ಯಗಳ ಕಾಪು ದಾಸ್ತಾನು ಅಗತ್ಯವು 21 ದಶಲಕ್ಷ ಟನ್‌ಗಳಷ್ಟಿದ್ದರೂ, ಸರ್ಕಾರದ ಬಳಿ 70 ದಶಲಕ್ಷ ಟನ್‌ಗಳಷ್ಟು ಕಾಪು ದಾಸ್ತಾನು ಇದೆ. ಹೆಚ್ಚುವರಿ ಸಂಗ್ರಹವು ಹಾಳಾಗದಂತೆ ನೋಡಿಕೊಳ್ಳಲು ಸಹಕಾರ ಸಂಘ, ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆಯಲ್ಲಿಯೂ `ಭಂಡಾರ~ಗಳನ್ನು ನಿರ್ಮಿಸುವ ತುರ್ತು ಅಗತ್ಯ ಇದೆ ಎಂದರು.

ತಡವಾಗಿ ಪ್ರವೇಶಿಸಿದ ಮತ್ತು ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿಸಿದ ಮುಂಗಾರಿನಿಂದ ಕೊರತೆ ಬೀಳುವ ಉತ್ಪಾದನೆಯು ಹಿಂಗಾರಿ ಫಸಲಿನಲ್ಲಿ ದೂರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸಕ್ತ ಸಾಲಿನಲ್ಲಿ ಕೃಷಿ ಉತ್ಪಾದನೆಯು ಕೇವಲ ಶೇ 1.4ರಷ್ಟು ಮಾತ್ರ ಕಡಿಮೆಯಾಗಲಿದ್ದರೂ ನಾಲ್ಕು ವರ್ಷಗಳ ಸರಾಸರಿಯಷ್ಟೇ ಇರಲಿದೆ ಎಂದರು.

ದೇಶದ ಸರಾಸರಿ ಕೃಷಿ ಉತ್ಪಾದೆಯು ತೃಪ್ತಿದಾಯಕವಾಗಿದೆ. ಹೆಚ್ಚುತ್ತಿರುವ ಕೃಷಿ ಉತ್ಪನ್ನಗಳನ್ನು ಹಾಳಾಗದಂತೆ ಸಂಗ್ರಹಿಸಿ ಇಡುವುದೇ ತಲೆನೋವಾಗಿ ಪರಿಣಮಿಸಿದೆ. ಇತ್ತೀಚಿನ ವರ್ಷಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳೂ ಕಡಿಮೆಯಾಗುತ್ತಿವೆ ಎಂದರು.

ವಿಮಾನ ನಿಲ್ದಾಣ
ದುಬೈ, ಬ್ಯಾಂಕಾಕ್, ಸಿಂಗಪುರ ಮಾದರಿಯಲ್ಲಿ ದೇಶದಲ್ಲಿಯೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ನಾಗರಿಕ ವಿಮಾನ ಯಾನ ಸಚಿವ ಅಜಿತ್ ಸಿಂಗ್ ನುಡಿದರು.

ಸದ್ಯಕ್ಕೆ ದೇಶದ ಬಹುತೇಕ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವು ದೆಹಲಿಯಿಂದಲೇ ನಡೆಯುತ್ತಿದ್ದರೂ ನೆರೆಹೊರೆಯಲ್ಲಿ ಇರುವ ಪೂರ್ವ-ಪಶ್ಚಿಮದ ದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರತ್ಯೇಕ ಅಂತರರಾಷ್ಟ್ರೀಯ ಗುಣಮಟ್ಟದ ವಿಮಾನ ನಿಲ್ದಾಣ ಇಲ್ಲದಿರುವುದು ನಮ್ಮ ದೊಡ್ಡ ಕೊರತೆಯಾಗಿದೆ. ಈ ಕೊರತೆ ನಿವಾರಿಸಲು ಮತ್ತು ಅದಕ್ಕೆ ಪೂರಕವಾಗಿ ಪ್ರಾದೇಶಿಕ ವಿಮಾನಗಳ ಸೇವೆ ಅಭಿವೃದ್ಧಿಪಡಿಸುವ ಅಗತ್ಯ ಇದೆ ಎಂದರು.

ವಿಮಾನ ಯಾನ ಸಂಸ್ಥೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ  (ಎಫ್‌ಡಿಐ) ಅವಕಾಶ ಮಾಡಿಕೊಟ್ಟಿದ್ದರೂ ಇದುವರೆಗೆ ಯಾವುದೇ ವಿಮಾನ ಯಾನ ಸಂಸ್ಥೆ ಉತ್ಸುಕತೆ ತೋರಿಸಿಲ್ಲ. ಇದೊಂದು  ತುಂಬ ಸಂಕೀರ್ಣಮಯ ಉದ್ದಿಮೆಯಾಗಿದ್ದು ಬಂಡವಾಳ ಹೂಡುವ ಮುನ್ನ ಹಲವಾರು ಸಂಗತಿಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ವಿಳಂಬ ಆಗುತ್ತಿದೆ ಎಂದರು.


ಕೃಷಿ ಭೂಮಿ ಸ್ವಾಧೀನಕ್ಕೆ ಕಡಿವಾಣ
 ನಗರೀಕರಣ ಮತ್ತು ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ವಹಿವಾಟಿನ ಕಾರಣಕ್ಕೆ ಕೃಷಿ ಭೂಮಿ ಗಾತ್ರ ಕಡಿಮೆಯಾಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಿದೆ. ಕೃಷಿಯೋಗ್ಯ ಭೂಮಿಯನ್ನು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳುವುದನ್ನು ನಿರ್ಬಂಧಿಸುವ ಭೂ ಸ್ವಾಧೀನ ಮಸೂದೆಯು ಶೀಘ್ರದಲ್ಲಿಯೇ ಸಂಸತ್‌ನಲ್ಲಿ ಮಂಡನೆಯಾಗಲಿದೆ. 

ಕೃಷಿಯೇತರ ಉದ್ದೇಶಕ್ಕೆ ವಶಪಡಿಸಿಕೊಳ್ಳುವ ಭೂಮಿಗೆ ಮಿತಿ ವಿಧಿಸುವ ಪ್ರಸ್ತಾವ ಈ ಉದ್ದೇಶಿತ ಮಸೂದೆಯಲ್ಲಿ ಇದೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್

ಕುಲಾಂತರಿ ಬದನೆ

ಕುಲಾಂತರಿ ಆಹಾರ ಉತ್ಪನ್ನಗಳನ್ನು ಬೆಳೆಯಲು ದೇಶದಲ್ಲಿ ಇದುವರೆಗೆ ಅವಕಾಶ ಮಾಡಿಕೊಟ್ಟಿಲ್ಲ. ಕುಲಾಂತರಿ ಬದನೆಗೆ ಅವಕಾಶ ಮಾಡಿಕೊಡುವ ವಿಷಯದಲ್ಲಿಯೂ ಸರ್ಕಾರದ ನಿಲುವು ಸಾಕಷ್ಟು ಎಚ್ಚರಿಕೆಯಿಂದಲೇ ಕೂಡಿದೆ. ಕುಲಾಂತರಿ ಬದನೆಗೆ ಅವಕಾಶ ನೀಡುವ ಅಧಿಕಾರವು ಪರಿಸರ ಇಲಾಖೆ ಬಳಿ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT